ರೂ. 6.45 ಕೋಟಿ ಮಾಸಾಶನ ಬಾಕಿ: ಪರದಾಟ

5

ರೂ. 6.45 ಕೋಟಿ ಮಾಸಾಶನ ಬಾಕಿ: ಪರದಾಟ

Published:
Updated:

ಗಂಗಾವತಿ: ಸರ್ಕಾರದ ವಿವಿಧ ಯೋಜನೆಯಲ್ಲಿ ಮಾಸಿಕ ಮಾಸಾಶನ ಪಡೆಯುವ ತಾಲ್ಲೂಕಿನ ಸುಮಾರು 35 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಕಳೆದ ಐದು ತಿಂಗಳಿಂದ ಸಕಾಲಕ್ಕೆ ಮಾಸಾಶನ ದೊರೆಯದೇ ಪರದಾಡುವ ಸ್ಥಿತಿ ಏರ್ಪಟ್ಟಿರುವುದು ಬೆಳಕಿಗೆ ಬಂದಿದೆ. ಇದುವರೆಗೂ ಮುದ್ರಣ ಮಾದರಿಯ ಮನಿ ಆರ್ಡರ್ ಮೂಲಕ ಫಲಾನುಭವಿಗಳಿಗೆ ಸರ್ಕಾರದಿಂದ ಮಂಜೂರಾದ ಹಣ ರವಾನಿಸಲಾಗುತಿತ್ತು. ಇದೀಗ ರಾಜ್ಯದಾದ್ಯಂತ ಎಲೆಕ್ಟ್ರಾನಿಕ್ ಮನಿ ಆರ್ಡರ್ (ಇಎಂಒ) ವ್ಯವಸ್ಥೆ ಜಾರಿ ಮಾಡುತ್ತಿರುವುದು ಸಮಸ್ಯೆ ಕಾರಣ ಎಂದು ಹೇಳಲಾಗಿದೆ.ಇದರಿಂದಾಗಿ ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವೃದ್ಧರು, ಸಂಧ್ಯಾ ಸುರಕ್ಷ, ವಿಧವೆಯರು, ಅಂಗವಿಕಲ ಮತ್ತು, ಶೇ. 75ರ ಅಂಗವಿಕಲರಿಗೆ ಸಂದಾಯವಾಗಬೇಕಿದ್ದ ಸುಮಾರು 6.45 ಕೋಟಿ ರೂಪಾಯಿ ಮೊತ್ತವು ಖಜಾನಾ ಇಲಾಖೆಯಿಂದ ಮಂಜೂರಾಗಿಲ್ಲ. ಅಂಕಿ ಅಂಶ: 2010ರ ಅಕ್ಟೊಬರ್ ತಿಂಗಳಿಂದ ಸಧ್ಯದ ಫೆಬ್ರವರಿ ಮಾಸದವರೆಗೆ ಫಲಾನುಭವಿಗಳಿಗೆ ಮಾಸಾಶನ ಮಂಜೂರಾಗಬೇಕಿದೆ. ತಾಲ್ಲೂಕಿನಲ್ಲಿ 4362ರಷ್ಟು ಸಂಖ್ಯೆಯಲ್ಲಿರುವ ಅಂಗವಿಕಲರಿಗೆ (ಐದು ತಿಂಗಳು) ರೂ. 8.72 ಲಕ್ಷ ಬಾಕಿಯಿದೆ. ಶೇ. 75ರಷ್ಟು ದೈಹಿಕ ಅಂಗವೈಕಲ್ಯ ಹೊಂದಿದ 663 ಫಲಾನುಭವಿಗಳಿಗೆ ಮಾಸಿಕ 1000 ರೂಪಾಯಿಯಂತೆ ಐದು ತಿಂಗಳಿಗೆ ರೂ. 3.3.15000, 9349ರಷ್ಟಿರುವ ವಿಧವೆಯರಿಗೆ ಮಾಸಿಕ ರೂ. 400ನಂತೆ 1.87 ಕೋಟಿ ರೂಪಾಯಿ ಹಣ ಮಂಜೂರಾಗಬೇಕಿದೆ. ಹಾಗೆಯೆ 7810 ವೃದ್ಧರಿಗೆ ಮಾಸಿಕ ರೂ. 400ನಂತೆ ಐದು ತಿಂಗಳಿಗೆ 1.56 ಕೋಟಿ ಹಾಗೂ ಬಿಜೆಪಿ ಸರ್ಕಾರ ಬಂದ ನಂತರ ಜಾರಿಗೆ ಬಂದಿರುವ ಸಂಧ್ಯಾ ಸುರಕ್ಷಾ ಯೋಜನೆಯಲ್ಲಿನ 11352 ಫಲಾನುಭವಿಗಳಿಗೆ ಮಾಸಿಕ 400ರಂತೆ ನಾಲ್ಕು ತಿಂಗಳ ರೂ. 1.82 ಕೋಟಿ ಬಾಕಿಯಿದೆ.ವಿಳಂಬಕ್ಕೆ ಕಾರಣ: ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲ್ಲೂಕು ಖಜಾನೆ ಕೇಂದ್ರಗಳನ್ನು ಗಣಕೀಕೃತಗೊಳಿಸಲಾಗುತ್ತಿದೆ. ಇದರಿಂದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕಡತಗಳ ಶ್ರಮ ಕಡಿಮೆಯಾಗಲಿದ್ದು, ಫಲಾನುಭವಿಗಳ ಮಾಹಿತಿ-ಲೆಕ್ಕಾಚಾರ ಖಚಿತ ದೊರೆಯಲಿದೆ. ಈ ಹಿನ್ನೆಲೆ ಕಳೆದ ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಎಲೆಕ್ಟ್ರಾನಿಕ್ ಮನಿ ಆರ್ಡರ್ ವ್ಯವಸ್ಥೆಗೆ ಬದಲಿಸಿಕೊಳ್ಳಲು ವಿಳಂಬವಾದರೆ, ಡಿಸೆಂಬರ್ ಮತ್ತು ಜನವರಿಯಲ್ಲಿ ಇಲ್ಲಿನ ಖಜಾನಾ ಇಲಾಖೆಯ ಪ್ರಿಂಟರ್ (ಲಿಪಿ) ದುರಸ್ತಿಗೀಡಾಗಿ ಮಾಸಾಶನ ವಿತರಣೆಗೆ ಮತ್ತಷ್ಟು ವಿಳಂಬವಾಗಿದೆ.ಎಲ್ಲವೂ ಸರಿ ಹೋಯಿತು, ಇನ್ನೇನು ಫಲಾನುಭವಿಗಳಿಗೆ ಚೆಕ್ ನೀಡಬೇಕೆಂಬ ಒತ್ತಡದಲ್ಲಿ ಇಲಾಖೆಯ ಸಿಬ್ಬಂದಿಗಳಿದ್ದರೆ, ಅತ್ತ ಚೆಕ್ ರವಾನಿಸಲು ತಾಂತ್ರಿಕ ದೋಷ ಉಂಟಾಗಿದೆ. ಜೊತೆಗೆ ಬೊಕ್ಕಸದಲ್ಲಿ ಹಣಕಾಸಿನ ಕೊರತೆಯೂ ಉಂಟಾಗಿದೆ ಎಂದು ಹೇಳಲಾಗುತ್ತಿದೆ. 300 ಕೋಟಿ ಹೊರೆ: ಕಳೆದ ವರ್ಷದ ಮುಂಗಡ ಪತ್ರದಲ್ಲಿ ರಾಜ್ಯ ಸರ್ಕಾರ ವೃದ್ಧ, ಅಂಗವಿಕಲ, ವಿಧವೆಯರಿಗೆ ನೀಡಲು ತೆಗೆದಿರಿಸಿದ ಮಾಸಾಶನದ ಒಟ್ಟು ಮೊತ್ತಕ್ಕಿಂತಲೂ ಸುಮಾರು 300 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೊಕ್ಕಸದ ಮೇಲೆ ಬಿದ್ದಿದೆ.ಸಧ್ಯ ಇರುವ ಫಲಾನುಭವಿಗಳ ಪೈಕಿ ಸುಮಾರು ಶೇ. 20ರಷ್ಟು ನಕಲಿ ಫಲಾನುಭವಿಗಳು ಸರ್ಕಾರದ ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆಂಬ ಆರೋಪ ಇದೆ. ಗಂಗಾವತಿ ತಾಲ್ಲೂಕು ಒಂದರಲ್ಲಿಯೆ ಸುಮಾರು 6800 ನಕಲಿ ಫಲಾನುಭವಿಗಳಿದ್ದಾರೆ ಎಂದು ಇಲಾಖೆಯ ಮೂಲಗಳು ದೃಢಪಡಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry