ಭಾನುವಾರ, ಏಪ್ರಿಲ್ 18, 2021
29 °C

ರೂ806 ಕೋಟಿಕ್ರಿಯಾಯೋಜನೆಗೆ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳ ವಿವಿಧ ಯೋಜನೆಗಳ ವೆಚ್ಚ ರೂ 277 ಕೋಟಿ ಹಾಗೂ ಯೋಜನೇತರ ವೆಚ್ಚ ರೂ 528 ಕೋಟಿ ಒಳಗೊಂಡ 2012-13ನೇ ಸಾಲಿನ ಜಿಲ್ಲಾ ಪಂಚಾಯಿತಿಯ ಒಟ್ಟು 806 ಕೋಟಿ ಮೊತ್ತದ ಕ್ರಿಯಾಯೋಜನೆಯನ್ನು ಬುಧವಾರ ಇಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲಾಯಿತು.ಜಿಲ್ಲಾ ಪಂಚಾಯಿತಿ ಯೋಜನೆ ಹಾಗೂ ಯೋಜನೇತರ ವೆಚ್ಚ ರೂ 270 ಕೋಟಿ, ವಿವಿಧ ತಾಲ್ಲೂಕು ಪಂಚಾಯಿತಿಗಳ ಯೋಜನೆ ಹಾಗೂ ಯೋಜನೇತರ ವೆಚ್ಚ ರೂ 488 ಕೋಟಿ ಹಾಗೂ ಗ್ರಾಮ ಪಂಚಾಯಿತಿ ಯೋಜನಾ ವೆಚ್ಚ 48 ಕೋಟಿ ನಿಗದಿಗೊಳಿಸಲಾಗಿದೆ.ಶಿಕ್ಷಣಕ್ಕೆ ರೂ 82.5 ಕೋಟಿ, ಕ್ರೀಡೆಗೆ ರೂ 41 ಲಕ್ಷ, ವೈದ್ಯಕೀಯ ಸೇವೆಗೆ ರೂ 14 ಕೋಟಿ, ಆಯುಷ್‌ಗೆ ರೂ 73 ಲಕ್ಷ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳಿಗೆ ರೂ 12.2 ಕೋಟಿ, ಪರಿಶಿಷ್ಟರ ಕಲ್ಯಾಣಕ್ಕೆ ರೂ 3 ಕೋಟಿ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ರೂ 4.28 ಕೋಟಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮಕ್ಕೆ ರೂ 8.28 ಕೋಟಿ, ಕೃಷಿಗೆ ರೂ 1.71 ಕೋಟಿ, ತೋಟಗಾರಿಕೆಗೆ ರೂ 41 ಲಕ್ಷ, ಪಶುಸಂಗೋಪನೆಗೆ ರೂ 55 ಲಕ್ಷ, ಮೀನುಗಾರಿಕೆಗೆ ರೂ 12 ಲಕ್ಷ, ಅರಣ್ಯ ಯೋಜನೆಗೆ ರೂ 2.52 ಕೋಟಿ, ಸಹಕಾರ ಯೋಜನೆಗೆ ರೂ 9 ಲಕ್ಷ, ಪ್ರದೇಶಾಭಿವೃದ್ಧಿ ಮತ್ತು ಇತರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಕ್ಕೆ ರೂ 1.48 ಕೋಟಿ, ಗ್ರಾಮೀಣ ಇಂಧನ ಕಾರ್ಯಕ್ರಮಕ್ಕೆ ರೂ 40 ಲಕ್ಷ, ಪಂಚಾಯತ್ ರಾಜ್ ಸಂಸ್ಥೆಗಳಿಗೆ ರೂ 1 ಕೋಟಿ, ಗ್ರಾಮೋದಯ ಮತ್ತು ಸಣ್ಣ ಉದ್ಯಮಗಳಿಗೆ ರೂ 15 ಲಕ್ಷ, ರೇಷ್ಮೆಗೆ ರೂ 3.75 ಲಕ್ಷ, ರಸ್ತೆ ಮತ್ತು ಸೇತುವೆ ಅಭಿವೃದ್ಧಿಗೆ ರೂ 4.69 ಕೋಟಿ, ಸಚಿವಾಲಯ ಆರ್ಥಿಕ ಸೇವೆಗಳು ರೂ 14 ಲಕ್ಷ, ಕೈಮಗ್ಗ ಮತ್ತು ಜವಳಿ ರೂ 5.5 ಲಕ್ಷ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ರೂ 11.11 ಲಕ್ಷ, ಕಲೆ, ಸಂಸ್ಕೃತಿ ಮತ್ತು ಗ್ರಂಥಾಲಯಕ್ಕೆ ರೂ 2.5 ಲಕ್ಷ, ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣಕ್ಕೆ ರೂ 73 ಲಕ್ಷ, ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರೂ 60 ಲಕ್ಷ ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ.ಸಾಮಾನ್ಯ ಸಭೆಯ ಚರ್ಚೆ: ಈ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ಮಾಡಿದ ಆರೋಪಗಳನ್ನೆ ಸದಸ್ಯರು ಪುನರಾವರ್ತಿಸಿದರು. ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೈಗೊಳ್ಳಲಾಗುವ ಯಾವುದೇ ನಿರ್ಣಯಗಳು ಕಾರ್ಯಾನುಷ್ಠಾನವಾಗುತ್ತಿಲ್ಲ. ಹೀಗಾದರೆ ಸಭೆ ನಡೆಸುವುದೇಕೆ.

 

ಜಿಲ್ಲೆಯಾದ್ಯಂತ ವಸತಿ ನಿಲಯಗಳಲ್ಲಿನ ಅವ್ಯವಸ್ಥೆ ಕುರಿತು ತನಿಖೆ ನಡೆಸಬೇಕು, ಸಿಇಒ ಹಠಾವೋ ಹಾಗೂ ಬಿಸಿಯೂಟದ ಕುರಿತು ಹಿಂದಿನ ಸಭೆಗಳಲ್ಲಿ ನಿರ್ಣಯಿಸಲಾಗಿತ್ತು. ಆದರೆ ಕಾರ್ಯರೂಪಕ್ಕೆ ಏಕೆ ಬರುತ್ತಿಲ್ಲ ಸಭಾಧ್ಯಕ್ಷ ದೀಪಕನಾಗ್ ಅವರು ಈ ಬಗ್ಗೆ ವಿವರಣೆ ನೀಡಬೇಕು. ಅಧಿಕಾರಿಗಳಿಂದ ಉತ್ತರ ಹೇಳಿಸಬೇಕು ಎಂದು ಸದಸ್ಯರು ಕೆಲಕಾಲ ಪಟ್ಟು    ಹಿಡಿದರು.ಮುಂಬರುವ ದಿನಗಳಲ್ಲಿ ಸಾಮಾನ್ಯ ಸಭೆ ಹಾಗೂ ಕೆಡಿಪಿ ಸಭೆಗಳ ಧ್ವನಿಮುದ್ರಣ  ಮಾಡಿಕೊಳ್ಳಲು ನಿರ್ಧರಿಸಲಾಯಿತು. ಕನಕ ಹತ್ತಿಬೀಜದ ದರ ರೂ 930 ಇದ್ದರೂ ಜೇವರ್ಗಿ ತಾಲ್ಲೂಕಿನಲ್ಲಿ ರೂ 2400ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ತಾಲ್ಲೂಕಿನ ಸಹಾಯಕ ಕೃಷಿ ಅಧಿಕಾರಿಯ ಗಮನ ಸೆಳೆಯಲಾಗಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ.ಕೂಡಲೇ ಜೇವರ್ಗಿ ಸಹಾಯಕ ಕೃಷಿ ಅಧಿಕಾರಿಯನ್ನು ವರ್ಗಾಯಿಸಬೇಕು. ಅಲ್ಲದೆ ಎಲ್ಲ ತಾಲ್ಲೂಕುಗಳ ಸಹಾಯಕ ಕೃಷಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಕೆಲವು ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಸೂಕ್ತ ತನಿಖೆಗೆ ತಂಡ ರಚಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಭೆಗೆ  ತಿಳಿಸಿದರು.ತೊಗರಿ ಹಾಗೂ ಹತ್ತಿ ಬೆಳೆ ಕೂಡಾ ವಾಣಿಜ್ಯ ಬೆಳೆಗಳೆಂದು ರೈತರೆಲ್ಲ ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ ರೈತ ಸಂಪರ್ಕದ ಮೂಲಕವೆ ತೊಗರಿ ಹಾಗೂ ಹತ್ತಿ ಬೀಜಗಳನ್ನು ವಿತರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಜೇವರ್ಗಿ ತಾಲ್ಲೂಕಿನ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು ಶೇ 10ರಷ್ಟು ಮಾತ್ರ ಬಿತ್ತನೆ ಕಾರ್ಯ ಮುಗಿದಿದೆ.ಚಿಂಚೋಳಿ ತಾಲ್ಲೂಕಿನಲ್ಲಿ ಶೇ 96ರಷ್ಟು ಬಿತ್ತನೆಯಾಗಿದೆ. ಇನ್ನುಳಿದ ತಾಲ್ಲೂಕುಗಳಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. ಒಟ್ಟು 18548 ಕ್ವಿಂಟಲ್ ಬೀಜಗಳ ಬೇಡಿಕೆಯಿದ್ದು, ಜಿಲ್ಲೆಯಲ್ಲಿ ಈಗಾಗಲೇ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಸಾಕಷ್ಟು ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ತಿಳಿಸಿದರು.ಜಿಲ್ಲೆಯ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರ್ಕಾರವು ರೂ 8.5 ಕೋಟಿಯನ್ನು ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿದೆ. ಅಲ್ಲದೆ ಬೆಳೆವಿಮೆಗೆ ಸಂಬಂಧಿಸಿದಂತೆ ಈಗಾಗಲೇ ಅಧಿಕಾರಿಗಳ ತಂಡವು ಜಿಲ್ಲೆಯಾದ್ಯಂತ ಸಮೀಕ್ಷೆ ನಡೆಸಿಕೊಂಡು ಹೋಗಿದೆ ಎಂದು ಸಿಇಒ ಸದಸ್ಯರಿಗೆ ಮಾಹಿತಿ ನೀಡಿದರು.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಬಹುತೇಕ ಕಡೆಗಳಲ್ಲಿ ಅವ್ಯವಹಾರದ ದೂರುಗಳು ಬರುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಆದೇಶಿಸಲಾಗುವುದು ಎಂದು  ತಿಳಿಸಲಾಯಿತು.

 

ಗುಲ್ಬರ್ಗ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದಲ್ಲಿ ಬಾವಿ ಸ್ವಚ್ಛಗೊಳಿಸುವಾಗ ಮೃತಪಟ್ಟವರ ಕುಟುಂಬಕ್ಕೆ ಈಗಾಗಲೇ ರೂ 1.5 ಪರಿಹಾರ ಹಾಗೂ ಬಸವ ಇಂದಿರಾ ವಸತಿ ಯೋಜನೆ ಅಡಿಯಲ್ಲಿ ನಿವಾಸ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಈ ಬಗ್ಗೆ ತಕರಾರು ಎತ್ತಿದ ಜಿಲ್ಲಾ ಪಂಚಾಯಿತಿ ಸದಸ್ಯರು, ಪರಿಹಾರ ಮೊತ್ತವು ಬಹಳ ಕಡಿಮೆಯಾಗಿದ್ದು ಮತ್ತೆ ಪ್ರತಿ ಕುಟುಂಬಕ್ಕೆ ರೂ 3.5 ಲಕ್ಷ ಪರಿಹಾರ ಹಾಗೂ ಮೃತ ದುರ್ದೈವಿಯ ಕುಟುಂಬದ ಒಬ್ಬರು ಸದಸ್ಯರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದೀಪಕನಾಗ್ ಪುಣ್ಯಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ನಿತಿನ್ ಗುತ್ತೇದಾರ, ಸಿಇಒ ಎಂ.ಜಿ. ವಿಜಯಕುಮಾರ, ಯೋಜನಾಧಿಕಾರಿ ವಿರೂಪಾಕ್ಷಪ್ಪ ಕಿರಣಗಿ, ಶ್ರೀನಾಥ ಪಿಲ್ಲಿ, ಉಪ ಕಾರ್ಯದರ್ಶಿ ವಸಂತರಾವ ಕುಲಕರ್ಣಿ, ಜಯಶ್ರೀ ಸಾವಳೇಶ್ವ ವೇದಿಕೆಯಲ್ಲಿ ಇದ್ದರು.ಪೂಜಾ ಲೋಹಾರ ಕಪ್ಪುಪಟ್ಟಿಪ್ರತಿಭಟನೆ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗುವ ನಿರ್ಣಯಗಳನ್ನು ಅಧಿಕಾರಿಗಳು ಗಾಳಿಗೆ ತೂರುತ್ತಿದ್ದಾರೆ. ಯಾವುದೇ ನಿರ್ಣಯ ಜಾರಿಯಾಗುತ್ತಿಲ್ಲ. ನಾಲ್ಕು ಗೋಡೆಗಳ ನಡುವೆ ನಿರ್ಣಯಗಳು ಸೀಮಿತವಾಗಿವೆ ಎಂದು ಆಳಂದ ತಾಲೂಕಿನ ಮಾದನಹಿಪ್ಪರಗಾ ಕ್ಷೇತ್ರದ ಸದಸ್ಯೆ ಪೂಜಾ ರಮೇಶ ಲೋಹಾರ ಕೈಗೆ ಕಪ್ಪುಪಟ್ಟಿ ಧರಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿದರು.ಸಿಇಓ ಹಠಾವೋ, ಬಿಸಿಯೂಟ ನಿರ್ವಹಣೆ ಹಾಗೂ ಆಳಂದ ತಾಲೂಕಿನಲ್ಲಿ ಅನೇಕ ಸಮಸ್ಯೆಗಳು ಕುರಿತು ಹಿಂದಿನ ಹಲವು ಸಭೆಗಳಲ್ಲಿ ಚರ್ಚೆಯಾಗಿವೆ. ಆದರೆ ಅದರಲ್ಲಿ ಒಂದೂ ಸಮಸ್ಯೆ ಸಹ ಬಗೆಹರಿದಿಲ್ಲ. ಇನ್ನು ಮುಂದೆಯಾದರೂ ಸಭೆಯ ಚರ್ಚಾ ವಿಷಯಗಳು ಇತ್ಯರ್ಥವಾಗಲಿ ಎಂದು ಸಭೆಯಲ್ಲಿ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.