ಬುಧವಾರ, ನವೆಂಬರ್ 13, 2019
23 °C

ರೂ. 50 ಲಕ್ಷ ಮೌಲ್ಯದ ಸೀರೆ, ಸಫಾರಿಗಳ ವಶ

Published:
Updated:

ಬೆಂಗಳೂರು: ಪೀಣ್ಯ ಸಮೀಪದ ಸಪ್ತಗಿರಿ ಲೇಔಟ್‌ನಲ್ಲಿರುವ ಸಿದ್ದ ಉಡುಪು ಕಾರ್ಖಾನೆಯೊಂದರ ಮೇಲೆ ಬುಧವಾರ ದಾಳಿ ನಡೆಸಿದ ಪೊಲೀಸರು, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಸೀರೆಗಳು ಹಾಗೂ ಸಫಾರಿಗಳನ್ನು ವಶಪಡಿಸಿಕೊಂಡಿದ್ದಾರೆ.ಸಪ್ತಗಿರಿಲೇಔಟ್‌ನಲ್ಲಿರುವ ಎಫ್‌ಎಲ್‌ವಿ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಸೀರೆಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಬಂತು. ಆ ಮಾಹಿತಿ ಅನ್ವಯ ಮಧ್ಯಾಹ್ನ 3 ಗಂಟೆಗೆ ದಾಳಿ ನಡೆಸಿ 22,000 ಸೀರೆಗಳು ಹಾಗೂ 750 ಸಫಾರಿಗಳನ್ನು ವಶಪಡಿಸಿಕೊಳ್ಳಲಾಯಿತು.ಎಲ್ಲಾ ಬಟ್ಟೆಗಳ ಕವರ್ ಮೇಲೆ `ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಚಂದ್ರಪ್ಪ ಅವರ ಕೊಡುಗೆ, ಗಣೇಶ ಹಬ್ಬದ ಶುಭಾಷಯಗಳು' ಎಂಬ ಮುದ್ರಣವಿದೆ ಎಂದು ಪೊಲೀಸರು ಹೇಳಿದ್ದಾರೆ.ಚಂದ್ರಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, `ಹೊಳಲ್ಕೆರೆಯಲ್ಲಿ ಈ ಹಿಂದೆ ಸಮಾವೇಶ ನಡೆದಿತ್ತು. ಆ ಸಂದರ್ಭದಲ್ಲಿ ವಿತರಣೆ ಮಾಡಿ ಉಳಿದಿದ್ದ ಸೀರೆ ಮತ್ತು ಸಫಾರಿಗಳನ್ನು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಸಂಗ್ರಹಿಸಿಡಲಾಗಿತ್ತು. ಚುನಾವಣೆ ಸಂದರ್ಭದಲ್ಲಿ ಹಂಚಲು ಅವುಗಳನ್ನು ಸಂಗ್ರಹಿಸಿಟ್ಟಿರಲಿಲ್ಲ' ಎಂದರು.ಈ ಸಂಬಂಧ ಚಂದ್ರಪ್ಪ ಮತ್ತು ಸಿದ್ದ ಉಡುಪು ಕಾರ್ಖಾನೆಯ ಮಾಲೀಕ ರಮೇಶ್ ಕುಮಾರ್ ವಿರುದ್ಧ ಆರ್‌ಪಿಆಕ್ಟ್ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೀಣ್ಯ ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)