ರೂ 7.20 ಲಕ್ಷ ಖೋಟಾನೋಟು ವಶ

7

ರೂ 7.20 ಲಕ್ಷ ಖೋಟಾನೋಟು ವಶ

Published:
Updated:

ಬೆಂಗಳೂರು: ಅಂತರರಾಷ್ಟ್ರೀಯ ಖೋಟಾನೋಟು ಜಾಲ ಭೇದಿಸಿರುವ ನಗರ ಪೊಲೀಸರು ಆರು ಮಂದಿಯನ್ನು ಬಂಧಿಸಿ 7.20 ಲಕ್ಷ ರೂಪಾಯಿ ಖೋಟಾನೋಟು ವಶಪಡಿಸಿಕೊಂಡಿದ್ದಾರೆ.ಶೇಷಾದ್ರಿ ರಸ್ತೆಯ ಮಾರಪ್ಪ ಗಾರ್ಡನ್‌ನ ಟಿಪ್ಪು ಅನೀಸ್ ಉರುಫ್ ಅನಿಸ್ (28), ಜಮ್ಮು- ಕಾಶ್ಮೀರದ ನಜೀರ್ (28), ಮುಸ್ತಾಕ್, ಪಶ್ಚಿಮ ಬಂಗಾಳದ ಅಸ್ಕರ್ (26), ಜಿಯಾ ಉರುಫ್ ಜಿಯಾರುಲ್ (27) ಮತ್ತು ಅಬ್ದುಲ್ ಮಲ್ಲಿಕ್ (29) ಬಂಧಿತರು. ಐನೂರು ರೂಪಾಯಿ ಮುಖ ಬೆಲೆಯ ಖೋಟಾನೋಟುಗಳು ಮತ್ತು ಆರು ಮೊಬೈಲ್ ಫೋನ್‌ಗಳನ್ನು ಜಫ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.‘ಅಸಲಿ ನೋಟಿಗೂ ನಕಲಿ ನೋಟಿಗೂ ಶೇ 95ರಷ್ಟು ಸಾಮ್ಯತೆ ಇದೆ. ಸಾಮಾನ್ಯ ಜನರಿಗೆ ನಕಲಿ ನೋಟೆಂದು ಸುಲಭಕ್ಕೆ ಗೊತ್ತಾಗುವುದಿಲ್ಲ. ಅಸಲಿ ನೋಟಿಗಿಂತ ನಕಲಿ ಸ್ವಲ್ಪ ದಪ್ಪವಿದೆ. ಕಾಶ್ಮೀರದ ನಾಜೀರ್ ಎಂಬಾತ ಆರೋಪಿಗಳಿಗೆ ಇದನ್ನು ಪೂರೈಕೆ ಮಾಡುತ್ತಿದ್ದ. ಬಾಂಗ್ಲಾ ದೇಶದ ಮಾಲ್ಡಾ ಗಡಿ ಮೂಲಕ ಆತ ಯೋಧರ ಕಣ್ತಪ್ಪಿಸಿ ನೋಟು ತರುತ್ತಿದ್ದ. 30 ಸಾವಿರ ರೂಪಾಯಿ ಅಸಲಿ ನೋಟು ಪಡೆದು ಒಂದು ಲಕ್ಷ ರೂಪಾಯಿ ನಕಲಿ ನೀಡುತ್ತಿದ್ದ. ಅದನ್ನು ಆರೋಪಿಗಳು ಚಲಾವಣೆ ಮಾಡುತ್ತಿದ್ದರು’ ಎಂದು ಕೆ.ಆರ್ ಪುರ ಉಪ ವಿಭಾಗದ ಎಸಿಪಿ ಎನ್. ನರಸಿಂಹಯ್ಯ ತಿಳಿಸಿದ್ದಾರೆ.‘ಶಿವಾಜಿನಗರದಲ್ಲಿರುವ ಮುಬಾರಕ್ ಹೆಸರಿನ ಹೋಟೆಲ್‌ನ ಮಾಲೀಕ ಅನೀಸ್‌ಗೆ ನಜೀರ್‌ನ ಪರಿಚಯವಾಗಿತ್ತು. ಅನೀಸ್ ಆತನಿಂದ ಖೋಟಾನೋಟು ಪಡೆದು ಚಲಾವಣೆ ಮಾಡಿಸುತ್ತಿದ್ದ’ ಎಂದು ಅವರು ಮಾಹಿತಿ ನೀಡಿದರು. ಆರೋಪಿಗಳು ಎಷ್ಟು ದಿನದಿಂದ ಈ ಕೃತ್ಯ ಎಸಗುತ್ತಿದ್ದರು ಮತ್ತು ಎಷ್ಟು ಮೊತ್ತದ ಖೋಟಾನೋಟನ್ನು ಚಲಾವಣೆ ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.ಕತ್ತು ಕೊಯ್ದು ಯುವತಿ ಕೊಲೆ

ದುಷ್ಕರ್ಮಿಗಳು ಚಾಕುವಿನಿಂದ ಯುವತಿಯ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿದ ಘಟನೆ ನಗರದ ಜ್ಞಾನಭಾರತಿ ಸಮೀಪದ ಭವಾನಿ ಲೇಔಟ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.ಕೊಲೆಯಾದ ಯುವತಿಯ ಗುರುತು ಪತ್ತೆಯಾಗಿಲ್ಲ. ಆಕೆಯ ವಯಸ್ಸು ಸುಮಾರು 25 ವರ್ಷವಿರಬಹುದು. ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಾನಮತ್ತ ಚಾಲನೆ: ಅಪಘಾತ

ನಗರದ ಹೆಣ್ಣೂರು ಜಂಕ್ಷನ್ ಬಳಿಯ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ವಿಜಯ್ (22), ಇನ್‌ಸೆಂಟ್ (23) ಮತ್ತು ಸುನಿಲ್ (22) ಎಂಬುವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಅಪಘಾತದಲ್ಲಿ ಶಿವಕುಮಾರ್, ಅನಿಲ್ ಮತ್ತು ಶ್ಯಾಮ್ ಸಾವನ್ನಪ್ಪಿದ್ದಾರೆ. ಶಿವಕುಮಾರ್ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ್ದರಿಂದಲೇ ಈ ಅಪಘಾತ ಸಂಭವಿಸಿದ. ವಡ್ಡರಪಾಳ್ಯದಲ್ಲಿರುವ ಬಾರ್‌ವೊಂದರಲ್ಲಿ ಚೆನ್ನಾಗಿ ಕುಡಿದ ಯುವಕರು ಮನೆಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿತ್ತು ಎಂದು ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.ಸಜ್ಜಾದ್ ಮತ್ತು ಸಹಚರರ ಬಂಧನ

ಕುಖ್ಯಾತ ರೌಡಿ ಸಜ್ಜಾದ್ ಮತ್ತು ಆತನ ಮೂರು ಮಂದಿ ಸಹಚರರನ್ನು ಬಂಧಿಸಿರುವ ನಗರ ಪೊಲೀಸರು ಪಿಸ್ತೂಲ್, ಮೂರು ಗುಂಡುಗಳು ಹಾಗೂ ಇತರೆ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.ಶಿವಾಜಿನಗರದ ಸಜ್ಜಾದ್ (39), ಪಿಳ್ಳಣ್ಣ ಗಾರ್ಡನ್‌ನ ಖಾಸೀಂ ಮನ್ಸೂರ್ (28), ದೇವರಜೀವನಹಳ್ಳಿಯ ಕಲೀಂ ಖಾನ್ (26) ಮತ್ತು ಮಧ್ಯಪ್ರದೇಶದ ಅಜೀಂ ಖಾನ್ (27) ಬಂಧಿತರು.ರೌಡಿ ತನ್ವೀರ್‌ನ ಶಿಷ್ಯನಾದ ಜಬ್ಬಾರ್ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ, ಸುಲಿಗೆಯ ಇಪ್ಪತ್ತೇಳು ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಶಿವಾಜಿನಗರ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರಿದೆ.ರೌಡಿ ಜಬ್ಬಾರ್ ಕೊಲೆ ಪ್ರಕರಣದ ಆರೋಪಿಯಾಗಿದ್ದ ಆತ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ರೌಡಿ ಅಜಿತ್ ಸಿಂಗ್ ಸಹ ಹಿಂದೆ ಅದೇ ಜೈಲಿನಲ್ಲಿದ್ದ. ಜೈಲಿನಲ್ಲಿ ಅವರಿಬ್ಬರ ಪರಿಚಯವಾಗಿತ್ತು ಹಾಗೂ ಸಿಂಗ್, ಸಜ್ಜಾದ್‌ಗೆ ಪಿಸ್ತೂಲ್ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಅಜೀಂ ಖಾನ್, ಅಜಿತ್ ಸಿಂಗ್‌ನ ಬಲಗೈ ಬಂಟನಾಗಿದ್ದ. ಹಿಡಿಯಲು ಬಂದ ಪೊಲೀಸರ ಮೇಲೆ ಅಜಿತ್ ಸಿಂಗ್ ಗುಂಡು ಹಾರಿಸಿದಾಗ ಆತ ಜತೆಯಲ್ಲೇ ಇದ್ದ. ಘಟನೆಯ ನಂತರ ಆತ ತಲೆಮರೆಸಿಕೊಂಡಿದ್ದ. ನಾಲ್ಕೂ ಮಂದಿ ಆರೋಪಿಗಳು ದರೋಡೆಗೆ ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಪಡೆದು ಕಾರ್ಯಾಚರಣೆ ನಡೆಸಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಮಾದಕ ವಸ್ತು ಮಾರಾಟ: ಬಂಧನ

ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿರುವ ನಗರ ಪೊಲೀಸರು 20 ಲಕ್ಷ ರೂಪಾಯಿ ಬೆಲೆ ಬಾಳುವ ಎರಡು ಕೆ.ಜಿ ಅಪೀಮು ವಶಪಡಿಸಿಕೊಂಡಿದ್ದಾರೆ.ರಾಜಸ್ತಾನದ ಸುರೇಂದ್ರ ಕುಮಾರ್ (20) ಮತ್ತು ಜಸ್‌ರಾಜ್ (20) ಬಂಧಿತರು. ಯಶವಂತಪುರದಲ್ಲಿರುವ ಲಾಡ್ಜ್‌ವೊಂದರಲ್ಲಿ ತಂಗಿದ್ದ ಆರೋಪಿಗಳು ಅಲ್ಲಿಯೇ ಅಪೀಮು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಜಸ್‌ರಾಜ್ ನಗರದ ಪಾದರಾಯನಪುರದಲ್ಲಿ ಎಸ್‌ಆರ್‌ಕೆ ಫ್ಯಾಷನ್ ಹೆಸರಿನ ಅಂಗಡಿ ಇಟ್ಟುಕೊಂಡಿದ್ದಾನೆ. ಆತ ಸುರೇಂದ್ರ ಕುಮಾರ್‌ನ ಅಪೀಮು ದಂದೆಯ ಬಗ್ಗೆ ತಿಳಿದುಕೊಂಡಿದ್ದ. ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಅರೆಬರೆ ಬೆಂದ ದೇಹ ಪತ್ತೆ

ಬೆಂಗಳೂರು: ನಗರದ ಹೊರವಲಯದ ಹೆಸರುಘಟ್ಟ ಕೆರೆಯ ಸಮೀಪ ಇರುವ ಅರಣ್ಯದಲ್ಲಿ ಯುವಕನೊಬ್ಬನ ಮೃತ ದೇಹ ಅರೆಬರೆ ಬೆಂದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. ಮೃತ ಯುವಕನ ಗುರತು ಪತ್ತೆಯಾಗಿಲ್ಲ. ಆತನ ವಯಸ್ಸು ಸುಮಾರು 25 ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಹೇಗೆ ಸಂಭವಿಸಿದೆ ಎಂದು ನಿಖರವಾಗಿ ಗೊತ್ತಾಗಿಲ್ಲ. ಅರಣ್ಯಕ್ಕೆ ಬೆಂಕಿ ಬಿದ್ದಿದ್ದರಿಂದ ಈ ಘಟನೆ ನಡೆದಿರುವ ಸಾಧ್ಯತೆ ಇದೆ, ಯುವಕ ಪಾನಮತ್ತನಾಗಿ ಮಲಗಿದ್ದಾಗ ಬೆಂಕಿ ಹೊತ್ತಿ ಕೊಂಡಿರಬಹುದು, ಪಾನಮತ್ತ ಸ್ಥಿತಿಯಲ್ಲಿದ್ದ ಆತ ಓಡಲಾಗದೆ ಸಾವನ್ನಪ್ಪಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ದ್ವೇಷದ ಹಿನ್ನೆಲೆಯಲ್ಲಿ ಯುವಕನನ್ನು ಮರಕ್ಕೆ ಕಟ್ಟಿ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ದೂರಿದ್ದಾರೆ. ಆದರೆ ಇದನ್ನು ಅಲ್ಲೆಗೆಳೆದಿರುವ ಪೊಲೀಸರು ಆ ರೀತಿ ಆಗಿರುವ ಸಾಧ್ಯತೆ ಇಲ್ಲ. ಶವ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry