ಸೋಮವಾರ, ಜನವರಿ 20, 2020
17 °C
ಬ್ಯಾಂಕ್‌ಗಳಲ್ಲೇ ಉಳಿದುಕೊಂಡಿದೆ ಭಾರಿ ಮೊತ್ತ

ರೂ.3,652 ಕೋಟಿ ‘ಕೇಳುವವರೇ’ ಇಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಾರಸುದಾರರೇ ಇಲ್ಲದ, ತಮ್ಮದು ಎಂದು ಯಾರೂ ಹಕ್ಕು ಸಾಧಿಸದೇ ಇರುವ ರೂ.3,652.64 ಕೋಟಿಗಳಷ್ಟು ದೊಡ್ಡ ಮೊತ್ತ ದೇಶದ ಎಲ್ಲ ಬ್ಯಾಂಕ್‌ಗಳ ಬಳಿ ಹಾಗೆಯೇ ಉಳಿದುಕೊಂಡಿದೆ!ಅಚ್ಚರಿ ಉಂಟು ಮಾಡುವಂತಹ ಈ  ಅಂಕಿ ಅಂಶವನ್ನು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರು ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಲೋಕಸಭೆಗೆ ತಿಳಿಸಿದರು.ಹತ್ತು ವರ್ಷಗಳಿಂದ ವಹಿವಾಟು ನಡೆಯದೇ ಇರುವ ಎಲ್ಲ ಖಾತೆಗಳ ಬಗ್ಗೆ ಎಲ್ಲ ಬ್ಯಾಂಕ್‌ಗಳೂ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವರ್ಷಾಂತ್ಯದಲ್ಲಿ ಮಾಹಿತಿ ನೀಡುತ್ತವೆ. ಅದರಂತೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ರೂ.3,237 ಕೋಟಿ, ಖಾಸಗಿ ಬ್ಯಾಂಕ್‌ಗಳಲ್ಲಿ ರೂ.340 ಕೋಟಿ ಮತ್ತು ವಿದೇಶಿ ಹಣಕಾಸು ಸಂಸ್ಥೆ ಗಳಲ್ಲಿ ರೂ.75 ಕೋಟಿಗಳಷ್ಟು ಮೊತ್ತ ತಮ್ಮದು ಎಂದು ಹಕ್ಕು ಸಾಧಿಸುವವರೇ ಇಲ್ಲದೇ ಉಳಿದಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.ಭಾರತೀಯ ಸ್ಟೇಟ್‌ ಬ್ಯಾಂಕ್‌(ರೂ.539 ಕೋಟಿ), ಕೆನರಾ ಬ್ಯಾಂಕ್(ರೂ.526 ಕೋಟಿ), ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ(ರೂ.390 ಕೋಟಿ) ಮತ್ತು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ರೂ.385 ಕೋಟಿ) ಖಾತೆಗಳಲ್ಲಿ ಭಾರಿ ಮೊತ್ತ ಕೇಳುವವರೇ ಇಲ್ಲದೆ ಉಳಿದುಕೊಂಡಿದೆ!

ಖಾಸಗಿ ಕ್ಷೇತ್ರದ ಐಸಿಐಸಿಐ ಬ್ಯಾಂಕ್‌ (ರೂ.101 ಕೋಟಿ) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿಯೂ (ರೂ.13 ಕೋಟಿ) ಹೆಚ್ಚಿನ ಹಣ ಬಾಕಿಯಾಗಿದೆ.ಕ್ರೆಡಿಟ್ ಕಾರ್ಡ್‌ ದೂರು

ಬ್ಯಾಂಕ್‌ಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿವೆ ಹಾಗೂ ಸೇವೆ ಯಲ್ಲಿ ಲೋಪವಿದೆ ಎಂದು ಕ್ರೆಡಿಟ್‌  ಕಾರ್ಡ್‌ದಾರರಿಂದ ಪ್ರಸಕ್ತ ಹಣಕಾಸು ವರ್ಷದ ಜುಲೈ 1ರವರೆಗೆ ಒಟ್ಟು 3763 ದೂರುಗಳು ಬಂದಿವೆ. 2012 ರಲ್ಲಿ 7,744 ದೂರುಗಳು ದಾಖಲಾಗಿ ದ್ದವು ಎಂದು ಹಣಕಾಸು ಖಾತೆ ರಾಜ್ಯ ಸಚಿವ ನಮೋ ನಾರಾಯಣ ಮೀನಾ ಸದನಕ್ಕೆ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)