ಮಂಗಳವಾರ, ಏಪ್ರಿಲ್ 20, 2021
32 °C

ರೂ. 61.7 ಲಕ್ಷ ಉಳಿತಾಯ ಬಜೆಟ್ ಮಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾಂಡೇಲಿ: ದಾಂಡೇಲಿ ನಗರಸಭೆಯಲ್ಲಿ ಬುಧವಾರ ಸಾಮಾನ್ಯ ಸಭೆಯಲ್ಲಿ ಮಂಡಿಸಿದ ರೂ. 61,79,978 ಉಳಿತಾಯ ಬಜೆಟ್‌ಗೆ ಬಹುಮತದಿಂದ ಒಪ್ಪಿಗೆ ನೀಡಲಾಯಿತು.ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ನಗರಸಬಾ ಅಧ್ಯಕ್ಷ ಗೋವಿಂದ ಮೇಲಗಿರಿಯವರು ಸ್ಥಾಯಿ ಸಮಿತಿ ಅಧ್ಯಕ್ಷ ಅಷ್ಪಾಕ್‌ಶೇಖ್ ಅವರಿಗೆ ಬಜೆಟ್‌ಮಂಡನೆ ಮಾಡಲು ಕೋರಿದರು. ಪ್ರಸಕ್ತ ಸಾಲಿನಲ್ಲಿ 3,53,38,389 ರೂಪಾಯಿ ಆರಂಭದ ಶಿಲ್ಕಿನೊಂದಿಗೆ ನಗರಸಭೆ ರೂ. 26,75,54,684 ಆದಾಯವನ್ನು ಹೊಂದಿದ್ದು, ಇದರಲ್ಲಿ ಒಟ್ಟು ರೂ. 29,67,13,095 ವೆಚ್ಚವನ್ನು ಮಾಡಿದ  ನಗರಸಭೆ, ರೂ. 61,79,978 ಉಳಿತಾಯ ಬಜೆಟ್‌ನ್ನು ಸಭೆಯಲ್ಲಿ ಮಂಡಿಸಲಾಯಿತು.ಬಜೆಟ್ ಮಂಡನೆಗೆ ಮುಂಚೆಯೇ ಕೆಲವು ಹಗರಣಗಳ ಕುರಿತು ಮಾತನಾಡಲು ಬಯಸಿದ ಸದಸ್ಯ ಮುನ್ನಾ ಅಬ್ದುಲ್ ವಹಾಬ್ ಹಾಗೂ ನಗರಸಭೆ ಅಧ್ಯಕ್ಷರ ನಡುವೆ ತೀವ್ರ ವಾಗ್ವಾದ ನಡೆದು, ಕೆಲ ಕಾಲ ಸಭೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಸದಸ್ಯರ ಸಭಾತ್ಯಾಗ: ಬಜೆಟ್ ಮಂಡನೆಗೆ ಪೂರ್ವದಲ್ಲಿ ನಗರಸಭೆಯ ಆಸ್ತಿಯಲ್ಲಿ ನಡೆಯುತ್ತಿರುವ ಅತಿಕ್ರಮಣ ವಿಚಾರ ಹಾಗೂ ಬಜೆಟ್ ಪತ್ರಕ್ಕೆ ಹೆಚ್ಚುವರಿ ಪುಟಗಳ ಸೇರ್ಪಡೆ ಮತ್ತು ಬಜೆಟ್ ಪತ್ರವನ್ನು ಸದಸ್ಯರಿಗೆ ಮೊದಲೇ ನೀಡದಿರುವುದಕ್ಕೆ ಆಕ್ಷೇಪಿಸಿ ಹಿರಿಯ ಸದಸ್ಯರಾದ ಬಲವಂತ ಬೊಮ್ಮನಳ್ಳಿ, ಎಂ.ಐ. ಶೇಖ್, ರವಿ ಸುತಾರ ಹಾಗೂ ರಾಜು ರುದ್ರಪಾಟಿ ಸಭೆಯಿಂದ ಹೊರನಡೆದರು.2006ರಿಂದ 2010ರ ಲೆಕ್ಕ ಪರಿಶೋಧನಾ ವರದಿಯನ್ನು ಸಾಮಾನ್ಯ ಸಭೆಯ ಗಮನಕ್ಕೆ ತಂದಿಲ್ಲ, ವರದಿಯಲ್ಲಿ ಸಾಕಷ್ಟು ಆಕ್ಷೇಪಣಾ ಮೊತ್ತಗಳಿದ್ದು, ನಗರಸಭೆಯಿಂದ ವಸೂಲಿಗೆ ಸೂಚಿಸಿದ್ದ ಮೊತ್ತಗಳ ಬಗ್ಗೆ ಇದುವರೆಗೂ ಉತ್ತರವಿಲ್ಲ. ಈ ಬಗ್ಗೆ ಸಭೆಯ ಠರಾವಿನಲ್ಲಿ ದಾಖಲಿಸಬೇಕು ಎಂದು ಲಿಖಿತ ಹೇಳಿಕೆ ನೀಡಿದ ಸದಸ್ಯ ಮುನ್ನಾ ವಹಾಬ್, ಹಿರಿಯ ಸದಸ್ಯರಾದ ಎನ್.ಜಿ.ಸಾಳುಂಕೆ ಅವರೊಂದಿಗೆ ಸಭೆಯಿಂದ ಹೊರನಡೆದರು.ಹಿರಿಯ ಸದಸ್ಯರಾದ ಆದಂ ದೇಸೂರ, ಒಬ್ಬರ ಹೆಸರಿನಲ್ಲಿ ಮಳಿಗೆ ಪಡೆದು ಬೇರೆಯವರಿಗೆ ಬಾಡಿಗೆ ಮೇಲೆ ಮಳಿಗೆಗಳನ್ನು ನೀಡಿದ ಕೆಲ ವ್ಯಾಪಾರಸ್ಥರು ನಗರಸಭೆಗೆ ಬಾಡಿಗೆ ಹಣ ಸಂದಾಯ ಮಾಡದೇ ವಂಚಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಹೇಶ ಸಾವಂತ ಹಾಗೂ ಪೌರಾಯುಕ್ತ ಸಿ.ಡಿ.ದಳವಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.