ರೆಡ್ಡಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಕಾರ

7

ರೆಡ್ಡಿಗೆ ಜಾಮೀನು ನೀಡಲು ಸುಪ್ರೀಂಕೋರ್ಟ್ ನಕಾರ

Published:
Updated:

ನವದೆಹಲಿ: ಆಂಧ್ರಪ್ರದೇಶದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಜಾಮೀನು ನಿರಾಕರಿಸಿದೆ.



ಈ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹಣ ಚಲಾವಣೆಯಾದ ರೀತಿಯ ಕುರಿತು ಸಿಬಿಐ ತನಿಖೆ ಜಾರಿಯಲ್ಲಿರುವ ಕಾರಣ ಜಾಮೀನು ನಿರಾಕರಿಸುತ್ತಿರುವುದಾಗಿ ನ್ಯಾಯಮೂರ್ತಿ ಎಚ್. ಎಲ್. ದತ್ತು ಮತ್ತು ನ್ಯಾಯಮೂರ್ತಿ ಎಂ. ವೈ. ಇಕ್ಬಾಲ್ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.



ರೆಡ್ಡಿ ಅವರ ವಿರುದ್ಧದ ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 26ರಂದು ನ್ಯಾಯಮೂರ್ತಿ ಸಿ.ಕೆ. ಪ್ರಸಾದ್  ನೇತೃತ್ವದ ಪೀಠ, ಸಿಬಿಐಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ವಿಚಾರವನ್ನು ರೆಡ್ಡಿ ಪರ ವಕೀಲ ರಂಜಿತ್ ಕುಮಾರ್ ನ್ಯಾಯಪೀಠದ ಗಮನಕ್ಕೆ ತಂದರು.



ತಮ್ಮ ಕಕ್ಷಿದಾರರು ಶರಣಾಗಿ 730 ದಿನಗಳಾದರೂ ಸಿಬಿಐ ಇನ್ನೂ ವಿಚಾರಣೆ ನಡೆಸುತ್ತಿರುವುದಾಗಿ ಹೇಳುತ್ತಿದೆ. ಕರ್ನಾಟಕದಲ್ಲಿ ರೆಡ್ಡಿ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಯ ವಸ್ತುಸ್ಥಿತಿ ಏನಿದೆ ಎಂದು ವರದಿ ಸಲ್ಲಿಸುವಂತೆ ಕೋರ್ಟ್ ಸಿಬಿಐಗೆ ತಿಳಿಸಿದೆ ಎಂದು ಕುಮಾರ್ ತಿಳಿಸಿದರು.



ಜನಾರ್ದನ ರೆಡ್ಡಿ ಆಂಧ್ರಪ್ರದೇಶ ಹಾಗೂ ಕರ್ನಾಟಕ ಎರಡೂ ಕಡೆ ಆರೋಪ ಎದುರಿಸುತ್ತಿರುವುದರಿಂದ ಸಿಬಿಐ ಹೇಳಿಕೆಯನ್ನು ಮೊದಲು ಪರಿಶೀಲಿಸುತ್ತೇವೆ. ಆನಂತರ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು.



ಓಬಳಾಪುರಂ ಅಕ್ರಮ ಗಣಿಗಾರಿಕೆ ಹಗರಣಕ್ಕೆ ಸಂಬಂಧಿಸಿ ಆಂಧ್ರಪ್ರದೇಶ ಹೈಕೋರ್ಟ್ ತಮಗೆ ಮತ್ತು ತಮ್ಮ ಭಾವ ಬಿ.ವಿ. ಶ್ರೀನಿವಾಸ ಅವರಿಗೆ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ರೆಡ್ಡಿ ಅವರು ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry