ರೂ 50 ಲಕ್ಷ ಮೌಲ್ಯದ ಆಭರಣ ವಶ

7

ರೂ 50 ಲಕ್ಷ ಮೌಲ್ಯದ ಆಭರಣ ವಶ

Published:
Updated:

ಬೆಂಗಳೂರು: ಗೋವಾದ ಮನೆಯೊಂದರಲ್ಲಿ ಕಳವು ಮಾಡಿದ್ದ ಆರೋಪದ ಮೇಲೆ ನಿವೃತ್ತ ಸೈನಿಕರು ಸೇರಿದಂತೆ ನಾಲ್ವರನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಪೊಲೀಸರು 50 ಲಕ್ಷ ರೂಪಾಯಿ ಮೌಲ್ಯದ ವಜ್ರ ಮತ್ತು ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.ಮಣಿಪುರದ ರಿಶಿಕಂಠ್ (24), ರಮಾನಂದಸಿಂಗ್ (55), ಕೆ.ಎಚ್.ಮದುಮಂಗೋಲ್ (56) ಮತ್ತು ರಮೇಶ (19) ಬಂಧಿತರು. ಆರೋಪಿಗಳೆಲ್ಲ ಗೋವಾದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದರು. ಮದುಮಂಗೋಲ್ ಮತ್ತು ರಮಾನಂದಸಿಂಗ್ ನಿವೃತ್ತ ಸೈನಿಕರು ಎಂದು ಪೊಲೀಸರು ತಿಳಿಸಿದ್ದಾರೆ.‘ಗೋವಾ ನಿವಾಸಿ ಉದ್ಯಮಿ ವೆಂಕಟೇಶ್ ಪ್ರಭುಮಾನಿ ಎಂಬುವರ ಮನೆಯಲ್ಲಿ ರಿಶಿಕಂಠ್ ಸೆಕ್ಯುರಿಟಿ ಗಾರ್ಡ್ ಆಗಿದ್ದ. ವೆಂಕಟೇಶ್ ಅವರು ಡಿ.27ರಂದು ಕುಟುಂಬ ಸಮೇತರಾಗಿ ಊರಿಗೆ ಹೋಗಿದ್ದರು. ಆ ಸಂದರ್ಭದಲ್ಲಿ ರಿಶಿಕಂಠ್ ಮನೆಯ ಬಾಗಿಲು ಮುರಿದು ಒಳ ನುಗ್ಗಿ ಆಭರಣಗಳನ್ನು ದೋಚಿದ್ದ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.‘ಸಂಬಂಧಿಕರೆ ಆದ ಉಳಿದ ಆರೋಪಿಗಳ ಜತೆ ಆತ ಮಣಿಪುರಕ್ಕೆ ಪರಾರಿಯಾಗುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದ.ಗೋವಾ ಪೊಲೀಸರು ಸಹಾಯ ಕೇಳಿದ್ದರಿಂದ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಯಿತು. ಅವರು ಮೆಜೆಸ್ಟಿಕ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಇರುವುದನ್ನು ಪತ್ತೆ ಮಾಡಿ ಬಂಧಿಸಲಾಯಿತು’ ಎಂದು ಅವರು ಮಾಹಿತಿ ನೀಡಿದರು.‘ಆರೋಪಿಗಳಿಂದ ಐವತ್ತು ಸಾವಿರ ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ಎಲ್ಲರನ್ನೂ ಗೋವಾ ಪೊಲೀಸರ ವಶಕ್ಕೆ ನೀಡಲಾಗಿದೆ’ ಎಂದು ಉಪ್ಪಾರಪೇಟೆ ಠಾಣೆ ಇನ್‌ಸ್ಪೆಕ್ಟರ್ ಲೋಕೇಶ್ವರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry