ಮಂಗಳವಾರ, ಜೂನ್ 15, 2021
26 °C

ರೆಡ್ಡಿ ಪ್ರಕರಣ: ನ್ಯಾಯಾಧೀಶರನ್ನು ಕಂಡ ಸಿಬಿಐ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಹೆಚ್ಚಿನ ತನಿಖೆಗಾಗಿ ಸಿಬಿಐ ವಶಕ್ಕೆ ಒಪ್ಪಿಸಿ ಸಿಬಿಐ ವಿಶೇಷ ಕೋರ್ಟ್ ಆದೇಶ ಹೊರಡಿಸುವ ಮುನ್ನ, ಸಿಬಿಐ ಅಧಿಕಾರಿಗಳು ನ್ಯಾಯಾಧೀಶರನ್ನು ಭೇಟಿಯಾಗಿದ್ದರು ಎಂಬ ಅಂಶ ಹೈಕೋರ್ಟ್‌ನಲ್ಲಿ ಗುರುವಾರ `ಬಿಸಿ~ ವಾತಾವರಣ ಸೃಷ್ಟಿಸಿತು.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆಗಾಗಿ ರೆಡ್ಡಿ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿರುವ ವಿವಾದ ಇದಾಗಿದೆ. ವಿಶೇಷ ಕೋರ್ಟ್‌ನ ಈ ಆದೇಶವನ್ನು ರೆಡ್ಡಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.ರೆಡ್ಡಿ ಅವರ ವಿರುದ್ಧ ಆದೇಶ ಹೊರಡುವ ಮುನ್ನ, ಸಿಬಿಐನ ಡಿಐಜಿ ಸೇರಿದಂತೆ ಇತರ ಅಧಿಕಾರಿಗಳು ನ್ಯಾಯಾಧೀಶರನ್ನು ಭೇಟಿ ಮಾಡಿ ಕೆಲವು ಕಾಲ ಚರ್ಚಿಸಿ ಹೊರಬಂದಿದ್ದರು ಎಂಬ ಬಗ್ಗೆ ರೆಡ್ಡಿ ಪರ ವಕೀಲ ಸಿ.ವಿ.ನಾಗೇಶ್ ನ್ಯಾಯಮೂರ್ತಿ ಎನ್.ಆನಂದ ಅವರ ಗಮನ ಸೆಳೆದರು.`ಪೊಲೀಸ್ ಅಧಿಕಾರಿಗಳು ನ್ಯಾಯಾಧೀಶರ ಬಳಿ ಏನು ಮಾತನಾಡಿದರು ಎನ್ನುವುದು ಮುಖ್ಯವಲ್ಲ. ಆದರೆ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವಾಗ ನ್ಯಾಯಾಧೀಶರ ಜೊತೆ ಕುಳಿತು ಚಹ, ಕಾಫಿ ಸೇವನೆ ಮಾಡುವುದು ಎಂದರೆ ಏನರ್ಥ~ ಎಂದು ನಾಗೇಶ್ ವಾದಿಸಿದರು.ಈ ಕುರಿತು ಹಾಜರು ಇದ್ದ ಡಿಐಜಿ ಆರ್.ಹಿತೇಂದ್ರ ಅವರನ್ನು ನ್ಯಾಯಮೂರ್ತಿಗಳು ಪ್ರಶ್ನಿಸಿದಾಗ, ಮೌನವೇ ಅವರ ಉತ್ತರವಾಯಿತು. ಇದು ನ್ಯಾಯಮೂರ್ತಿಗಳ ಕೋಪಕ್ಕೆ ಕಾರಣವಾಯಿತು.ಹೈಕೋರ್ಟ್ ಕಿಡಿ: `ಪ್ರಕರಣ ಇತ್ಯರ್ಥಕ್ಕೆ ಬಾಕಿ ಇರುವಾಗ ನ್ಯಾಯಾಧೀಶರನ್ನು ನೀವು ಯಾವ ಅಧಿಕಾರದಿಂದ ಭೇಟಿ ಆಗಿದ್ದೀರಿ,  ನಿಮ್ಮಂಥ ಅಧಿಕಾರಿಗಳು ಈ ರೀತಿ ನಡೆದುಕೊಂಡರೆ ಕಕ್ಷಿದಾರರಿಗೆ ನ್ಯಾಯಾಲಯದ ಮೇಲಿರುವ ಗೌರವ ಏನಾಗಬೇಕು~ ಎಂದು  ನ್ಯಾಯಮೂರ್ತಿಗಳು ಪ್ರಶ್ನಿಸಿದರು.`ಇದೇ ಕೊನೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಧೀಶರನ್ನು ಭೇಟಿ ಆಗಬಾರದು ಎಂದು ಸುತ್ತೋಲೆ ಹೊರಡಿಸಲಾಗುವುದು. ಇನ್ನು ಮುಂದೆ ಈ ರೀತಿ ಮಾಡಿದರೆ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ~ ಎಂದು ಅವರು ಎಚ್ಚರಿಕೆ ನೀಡಿದರು.ತಂದೆ ಆಕ್ಷೇಪ: `ಸಿಬಿಐ ಅಧಿಕಾರಿಗಳು ನ್ಯಾಯಾಧೀಶ  ಬಿ.ಎಂ. ಅಂಗಡಿ ಅವರನ್ನು ಭೇಟಿ ಮಾಡಿರುವ ಬಗ್ಗೆ ರೆಡ್ಡಿ ಅವರ ಜೊತೆ ಸಹ ಆರೋಪಿಯಾಗಿರುವ ಅಲಿ ಖಾನ್ ಅವರ ತಂದೆ ಆಕ್ಷೇಪ ವ್ಯಕ್ತಪಡಿಸಿದರು. ಅವರು ಭೇಟಿಯಾಗಿದ್ದು ಏತಕ್ಕೆ ಎಂದು ನ್ಯಾಯಾಧೀಶರನ್ನು ಪ್ರಶ್ನಿಸಿದಾಗ ಅವರು `ನಾಳೆ ಹೇಳುವೆ~ ಎಂಬ ಉತ್ತರ ನೀಡಿದರು. ಅದಾದ ನಂತರ ರೆಡ್ಡಿ ವಿರುದ್ಧ ಆದೇಶ ಹೊರಬಿದ್ದಿದೆ~ ಎಂದು ನಾಗೇಶ್ ವಾದಿಸಿದರು.ಅಧಿಕಾರಿಗಳು ಭೇಟಿಯಾಗಿರುವ ಬಗ್ಗೆ ತಮ್ಮ ಬಳಿ ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯ ಕೂಡ ಇದೆ ಎಂದು ಅವರು ವಿವರಿಸಿದರು.ರೆಡ್ಡಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ನ್ಯಾಯಮೂರ್ತಿಗಳು ಕಾಯ್ದಿರಿಸಿದರು.  ಆದೇಶದ ಪುಟ ನಾಪತ್ತೆ! ಜನಾರ್ದನ ರೆಡ್ಡಿ ಹಾಗೂ ಸಹ ಆರೋಪಿ ಮೆಹಫೂಜ್ ಅಲಿ ಖಾನ್ ಕುರಿತಾಗಿ ಹೊರಟ ಆದೇಶದ ಪ್ರತಿಗಳಲ್ಲಿ ವ್ಯತ್ಯಾಸಗಳು ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿಗಳು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ರಿಜಿಸ್ಟ್ರಾರ್ ಜನರಲ್ ಅವರಿಗೆ ನಿರ್ದೇಶಿಸಿದರು.ರೆಡ್ಡಿ ಪರ ವಕೀಲರು ಪಡೆದ ಆದೇಶದ ಪ್ರತಿಯಲ್ಲಿ ಖಾನ್ ಅವರಿಗೆ ವಾರೆಂಟ್ ಆಗಿರುವ ಬಗ್ಗೆ  ಉಲ್ಲೇಖವಿರಲಿಲ್ಲ. ಆದರೆ ಸಿಬಿಐ ಪರ ವಕೀಲರು ಪಡೆದಿರುವ ಅದೇ ಆದೇಶದ ಪ್ರತಿಯಲ್ಲಿನ ಒಂದು ಪುಟದಲ್ಲಿ ಇದು ಉಲ್ಲೇಖಗೊಂಡಿತ್ತು. ಇದು ಹೇಗೆ ಸಾಧ್ಯ, ಎಲ್ಲಿ ಏನು ನಡೆದಿದೆ ಎಂಬ ಬಗ್ಗೆ ಪರಿಶೀಲಿಸುವಂತೆ ನ್ಯಾ.ಆನಂದ್ ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.