ರೆಡ್ಡಿಗಳಿಗೆ ಮೊಬೈಲ್ ಕರೆ ದಾಖಲೆಗಳೇ ಉರುಳು

ಮಂಗಳವಾರ, ಮೇ 21, 2019
23 °C

ರೆಡ್ಡಿಗಳಿಗೆ ಮೊಬೈಲ್ ಕರೆ ದಾಖಲೆಗಳೇ ಉರುಳು

Published:
Updated:

ನವದೆಹಲಿ: ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ `ಜಾಮೀನು ಡೀಲ್~ಗೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಮೊಬೈಲ್ ಕರೆ ವಿವರಗಳು ಕಂಪ್ಲಿ ಶಾಸಕ ಸುರೇಶ್ ಬಾಬು, ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಮತ್ತಿತರ ಕೊರಳಿಗೆ ಉರುಳಾಗುವ ಸಾಧ್ಯತೆಯಿದೆ.ಸುರೇಶ್ ಬಾಬು ಬಂಧನಕ್ಕೆ ಮುನ್ನ ಸಿಬಿಐ ಜನಾರ್ದನ ರೆಡ್ಡಿ ಜಾಮೀನು ಡೀಲ್‌ನಲ್ಲಿ ಕೈಹಾಕಿದ ಆರೋಪಕ್ಕೆ ಒಳಗಾಗಿರುವ ಎಲ್ಲ ಆರೋಪಿಗಳ ಮೊಬೈಲ್ ಕರೆಗಳ ಮಾಹಿತಿಯನ್ನು ಸಂಗ್ರಹಿಸಿದೆ. ಅವರವರೊಳಗೆ ನಡೆದಿರುವ ಸಂಭಾಷಣೆ ವಿವರಗಳನ್ನು ಪಡೆದಿದೆ.ಸಿಬಿಐ ಸುರೇಶ್ ಬಾಬು ಅವರನ್ನು ಕಸ್ಟಡಿಗೆ ಕೇಳುವ ಸಮಯದಲ್ಲಿ ಮೊಬೈಲ್ ಸಂಖ್ಯೆ 81056- 90909 ಮೇಲೆ ಏಪ್ರಿಲ್ 21ರಿಂದ ಮೇ 7ರವರೆಗೆ ನಿಗಾ ಇಟ್ಟಿದ್ದಾಗಿ ಕೋರ್ಟ್‌ಗೆ ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ತಿಳಿಸಿದೆ. ಬೇಲ್ ಡೀಲ್ ಹಗರಣದಲ್ಲಿ ತಾವು ಸಿಬಿಐ ಕಣ್ಗಾವಲಿನಲ್ಲಿ ಇದ್ದುದ್ದಾಗಿ ಸುರೇಶ್ ಬಾಬು ಹೇಳಿದ್ದಾರೆ. ನಂತರ ಈ ಸಿಮ್ ಬಳಸುವುದನ್ನು ಅವರು ನಿಲ್ಲಿಸಿದ್ದಾರೆ.ಕೆಲ ನ್ಯಾಯಾಧೀಶರ ಸಂಪರ್ಕದಲ್ಲಿದ್ದಾರೆ ಎನ್ನಲಾದ ಹೈದರಾಬಾದ್ ನಿವಾಸಿ ಸೂರ್ಯಪ್ರಕಾಶ್ ಬಾಬು (ಈಗ ಜೈಲಿನಲ್ಲಿದ್ದಾರೆ) ಸೇರಿದಂತೆ ಸುರೇಶ್ ಬಾಬು ಹಲವರ ಜತೆ ನಿರಂತರವಾಗಿ ದೂರವಾಣಿಯಲ್ಲಿ ಮಾತನಾಡುತ್ತಿದ್ದರು. ನ್ಯಾಯಾಧೀಶರುಗಳ ಮನೆಗಳಿಗೆ ಹೋಗಿ ಬರುತ್ತಿದ್ದ ಸೂರ್ಯಪ್ರಕಾಶ್ ಬಾಬು ಅವರು ರೆಡ್ಡಿ ಅವರಿಗೆ ಜಾಮೀನು ಕೊಡಿಸುವ ಆಶ್ವಾಸನೆ ನೀಡಿದ್ದರು. ಏ. 21ರಂದು ಸೂರ್ಯಪ್ರಕಾಶ್ ಅವರು ನ್ಯಾಯಾಧೀಶ ಕೆ.ಎಲ್. ನರಸಿಂಹರಾವ್ ಮನೆಗೆ ಹೋಗಿದ್ದರು. ಸಂಜೆ 6.17ರಿಂದ 7.56ರವರೆಗೆ ಅಲ್ಲಿದ್ದರು. ಅಲ್ಲಿಂದಲೇ ಸುರೇಶ್ ಬಾಬು ಅವರ 81056- 90909 ಮೊಬೈಲ್‌ಗೆ ಮಾತನಾಡಿದ್ದರು ಎಂದು ಸಿಬಿಐ ಹೇಳಿದೆ.ಮೇ 3ರಂದು ಬೆಳಿಗ್ಗೆ 6.14ರಿಂದ 9.20ರವರೆಗೆ ಸೂರ್ಯಪ್ರಕಾಶ್ ಬಾಬು ಹಾಗೂ ನ್ಯಾಯಾಧೀಶ ಪ್ರಭಾಕರ ರಾವ್ ಜತೆಗೂಡಿ ಕೆ.ಎಲ್. ನರಸಿಂಹರಾವ್ ಮನೆಗೆ ಬಂದಿದ್ದರು. ಆಗ ಪ್ರಭಾಕರ ರಾವ್ ಜನಾರ್ದನರೆಡ್ಡಿ ಜಾಮೀನು ಅರ್ಜಿ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶ ಪಟ್ಟಾಭಿರಾಮರಾವ್ ಜತೆ ಮೊಬೈಲ್‌ನಲ್ಲಿ ಮಾತನಾಡಿದ್ದರು. ಅದೇ ಸಂದರ್ಭದಲ್ಲಿ ಸೂರ್ಯ ಪ್ರಕಾಶ್ ಬಾಬು ಅವರು, ಸುರೇಶ್ ಬಾಬು ಅವರಿಗೆ ಮಾತನಾಡಿದರು ಎಂದು ಕೇಂದ್ರ ತನಿಖಾ ದಳ ಮಾತುಕತೆ ಸಂದರ್ಭಗಳನ್ನು ಉಲ್ಲೇಖಿಸಿದೆ.ಸೂರ್ಯಪ್ರಕಾಶ್ ಬಾಬು ನ್ಯಾಯಾಧೀಶರಾದ ಪ್ರಭಾಕರ ರಾವ್ ಹಾಗೂ ನರಸಿಂಹರಾವ್ ಅವರ ನೆರವು ಬಳಸಿಕೊಂಡು ಜನಾರ್ದನರೆಡ್ಡಿಗೆ ಪಟ್ಟಾಭಿರಾಮರಾವ್ ಅವರಿಂದ ಜಾಮೀನು ಕೊಡಿಸುವ ಪ್ರಯತ್ನ ಮಾಡಿದ್ದರು. ಈ ಮೂವರು ನ್ಯಾಯಾಧೀಶರು ಒಂದೇ ಸಮಯದಲ್ಲಿ ನ್ಯಾಯಾಂಗ ಸೇವೆಗೆ ಸೇರಿದ್ದರು ಎಂದು ಸಿಬಿಐ ವಿವರಿಸಿದೆ.20 ಕೋಟಿ ರೂಪಾಯಿಗೆ ಬೇಲ್ ಡೀಲ್ ಆಯಿತು. ಇದಕ್ಕಾಗಿ ಬಳ್ಳಾರಿ ಆಚಾರಿಯೊಬ್ಬರ ಮೂಲಕ ಹೈದರಾಬಾದ್‌ನಲ್ಲಿ ಚಿನ್ನದ ಗಟ್ಟಿ ಮಾರಾಟ ಮಾಡಿದ್ದಾಗಿ ಸೋಮಶೇಖರ ರೆಡ್ಡಿ ತಮಗೆ ಹೇಳಿದ್ದಾಗಿ ಸುರೇಶ್ ಬಾಬು ಸಿಬಿಐ ಮುಂದೆ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹೇಳಿಕೆಯಲ್ಲಿ ಸುರೇಶ್ ಬಾಬು ಮಾಜಿ ಸಚಿವ ಬಿ. ಶ್ರೀರಾಮುಲು ಹೆಸರನ್ನು ಬಹಿರಂಗಪಡಿಸಿದ್ದಾರೆ. ಶ್ರೀರಾಮುಲು ತಮಗೆ ಸೂರ್ಯಪ್ರಕಾಶ್ ಭೇಟಿ ಮಾಡುವಂತೆ ತಿಳಿಸಿದ್ದರು ಎಂದು ಸುರೇಶ್ ಬಾಬು ವಿವರಿಸಿದ್ದಾರೆ.

ರೆಡ್ಡಿ ನ್ಯಾಯಾಂಗ ಬಂಧನ ವಿಸ್ತರಣೆ

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಸೇರಿದಂತೆ ನಾಲ್ವರ ನ್ಯಾಯಾಂಗ ಬಂಧನದ ಅವಧಿಯನ್ನು ಸಿಬಿಐ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 7ರ ವರೆಗೆ ವಿಸ್ತರಿಸಿ ಶನಿವಾರ ಆದೇಶಿಸಿದೆ. ಪರಪ್ಪನ ಅಗ್ರಹಾರದಲ್ಲಿನ ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ವಿಚಾರಣೆಯನ್ನು ನ್ಯಾಯಾಧೀಶ ಬಿ.ಎಂ.ಅಂಗಡಿ ನಡೆಸಿದರು. ಇದೇ ಆರೋಪದಲ್ಲಿ ಸಿಲುಕಿರುವ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಅವರು ಕೋರ್ಟ್‌ನಲ್ಲಿ ಹಾಜರು ಇದ್ದರು.ಈ ಮಧ್ಯೆ, ರೆಡ್ಡಿ ಬಂಟ ಮೆಹಫೂಜ್ ಅಲಿ ಖಾನ್ ಜಾಮೀನು ಕೋರಿ ಎರಡನೆಯ ಬಾರಿ ಲೋಕಾಯುಕ್ತ ಕೋರ್ಟ್ ಮೊರೆ ಹೋಗಿದ್ದಾರೆ. ಕಳೆದ ಬಾರಿ ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.]`ಖಾನ್ ಅವರಿಗೆ ಐದು ತಿಂಗಳ ಮಗುವಿದೆ. ಇದು ರಂಜಾನ್ ಮಾಸ. ಮುಸ್ಲಿಂ ಧರ್ಮದ ಪ್ರಕಾರ, ಮಕ್ಕಳು ರಂಜಾನ್ ಹಬ್ಬವನ್ನು ಪಾಲಕರ ಜೊತೆ ಆಚರಿಸಬೇಕು. ಆದುದರಿಂದ ಖಾನ್ ಅವರಿಗೆ ಜಾಮೀನು ಮಂಜೂರು ಮಾಡಬೇಕು~ ಎಂದು ಅವರ ಪರ ವಕೀಲರು  ನ್ಯಾಯಾಧೀಶರನ್ನು ಕೋರಿದರು. ಈ ಅರ್ಜಿಗೆ ಆಕ್ಷೇಪಣಾ ಹೇಳಿಕೆ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿದ ನ್ಯಾಯಾಧೀಶರು, ವಿಚಾರಣೆಯನ್ನು ಇದೇ 8ಕ್ಕೆ ಮುಂದೂಡಿದರು.

ಗಣಿ ಅಕ್ರಮ: ಜಾಮೀನು ನೀಡದಿರಲು ಮನವಿ

ಪ್ರಜಾವಾಣಿ ವಾರ್ತೆ

ನವದೆಹಲಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸೇರಿದಂತೆ ಅಕ್ರಮ ಗಣಿಗಾರಿಕೆ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸುಪ್ರೀಂಕೋರ್ಟ್ ಅನುಮತಿ ಇಲ್ಲದೆ ಜಾಮೀನು ಕೊಡಬಾರದು ಎಂದು ಸಮಾಜ ಪರಿವರ್ತನಾ ಸಮುದಾಯ ಮನವಿ ಮಾಡಿದೆ.ಅಕ್ರಮ ಗಣಿಗಾರಿಕೆ ಹಗರಣ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದ್ದರೂ, ಕೆಲವು ನ್ಯಾಯಾಧೀಶರು ಹಾಗೂ ಅಧಿಕಾರಿಗಳನ್ನು ಬಳಸಿಕೊಂಡು ಬಂಧನದಲ್ಲಿರುವ ಮಾಜಿ ಸಚಿವ ಜನಾರ್ದನರೆಡ್ಡಿಗೆ ಜಾಮೀನು ಕೊಡಿಸಲಾಗಿದೆ. ಇದರ ಹಿಂದೆ `ಭಾರಿ ಲಂಚದ ವ್ಯವಹಾರ~ ನಡೆದಿದೆ ಎಂದು ಸಮಾಜ ಪರಿವರ್ತನಾ ಸಮುದಾಯ ಸುಪ್ರೀಂಕೋರ್ಟ್‌ಗೆ ಈಚೆಗೆ ಸಲ್ಲಿಸಿರುವ ಮಧ್ಯಂತರ ಅರ್ಜಿಯಲ್ಲಿ ಹೇಳಿದೆ.ಜಾಮೀನು ಡೀಲ್ ಗಂಭೀರ ಹಗರಣವಾಗಿದ್ದು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಸುಪ್ರೀಂಕೋರ್ಟ್ ಅನುಮತಿ ಇಲ್ಲದೆ ಜಾಮೀನು ಕೊಡಬಾರದು ಎಂದು ಮನವಿ ಮಾಡಲಾಗಿದೆ. ಅಲ್ಲದೆ, ಸಿಇಸಿ ಶಿಫಾರಸಿನ ಹಿನ್ನೆಲೆಯಲ್ಲಿ ರೆಡ್ಡಿ ಸಹೋದರರ ಒಡೆತನದ ಓಬಳಾಪುರಂ ಮೈನಿಂಗ್ ಕಂಪೆನಿ ಹಾಗೂ ಅನಂತಪುರ ಮೈನಿಂಗ್ ಕಂಪೆನಿ ಪರವಾನಗಿ ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.ಎನ್‌ಜಿಒ ಪರ ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿರುವ 39 ಪುಟಗಳ ಮಧ್ಯಂತರ ಅರ್ಜಿಯಲ್ಲಿ ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ತಡೆಯುವ ಸಂಬಂಧ ಉಭಯ ರಾಜ್ಯಗಳು ಸಮಾನ ಒಪ್ಪಂದಕ್ಕೆ ಬರುವವರೆಗೂ ಎರಡೂ ಕಡೆಯ ಒಂದು ಕಿ.ಮೀ. ವ್ಯಾಪ್ತಿಯನ್ನು `ಚಟುವಟಿಕೆ ರಹಿತ ಪ್ರದೇಶ~ ಎಂದು ಘೋಷಿಸಬೇಕೆಂದು ಮನವಿ ಮಾಡಿದೆ. ಸಮಾಜ ಪರಿವರ್ತನಾ ಸಮುದಾಯ ಇದಕ್ಕೂ ಮೊದಲು ಹಲವು ಸಲ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠವನ್ನು ಪುನರ‌್ರಚಿಸಲಾಗಿದ್ದು ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ, ಕೆ.ಎಸ್. ರಾಧಾಕೃಷ್ಣನ್ ಹಾಗೂ ಸ್ವತಂತ್ರ ಕುಮಾರ್ ಅವರನ್ನೊಳಗೊಂಡ ಪೀಠ ಇದೇ 17ರಂದು ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆಯನ್ನು ಪುನರಾರಂಭಿಸುವ ಸಾಧ್ಯತೆ ಇದೆ.ಸಿಇಸಿ ಏ.20ರಂದು ಮಾಡಿರುವ ಎಲ್ಲ ಶಿಫಾರಸುಗಳನ್ನು ಸಿಬಿಐ ತನಿಖೆ ವ್ಯಾಪ್ತಿಗೆ ಒಪ್ಪಿಸಬೇಕು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗಣಿ ಪರವಾನಗಿ ನೀಡಲು ಪ್ರವೀಣ್ ಚಂದ್ರ ಅವರಿಂದ ಹಣ ಪಡೆದಿರುವ ಪ್ರಕರಣ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ವ್ಯಾಪ್ತಿಯಲ್ಲಿ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಟ್ಟಿರುವ ಹಗರಣ ಕುರಿತು ತನಿಖೆಗೆ ಆದೇಶಿಸುವಂತೆ ಸಮಾಜ ಪರಿವರ್ತನಾ ಸಮುದಾಯ ಮನವಿ ಮಾಡಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry