ರೆಡ್ಡಿ ವಿರುದ್ಧ ಸ್ಪರ್ಧೆ: ಟಪಾಲ್ ಗಣೇಶ್

7

ರೆಡ್ಡಿ ವಿರುದ್ಧ ಸ್ಪರ್ಧೆ: ಟಪಾಲ್ ಗಣೇಶ್

Published:
Updated:

ಬಳ್ಳಾರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಸ್ಪರ್ಧೆಗೆ ಇಳಿದಲ್ಲಿ ಅವರ ವಿರುದ್ಧ ಸ್ಪರ್ಧಿಸುವುದಾಗಿ ಗಣಿ ಉದ್ಯಮಿ ಟಪಾಲ್ ಗಣೇಶ್ ಘೊಷಿಸಿದ್ದಾರೆ.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, `ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದಿರುವ ರೆಡ್ಡಿ ಸಹೋದರರ ಬಗ್ಗೆ ಪ್ರಜ್ಞಾವಂತ ಮತದಾರರಿಗೆ ಅರಿವಿದೆ. ಒಂದೊಮ್ಮೆ ಜನಾರ್ದನ ರೆಡ್ಡಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಖಂಡಿತ ಅವರ ವಿರುದ್ಧ ಸ್ಪರ್ಧೆಗಿಳಿದು, ಜನರಿಗೆ ಅವರ ಕುಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಿ, ಭ್ರಷ್ಟರನ್ನು ತಿರಸ್ಕರಿಸುವಂತೆ ಕೋರುವೆ' ಎಂದರು.

`ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದಿಂದ ಜಿ.ಸೋಮಶೇಖರ ರೆಡ್ಡಿ ಸ್ಪರ್ಧೆಗಿಳಿದರೆ, ಅವರ ವಿರುದ್ಧ ಕಣಕ್ಕಿಳಿಯಲು ಈ ಮೊದಲು ನಿರ್ಧರಿಸಿದ್ದೆ. ಆದರೆ, ಇದೀಗ ಜನಾರ್ದನ ರೆಡ್ಡಿ  ವಿರುದ್ಧವೂ ಸ್ಪರ್ಧಿಸುವ ಮೂಲಕ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ' ಎಂದರು.

ಅಕ್ರಮ ಗಣಿಗಾರಿಕೆಯಿಂದ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆದಿರುವ ಜನಾರ್ದನ ರೆಡ್ಡಿ, ಕಳೆದ ವರ್ಷವೇ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದರೂ ಹಣದ ಬಲದಿಂದ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗುವುದು ಎಂದರು.

ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದನ್ನು ಇದುವರೆಗೆ ತೀರ್ಮಾನಿಸಿಲ್ಲ. ಆದರೆ, ಶೀಘ್ರವೇ ನವದೆಹಲಿಗೆ ತೆರಳಿ, ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಸುತ್ತಿರುವ ಅಣ್ಣಾ ಹಜಾರೆ ಹಾಗೂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿರುವ ಜನಸಂಗ್ರಾಮ ಪರಿಷತ್‌ನ ಸಲಹೆಯ ಮೇರೆಗೆ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry