ಶುಕ್ರವಾರ, ಮೇ 20, 2022
23 °C

ರೂ,5 ಲಕ್ಷ ಕೋಟಿ ಹೂಡಿಕೆ ನಿರೀಕ್ಷೆ

ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ದೇಶದ ಐ.ಟಿ ರಾಜಧಾನಿಯಾಗಿರುವ ಬೆಂಗಳೂರು ಈಗ ವೈಮಾನಿಕ ಕ್ಷೇತ್ರದಲ್ಲಿಯೂ ಇಂತಹದ್ದೇ ಛಾಪು ಮೂಡಿಸುತ್ತಿದೆ. ಕೇವಲ ಭಾರತದಲ್ಲಿ ಅಷ್ಟೇ ಇಡೀ ಏಷ್ಯಾ ಖಂಡದಲ್ಲಿಯೇ ಪ್ರಮುಖ ವೈಮಾನಿಕ ನೆಲೆಯಾಗಿ ರೂಪುಗೊಳ್ಳುತ್ತಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ‘ಏರೊ ಇಂಡಿಯಾ’ ಇದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿದೆ. ಇದರ ನಿಮಿತ್ತ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ‘ಏರೊ ಇಂಡಿಯಾ 2011’ ಪ್ರದರ್ಶನಕ್ಕೆ ಇಂದು (ಫೆ.9)  ಚಾಲನೆ ದೊರೆತಿದೆ.ಏಷ್ಯಾದಲ್ಲಿಯೇ ಅತಿದೊಡ್ಡದಾದ ವೈಮಾನಿಕ ಮೇಳ ಇದಾಗಿದೆ. ಅಮೆರಿಕ, ಜರ್ಮನಿ, ಫ್ರಾನ್ಸ್ ಸೇರಿದಂತೆ 60ಕ್ಕೂ ಹೆಚ್ಚು ದೇಶಗಳ ಸುಮಾರು 400 ಕಂಪೆನಿಗಳು ಭಾಗವಹಿಸುತ್ತಿವೆ. ವಿದೇಶಗಳಿಂದ 70 ಸಾವಿರ ಜನ ಪ್ರತಿ ನಿಧಿಗಳು ಆಗಮಿಸಿದ್ದಾರೆ. ಆ ದೇಶಗಳು ತಮ್ಮ ರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸುವುದಲ್ಲದೇ ರಕ್ಷಣಾ ಸಾಮಗ್ರಿ ಗಳ ಮಾರಾಟ ಹಾಗೂ ಖರೀದಿಗೆ ಸೂಕ್ತ ವೇದಿಕೆಯನ್ನು ಸೃಷ್ಟಿಸಿಕೊಳ್ಳಲಿವೆ.ಸಾಮಾನ್ಯ ಜನರಿಗೆ ಇದು ಲೋಹದ ಹಕ್ಕಿಗಳ ನೃತ್ಯ ಪ್ರದರ್ಶನವಾದರೆ, ದೇಶೀಯ ವೈಮಾನಿಕ ಕ್ಷೇತ್ರ ಹಾಗೂ ಆಟೊಮೋಟಿವ್ ಕ್ಷೇತ್ರಕ್ಕೆ ಬಲತುಂಬುವ ಮೇಳವಾಗಿದೆ. ಮೇಳದಲ್ಲಿ ಭಾಗವಹಿಸುವ ದೇಶಗಳ ಸಂಖ್ಯೆ ಹಾಗೂ ಕಂಪೆನಿ ಗಳ ಸಂಖ್ಯೆ ಪ್ರತಿ ಬಾರಿ ಹೆಚ್ಚುತ್ತಿದೆ. ಮೇಳದ ಯಶಸ್ಸನ್ನು ಇದು ತೋರಿಸುತ್ತದೆ. ವಿದೇಶಿ ಹೂಡಿಕೆ ಹರಿದುಬಂದಷ್ಟು ಸ್ಥಳೀಯ ಕೈಗಾರಿಕೆಗಳು ಪುನಶ್ಚೇತನ ಗೊಳ್ಳುತ್ತವೆ ಎನ್ನುವು ದರಲ್ಲಿ ಎರಡು ಮಾತಿಲ್ಲ.ಈ ಸಲದ ‘ಏರೊ ಇಂಡಿಯಾ’ ಮೇಳದಿಂದ ರಾಜ್ಯಕ್ಕೆ ಸುಮಾರು ್ಙ 5 ಲಕ್ಷ ಕೋಟಿಗಳಷ್ಟು ಬಂಡವಾಳ ಹೂಡಿಕೆ ಯಾಗುವ ನಿರೀಕ್ಷೆ ಇದೆ. ಇದಲ್ಲದೇ  ವಿಶೇಷವಾಗಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಲ್ಲಿ 10ರಿಂದ 12 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ರಾಜ್ಯದ ಉದ್ಯಮಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.ಅಮೆರಿಕದಿಂದ 63, ಫ್ರಾನ್ಸ್‌ನಿಂದ 43,ಜರ್ಮನಿಯಿಂದ 42, ರಷ್ಯಾದಿಂದ 25 ಸೇರಿದಂತೆ ಹಲವು ದೇಶಗಳ ಕಂಪೆನಿ ಗಳು ಇಲ್ಲಿ ಭಾಗವಹಿಸಿವೆ.ಇದರ ಜೊತೆಗೆ ದೇಶದ ರಕ್ಷಣಾ ಸಚಿವಾಲಯವು ಕೂಡ ತನ್ನ ಅತ್ಯಾಧುನಿಕ ಯುದ್ಧವಿಮಾನ ಗಳನ್ನು ಹಾಗೂ ತಂತ್ರಜ್ಞಾನವನ್ನು ಪ್ರದರ್ಶನಕ್ಕೆ ಇಟ್ಟಿದೆ. ಬೆಂಗಳೂರು ಸುತ್ತಮುತ್ತಲಿನ ಪೀಣ್ಯ, ವ್ಹೈಟ್‌ಫೀಲ್ಡ್, ಬೊಮ್ಮಸಂದ್ರ ಹಾಗೂ ಇತರೆಡೆ ಇರುವ ಸುಮಾರು ಸಣ್ಣ ಹಾಗೂ ಮಧ್ಯಮಗಳು ಇಲ್ಲಿ ಮಳಿಗೆಗಳನ್ನು ತೆರೆದಿವೆ.ಕೇಂದ್ರ ಸರ್ಕಾರವು ರಕ್ಷಣಾ ವಲಯಕ್ಕಾಗಿ ್ಙ  1.50 ಲಕ್ಷ ಕೋಟಿ ಬಜೆಟ್ ಮೀಸಲು ಇಟ್ಟಿದೆ. ಡಿಆರ್‌ಡಿಒ (ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ) ಮೂಲಕ  ರಕ್ಷಣಾ ಸಾಮಗ್ರಿಗಳು, ಶಸ್ತ್ರಾಸ್ತ್ರ ಹಾಗೂ ಯುದ್ಧವಿಮಾನ ಗಳ ಬಿಡಿಭಾಗಗಳನ್ನು ನಿರ್ಮಿಸಲಾಗುತ್ತದೆ. ಬಹುತೇಕ ಬಿಡಿಭಾಗಗಳನ್ನು ಸಣ್ಣ, ಮಧ್ಯಮ ಕೈಗಾರಿಕೆಗಳಿಂದ ಪಡೆಯಲಾಗುತ್ತದೆ. ಹೀಗಾಗಿ ಬಜೆಟ್‌ನ ಬಹುಪಾಲು ಲಾಭ ಸಣ್ಣ ಉದ್ಯಮಿದಾರರಿಗೆ ದಕ್ಕುತ್ತಿದೆ.ಈಗ ವೈಮಾನಿಕ ಮೇಳ ನಡೆಯುತ್ತಿರುವುದರಿಂದ ವಿದೇಶಿ ಕಂಪೆನಿಗಳು ಸಹ ದೇಶೀಯ ಕೈಗಾರಿಕೆಗಳಿಂದ ವೈಮಾನಿಕ ಸಾಮಗ್ರಿಗಳನ್ನು ಖರೀದಿಸುತ್ತಿವೆ.ವಿಮಾನಗಳ ತಯಾರಿಕೆ ಯಲ್ಲಿ ಬೇಕಾಗುವ ಬಿಡಿಭಾಗಗಳು ವಿದೇಶಗಳಿಗೆ ಹೋಲಿಸಿ ದರೆ ಇಲ್ಲಿ ಅಗ್ಗದ ದರದಲ್ಲಿ ದೊರೆಯುತ್ತವೆ.ಇದರಿಂದಾಗಿ ಬೋಯಿಂಗ್, ಏರ್‌ಬಸ್‌ನಂತಹ ದೊಡ್ಡದೊಡ್ಡ ವಿಮಾನ ತಯಾರಿಕಾ ಕಂಪೆನಿಗಳು ಬೆಂಗಳೂರಿನತ್ತ ದೃಷ್ಟಿಹಾಯಿಸಿವೆ.ವೈಮಾನಿಕ ಮೇಳವು ಕಂಪೆನಿಗಳು ಹಾಗೂ ಸಣ್ಣ ಕೈಗಾರಿಕೆ ಗಳ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿ ಸುತ್ತಿದೆ. ರಾಜ್ಯದಲ್ಲಿರುವ ಸುಮಾರು 5 ಲಕ್ಷ ಸಣ್ಣ ಕೈಗಾರಿಕಾ ಘಟಕಗಳಿಗೆ ವಿವಿಧ ರೂಪದಲ್ಲಿ ಲಾಭ ತರುವ ನಿರೀಕ್ಷೆ ಇದೆ.ರಾಜ್ಯದ ಮಳಿಗೆ

ರಾಜ್ಯದಲ್ಲಿ ಇರುವ ಮೂಲಸೌಕರ್ಯಗಳ ಬಗ್ಗೆ ಹೂಡಿಕೆದಾರರಿಗೆ ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಮೇಳದಲ್ಲಿ ಮಳಿಗೆ ತೆರೆದಿದೆ. ಹೂಡಿಕೆಗೆ ಸಂಬಂಧಿಸಿದಂತೆ ರಷ್ಯಾದ ಯುನೈಟೆಡ್ ಏರ್‌ಕ್ರಾಫ್ಟ್ ಕಾರ್ಪೊರೇಷನ್‌ನ ಮುಖ್ಯಸ್ಥ ಅಲೆಕ್ಸೆ ಫೆಡೊರೊವ್, ಫ್ರೆಂಚ್ ಏರೋಸ್ಪೇಸ್ ಕೈಗಾರಿಕೆಗಳ ಸಂಘದ ಪದಾಧಿಕಾರಿಗಳು, ರೊಲ್ಸ್‌ರಾಯ್ ಕಂಪೆನಿಯ ಅಧಿಕಾರಿಗಳು, ಹನಿವೆಲ್ ಟೆಕ್ನಾಲಜೀಸ್‌ನ ಅಧ್ಯಕ್ಷ ಡಾ.ಕೃಷ್ಣ, ಬೋಯಿಂಗ್ ಕಂಪೆನಿಯ ಅಧಿಕಾರಿಗಳು ಹಾಗೂ ಅಮೆರಿಕದ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಜೆ.ಕೇತ್ ಕ್ರಿಸ್ಕೊ ಅವರೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಲಿದ್ದಾರೆ. ‘ಇವುಗಳಲ್ಲಿ ಕನಿಷ್ಠ 3-4 ಕಂಪೆನಿಗಳ ಜೊತೆ ಸರ್ಕಾರ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆ ಇದೆ’ ಎಂದು ಸರ್ಕಾರದ ಮೂಲಗಳು ತಿಳಿಸಿವೆ.ವೈಮಾನಿಕ ಪಾರ್ಕ್ ನಿರ್ಮಾಣ


ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 984 ಎಕರೆ ಭೂಮಿಯಲ್ಲಿ ವೈಮಾನಿಕ ಪಾರ್ಕ್ ನಿರ್ಮಿಸಲಾಗುತ್ತಿದೆ. ಇದರಲ್ಲಿ ಸುಮಾರು 250 ಎಕರೆ ಪ್ರದೇಶದಲ್ಲಿ ಎಸ್‌ಇಜೆಡ್ ನಿರ್ಮಾಣವಾಗಲಿದೆ. ಈಗಾಗಲೇ ಸುಮಾರು 800 ಎಕರೆ ಪ್ರದೇಶವನ್ನು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸುತ್ತಿದೆ. ಇದು ವೈಮಾನಿಕ ಕ್ಷೇತ್ರ ಬೆಳವಣಿಗೆಗೆ ಪ್ರೇರಕವಾಗಲಿದೆ’ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಆಯುಕ್ತ ರಾಜ್ ಕುಮಾರ್ ಖತ್ರಿ ತಿಳಿಸಿದರು.ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಲಾಭ

ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾದಷ್ಟು ಸುತ್ತಮುತ್ತಲಿನ ಸಣ್ಣ ಕೈಗಾರಿಕೆಗಳಿಗೆ ಲಾಭವಾಗುತ್ತದೆ. ಇದರ ಹಿನ್ನೆಲೆಯಲ್ಲಿ ವೈಮಾನಿಕ ಕ್ಷೇತ್ರದ ಬೆಳೆವಣಿಗೆ ಕೂಡ ಪೂರಕವಾಗಲಿದೆ. ಕೃಷಿ ನಂತರ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಣ್ಣ ಕೈಗಾರಿಕೆಗಳಿಗೆ ‘ಏರೊ ಇಂಡಿಯಾ’ ಖಂಡಿತವಾಗಿಯೂ ಲಾಭ ತರಲಿದೆ. ಮುಂಬರುವ ದಿನಗಳಲ್ಲಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಘಟಕಗಳು ಸ್ಥಾಪನೆಯಾಗಬೇಕು.

 -ಎಸ್.ಎಸ್. ಬಿರಾದಾರ,

 ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರು.ಹೇರಳ ಉದ್ಯೋಗಾವಕಾಶ ಸೃಷ್ಟಿ

ವಿದೇಶಿ ಬಂಡವಾಳ ಹರಿದುಬರುತ್ತಿರುವುದು ನಿಜ. ಇದರ ಲಾಭ ಎಲ್ಲರಿಗೂ ದಕ್ಕುವಂತಾಗಬೇಕು. ಬೇರೆ ಬೇರೆ ಜಿಲ್ಲಾ ಪ್ರದೇಶಗಳಲ್ಲಿ ಘಟಕಗಳನ್ನು ತೆರೆಯುವಂತಾಗಬೇಕು ಹಾಗೂ ಸ್ಥಳೀಯ ಕೈಗಾರಿಕೆಗಳಿಂದ ಬಿಡಿಭಾಗಗಳನ್ನು ಖರೀದಿಸುವಂತೆ ಕಂಪೆನಿಗಳ ಮೇಲೆ ಸರ್ಕಾರ ಒತ್ತಡ ಹಾಕಬೇಕು. ಇದಕ್ಕೂ ಮೊದಲು ಅಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವ ಕೆಲಸವಾಗಬೇಕು. ‘ಏರೊ ಇಂಡಿಯಾ’ ಪ್ರದರ್ಶನದಿಂದ ಸಣ್ಣ ಕೈಗಾರಿಕೆಗಳಿಗೆ ಅವಕಾಶಗಳು ಸೃಷ್ಟಿಯಾಗುವುದು ಖಂಡಿತ. ಮುಂದಿನ ದಿನಗಳಲ್ಲಿ ವೈಮಾನಿಕ ಕ್ಷೇತ್ರವೊಂದ ರಲ್ಲಿಯೇ 10 ಲಕ್ಷ ಉದ್ಯೋಗಾವ ಕಾಶಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

 - ಜೆ.ಆರ್. ಕ್ರಾಸ್ತ,

 ಸಿ.ಎಂ. ಎನ್ವಿರೊಸಿಸ್ಟಂ ಕಂಪೆನಿಉತ್ತಮ ಭವಿಷ್ಯ

‘ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ 100 ನಾಗರಿಕ ವಿಮಾನಗಳನ್ನು ಭಾರತದ ಕಂಪೆನಿಗಳು ಖರೀದಿಸಲಿವೆ ಎಂದು ಇತ್ತೀಚೆಗೆ ವಿಮಾನಗಳ ತಯಾರಿಕಾ ಕಂಪೆನಿ ಏರ್‌ಬಸ್ ಹೇಳಿದೆ. ಅಂದರೆ ಪ್ರತಿ ವರ್ಷ 10 ವಿಮಾನಗಳು ನಮ್ಮಲ್ಲಿ ಬರುತ್ತವೆ.ಕನಿಷ್ಠವೆಂದರೂ ಒಂದು ವಿಮಾನಕ್ಕೆ ರೂ. 100 ಕೋಟಿ ಬೆಲೆ.  10 ವಿಮಾನಗಳಿಗೆ ರೂ 1,000 ಕೋಟಿ ಬೆಲೆಯಾಗುತ್ತದೆ.ಈಗಿನ ನಿಯಮಾವಳಿಗಳ ಪ್ರಕಾರ ವಿಮಾನಗಳನ್ನು ಮಾರಾಟ ಮಾಡುವ ಕಂಪೆನಿಗಳು ಆ ದೇಶದ ಸ್ಥಳೀಯ ಕೈಗಾರಿಕೆಗಳಿಂದ ಶೇ 40ರಷ್ಟು ಬಿಡಿಭಾಗಗಳನ್ನು ಖರೀದಿಸಬೇಕಾಗಿದೆ. ಅಲ್ಲಿಗೆ ್ಙ  400 ಕೋಟಿ ವ್ಯವಹಾರ ಸಣ್ಣಕೈಗಾರಿಕೆಗಳಿಗೆ ದಕ್ಕುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದ ವೈಮಾನಿಕ ಕ್ಷೇತ್ರಕ್ಕೆ ಒಳ್ಳೆಯ ಭವಿಷ್ಯವಿದೆ.

 -ಪ್ರಸಾದ್,

 ಅಕ್ಯುಟೆಕ್ ಎಂಟರ್‌ಪ್ರೈಸಸ್, ಪೀಣ್ಯ (ವಿಮಾನಗಳ  ಡಿಭಾಗಗಳನ್ನು ಪೂರೈಸುವ ಕಂಪೆನಿ)ವಿಶ್ವ ಕಂಪೆನಿಗಳ ಜೊತೆ ನಂಟು

ಇದುವರೆಗೆ ಎಚ್‌ಎಎಲ್, ಎನ್‌ಎಎಲ್ ಸಂಸ್ಥೆಗಳಿಗೆ ಬಿಡಿಭಾಗಗಳನ್ನು ಪೂರೈಸುತ್ತಿದ್ದೇವು. ಈಗ ‘ಏರೊ ಇಂಡಿಯಾ’ ಮೇಳದಿಂದಾಗಿ ವಿಶ್ವ ಮಟ್ಟದ ಕಂಪೆನಿಗಳ ಜೊತೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿದೆ. ನಮ್ಮ ವ್ಯಾಪಾರವನ್ನು ವಿದೇಶಿ ಕಂಪೆನಿಗಳಿಗೂ ವಿಸ್ತರಿಸುವ ಅವಕಾಶ ಇದೆ.

 -ಎ.ಎನ್. ಬುರ್ಜಿ,

 ಬುರ್ಜಿ ಸೀಡಾನ್ ಕ್ಲಚಸ್, ಪೀಣ್ಯ (ವಿಮಾನಗಳ  ಬಿಡಿಭಾಗಗಳನ್ನು ಪೂರೈಸುವ ಕಂಪೆನಿ)ಸಂಪರ್ಕ ಕೊಂಡಿ

ಏರೊ ಶೋದಲ್ಲಿ ಭಾಗವಹಿಸುವ ಕಂಪೆನಿಗಳು ರೆಜಿಸ್ಟ್ರೇಷನ್ ಮಾಡಿಕೊಂಡು, ಸಂಪರ್ಕಕ್ಕೆ ಬರುತ್ತವೆ. ವಿವಿಧ ದೇಶಗಳ ನಡುವೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಅವುಗಳ ಬೇಡಿಕೆಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ. ಪ್ರತಿ ಬಾರಿ ವೈಮಾನಿಕ ಮೇಳ ನಡೆದಾಗ ವ್ಯಾಪಾರ ವಹಿವಾಟು ವೃದ್ಧಿಯಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 30ರಷ್ಟು ಹೆಚ್ಚು ವಹಿವಾಟು ಆಗುವ ನಿರೀಕ್ಷೆ ಇದೆ.

 - ಡಿ.ಟಿ. ವೆಂಕಟೇಶ್,

 ಗ್ರೋವೆಲ್ ಸಿಎನ್‌ಸಿ ಸಿಸ್ಟಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.