ರೂ.70 ಕೋಟಿ `ನೀರು' ಪಾಲು

ಮಂಗಳವಾರ, ಜೂಲೈ 23, 2019
20 °C
ಡಿ.ಎಫ್ ಘಟಕ: 49 ಅಧಿಕಾರಿ ವಿರುದ್ಧ ದೂರು ದಾಖಲು

ರೂ.70 ಕೋಟಿ `ನೀರು' ಪಾಲು

Published:
Updated:

ಬೆಂಗಳೂರು: ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ `ಡಿ ಫ್ಲೋರಿಡೇಷನ್' (ಡಿಎಫ್- ಅಪಾಯಕಾರಿ ಫ್ಲೋರೈಡ್‌ಯುಕ್ತ ನೀರನ್ನು ಶುದ್ಧೀಕರಿಸಿ ಬಳಕೆ ಯೋಗ್ಯ ಮಾಡುವುದು) ಘಟಕಗಳ ಅಳವಡಿಕೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡಿದ ಕೋಟ್ಯಂತರ ರೂಪಾಯಿ ಅನುದಾನ ದುರ್ಬಳಕೆಯಾಗಿದ್ದು, 49 ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದೂರು ದಾಖಲಿಸಿಕೊಂಡಿದೆ.ಒಟ್ಟಾರೆ ರೂ. 70 ಕೋಟಿ   ದುರ್ಬಳಕೆಯಾಗಿರಬಹುದು ಎಂದು ಅಂದಾಜಿಸಿ ಕೊಪ್ಪಳದ ಮಹಾಂತೇಶ ಎಂ.ಕೊತಬಾಳ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಮಾಹಿತಿ ಹಕ್ಕಿನ ಅಡಿ ತಾವು ಪಡೆದುಕೊಂಡ ಎಲ್ಲ ದಾಖಲೆಗಳನ್ನೂ ಅವರು ಲೋಕಾಯುಕ್ತರಿಗೆ ನೀಡಿದ್ದರು.ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಮುಖ್ಯ ಎಂಜಿನಿಯರ್, ವಿಜಾಪುರ, ಕೊಪ್ಪಳ, ಗುಲ್ಬರ್ಗ, ಯಾದಗಿರಿ, ಚಿಕ್ಕಬಳ್ಳಾಪುರ, ಕೋಲಾರ, ಗದಗ, ತುಮಕೂರು, ಚಿತ್ರದುರ್ಗ, ಮಂಡ್ಯ, ರಾಯಚೂರು ಜಿಲ್ಲಾ ಪಂಚಾಯ್ತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಕಾರ್ಯನಿರ್ವಾಹಕ ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್‌ಗಳ ವಿರುದ್ಧ ದೂರು ದಾಖಲಾಗಿದೆ.ಏನಿದು?: ಗ್ರಾಮೀಣ ಜನರಿಗೆ ಕುಡಿಯುವ ನೀರು ಪೂರೈಸಲು ಕೇಂದ್ರ ಸರ್ಕಾರ ವಿಶೇಷ ಅನುದಾನ ನೀಡಿದೆ. ಈ ಅನುದಾನ  ಬಳಸಿಕೊಂಡು ಹಳ್ಳಿಗಳಲ್ಲಿ ಗುಣಮಟ್ಟದ ಶುದ್ಧ ಕುಡಿಯುವ ನೀರು ಒದಗಿಸುವುದಕ್ಕಾಗಿ 300 ಡಿ-ಫ್ಲೋರಿಡೇಷನ್ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿ 2011ರ ಸೆಪ್ಟೆಂಬರ್ 16ರಂದು ಆದೇಶ ಹೊರಡಿಸಿತು. ಶೇ 50:50ರ ಅನುಪಾತದಲ್ಲಿ 300 ಡಿಎಫ್ ಘಟಕ ಸ್ಥಾಪನೆಗೆ 4 ಕಂಪೆನಿಗಳನ್ನು ಗುರುತಿಸಿತು. ಹೈದರಾಬಾದಿನ ವಾಟರ್ ಹೆಲ್ತ್ ಇಂಡಿಯಾ, ವಾಟರ್ ಲೈಫ್ ಇಂಡಿಯಾ, ಸ್ಮಾತ್ ಅಕ್ವಾ ಟೆಕ್ನಾಲಜೀಸ್ ಹಾಗೂ ಹಿಂದೂಪುರದ ಸಾಯಿ ವಾಟರ್ ಟ್ರೀಟ್‌ಮೆಂಟ್ ಕಂಪೆನಿಗಳು ಡಿಎಫ್ ಘಟಕ ಸ್ಥಾಪಿಸುವ ಗುತ್ತಿಗೆ ಪಡೆದುಕೊಂಡವು.4 ಕಂಪೆನಿಗಳ ಪೈಕಿ 3 ಕಂಪೆನಿಗಳಿಗೆ ಎಲ್ಲೆಲ್ಲಿ ಘಟಕ ಸ್ಥಾಪಿಸಬೇಕು ಎಂದು ಸೂಚಿಸಲಾಯಿತು. ತುಮಕೂರು ಜಿಲ್ಲೆಯಲ್ಲಿ 30, ಗದಗದಲ್ಲಿ 40, ಚಿತ್ರದುರ್ಗ 20, ವಿಜಾಪುರ 30, ದಾವಣಗೆರೆ 20, ಮಂಡ್ಯ 10, ರಾಯಚೂರು ಜಿಲ್ಲೆಯಲ್ಲಿ 20 ಘಟಕ ಅಳವಡಿಸುವ ಜವಾಬ್ದಾರಿಯನ್ನು ಹೈದರಾಬಾದಿನ ಸ್ಮಾತ್ ಅಕ್ವಾ ಟೆಕ್ನಾಲಜೀಸ್‌ಗೆ, ಬಳ್ಳಾರಿಯಲ್ಲಿ 20, ಗುಲ್ಬರ್ಗ 20, ಯಾದಗಿರಿ 10, ಕೊಪ್ಪಳ ಜಿಲ್ಲೆಯಲ್ಲಿ 30 ಘಟಕ ಸ್ಥಾಪಿಸುವ ಜವಾಬ್ದಾರಿಯನ್ನು ವಾಟರ್ ಲೈಫ್ ಇಂಡಿಯಾ ಕಂಪೆನಿಗೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 30 ಮತ್ತು ಕೋಲಾರ ಜಿಲ್ಲೆಯಲ್ಲಿ 20 ಘಟಕ ಸ್ಥಾಪಿಸುವ ಜವಾಬ್ದಾರಿಯನ್ನು ಸಾಯಿ ವಾಟರ್ ಟ್ರೀಟ್‌ಮೆಂಟ್ ಕಂಪೆನಿಗೆ ವಹಿಸಲಾಯಿತು.ಈ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲಾ ಪಂಚಾಯ್ತಿಗೆ ನೀಡಲಾಯಿತು. ಘಟಕ ಸ್ಥಾಪಿಸಿದ ಕಂಪೆನಿಗಳು 10 ವರ್ಷ ನಿರ್ವಹಣೆ ಜವಾಬ್ದಾರಿ ಹೊರಬೇಕು. ಶೇ 50ರಷ್ಟು ಹಣವನ್ನು ರಾಜ್ಯ ಸರ್ಕಾರ ಮತ್ತು ಉಳಿದ ಶೇ 50 ರಷ್ಟು ಹಣವನ್ನು ಕಂಪೆನಿ ಭರಿಸಬೇಕು.500 ಲೀಟರ್ ಘಟಕಕ್ಕೆ ರೂ. 5.78 ಲಕ್ಷ, ಸಾವಿರ ಲೀಟರ್ ಘಟಕಕ್ಕೆ ರೂ. 7.78 ಲಕ್ಷ, 2 ಸಾವಿರ ಲೀಟರ್ ಘಟಕಕ್ಕೆ ರೂ. 9.78 ಲಕ್ಷ ಹಾಗೂ 4 ಸಾವಿರ ಲೀಟರ್ ಘಟಕಕ್ಕೆ ರೂ. 11.78 ಲಕ್ಷ  ಖರ್ಚಾಗಬಹುದು ಎಂದು ಅಂದಾಜಿಸಲಾಯಿತು.ವಿಳಂಬಕ್ಕೆ ದಂಡ: ಮೊದಲ 3 ವರ್ಷ ಒಂದು ಲೀಟರ್‌ಗೆ 20 ಪೈಸೆ, 4ರಿಂದ 6 ವರ್ಷದವರೆಗೆ ಒಂದು ಲೀಟರ್‌ಗೆ 30 ಪೈಸೆ ಹಾಗೂ 7ರಿಂದ 10 ವರ್ಷದ ಅವಧಿಯಲ್ಲಿ ಲೀಟರ್‌ಗೆ 40 ಪೈಸೆ ಪಡೆಯಬೇಕು. ಗುತ್ತಿಗೆ ಪಡೆದ ಕಂಪೆನಿ ಶುದ್ಧ ನೀರು ಘಟಕವನ್ನು ಸ್ಥಾಪಿಸಬೇಕು. 10 ವರ್ಷ ನಿರ್ವಹಣೆಯ ನಂತರ ಅದನ್ನು ಸಂಬಂಧಿಸಿದ ಪಂಚಾಯ್ತಿಗೆ ಹಸ್ತಾಂತರಿಸಬೇಕು. ಪ್ರತಿ ದಿನ ಕನಿಷ್ಠ 4 ಗಂಟೆ ನೀರು ಕೊಡಲೇ ಬೇಕು.ನೀರು ಕೊಡಲು ವಿಫಲವಾದರೆ 500 ಲೀಟರ್ ಘಟಕ ದಿನಕ್ಕೆ ಒಂದು ಸಾವಿರ ರೂಪಾಯಿ, ಸಾವಿರ ಲೀಟರ್ ಘಟಕ ಸ್ಥಗಿತವಾದರೆ 2 ಸಾವಿರ ರೂಪಾಯಿ, 2 ಸಾವಿರ ಲೀಟರ್ ಘಟಕ 3 ಸಾವಿರ ರೂಪಾಯಿ ಹಾಗೂ 4 ಸಾವಿರ ಲೀಟರ್ ಘಟಕ 4 ಸಾವಿರ ರೂಪಾಯಿ ದಂಡ ನೀಡಬೇಕು. ಘಟಕ ಸ್ಥಾಪನೆ ಮಾಡಿ ನೀರು ಕೊಡಲು ಆರಂಭಿಸಿದಾಗ ಸರ್ಕಾರ ಕಂಪೆನಿಗೆ ಶೇ 70ರಷ್ಟು ಹಣವನ್ನು ನೀಡುವುದು. ಉಳಿದ ಶೇ 30ರಷ್ಟು ಹಣವನ್ನು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ 4 ಕಂತಿನಲ್ಲಿ ಸರ್ಕಾರ ನೀಡುತ್ತದೆ ಎಂಬ ಷರತ್ತಿನೊಂದಿಗೆ ಈ ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.ಆದರೆ, ಘಟಕಗಳು ಆರಂಭವಾಗುವ ಮೊದಲೇ ಕಂಪೆನಿಗಳಿಗೆ ಹಣ ಪಾವತಿ ಮಾಡಲಾಗಿದೆ. ಇದಲ್ಲದೆ ಘಟಕಗಳನ್ನು ಆರಂಭಿಸುವುದಕ್ಕೆ ಮೊದಲೇ 13ನೇ ಹಣಕಾಸು ಯೋಜನೆಯಲ್ಲಿ ಇನ್ನೂ 387 ಘಟಕಗಳನ್ನು ಸ್ಥಾಪಿಸುವ ಗುತ್ತಿಗೆಯನ್ನೂ ಇದೇ ಕಂಪೆನಿಗಳಿಗೆ ನೀಡಲಾಗಿದೆ. ಶೇ 50ರಷ್ಟಿದ್ದ ಅನುದಾನವನ್ನು ಶೇಕಡಾ 100ಕ್ಕೆ ಹೆಚ್ಚಿಸಲಾಗಿದೆ.ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ತಾವರಗೇರಿ, ಮಾಲಗತ್ತಿ, ಕೊಪ್ಪಳ ತಾಲ್ಲೂಕಿನ ಗಿಣಿಗೇರಿ ಗ್ರಾಮದಲ್ಲಿ ನೀರಿನ ಘಟಕಗಳು ಪ್ರಾರಂಭವಾಗಿಲ್ಲವಾದರೂ ಕಂಪೆನಿಗೆ ಒಂದು ಬಾರಿ ರೂ. 4.71 ಲಕ್ಷ   ಹಾಗೂ ಇನ್ನೊಂದು ಬಾರಿ ರೂ. 12,925  ಪಾವತಿ ಮಾಡಲಾಗಿದೆ.ಅದೇ ರೀತಿ ಇನ್ನೊಂದು ಬಾರಿ ರೂ. 8.25 ಲಕ್ಷ  ನೀಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 11 ಘಟಕ ಸ್ಥಾಪಿಸಬೇಕಾಗಿತ್ತು. ಈವರೆಗೆ 5 ಘಟಕ ಮಾತ್ರ ಸ್ಥಾಪಿಸಲಾಗಿದೆ. ಅದಕ್ಕೆ ರೂ. 14.43 ಲಕ್ಷ  ಪಾವತಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ 50:50 ಅನುದಾನದಲ್ಲಿ 30 ಘಟಕ ಸ್ಥಾಪಿಸಬೇಕಿತ್ತು. ಆದರೆ ಅಲ್ಲಿನ ಅಧಿಕಾರಿಗಳು ಇದನ್ನು ಶೇ 100 ಅನುದಾನದ ಯೋಜನೆಗೆ ಸೇರಿಸಿದ್ದಾರೆ.ವಿಚಾರಣೆ ನಡೆಸುತ್ತೇನೆ

ಸ್ವಯಂ ಸೇವಾ ಸಂಸ್ಥೆಗಳ ಸಹಾಯದಲ್ಲಿ ಜೊತೆ ಶುದ್ಧನೀರು ಒದಗಿಸುವ ಯೋಜನೆ ಹಾಗೂ ಡಿ-ಫ್ಲೋರಿಡೇಷನ್ ಯೋಜನೆಗಳು ಬೇರೆ ಬೇರೆ. ಡಿಎಫ್ ಯೋಜನೆಯಲ್ಲಿ ಅವ್ಯವಹಾರ ನಡೆದಿರುವುದು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಒಂದು ವಾರದಲ್ಲಿ ಎಲ್ಲ ಮಾಹಿತಿ ತರಿಸಿಕೊಂಡು ವಿಚಾರಣೆ ನಡೆಸುತ್ತೇನೆ.

-ಎಚ್.ಕೆ. ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry