ರೂ 5 ಕೋಟಿ ಮೌಲ್ಯದ ಅದಿರು ವಶ

7

ರೂ 5 ಕೋಟಿ ಮೌಲ್ಯದ ಅದಿರು ವಶ

Published:
Updated:
ರೂ 5 ಕೋಟಿ ಮೌಲ್ಯದ ಅದಿರು ವಶ

ಸಂಡೂರು (ಬಳ್ಳಾರಿ): ಜಿಲ್ಲೆಯ ಸಂಡೂರು ತಾಲ್ಲೂಕಿನ ಯಶವಂತಪುರ ರೈಲು ನಿಲ್ದಾಣದ ಮೂಲಕ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಅಪಾರ ಪ್ರಮಾಣದ ಕಬ್ಬಿಣದ ಅದಿರನ್ನು ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಜಪ್ತಿ ಮಾಡಿದ್ದಾರೆ.ನಕಲಿ ಪರ್ಮಿಟ್ ಹಾಗೂ ಇತರ ದಾಖಲೆಗಳನ್ನು ಸೃಷ್ಟಿಸಿ ಸರಕು ಸಾಗಣೆ ರೈಲಿನ ಮೂಲಕ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ಬುಧವಾರ ರಾತ್ರಿ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಒಟ್ಟು ರೂ 5 ಕೋಟಿ ಮೌಲ್ಯದ 3840 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ವಶಪಡಿಸಿಕೊಂಡು ಈ ಸಂಬಂಧ ಒಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.ಸಂಡೂರು ತಾಲ್ಲೂಕಿನ ಯಶವಂತನಗರದ ರೈಲು ನಿಲ್ದಾಣದ ಮೂಲಕ 57 ಬೋಗಿಗಳನ್ನು ಹೊಂದಿದ್ದ ಸರಕು ಸಾಗಣೆ ರೈಲಿನಲ್ಲಿ ಭರ್ತಿ ಮಾಡಿ ಈ ಅದಿರನ್ನು ಅಕ್ರಮವಾಗಿ ಸಾಗಿಸಲು ರೈಲ್ವೆ ಇಲಾಖೆಗೆ ದಾಖಲೆ ಸಲ್ಲಿಸಿದ್ದ ಖ್ವಾಜಾ ಎಂಬುವವವನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಾದ ಮಹಾಬಲಿ, ದಾದು ಹಾಗೂ ಕಾಗೆ ಮಂಜ ಎಂಬುವವರು ಪರಾರಿಯಾಗಿದ್ದಾರೆ.ಬಳ್ಳಾರಿ ಮೂಲದ ಗಡಗಿ ಮಿನರಲ್ಸ್ ಮೈನಿಂಗ್ ಕಂಪೆನಿ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಬಳಸಿ ಸಂಡೂರು ತಾಲ್ಲೂಕಿನ ಜೀಗೆನಹಳ್ಳಿ ಗ್ರಾಮದ ಬಳಿ ಅದಿರು ಭರ್ತಿ ಮಾಡಿ, ಅಂಕಮನಹಾಳು ಮಾರ್ಗವಾಗಿ ಈ ಅದಿರನ್ನು ಸಾಗಿಸುವ ನಿಟ್ಟಿನಲ್ಲಿ ನಕಲಿ ಪರ್ಮಿಟ್ ಸೃಷ್ಟಿಸಲಾಗಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಹಿ, ಮೊಹರು ಬಳಸಿರುವ ನಕಲಿ ಪರ್ಮಿಟ್ ಮೂಲಕ ಅದಿರನ್ನು ಸಾಗಣೆ ಮಾಡಲು ಯತ್ನಿಸಲಾಗುತ್ತಿತ್ತು.ಅದಿರು ಸಾಗಣೆಗೆ ರೈಲ್ವೆ ಇಲಾಖೆಗೆ ರೂ 33 ಲಕ್ಷ ಬಾಡಿಗೆ ಪಾವತಿ ಮಾಡಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದು, ಅದಿರನ್ನು ಆಂಧ್ರಪ್ರದೇಶದ ಮೇಡಖ್ ಜಿಲ್ಲೆಯ ಖಾಜಾಪುರದ ಕಾವೇರಿ ಐರನ್ ಓರ್ ಅಂಡ್ ಸ್ಟೀಲ್ ಕಂಪೆನಿಗೆ ಸಾಗಿಸಲಾಗುತ್ತಿತ್ತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ರೈಲಿನ ಮೂಲಕ ಅದಿರು ಸಾಗಿಸಲು ಅಗತ್ಯವಿರುವ ದಾಖಲೆಗಳನ್ನು ಹೊಸಪೇಟೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೀಡಿದೆ ಎಂದು ತೋರಿಸಲಾಗಿದ್ದು, ಇವೆಲ್ಲ ನಕಲಿಯಾಗಿವೆ. ಇವುಗಳನ್ನು ಇದೇ ಮಾರ್ಚ್ 21ರಿಂದ  ಏಪ್ರಿಲ್ 20ರ ವರೆಗೆ ಬಳಕೆಯಾಗುವಂತೆ ನಕಲಿಯಾಗಿ ಸೃಷ್ಟಿಸಲಾಗಿದೆ.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ವೆಂಕಟೇಶ್, ವಲಯ ಅರಣ್ಯಾಧಿಕಾರಿ ರಾಮಮೂರ್ತಿ, ವನಪಾಲಕ ಬಸವನಗೌಡ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಲ್ಲೇಶ್ ಮತ್ತಿತರರು ದಾಳಿಯಲ್ಲಿ ಭಾಗವಹಿಸಿದ್ದರು. ಯಶವಂತಪುರದ ಕಾಗೆ ಮಂಜ ಎಂಬ ವ್ಯಕ್ತಿ ನಕಲಿ ಪರ್ಮಿಟ್‌ಗಳನ್ನು ಮುದ್ರಿಸುತ್ತಿದ್ದು, ಖ್ವಾಜಾ ಅವರು ರೈಲ್ವೆ ಇಲಾಖೆಗೆ ಅವುಗಳನ್ನು ನೀಡಿದ್ದಾರೆ.  ಸಂಡೂರಿನ ಮಹೇಶ್ ಎಂಬಾತ ಪ್ರಮುಖ ಸೂತ್ರಧಾರಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಹಶೀಲ್ದಾರ್ ನೇತೃತ್ವದ ತಾಲ್ಲೂಕು ಟಾಸ್ಕ್‌ಫೋರ್ಸ್ 2008 ರಲ್ಲಿ ಸಂಡೂರಿನ ವಿವಿಧೆಡೆ ದಾಳಿ ನಡೆಸಿ ಈ ಅದಿರನ್ನು ವಶಪಡಿಸಿಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿತರರ ಬಂಧನಕ್ಕೆ ಜಾಲ ಬೀಸಲಾಗಿದೆ. ಇದೇ ಮೊದಲ ಬಾರಿಗೆ ರೈಲಿನ ಮೂಲಕ ಅದಿರನ್ನು ಕಳ್ಳಸಾಗಾಣೆ ಮಾಡುವುದನ್ನು ತಡೆ ಹಿಡಿಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry