ರೆಡ್ಡಿ ಜಾಮೀನಿಗೆ 100 ಕೋಟಿ ಆಮಿಷ: ನ್ಯಾಯಾಧೀಶ ತಪ್ಪೊಪ್ಪಿಗೆ

ಸೋಮವಾರ, ಜೂಲೈ 22, 2019
26 °C

ರೆಡ್ಡಿ ಜಾಮೀನಿಗೆ 100 ಕೋಟಿ ಆಮಿಷ: ನ್ಯಾಯಾಧೀಶ ತಪ್ಪೊಪ್ಪಿಗೆ

Published:
Updated:

ಹೈದರಾಬಾದ್:  ಕರ್ನಾಟಕದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಜಾಮೀನು ಪಡೆಯಲು ರೂ. 100 ಕೋಟಿಗಳಷ್ಟು ಲಂಚ ನೀಡಲು ಸಿದ್ಧರಿದ್ದರು ಎಂದು, `ಜಾಮೀನಿಗಾಗಿ ಲಂಚ~ ಪ್ರಕರಣದ ಆಪಾದನೆ ಮೇಲೆ ಅಮಾನತುಗೊಂಡಿರುವ ಜಿಲ್ಲಾ ನ್ಯಾಯಾಧೀಶ ಲಕ್ಷ್ಮೀನರಸಿಂಹ ರಾವ್ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದರಿಂದ ರೆಡ್ಡಿ ಬಿಡುಗಡೆಗಾಗಿ ಆಂಧ್ರಪ್ರದೇಶದ ಅನೇಕ ನ್ಯಾಯಾಧೀಶರು ಭಾಗಿಯಾಗ್ದ್ದಿದಾರೆ ಎನ್ನಲಾದ ಲಂಚ ಪ್ರಕರಣದ ಮೊತ್ತವು ಕೇವಲ ರೂ. 10- 20 ಕೋಟಿಗಳ ಬಾಬತ್ತಾಗಿರಲಿಲ್ಲ ಎಂಬುದು ಬಹಿರಂಗಗೊಂಡಿದೆ.

ರೆಡ್ಡಿ ಅವರನ್ನು ಜಾಮೀನಿನ ಮೇಲೆ ಹೊರತರಲೇಬೇಕು ಎಂದು ಶತಾಯಗತಾಯ ಪ್ರಯತ್ನಿಸುತ್ತಿದ್ದ ರೆಡ್ಡಿ ನಿಕಟವರ್ತಿಗಳು ಈ ಉದ್ದೇಶಕ್ಕೆ ರೂ. 100 ಕೋಟಿ ಬೇಕಾದರೂ ನೀಡಲು ಸಿದ್ಧರಾಗಿದ್ದರು. ರೆಡ್ಡಿ ಸಂಬಂಧಿ ದಶರಥರಾಮಿ ರೆಡ್ಡಿ ಎಂಬುವವರು ನೂರು ಕೋಟಿ ರೂಪಾಯಿಗಳ ಆಮಿಷ ಒಡ್ಡಿ, ಜಾಮೀನು ಅರ್ಜಿಯನ್ನು ಹೇಗಾದರೂ ಮಾಡಿ ವಿಚಾರಣೆಗೆ ಬರುವಂತೆ ನೋಡಿಕೊಳ್ಳಿ ಎಂಬ ಕೋರಿಕೆ ಮುಂದಿಟ್ಟಿದ್ದರು ಎಂದು   ಪ್ರಕರಣದ ತನಿಖೆ ನಡೆಸುತ್ತಿರುವ ಆಂಧ್ರ ಪ್ರದೇಶ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮುಂದೆ ಲಕ್ಷ್ಮೀನರಸಿಂಹ ರಾವ್ ಹೇಳಿದ್ದಾರೆ.

ಮುಖ್ಯಾಂಶಗಳು

ಜನಾರ್ದನ ರೆಡ್ಡಿ ನಿಕಟವರ್ತಿಗಳ ಶತಾಯ ಗತಾಯ ಪ್ರಯತ್ನ

ಭ್ರಷ್ಟಾಚಾರ ನಿಗ್ರಹ ದಳದ ಬಳಿ ಸಾಕಷ್ಟು ಪುರಾವೆ

ಬಾಲ್ಯದ ಗೆಳೆಯ ಚಲಪತಿ ಮಾತಿಗೆ ಕೊನೆಗೂ ಮನಸ್ಸು ಬದಲಿಸಿದ ಪಟ್ಟಾಭಿರಾಮ ರಾವ್

ರೆಡ್ಡಿ ನಿಕಟವರ್ತಿಗಳು ಮೊದಲಿಗೆ ಲಕ್ಷ್ಮೀನರಸಿಂಹ ರಾವ್ ಅವರ ಮೂಲಕ ಸಿಬಿಐ ವಿಶೇಷ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ನಾಗ ಮಾರುತಿ ಶರ್ಮಾ ಅವರಿಗೆ ಆಮಿಷ ಒಡ್ಡುವ ಪ್ರಯತ್ನ ನಡೆಸಿದ್ದರೆಂಬುದಕ್ಕೆ `ಎಸಿಬಿ~ ಬಳಿ ಸಾಕಷ್ಟು ಪುರಾವೆಗಳಿವೆ. ಆದರೆ, ನಾಗ ಮಾರುತಿ ಶರ್ಮಾ ಆ ಹಂತದಲ್ಲಿ ಆಮಿಷ ತಿರಸ್ಕರಿಸಿದ್ದರು.

ಈ ಸಂದರ್ಭದಲ್ಲೇ ಆಂಧ್ರ ಹೈಕೋರ್ಟ್ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿತ್ತು. ನಾಗ ಮಾರುತಿ ಶರ್ಮಾ ವರ್ಗವಾದ ಮೇಲೆ ಆ ಸ್ಥಾನಕ್ಕೆ ನ್ಯಾಯಾಧೀಶ ಪಟ್ಟಾಭಿರಾಮ ರಾವ್ ಅವರನ್ನು ನಿಯೋಜಿಸಲಾಯಿತು. ಆದರೆ, ನಾಗ ಮಾರುತಿ ಶರ್ಮಾ ಅವರೇ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕು ಎಂದು ಜನಾರ್ದನ ರೆಡ್ಡಿ ಅರ್ಜಿ ಸಲ್ಲಿಸಿದ್ದರು.

ನಂತರ, ಪಟ್ಟಾಭಿ ಅವರ ಮೇಲೆ ಲಂಚದ ಬಲೆ ಬೀಸಲು ರೆಡ್ಡಿ ಆಪ್ತರು ನ್ಯಾಯಾಧೀಶ ಪ್ರಭಾಕರ ರಾವ್ ಅವರನ್ನು ಅವಲಂಬಿಸಿದರು. ಆಗ ಪಟ್ಟಾಭಿಅವರು ಅದಕ್ಕೆ ಒಪ್ಪಲಿಲ್ಲ. ಆದರೆ, ಇದೇ ಆಮಿಷವು ತಮ್ಮ ಬಾಲ್ಯದ ಗೆಳೆಯ, ನಿವೃತ್ತ ನ್ಯಾಯಾಧೀಶ ಚಲಪತಿ ರಾವ್ ಮೂಲಕ ಬಂದಾಗ ಪಟ್ಟಾಭಿ ಮನಸ್ಸು ಬದಲಿಸಿದರು.

ಈ ಮಧ್ಯೆ, `ಎಸಿಬಿ~ ಅಧಿಕಾರಿಗಳು ನ್ಯಾ. ಲಕ್ಷ್ಮೀನರಸಿಂಹ ರಾವ್ ಅವರ ಮನೆ ಮೇಲೆ ದಾಳಿ ನಡೆಸಿ 82 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದರು. ಜೊತೆಗೆ ಇದೇ 11ರಂದು ತಪ್ಪೊಪ್ಪಿಗೆ ಹೇಳಿಕೆಯನ್ನೂ ಪಡೆದುಕೊಂಡಿದ್ದರು.

ಲಕ್ಷ್ಮೀನರಸಿಂಹ ರಾವ್ ಮತ್ತು ಮಧ್ಯವರ್ತಿ ಸೂರ್ಯ ಪ್ರಕಾಶ್ ಅವರನ್ನು ತಮ್ಮ ವಶಕ್ಕೆ ಪಡೆಯಲು `ಎಸಿಬಿ~ ಸಲ್ಲಿಸಿರುವ ಅರ್ಜಿ ವಿಚಾರಣೆ ಶುಕ್ರವಾರ ಮುಗಿದಿದ್ದು, ನ್ಯಾಯಾಲಯವು ಆದೇಶವನ್ನು ಶನಿವಾರಕ್ಕೆ ಕಾಯ್ದಿರಿಸಿದೆ.

ಅಧ್ಯಯನ ಸಮಿತಿಯ ಅವಧಿ ವಿಸ್ತರಣೆ

ನವದೆಹಲಿ: ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ಅಧ್ಯಯನ ನಡೆಸಲು ರಚಿಸಲಾಗಿದ್ದ ನ್ಯಾಯಮೂರ್ತಿ ಎಂ.ಬಿ. ಷಾ ಸಮಿತಿಯ ಅಧಿಕಾರಾವಧಿಯನ್ನು ಕೇಂದ್ರ ಸರ್ಕಾರ ಮತ್ತೆ ಒಂದು ವರ್ಷ ವಿಸ್ತರಿಸಿದೆ. ಅಕ್ರಮ ಗಣಿಗಾರಿಕೆ ಕುರಿತು ವರದಿ ನೀಡಲು ನಿಗದಿ ಪಡಿಸಿದ್ದ ಗಡುವಿನೊಳಗಾಗಿ ವರದಿ ಸಲ್ಲಿಸಲು ಈ ಸಮಿತಿ ವಿಫಲವಾಗಿತ್ತು.

ಷಾ ಸಮಿತಿಯ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸುವ ಪ್ರಸ್ತಾವಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಸಮಿತಿಯನ್ನು ಕಳೆದ ನವೆಂಬರ್ 22ಕ್ಕೆ ರಚಿಸಲಾಗಿತ್ತು. ಜುಲೈ 16ರ ಒಳಗಾಗಿ ಸಮಿತಿ ತನ್ನ ವರದಿ ಸಲ್ಲಿಸಬೇಕಿತ್ತು. ಕರ್ನಾಟಕ, ಒಡಿಶಾ, ಜಾರ್ಖಂಡ್, ಛತ್ತೀಸ್‌ಗಡ, ಆಂಧ್ರಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಗುರುತಿಸಲು, ಆಡಳಿತ ಮಂಡಳಿ, ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಗಳ್ಲ್ಲಲಿನ ಲೋಪಗಳನ್ನು ಸರಿಪಡಿಸುವುವ ಸಂಬಂಧ ಸಲಹೆ ನೀಡುವುದಕ್ಕಾಗಿ ಈ ಸಮಿತಿ ರಚಿಸಲಾಗಿತ್ತು.

`ರಾಷ್ಟ್ರದ ಪ್ರಮುಖ ಏಳು ಅದಿರು ಉತ್ಪಾದಕ ರಾಜ್ಯಗಳಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಿತಿಯು ಮಾಹಿತಿಗಳನ್ನು ಕಲೆ ಹಾಕುತ್ತಿದೆ.  ಈ ಮಾಹಿತಿಯು ಹಲವು ಸಂಪುಟಗಳಷ್ಟು ಅಪಾರವಾಗಿರುವುದರಿಂದ ಅಧಿಕಾರಾವಧಿ ವಿಸ್ತರಿಸುವಂತೆ ಮನವಿ ಮಾಡಲಾಗಿತ್ತು~ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry