ಗುರುವಾರ , ನವೆಂಬರ್ 14, 2019
23 °C

ರೂ.64 ಕೋಟಿ ತೆರಿಗೆ ವಂಚನೆ ಬೆಳಕಿಗೆ

Published:
Updated:

ಬೆಂಗಳೂರು: `ನಗರದ ಪ್ರತಿಷ್ಠಿತ ಐಟಿ ಕಂಪೆನಿಗಳಾದ ಗಾಲ್ಫ್ ಲಿಂಕ್ ಸಾಫ್ಟ್‌ವೇರ್ ಮತ್ತು ವೃಂದಾವನ್ ಟೆಕ್ ಪಾರ್ಕ್‌ಗಳು ಸ್ವಯಂ ಘೋಷಣೆ ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡಿ, ಸುಮಾರು ರೂ. 64 ಕೋಟಿಗಳಷ್ಟು ಆಸ್ತಿ ತೆರಿಗೆಯನ್ನು ವಂಚನೆ ಮಾಡಿವೆ' ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ತಿಳಿಸಿದ್ದಾರೆ.`ಚಲ್ಲಘಟ್ಟದ ಗಾಲ್ಫ್ ಲಿಂಕ್ ಸಾಫ್ಟ್‌ವೇರ್ ಕಚೇರಿ ಕಟ್ಟಡವನ್ನು ಅಳತೆ ಮಾಡಿದಾಗ ಅದರ ವಿಸ್ತೀರ್ಣ 76,80,600 ಚದರ ಅಡಿ ಇರುವುದು ಪತ್ತೆಯಾಗಿದೆ. ಸ್ವಯಂಘೋಷಿತ ಆಸ್ತಿ ತೆರಿಗೆ (ಎಸ್‌ಎಎಸ್) ಯೋಜನೆ ಅಡಿಯಲ್ಲಿ ಕಟ್ಟಡದ ವಿಸ್ತೀರ್ಣ 49,97,584 ಚದರ ಅಡಿ ಎಂಬ ಘೋಷಣೆ ಮಾಡಲಾಗಿತ್ತು. 26,83,016 ಚದರ ಅಡಿ ವ್ಯತ್ಯಾಸ ಕಂಡುಬಂದಿದೆ' ಎಂದು ಮಾಹಿತಿ ನೀಡಿದ್ದಾರೆ. `ತಪ್ಪು ಮಾಹಿತಿ ನೀಡಿ ಪ್ರತಿವರ್ಷ ರೂ.6.84 ಕೋಟಿಗಳಷ್ಟು ವಂಚನೆ ಮಾಡಿದ್ದು, ಎಸ್‌ಎಎಸ್ ಅನ್ವಯ 2008-09 ರಿಂದ 2012-13ರವರೆಗೆ ಒಟ್ಟು ಆಸ್ತಿ ತೆರಿಗೆ ರೂ.34.24 ಕೋಟಿ ಪಾವತಿ ಮಾಡಬೇಕಿದೆ' ಎಂದಿದ್ದಾರೆ.`ವೃಂದಾವನ್ ಟೆಕ್ ಪಾರ್ಕ್ ಎಸ್‌ಎಎಸ್ ಯೋಜನೆ ಅಡಿಯಲ್ಲಿ ಘೋಷಣೆ ಮಾಡಿರುವ ಕಟ್ಟಡದ ವಿಸ್ತೀರ್ಣ 11,35,000 ಚದರ ಅಡಿ. ಪರಿಶೀಲನೆ ನಂತರ ಕಟ್ಟಡದ ವಿಸ್ತೀರ್ಣ 28,16,300 ಚದರ ಅಡಿ ಇರುವುದು ಪತ್ತೆಯಾಗಿದೆ. 16,81,300 ಚದರ ಅಡಿ ವ್ಯತ್ಯಾಸ ಕಂಡುಬಂದಿದೆ. 2008-09ರಿಂದ 2012-13ರ ವರೆಗೆ ದಂಡ ಸಹಿತ ರೂ. 29.36 ಕೋಟಿ ತೆರಿಗೆ ಪಾವತಿಸಬೇಕಿದೆ' ಎಂದು ವಿವರಿಸಿದ್ದಾರೆ.`ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಅಪಾರ್ಟ್‌ಮೆಂಟ್‌ಗಳು, ಐಟಿ-ಬಿಟಿ ಕಂಪೆನಿಗಳು ಹಾಗೂ ದೊಡ್ಡ ಕಟ್ಟಡಗಳ ಆಸ್ತಿ ತೆರಿಗೆ ಮರು ಪರಿಶೀಲನೆ ಮುಂದುವರೆದಿದ್ದು, ಪರಿಶೀಲನೆ ನಂತರ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಆದ್ದರಿಂದ, ಪ್ರತಿಯೊಂದು ಕಟ್ಟಡವನ್ನು ತಪ್ಪದೇ ಪರಿಶೀಲಿಸಲಾಗುವುದು' ಎಂದಿದ್ದಾರೆ.`ವಾಣಿಜ್ಯ ಮತ್ತು ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆ ಮರು ಪರಿಶೀಲನೆ ಆರಂಭವಾಗಿದ್ದರಿಂದ ಕಟ್ಟಡಗಳ ಮಾಲೀಕರು 2013-14ನೇ ಸಾಲಿನ ಆಸ್ತಿ ತೆರಿಗೆ ಪಾವತಿಸುವ ಸಂದರ್ಭದಲ್ಲಿ ನಿಜವಾದ ಕಟ್ಟಡದ ವಿಸ್ತೀರ್ಣವನ್ನು ಘೋಷಣೆ ಮಾಡಿಕೊಂಡು ವ್ಯತ್ಯಾಸದ ಆಸ್ತಿ ತೆರಿಗೆಯನ್ನು ಪಾವತಿಸಬೇಕು' ಎಂದು ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)