ರೂ.1350 ಕೋಟಿ ನೆರವು: ಕೇಂದ್ರಕ್ಕೆ ರಾಜ್ಯದ ಮನವಿ

7
ಪ್ರಜಾವಾಣಿ ವಾರ್ತೆ

ರೂ.1350 ಕೋಟಿ ನೆರವು: ಕೇಂದ್ರಕ್ಕೆ ರಾಜ್ಯದ ಮನವಿ

Published:
Updated:

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಉಂಟಾಗಿರುವ ಹಾನಿಗೆ ಪರಿಹಾರ ಒದಗಿಸಲು 1,350 ಕೋಟಿ ರೂಪಾಯಿ ನೆರವು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಅಧ್ಯಯನ ನಡೆಸಲು ಶೀಘ್ರದಲ್ಲಿ ರಾಜ್ಯಕ್ಕೆ ತಜ್ಞರ ತಂಡ ಕಳುಹಿಸುವುದಾಗಿ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಭರವಸೆ ನೀಡಿದ್ದಾರೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.ಶುಕ್ರವಾರ ಸಚಿವ ಸಂಪುಟ ಸಭೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, `ನಾನು ದೆಹಲಿಯಲ್ಲಿ ಶುಕ್ರವಾರ ಬೆಳಿಗ್ಗೆ ಪವಾರ್ ಅವರನ್ನು ಭೇಟಿಮಾಡಿ ಮನವಿ ಸಲ್ಲಿಸಿದ್ದೇನೆ. ಬರಪೀಡಿತ ಪ್ರದೇಶಗಳು ಮತ್ತು ಅತಿವೃಷ್ಟಿಯಿಂದ ಹಾನಿಗೆ ಒಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ಕೈಗೊಳ್ಳಲು, ರೈತರಿಗೆ ಪರಿಹಾರ ನೀಡಲು ನೆರವು ಕೋರಲಾಗಿದೆ. ಶೀಘ್ರದಲ್ಲಿ ತಜ್ಞರ ತಂಡವನ್ನು ರಾಜ್ಯಕ್ಕೆ ಕಳುಹಿಸಿ, ವರದಿ ಪಡೆದು ಮುಂದಿನ ಕ್ರಮ ಜರುಗಿಸುವುದಾಗಿ ಪವಾರ್ ಭರವಸೆ ನೀಡಿದ್ದಾರೆ' ಎಂದರು.ಕೊಳೆ ರೋಗದಿಂದ ತೀವ್ರ ಹಾನಿಗೆ ಒಳಗಾಗಿರುವ ರೈತರಿಗೆ ಪರಿಹಾರ ಒದಗಿಸಲು ಆರ್ಥಿಕ ನೆರವು ನೀಡುವಂತೆಯೂ ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಲಾಯಿತು. ಈ ಸಂಬಂಧ ಕೇಂದ್ರ ಯೋಜನಾ ಆಯೋಗಕ್ಕೆ ಮನವಿ ಸಲ್ಲಿಸುವಂತೆ ಅವರು ಸೂಚಿಸಿದ್ದಾರೆ ಎಂದು ಹೇಳಿದರು.ಶನಿವಾರ ಆದೇಶ ಸಾಧ್ಯತೆ: ಬೀದರ್, ಶಿವಮೊಗ್ಗ ಮತ್ತು ಹಾಸನ ಪಶುವೈದ್ಯಕೀಯ ವಿಜ್ಞಾನಗಳ ಕಾಲೇಜುಗಳಿಗೆ ಮಾನ್ಯತೆ ನೀಡುವ ಪ್ರಕ್ರಿಯೆಗೆ ಸಂಬಂಧಿಸಿದ ಕಡತ ಕೇಂದ್ರ ಕಾನೂನು ಸಚಿವಾಲಯದಲ್ಲಿ ಬಾಕಿ ಇತ್ತು. ಈ ಕುರಿತು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಅವರನ್ನು ಶುಕ್ರವಾರ ಭೇಟಿಮಾಡಿ ಚರ್ಚಿಸಲಾಗಿದೆ. ಶನಿವಾರ ಆದೇಶ ಹೊರಡಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry