ಬುಧವಾರ, ಅಕ್ಟೋಬರ್ 16, 2019
21 °C

ರೆಡ್ಡಿ ಸಹೋದರರನ್ನು ಬಿಜೆಪಿಯಿಂದ ಉಚ್ಚಾಟಿಸಿ: ಟಪಾಲ್

Published:
Updated:

ಬಳ್ಳಾರಿ: ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ, ಅವರ ಸೋದರರು ಹಾಗೂ ಆಪ್ತರನ್ನು ಬಿಜೆಪಿಯಿಂದ ಉಚ್ಚಾಟಿಸಬೇಕು ಎಂದು ಇತ್ತೀಚೆಗಷ್ಟೇ ನಡೆದ ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ವೇಳೆ ಪಕ್ಷಕ್ಕೆ ಸೇರ್ಪಡೆ ಆಗಿರುವ ಗಣಿ ಉದ್ಯಮಿ ಟಪಾಲ್ ಗಣೇಶ್ ಆಗ್ರಹಿಸಿದರು.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪಕ್ಷದ ವರ್ಚಸ್ಸನ್ನು ಹಾಳುಗೆಡವಿರುವ ಜನಾರ್ದನರೆಡ್ಡಿ ಅವರನ್ನು ಭೇಟಿ ಮಾಡಲು ಹೈದರಾಬಾದ್‌ನ ಚಂಚಲಗುಡ ಕಾರಾಗೃಹಕ್ಕೆ ತೆರಳುವುದಾಗಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದು ವಿಷಾದನೀಯ ಎಂದರು.ಪಕ್ಷವು ಒಂದೊಮ್ಮೆ ರೆಡ್ಡಿ ಸಹೋದರರನ್ನು ಓಲೈಸಿದಲ್ಲಿ ತಾವು ಪಕ್ಷ ತ್ಯಜಿಸುವುದಾಗಿ ತಿಳಿಸಿದರು. ಅಕ್ರಮ ಗಣಿಗಾರಿಕೆಯಿಂದ ಹಣ, ಅಧಿಕಾರ ಗಳಿಸಿರುವ ಜನಾರ್ದನರೆಡ್ಡಿ ಅಕ್ರಮ ನಡೆಸಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ, ಸಿಬಿಐನ ಷಡ್ಯಂತ್ರದಿಂದಾಗಿ ಜನಾರ್ದನ ರೆಡ್ಡಿ ಬಂಧನವಾಗಿದೆ ಎಂದು ರೇಣುಕಾಚಾರ್ಯ ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆ ನೀಡುವ ಪಕ್ಷದ ಮುಖಂಡರು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.`ರಾಜ್ಯದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿ ಜೈಲು ಸೇರಿರುವ ಜನಾರ್ದನರೆಡ್ಡಿ ಮತ್ತವರ ಸಹೋದರರನ್ನು ಪಕ್ಷದಿಂದ ಕಿತ್ತೆಸೆಯಬೇಕು. ಅಕ್ರಮ ಗಣಿಗಾರಿಕೆ ವಿರುದ್ಧ ಪಕ್ಷಾತೀತವಾಗಿ ಹೋರಾಟ ಮಾಡಿಕೊಂಡು ಬಂದಿದ್ದ ನನ್ನನ್ನು ಉಪ ಚುನಾವಣೆ ವೇಳೆ ಸಂಪರ್ಕಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ಅಕ್ರಮ ಗಣಿಗಾರಿಕೆ ನಡೆಸಿದ ರೆಡ್ಡಿ ಸಹೋದರರು ಪಕ್ಷದಿಂದ ದೂರವಿದ್ದು, ಉತ್ತಮ ಆಡಳಿತಕ್ಕಾಗಿ ನೀವು ಪಕ್ಷ ಸೇರಬೇಕು ಎಂದು ಮನವಿ ಮಾಡಿಕೊಂಡಿದ್ದರಿಂದ ಬಿಜೆಪಿ ಸೇರಿದ್ದೇನೆ. ಇದೀಗ ಮತ್ತೆ ರೆಡ್ಡಿ ಸಹೋದರರಿಗೆ ಮಣೆ ಹಾಕಿದರೆ ಪಕ್ಷದಲ್ಲಿ ಮುಂದುವರಿಯುವುದಿಲ್ಲ~ ಎಂದರು.ಬಳ್ಳಾರಿ ಜಿಲ್ಲೆಯ 16 ಗಣಿ ಕಂಪೆನಿಗಳ ಗಡಿ ಗುರುತು ಬದಲಿಸಿ ಸಾವಿರಾರು ಕೊಟಿ ರೂಪಾಯಿ ಮೌಲ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿದ ಬಗ್ಗೆ ಜನಾರ್ದನರೆಡ್ಡಿ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ, ಸಚಿವ ರೇಣುಕಾಚಾರ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗಾಗಿ ರೆಡ್ಡಿಯ ಸಹಕಾರ ಕೋರಲು ಹೋದಲ್ಲಿ ಅಂದೇ ಬಿಜೆಪಿ ತೊರೆದು, ಅಕ್ರಮ ಗಣಿಗಾರಿಕೆ ವಿರುದ್ಧದ ಹೋರಾಟ ಮುಂದುವರಿಸುವುದಾಗಿ ಹೇಳಿದರು.

Post Comments (+)