ಬುಧವಾರ, ಏಪ್ರಿಲ್ 14, 2021
31 °C

ರೂ 500 ಕೋಟಿ ವಂಚಿಸಿದ ದಂಪತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ನಾಲ್ಕಾರು ಊರು, ಬೇರೆಬೇರೆ ಹೆಸರು ಹಾಗೂ ಬಗೆಬಗೆಯ ವೇಷಗಳನ್ನು ಧರಿಸಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಸುಮಾರು 500 ಕೋಟಿ ರೂಪಾಯಿ `ಪಂಗನಾಮ~ ಹಾಕಿದ್ದ ಮೈಸೂರು ಮೂಲದ ಯುವತಿ ರಕ್ಷಾ ಅರಸ್ ಹಾಗೂ ಆಕೆಯ ಗಂಡ ಮಹಾರಾಷ್ಟ್ರದ ನಾಗಪುರದ ಉಲ್ಲಾಸ್ ಪ್ರಭಾಕರ ಖೈರೆ ಅಲಿಯಾಸ್ ಲೋಕೇಶ್ವರ ದೇವ್‌ನನ್ನು ದೆಹಲಿ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಬಂಧಿಸಿದ್ದಾರೆ.ಬರೀ ಒಂದನೇ ಪಿಯುಸಿ ಓದಿರುವ 33 ವರ್ಷದ ಉಲ್ಲಾಸ್ ಹಾಗೂ    ಎಸ್‌ಎಸ್‌ಎಲ್‌ಸಿ ಮೈಸೂರು ಕಾವಾದಲ್ಲಿ ಓದಿರುವ 30 ವರ್ಷದ ರಕ್ಷಾ ಅರಸ್ ಒಂದೊಂದು ಊರಿನಲ್ಲಿ ಒಂದೊಂದು ಹೆಸರು- ವೇಷ  ಹಾಕಿಕೊಂಡು ಜನರಿಂದ ಹಣ ಸಂಗ್ರಹಿಸಿ ವಂಚಿಸಿ ಪಲಾಯನ ಮಾಡುತ್ತಿದ್ದರು. ದೆಹಲಿಯಲ್ಲಿ  `ಮೆಸರ್ಸ್ ಸ್ಟಾಕ್ ಇಂಡಿಯಾ ಗುರು~ ಎಂಬ ಕಂಪೆನಿ ಸ್ಥಾಪಿಸಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಅಧಿಕ ಲಾಭ ಮಾಡಿಕೊಡುವ ಭರವಸೆ ಕೊಟ್ಟು ರೂ. ನೂರಾರು ಕೋಟಿ ಸಂಗ್ರಹಿಸಿದ್ದರು ಎಂದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.ಐಷಾರಾಮಿ ಜೀವನ ನಡೆಸುತ್ತ ವೈದ್ಯ, ಉದ್ಯಮಿ, ಕಾಲ್‌ಸೆಂಟರ್ ಉದ್ಯೋಗಿ ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ಪಾತ್ರ ನಿರ್ವಹಿಸಿದ್ದರು. ಷೇರು ಮಾರುಕಟ್ಟೆ ಹೂಡಿಕೆ ವ್ಯವಹಾರದಲ್ಲಿ ಪರಿಣಿತರು ಎಂದು `ಪೋಸ್~ ಕೊಟ್ಟು ಜನರನ್ನು ಮರಳು ಮಾಡುತ್ತಿದ್ದರು. ದೆಹಲಿ ವೆಸ್ಟ್ ಪಟೇಲ್ ನಗರದಲ್ಲಿ `ಮೆಸರ್ಸ್ ಸ್ಟಾಕ್ ಗುರು~ ಕಂಪೆನಿ ತೆರೆದಿದ್ದರು. ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಹಣ ಸಂಗ್ರಹಿಸಿದ್ದರು ಎನ್ನಲಾಗಿದೆ.

 

ಬಹುಕೃತ ವೇಷ, ವಿವಿಧ ಹೆಸರು


ಲೋಕೇಶ್ವರ್ ದೇವ್, ಲೋಕೇಶ್ವರ್ ಬೀರ್‌ದೇವ್, ಸಿದ್ಧಾರ್ಥ ಮರಾಠೆ, ಉಲ್ಹಾಸ್ ರೋಹಿತ್, ಪ್ರಿಯಾಂಕ, ರಕ್ಷಾ. ಇವು ಇವರು ಇಟ್ಟುಕೊಂಡ ಹೆಸರು, ವೇಷ

`ಮೊದಲ 6 ತಿಂಗಳು ಹೂಡಿದ ಹಣಕ್ಕೆ ಶೇ 20ರಷ್ಟು ಲಾಭ ನೀಡಲಾಗುವುದು. ಏಳನೇ ತಿಂಗಳಿಗೆ ಹೂಡಿದ ಹಣವನ್ನು ವಾಪಸ್ ಮಾಡುವುದಾಗಿ ಹೇಳಿ ಹಣ ಸಂಗ್ರಹ ಮಾಡಿ ಕಂಬಿ ಕಿತ್ತಿದ್ದರು. ಪತಿ-ಪತ್ನಿ ತಲಾ ಏಳು ನಕಲಿ ಹೆಸರುಗಳನ್ನು ಬಳಸಿದ್ದಾರೆ~.

`ನಕಲಿ ಹೆಸರುಗಳಲ್ಲೇ 90 ಬ್ಯಾಂಕ್ ಖಾತೆಗಳನ್ನು ತೆರೆದು ಹಣಕಾಸು ವಹಿವಾಟು ನಡೆಸುತ್ತಿದ್ದರು~ ಎಂದು ಈ ದಂಪತಿಯ ಕಂಪೆನಿಯಲ್ಲಿ ಹಣ ಹೂಡಿ ವಂಚನೆಗೊಳಗಾದ 14,303 ಮಂದಿ ಪೊಲೀಸರಿಗೆ ದೂರು ನೀಡಿದ್ದಾರೆ.ಹರಿಯಾಣದ ಸೋನೆಪತ್‌ನ ಸುನಿಲ್ ಕುಮಾರ್ ಹಾಗೂ ಗುಡಗಾಂವ್‌ನ ಸುನಿಲ್ ಕುಮಾರ್ ಎಂಬುವವರು ನೀಡಿದ ದೂರುಗಳನ್ನು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದರು. ದಂಪತಿ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ಸುಮಾರು ಒಂದು ವರ್ಷ ಮೊರಾದಾಬಾದ್, ಡೆಹ್ರಾಡೂನ್, ಅಲ್ವಾರ್, ನಾಗಪುರ ಹಾಗೂ ಗೋವಾ ಮುಂತಾದ ಕಡೆಗಳಲ್ಲಿ ಜಾಲಾಡಿದ ಬಳಿಕ ಅಂತಿಮವಾಗಿ ಶನಿವಾರ ಆರೋಪಿಗಳು ರತ್ನಗಿರಿಯಲ್ಲಿ ದೆಹಲಿ ಪೊಲೀಸರ ಬಲೆಗೆ ಬಿದ್ದರು. ಇವರು ಲೋಕೇಶ್ವರ ದೇವ್ ಹಾಗೂ ಪ್ರಿಯಾಂಕ ಸಾರಸ್ವತ್ ದೇವ್ ಎಂಬ ನಕಲಿ ಹೆಸರಿನಲ್ಲಿ ಪಾಸ್‌ಪೋರ್ಟ್ ಕೂಡಾ ಪಡೆದಿದ್ದರು.ಬೆಂಗಳೂರು ನಂಟು: ಪೊಲೀಸರು ನೀಡಿದ ಮಾಹಿತಿ ಹೀಗಿದೆ. ಉಲ್ಲಾಸ್ ಪ್ರಭಾಕರ ಖೈರೆ ಆರಂಭದಲ್ಲಿ ತನ್ನ ಹುಟ್ಟೂರಿನಲ್ಲಿ ಕಟ್ಟಡ ನಿರ್ಮಿಸುವ ಗುತ್ತಿಗೆದಾರನಾಗಿ ಮತ್ತೊಬ್ಬರ ಜತೆ ಸೇರಿ ವ್ಯವಹಾರ ಆರಂಭಿಸಿದ. ವಂಚನೆ ಆರೋಪದ ಮೇಲೆ ಅಲ್ಲಿ ಮೊಕದ್ದಮೆ ದಾಖಲಾದ ಬಳಿಕ ಪರಾರಿಯಾಗಿದ್ದ. ಮಹಾರಾಷ್ಟ್ರ ಪೊಲೀಸರು ಈತನನ್ನು `ತಲೆ ಮರೆಸಿಕೊಂಡಿರುವ ಆರೋಪಿ~ ಎಂದು ಘೋಷಿಸಿದ್ದರು. 2004ರಲ್ಲಿ ಪುಣೆ `ಕಾಲ್ ಸೆಂಟರ್‌ನಲ್ಲಿ ಒಂದು ವರ್ಷ ಕೆಲಸ ಮಾಡಿದ. 2005ರಲ್ಲಿ ಬೆಂಗಳೂರಿಗೆ ಬಂದು ಹಣಕಾಸು ಕಂಪೆನಿ ಸೇರಿದ.ಬೆಂಗಳೂರಿನಲ್ಲಿದ್ದಾಗಲೇ ಮೈಸೂರು ಮೂಲದ ರಕ್ಷಾ ಅರಸ್ ಪರಿಚಯವಾಯಿತು. ನಂತರ ಇಬ್ಬರೂ ಮದುವೆಯಾದರು.ಬಳಿಕ ಉತ್ತರ ಪ್ರದೇಶದ ಲಖನೌಗೆ ಬಂದರು. ರೋಹಿತ್ ಖತ್ರಿ ಮತ್ತು ಕಾಂಚನ್ ಖತ್ರಿ ಎಂಬ ಹೆಸರಿನಲ್ಲಿ ಕಾಲ್ ಸೆಂಟರ್ ಸೇರಿದರು. ಬಳಿಕ ಅಹಮದಾಬಾದ್, ಭುವನೇಶ್ವರ್ ಹಾಗೂ ರಾಯ್‌ಪುರಗಳಿಗೆ ಹೋದರು. ಡಾ. ರಾಜ್ ಜವೇರಿ ಮತ್ತು ಡಾ. ಪ್ರಿಯಾ ಜವೇರಿ ಎಂಬ ಹೆಸರಿನಲ್ಲಿ ವ್ಯವಹಾರ ನಡೆಸಿದರು. ವಿವಿಧ ಬ್ಯಾಂಕುಗಳಿಂದ ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದರು. ಅದನ್ನು ಉಪಯೋಗಿಸಿಕೊಂಡು ಹಣ ಹಾಗೂ ಸರಕುಗಳನ್ನು ಖರೀದಿ ಮಾಡಿ ನಾಪತ್ತೆಯಾದರು.2009ರಲ್ಲಿ ಡೆಹ್ರಾಡೂನ್‌ಗೆ ಬಂದು ಡಾ. ರಾಕೇಶ್ ಕುಮಾರ್ ಮಹೇಶ್ವರಿ ಹಾಗೂ ಡಾ. ಪ್ರಾಚಿ ಮಹೇಶ್ವರಿ ಎಂಬ ಹೆಸರಿನಲ್ಲಿ ಮಾನಸಿಕ ಕಾಯಿಲೆ ಚಿಕಿತ್ಸಾ  ಹಾಗೂ ಸಲಹಾ ಕೇಂದ್ರ ಸ್ಥಾಪಿಸಿದರು. ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವುದಾಗಿ ಹಲವರಿಂದ ತಲಾ 25 ಸಾವಿರ ರೂಪಾಯಿ ಪಡೆದು ಊರು ಬಿಟ್ಟರು. ಅನಂತರ ಅವರು ಬಂದಿದ್ದು ದೆಹಲಿಗೆ. ವೆಸ್ಟ್ ಪಟೇಲ್ ನಗರದಲ್ಲಿ ಹಣಕಾಸು ಕಂಪೆನಿ ತೆರೆದು ಜಾಹಿರಾತುಗಳನ್ನು ನೀಡಿದರು.ಇದರ ಜತೆಗೆ ಇನ್ನೂ ಕೆಲವು ಕಂಪೆನಿಗಳನ್ನು ಸ್ಥಾಪಿಸಿದರು. ಈ ಕಂಪೆನಿಯಲ್ಲಿ ಠೇವಣಿ ಇಟ್ಟವರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ದ್ವಿಗುಣಗೊಳಿಸುವುದಾಗಿ ನಂಬಿಸಿದರು. ಒಂದು ವರ್ಷದಲ್ಲಿ ಸುಮಾರು 500 ಕೋಟಿ ಸಂಗ್ರಹಿಸಿ ಗೋವಾಕ್ಕೆ ಪರಾರಿಯಾದರು.ಪೊಲೀಸರು ತಮ್ಮ ಹಿಂದೆ ಬಿದ್ದಿರುವುದನ್ನು ಅರಿತ ದಂಪತಿ ಸಿದ್ಧಾರ್ಥ ಮರಾಠೆ ಹಾಗೂ ಮಾಯಾ ಮರಾಠೆ ಎಂಬ ಹೆಸರಿನಲ್ಲಿ ರತ್ನಗಿರಿಗೆ ಬಂದು ಬಾಡಿಗೆ ಮನೆ ಹಿಡಿದರು. ಇದೇ ಹೆಸರಿನಲ್ಲಿ ಪಾನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಗಳನ್ನು ತೆಗೆದು ವ್ಯವಹಾರ ನಡೆಸುತ್ತಿದ್ದರು. ರತ್ನಗಿರಿಯಲ್ಲಿ ಉಲ್ಲಾಸ್ ಷೇರು ವ್ಯವಹಾರ ಆರಂಭಿಸಿದ್ದ. ರಕ್ಷಾ ಮಾಧ್ಯಮಗಳಿಗೆ ಸಂಬಂಧಿಸಿದ ವ್ಯವಹಾರದಲ್ಲಿ ತೊಡಗಿದ್ದಳು.ಜನ ಮರುಳೋ... ಜಾತ್ರೆ ಮರುಳೋ... ಎಂಬ ಗಾದೆಯಂತೆ ದಂಪತಿ ಜನರನ್ನು ಮೋಡಿ ಮಾಡಲು ಪಂಚತಾರಾ ಹೊಟೇಲ್‌ಗಳಲ್ಲಿ ಸಭೆ ನಡೆಸುತ್ತಿದ್ದರು. ಬಾಲಿವುಡ್ ನಟ- ನಟಿಯರನ್ನು ಆಹ್ವಾನಿಸುತ್ತಿದ್ದರು.  ಇಂಗ್ಲಿಷ್‌ನಲ್ಲಿ ಚಾಕಚಕ್ಯತೆಯಿಂದ ಮಾತನಾಡುತ್ತಿದ್ದರು. ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದರು.ಬಂಧಿತರಿಂದ ಟೊಯೊಟೋ ಮತ್ತು ಮರ್ಸಿಡಿಸ್ ಸೇರಿದಂತೆ 12 ಕಾರುಗಳು, ದೆಹಲಿಯ ದ್ವಾರಕಾದಲ್ಲಿ ಎಂಟು, ರಾಜಸ್ತಾನದ ಬಿವಾಡಿ, ಅಲ್ವಾರ್, ಉತ್ತರ ಪ್ರದೇಶದ ಮೊರಾದಾಬಾದ್ ಹಾಗೂ ಗೋವಾದಲ್ಲಿ ಪ್ರತಿಷ್ಠಿತ ಬಂಗಲೆ ಸೇರಿದಂತೆ 12 ಆಸ್ತಿಪಾಸ್ತಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.  ಇದರ ಜತೆಗೆ ಐಷಾರಾಮಿ ವಸ್ತುಗಳು ಬಂಧಿತರ ಬಳಿ ಸಿಕ್ಕಿವೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಹತ್ತು ದಿನ ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.