ರೂ.75 ಲಕ್ಷ ಮಂಜೂರು: ತಾ.ಪಂ. ಅಧ್ಯಕ್ಷೆ ಮುಳಜಿ

7

ರೂ.75 ಲಕ್ಷ ಮಂಜೂರು: ತಾ.ಪಂ. ಅಧ್ಯಕ್ಷೆ ಮುಳಜಿ

Published:
Updated:

ಇಂಡಿ: ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿರುವ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದೆ ಬಿದ್ದಿರುವ ತಾಲ್ಲೂಕುಗಳ ಅಭಿವೃದ್ಧಿ ಅವಶ್ಯವಿದೆ ಎಂಬ ನಂಜುಂಡಪ್ಪನವರ ವರದಿಯ ಹಿನ್ನೆಲೆಯಲ್ಲಿ ಇಂಡಿ ತಾಲ್ಲೂಕಿನ ಅಭಿವೃದ್ಧಿಗಾಗಿ ಸರಕಾರ ರೂ. 75 ಲಕ್ಷಗಳ ಅನುದಾನ ಬಿಡುಗಡೆ ಮಾಡಿದೆ ಎಂದು ತಾ.ಪಂ. ಅಧ್ಯಕ್ಷೆ ಬೌರಮ್ಮ ಮುಳಜಿ ಹೇಳಿದ್ದಾರೆ.ಮೊದಲನೇ ಬಾರಿಗೆ ತಾಲ್ಲೂಕಿನ ಅಭಿವೃದ್ಧಿಗಾಗಿ ಬಿಡುಗಡೆಯಾದ ಈ ಹಣದಲ್ಲಿ ತಾಲ್ಲೂಕಿನ 44 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಂಗನ ವಾಡಿಗಾಗಿ ಕಟ್ಟಡವಿಲ್ಲದ ಗ್ರಾಮಗಳಲ್ಲಿ ಅಂಗನವಾಡಿ ಕಟ್ಟಡಕ್ಕಾಗಿ ಈ ಹಣವನ್ನು ಖರ್ಚು ಮಾಡಲಾಗುವುದು ಎಂದು ತಿಳಿಸಿದ್ದಾರೆ.ಕಳೆದ ಒಂದು ವರ್ಷದ ಅವಧಿಯಲ್ಲಿ ತಾಲ್ಲೂಕಿನ ಗ್ರಾಮಗಳಲ್ಲಿ ಮಹಿಳೆಯರಿ ಗಾಗಿ ಶೌಚಾಲಯ ನಿರ್ಮಿಸಲು ಕ್ರಮ ಜರುಗಿಸಲಾಗಿದೆ. ಯಾವುದೇ ಸ್ತ್ರೀಗೆ ಶೌಚಾಲಯಕ್ಕಾಗಿ ಪರಿತಪಿಸಬಾರದು ಎಂಬ ಉದ್ದೇಶ ಹೊಂದಿದ್ದು, ಇನ್ನೂ ಅನೇಕ ಗ್ರಾಮಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಶೌಚಾಲಯ ನಿರ್ಮಿಸುವ ಕೆಲಸ ಬಾಕಿ ಇದೆ.

 

ಬರುವ ಕೆಲವೇ ತಿಂಗಳುಗಳಲ್ಲಿ ಅವುಗಳನ್ನು ಪೂರ್ಣ ಗೊಳಿಸಲಾಗುವುದು ಎಂದು ಹೇಳಿದ ಅವರು ಪ್ರತೀ ಗ್ರಾಮಗಳಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಗಾಗಿ ತಾಲ್ಲೂಕು ಪಂಚಾಯಿತಿ ಕ್ರಮ ಜರುಗಿಸಿದೆ. ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿರುವ ಗ್ರಾಮಗಳಿಗೆ ಕೊಳವೇ ಬಾವಿ ತೋಡಿಸುವಂತೆ ಸೂಚಿಸಲಾಗಿದೆ. ತಕ್ಷಣದ ಪರಿಹಾರಕ್ಕಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿ ಬಡವರಿಗೆ ಕೂಲಿ ಕೆಲಸ ಸೃಷ್ಟಿಸಲು ಪ್ರತಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವುಗಳ ಕಾರ್ಯಗಳ ಮೇಲೆ ನಿಗಾ ಇಡಲಾಗಿದೆ. ಯಾವುದೇ ಅವ್ಯವಹಾರಕ್ಕೆ ಆಸ್ಪದ ನೀಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ.ಗೋಶಾಲೆಗಳಲ್ಲಿರುವ ಜಾನುವಾರು ಗಳಿಗೆ ಅಗತ್ಯವಿದ್ದ ಮೇವು ಖರೀದಿಸಿ ವ್ಯವಸ್ಥೆ ಮಾಡಲಾಗಿದೆ. ಅವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಬರುವ ಬೇಸಿಗೆ ಮುಗಿಯುವವರೆಗೆ ತಾಲ್ಲೂಕಿನಲ್ಲಿಯ ಜಾನುವಾರುಗಳ ರಕ್ಷಣೆ ಮಾಡಲು ಅಗತ್ಯವಿರುವ ಹಣವನ್ನು ತಾಲ್ಲೂಕು ಪಂಚಾಯಿತಿ ಭರಿಸಲು ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.ಯಾವುದೇ ಗೋಶಾಲೆಗೆ ಮೇವು ಕಡಿಮೆಬಿದ್ದರೆ ತಕ್ಷಣವೇ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry