ರೂ789 ಕೋಟಿ ಮೌಲ್ಯದ ಬೆಳೆ ಹಾನಿ

7
ಅತಿವೃಷ್ಟಿಯಿಂದ ಅಡಿಕೆಗೆ ಕೊಳೆ ರೋಗ

ರೂ789 ಕೋಟಿ ಮೌಲ್ಯದ ಬೆಳೆ ಹಾನಿ

Published:
Updated:

ತೀರ್ಥಹಳ್ಳಿ: ರಾಜ್ಯದಲ್ಲಿ ಅತಿವೃಷ್ಟಿಯಿಂದ ರೂ 789 ಕೋಟಿ ಮೌಲ್ಯದ ಅಡಿಕೆ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮೊತ್ತದ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ತಾಲ್ಲೂಕಿನ ಆಗುಂಬೆ ಹೋಬಳಿಯ ಗುಡ್ಡೇಕೇರಿ ಸಮೀಪದ ತಲಗೇರಿ ಗೋಪಾಲಕೃಷ್ಣ ಭಟ್ ಅವರ ಅಡಿಕೆ ತೋಟಕ್ಕೆ ಗುರುವಾರ ಭೇಟಿ ನೀಡಿದ ನಂತರ ತೀರ್ಥಹಳ್ಳಿ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಈಗಾಗಲೇ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಒಂದು ಹೆಕ್ಟೇರ್ ಪ್ರದೇಶಕ್ಕೆ ರೂ12 ಸಾವಿರ ಪರಿಹಾರ ನೀಡಬೇಕು ಎಂಬ ನಿರ್ದೇಶನ ಇದೆ. ಪರಿಹಾರ ಕೊಡಲು ಸಿದ್ಧತೆಯೂ ನಡೆದಿದೆ. ಪರಿಹಾರ ಸಾಲುವುದಿಲ್ಲ ಎಂಬ ಅಹವಾಲಿದೆ. ಈ ಬಗ್ಗೆ ಸರ್ಕಾರ ಚರ್ಚಿಸಿ ಯಾವ ಪ್ರಮಾಣದ ಪರಿಹಾರ ಕೊಡಬೇಕು ಎಂಬ ಕುರಿತು ಪ್ರಯತ್ನಿಸಲಾಗುವುದು ಎಂದರು.  ಜಿಲ್ಲೆಯಲ್ಲಿ ನಿರಂತರ 70 ದಿನಗಳ ಕಾಲ ಮಳೆಯಾಗಿದೆ. ಮಳೆ ಬಿಡುವು ನೀಡಿದ್ದರೆ ರೈತರಿಗೆ ಅಡಿಕೆ ತೋಟಗಳಿಗೆ ಔಷಧ ಸಿಂಪಡಣೆ ಸಾಧ್ಯವಾಗುತ್ತಿತ್ತು. ಅಡಿಕೆ ಬೆಳೆಗೆ ವ್ಯಾಪಕ ಕೊಳೆ ರೋಗ ಬಂದಿದೆ. ಮರಗಳು ಸಾಯುತ್ತಿವೆ. ಪುನಃ ಅಡಿಕೆ ತೋಟ ನಿರ್ಮಾಣ ಮಾಡಲು ಕನಿಷ್ಠ 8-10 ವರ್ಷ ಬೇಕಾಗುತ್ತದೆ ಎಂದು ನುಡಿದರು.ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗಿನಲ್ಲಿಯೂ ಶೇ.50ರಷ್ಟು ಬೆಳೆ ನಷ್ಟವಾಗಿದೆ. ಆಗುಂಬೆ ಭಾಗದಲ್ಲಿ  ಶೇ.80-90 ನಷ್ಟವಾಗಿದೆ ಎಂದು ವಿವರಣೆ ನೀಡಿದರು.ಪರ್ಯಾಯ ಬೆಳೆ ಅಗತ್ಯ

ರೈತರು ಅಡಿಕೆ ಬೆಳೆ ಬದಲಿಗೆ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಯೋಚಿಸುವುದು ಒಳ್ಳೆಯದು ಎಂದು ಸಲಹೆ ಮಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಗಿಂತ ಶೇ.40-50 ಹೆಚ್ಚಾಗಿದೆ. ಬೆಳೆಗಳು ನಷ್ಟವಾಗಿದೆ. 45 ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆ ಹಾನಿಯಾಗಿದೆ. ವ್ಯಾಪಕ ಮಳೆಯಿಂದ ಅಡಿಕೆ ಫಸಲು ಉದುರಿ ಹೋಗಿದೆ. ಕೊಳೆ ರೋಗಬಾಧೆಯಿಂದ ರೈತರು ಬೆಳೆ ಕಳೆದುಕೊಂಡಿದ್ದಾರೆ. ಕಾಳು ಮೆಣಸಿನ ಬಳ್ಳಿಗಳು ಕೊಳೆತು ಹೋಗಿವೆ ಎಂದರು.ಗೋರಖ್ ಸಿಂಗ್ ವರದಿ ಜಾರಿ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಲಿಲ್ಲ. ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಈಗಾಗಲೇ ಕೆಲಸ ಮಾಡಲು 30 ಸಚಿವರಿದ್ದಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry