ರೂ 6,689 ಕೋಟಿ ಇದ್ದರೆ ಏನೆಲ್ಲ ಮಾಡಬಹುದು?

7

ರೂ 6,689 ಕೋಟಿ ಇದ್ದರೆ ಏನೆಲ್ಲ ಮಾಡಬಹುದು?

Published:
Updated:

 ಬೆಂಗಳೂರು: ಆದ್ಯತೆ ಸಿಗಬೇಕಾದ ಯೋಜನೆಗಳ ಬಗ್ಗೆ ಅಷ್ಟಾಗಿ ಆಸಕ್ತಿ ವಹಿಸದ ಸರ್ಕಾರ, ಅಗತ್ಯವಿಲ್ಲದ ಯೋಜನೆ ಬಗ್ಗೆ ಹೆಚ್ಚು ಉತ್ಸಾಹ ತೋರಿಸುತ್ತದೆ ಎಂಬುದು ನಾಗರಿಕರ ದೂರು.ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡುವ ಬದಲು ಸರ್ಕಾರ, ಜನರಿಗೆ ಬೇಡದ ಯೋಜನೆಯನ್ನು ಕೈಗೊಳ್ಳಲು ಮುಂದಾಗುತ್ತದೆ.ಇದಕ್ಕೆ ಸ್ಪಷ್ಟ ನಿದರ್ಶನ ಎಂದರೆ ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ಕ್ಕೆ (ಬಿಐಎಎಲ್) ಅತಿ ವೇಗದ ರೈಲು ಸಂಪರ್ಕ (ಎಚ್‌ಎಸ್‌ಆರ್‌ಎಲ್) ಯೋಜನೆ ಜಾರಿಗೆ ಸರ್ಕಾರ ಆತುರ ತೋರುತ್ತಿರುವುದು.‘ಬಿಐಎಎಲ್’ಗೆ ಒಂದಲ್ಲ ಹಲವು ಪರ್ಯಾಯ ಸಂಪರ್ಕ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ‘ಎಚ್‌ಎಸ್‌ಆರ್‌ಎಲ್’ ಅನ್ನು ಆದ್ಯತೆ ಮೇಲೆ ಕೈಗೊಳ್ಳುವ ಅಗತ್ಯ ಕಾಣಿಸುತ್ತಿಲ್ಲ ಎಂದು ತಜ್ಞರು, ಸಂಘ ಸಂಸ್ಥೆಗಳು ಅಸಮಾಧಾನ ವ್ಯಕ್ತಪಡಿಸಿವೆ.ರಾಜಧಾನಿಯಲ್ಲಿ ಜರೂರಾಗಿ ಕೈಗೊಳ್ಳಬೇಕಾದ ಯೋಜನೆಗಳು ಬೇರೆಯೇ ಇವೆ.ಅವುಗಳ ಬಗ್ಗೆ ಸರ್ಕಾರ ಅಥವಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದ್ಯತೆ ನೀಡಿದರೆ ನಗರದ ಚಿತ್ರಣ ಬದಲಾಗುವುದರ ಜತೆಯಲ್ಲಿ ನಾಗರಿಕರಿಗೆ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ.ಆದರೆ ಆದ್ಯತೆ ಮೇಲೆ ಕೈಗೊಳ್ಳಬೇಕಾದ ಪ್ರಮುಖ ಯೋಜನೆಗಳ ಬಗ್ಗೆ ಪಾಲಿಕೆ ಮತ್ತು ಸರ್ಕಾರ ತಳೆದಿರುವ ಧೋರಣೆ ನಿರಾಶದಾಯಕವಾಗಿದೆ.ಈ ಮಾತಿಗೆ ಪುಷ್ಟಿ ನೀಡುವ ತಾಜಾ ಉದಾಹರಣೆಗಳು ಇಲ್ಲಿವೆ.ನೀರಿಗೆ ಆದ್ಯತೆ ಬೇಡವೇ?: ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಬಿಬಿಎಂಪಿ ತೆಕ್ಕೆಗೆ 110 ಹಳ್ಳಿಗಳು ಸೇರಿದವು.ಈವರೆಗೆ ಆ ಹಳ್ಳಿಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸುವ ಕೆಲಸ ಆಗಿಲ್ಲ.110 ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಸರಬರಾಜು ಜತೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ರೂ 2,500 ಕೋಟಿ ಅಂದಾಜು ವೆಚ್ಚದ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಾಗಿದೆ.ಆದರೆ ಈ ಯೋಜನೆ ಜಾರಿಗಾಗಿ ಅಗತ್ಯವಾದ ಆರ್ಥಿಕ ಸಂಪನ್ಮೂಲಕ್ಕಾಗಿ ಹುಡುಕಾಟ ಮುಂದುವರೆದಿದೆ.ವಿಶ್ವಬ್ಯಾಂಕ್ ಸೇರಿದಂತೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಜಲ ಮಂಡಳಿ ಮೂಲಗಳು ತಿಳಿಸಿವೆ.ಮಹಾನಗರದ ಭಾಗವೆನಿಸಿಕೊಂಡ ಹಳ್ಳಿಗಳಿಗೆ ನೀರು, ಒಳಚರಂಡಿಯಂತಹ ಅತ್ಯಗತ್ಯ ಸೌಕರ್ಯಗಳನ್ನು ಒದಗಿಸಲು ಸಾಲಕ್ಕಾಗಿ ಕಾಯುತ್ತಾ ಕೂರಬೇಕೇ? ಸರ್ಕಾರ ಮನಸ್ಸು ಮಾಡಿದರೆ ಈ ಹಣ ಒದಗಿಸಲು ಸಾಧ್ಯವಿಲ್ಲವೇ? ಎಂದು ನಾಗರಿಕ ಸಂಘ ಸಂಸ್ಥೆಗಳು ಪ್ರಶ್ನಿಸಿವೆ.ಸಂಚಾರ ಸುಧಾರಣೆ ಮುಖ್ಯವಲ್ಲವೇ?: ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರದ ಹಲವೆಡೆ ಸಂಚಾರ ದಟ್ಟಣೆ ನಿವಾರಣೆಗಾಗಿ ಪಾಲಿಕೆಯೇ ಗುರುತಿಸಿರುವಂತೆ 50 ಗ್ರೇಡ್ ಸಪರೇಟರ್‌ಗಳನ್ನು ನಿರ್ಮಿಸುವ ಅಗತ್ಯವಿದೆ.ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಂದ ನಗರದ ಕೇಂದ್ರ ಭಾಗವನ್ನು ಸಂಪರ್ಕಿಸುವ 512 ಕಿಲೋ ಮೀಟರ್ ಉದ್ದದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳನ್ನು 7 ತಡೆ ರಹಿತ ಕಾರಿಡಾರ್‌ಗಳನ್ನಾಗಿ ಅಭಿವೃದ್ಧಿ ಪಡಿಸಬೇಕಾದ ಜರೂರಿದೆ.ಈ ಅಂಶವನ್ನು  2010- 11 ರ ಸಾಲಿನ ಪಾಲಿಕೆ ಬಜೆಟ್‌ನಲ್ಲಿ ತಿಳಿಸಲಾಗಿದೆ.ಇವು ಬೇಗ ಆಗಬೇಕಾದ ಕೆಲಸ ಎಂಬ ಅರಿವು ಇದ್ದರೂ ಪಾಲಿಕೆ ಅಥವಾ ಸರ್ಕಾರದ ಆದ್ಯತೆ ಪಟ್ಟಿಯಲ್ಲಿ ಈ ಕಾಮಗಾರಿಗಳಿಲ್ಲ. ಗ್ರೇಡ್ ಸಪರೇಟರ್‌ಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವುದಾಗಿ ಪಾಲಿಕೆ ಹೇಳಿಕೊಂಡಿದೆ.ಇನ್ನು ರೂ 3,248.40 ಕೋಟಿ ವೆಚ್ಚದ 512 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿಗೆ ಪ್ರಸಕ್ತ ಆರ್ಥಿಕ ಸಾಲಿನಲ್ಲಿ ರೂ 1,000 ಕೋಟಿ ಹಣವನ್ನು ಮಾತ್ರ ಮೀಸಲಿರಿಸಲಾಗಿದೆ.ಇದಕ್ಕಿಂತಲೂ ಸೋಜಿಗದ ಸಂಗತಿ ಎಂದರೆ ವರ್ಷದ ಎಲ್ಲ ಕಾಲವೂ ಜನ ಜಂಗುಳಿಯಿಂದ ಗಿಜಿಗುಟ್ಟುವ ಮೆಜೆಸ್ಟಿಕ್ ಮತ್ತು ಕೆಆರ್ ಮಾರುಕಟ್ಟೆ ಪ್ರದೇಶಗಳ ನಡುವೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಉತ್ಸಾಹ ತೋರದೇ ಇರುವುದು. ಮೆಜೆಸ್ಟಿಕ್‌ನಿಂದ ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್‌ನಿಂದ ಓಕಳಿಪುರ ಹಾಗೂ ಮಿನರ್ವ ವೃತ್ತದಿಂದ ಹಡ್ಸನ್ ವೃತ್ತದವರೆಗೆ ಉಕ್ಕಿನ ಮೇಲ್ಸೇತುವೆ ನಿರ್ಮಿಸುವ ಅಗತ್ಯವನ್ನು ಬಜೆಟ್‌ನಲ್ಲಿ ತಿಳಿಸಿದ್ದರೂ ಇದಕ್ಕೆ ಕೇವಲ ರೂ 6 ಕೋಟಿ ಅನುದಾನವನ್ನು ಮಾತ್ರ ನೀಡಲಾಗಿದೆ.7 ತಡೆ ರಹಿತ ಕಾರಿಡಾರ್‌ಗಳು, 50 ಗ್ರೇಡ್ ಸಪರೇಟರ್‌ಗಳು, ಐದಾರು ಉಕ್ಕಿನ ಮೇಲ್ಸೇತುವೆಗಳು ನಿರ್ಮಾಣಗೊಂಡರೆ ನಗರದ ಸಂಚಾರ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆ ಕಂಡು ಬರುವುದು ನಿಶ್ಚಿತ.ಮಳೆ ಹಾನಿ ತಡೆ ಜರೂರಿಲ್ಲವೇ?: ಇನ್ನು ಮಳೆ ಬಂದಾಗಲೆಲ್ಲ ಸಮಸ್ಯೆ ಉಂಟು ಮಾಡುವ ಮಳೆ ನೀರು ಕಾಲುವೆಗಳ ವ್ಯವಸ್ಥಿತ ಅಭಿವೃದ್ಧಿಗೆ ನೀಡಬೇಕಾದಷ್ಟು ಗಮನ ನೀಡುತ್ತಿಲ್ಲ.ಬಿಬಿಎಂಪಿ ವ್ಯಾಪ್ತಿಯಲ್ಲಿನ ನಾಲ್ಕು ಪ್ರಮುಖ ನೀರು ಕಾಲುವೆಗಳ ಉದ್ದ ಸುಮಾರು 840 ಕಿ.ಮೀ.ಗಳು. ಇದರಲ್ಲಿ ಹಿಂದಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 240 ಕಿ.ಮೀ. ಉದ್ದದ ಮಳೆ ನೀರು ಕಾಲುವೆಗಳ ಅಭಿವೃದ್ಧಿಗಾಗಿ ರೂ. 951 ಕೋಟಿ ವೆಚ್ಚದ ಸಮಗ್ರ ಯೋಜನೆ ತಯಾರಿಸಲಾಗಿದೆ.ಇದನ್ನು ಹಂತ ಹಂತವಾಗಿ ಅನುಷ್ಠಾನಕ್ಕಾಗಿ ತರಲಾಗುತ್ತಿದೆ.ಪಾಲಿಕೆಯ ಐದು ಹೊಸ ವಲಯಗಳಲ್ಲಿ 600 ಕಿ.ಮೀ.ಉದ್ದದ ಕಾಲುವೆಗಳು ಹರಿದಿದ್ದು, ಅವುಗಳ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ಈಗ ಸಿದ್ಧಪಡಿಸಲಾಗುತ್ತಿದೆ.ಮಳೆ ನೀರು ಕಾಲುವೆಗಳ ಅವ್ಯವಸ್ಥೆಯಿಂದ ಜೀವ ಹಾನಿ ಮತ್ತು ಆಸ್ತಿಪಾಸ್ತಿಗೆ ನಷ್ಟ ಆಗಿದೆ.ಅದು ಮರುಕಳಿಸದಂತೆ ಮಾಡಲು ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ. ಆದರೆ ಈ ದಿಸೆಯಲ್ಲಿ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry