ರೂ. 6,695 ಕೋಟಿ ತೆರಿಗೆ ಸಂಗ್ರಹ

7

ರೂ. 6,695 ಕೋಟಿ ತೆರಿಗೆ ಸಂಗ್ರಹ

Published:
Updated:

ರಾಯಚೂರು: ಅಕ್ರಮ ಮದ್ಯ ಮಾರಾಟ, ಕಳ್ಳಭಟ್ಟಿ ತಯಾರಿಕೆ ಚಟುವಟಿಕೆ ನಿಯಂತ್ರಣ, ತೆರಿಗೆ ಸೋರಿಕೆ ತಡೆಗಟ್ಟಿದ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ಈ ಸಾಲಿನಲ್ಲಿ 6,695 ಕೋಟಿ ತೆರಿಗೆ ಸಂಗ್ರಹವಾಗಿದೆ. ಇಲಾಖೆಯಲ್ಲಿ 2400 ಹುದ್ದೆ ಖಾಲಿ ಇದ್ದು, ಶೀಘ್ರ 450 ಹುದ್ದೆ ಭರ್ತಿ ಮಾಡಲಾಗುವುದು. ಅಬಕಾರಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದಂತೆ ಇಷ್ಟರಲ್ಲಿಯೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗುವುದು ಎಂದು ಅಬಕಾರಿ ಖಾತೆ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಸಕ್ತ ವರ್ಷ 6,695 ಕೋಟಿ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷ 5,660 ಕೋಟಿ ಸಂಗ್ರಹವಾಗಿತ್ತು. ಒಟ್ಟು 1,035 ಕೋಟಿ ತೆರಿಗೆ ಸಂಗ್ರಹ ಹೆಚ್ಚಳ ವಾಗಿದ್ದು, ಶೇ 18.29ರಷ್ಟು ತೆರಿಗೆ ಸಂಗ್ರಹ ಸಾಧನೆಯಾಗಿದೆ. 2010-11ನೇ ಸಾಲಿಗೆ 7500 ಕೋಟಿ ತೆರಿಗೆ ಸಂಗ್ರಹ ಗುರಿ ನಿಗದಿ ಪಡಿಸಲಾಗಿದೆ. 8,200 ಕೋಟಿ ತೆರಿಗೆ ಸಂಗ್ರಹ ಆಗುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.ಅಬಕಾರಿ ಲಾಬಿಗೆ ಮಣಿದಿಲ್ಲ: ಹಿಂದಿನ ಸರ್ಕಾರಗಳು ಅಬಕಾರಿ ಲಾಬಿಗೆ ಮಣಿದಿದ್ದವು. ಅಪಾರ ತೆರಿಗೆ ಸೋರಿಕೆ ಆಗುತ್ತಿತ್ತು. ಕಳ್ಳಭಟ್ಟಿ, ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಈಗ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ತೆರಿಗೆ ಸಂಗ್ರಹಣೆಯಲ್ಲಿ ಸುಧಾರಣೆ ಆಗಿದೆ ಎಂದು ಹೇಳಿದರು.ಕಳ್ಳಭಟ್ಟಿ, ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ನಿಯಂತ್ರಣಕ್ಕೆ ಇಲಾಖೆ ಕಾನೂನಿನ ಪ್ರಕಾರ ಏನೆಲ್ಲ ಕ್ರಮ ಕೈಗೊಂಡರು ಈ ಚಟುವಟಿಕೆ ಮುಂದುವರಿಯುತ್ತಿವೆ. ಗೂಂಡಾ ಕಾಯ್ದೆ, ಕ್ರಿಮಿನಲ್ ಪ್ರಕರಣ ಏನೆಲ್ಲ ಪ್ರಕರಣ ದಾಖಲಿಸಿ ಈ ರೀತಿಯ ಚಟುವಟಿಕೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದಾಗ್ಯೂ ಇನ್ನೂ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕಾದರೆ ಅಬಕಾರಿ ಕಾಯ್ದೆ ತಿದ್ದುಪಡಿ ಅವಶ್ಯ. ಈ ಬಗ್ಗೆ ಶೀಘ್ರ ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಗೃಹ ಇಲಾಖೆ ಮತ್ತು ಅಬಕಾರಿ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧರಿಸಲಾಗುವುದು ಎಂದರು.18 ವರ್ಷದೊಳಗಿನವರಿಗೆ ಮದ್ಯ ಮಾರಾಟ ನಿರ್ಬಂಧ: ಅಪ್ರಾಪ್ತರು ಸರಾಯಿ, ಮದ್ಯ ಸೇವನೆ ಮಾಡುತ್ತಿದ್ದು, ಮದ್ಯ ಮಾರಾಟ ಅಂಗಡಿಗಳಲ್ಲಿ ಇನ್ನು ಮುಂದೆ 18 ವರ್ಷದೊಳಗಿನವರಿಗೆ ಮದ್ಯ ಮಾರಾಟ ಮಾಡದಂತೆ ಆದೇಶಿಸಲಾಗುವುದು. ಮಾರಾಟ ವಾಗಿದ್ದು ಕಂಡುಬಂದಲ್ಲಿ ಸಂಬಂಧಪಟ್ಟ ಅಂಗಡಿ ಯವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.ಪರ್ಯಾಯ ವ್ಯವಸ್ಥೆ: ಸರಾಯಿ, ಹೆಂಡ ತಯಾರಿಸುತ್ತ ಕುಲಕಸುಬು ಎಂದು ಹೇಳಿ ಕೊಂಡು ಅದನ್ನೇ ಈಗಲೂ ವೃತ್ತಿಯಾಗಿ ಮುಂದುವರಿಸಿರುವಂಥ ಕುಟುಂಬಗಳು ಆರ್ಥಿಕವಾಗಿ ಏಳ್ಗೆ ಕಂಡಿಲ್ಲ. ಆ ಕುಟುಂಬಗಳೂ ನೆಮ್ಮದಿ ಬದುಕು ಸಾಗಿಸುತ್ತಿಲ್ಲ. ಬದಲಾಗಿ ಮಕ್ಕಳಿಗೆ ಶಿಕ್ಷಣ ಇಲ್ಲದೇ ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಇಲಾಖೆ ಗಮನಿಸಿದೆ. ಇಂಥ ಕುಟುಂಬಗಳಿಗೆ ಆ ವೃತ್ತಿಯಿಂದ ಹೊರ ತಂದು ಪರ್ಯಾಯ ವ್ಯವಸ್ಥೆ ಕಲ್ಪಿಸುವ ದಿಶೆಯಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದರು.ಹೊರ ರಾಜ್ಯದ ಜೊತೆ ಮಾತುಕತೆ: ರಾಜ್ಯದ ಗಡಿ ಆಚೆ ಪಕ್ಕದ ರಾಜ್ಯದ ಹಳ್ಳಿಗಳಲ್ಲಿ ಸರಾಯಿ, ಸಿ.ಎಚ್ ಪೌಡರ್, ಹೆಂಡ ಸಾಗಾಟ, ತಯಾರಿಕೆ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲಿಯ ಚಟುವಟಿಕೆ ರಾಜ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರದ ಜೊತೆ ಅಧಿಕಾರಿಗಳು ಈ ಬಗ್ಗೆ ಚರ್ಚಿಸಿದ್ದಾರೆ. ತಾವೂ ಮಾತುಕತೆ ನಡೆಸುವು ದಾಗಿ ಸಚಿವ ರೇಣುಕಾಚಾರ್ಯ ತಿಳಿಸಿದರು.ರಾಜ್ಯದಲ್ಲಿ ಸುಮಾರು 2 ಸಾವಿರ ಕಳ್ಳಭಟ್ಟಿಗಳು ಇರುವ ಬಗ್ಗೆ ಮಾಹಿತಿ ಇದೆ. ಸಚಿವರಾದ ಬಳಿಕ ಈಗಾಗಲೇ 650 ಕಳ್ಳಭಟ್ಟಿ ಅಡ್ಡೆಗಳ ಮೇಲೆ ದಾಳಿ ನಡೆಸಿ ಮುಚ್ಚಿಸಲಾಗಿದೆ. ಇನ್ನು ಎರಡು ತಿಂಗಳಲ್ಲಿ ಎಲ್ಲ ಅಡ್ಡೆಗಳು ಮುಚ್ಚಲಿವೆ ಎಂದರು.ಅಬಕಾರಿ ಇಲಾಖೆ ಆಧುನೀಕರಣಗೊಳಿಸಲು ಸಿಬ್ಬಂದಿ ನೇಮಕಾತಿ ಜೊತೆಗೆ ಅಧಿಕಾರಿ ಮತ್ತು ಸಿಬ್ಬಂದಿಗೆ ಶಸ್ತ್ರಾಸ್ತ್ರಗಳನ್ನು ದೊರಕಿಸಲು ಚಿಂತನೆ ನಡೆದಿದೆ. ಮುಖ್ಯಮಂತ್ರಿಗಳೂ ಪೂರಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.ಸರಾಯಿ ತಯಾರಿಕೆ ಮತ್ತು ಸೇವನೆ, ಗಾಂಜಾ ಮುಂತಾದವುಗಳ ನಿರ್ಮೂಲನೆಗೆ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆ ನಡೆಸಬೇಕು. ಗ್ರಾಮಸ್ಥರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕು.ಇಂಥ ಗ್ರಾಮಸಭೆಗಳನ್ನು ಈವರೆಗೆ 1069 ಕಡೆ ಅಧಿಕಾರಿಗಳು ನಡೆಸಿದ್ದಾರೆ ಎಂದು ವಿವರಿಸಿದರು.ಅಬಕಾರಿ ಇಲಾಖೆ ಗುಲ್ಬರ್ಗ ಜಂಟಿ ಆಯುಕ್ತ ವಿಶ್ವರೂಪ, ರಾಯಚೂರು ಉಪ ಆಯುಕ್ತ ಸೋಮಶೇಖರ, ಶಾಸಕ ಶಂಕರ, ಮಾಜಿ ಶಾಸಕ ಎ ಪಾಪಾರೆಡ್ಡಿ, ತುಂಗಭದ್ರಾ ಕಾಡಾ ಅಧ್ಯಕ್ಷ ಬಸವನಗೌಡ ಬ್ಯಾಗವಾಟ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry