ಭಾನುವಾರ, ಮೇ 9, 2021
26 °C

ರೆಡ್ಡಿ ಸಹೋದರರಿಂದ ಹೊಸ ಪಕ್ಷ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯಲ್ಲಿ ಸ್ಥಾನ ಪಡೆದು, ಸಚಿವ ಸ್ಥಾನ ಕಳೆದುಕೊಂಡು ಹತಾಶಗೊಂಡಿರುವ ಬಳ್ಳಾರಿಯ ರೆಡ್ಡಿ ಸೋದರರು ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಲಿದ್ದಾರೆಯೇ?ಈ ಪ್ರಶ್ನೆಗೆ ಬಿಜೆಪಿಯ ಹಾಗೂ ರೆಡ್ಡಿ ಸೋದರರ ಆಪ್ತ ವಲಯ  `ಹೌದು~ ಎನ್ನುವ ಉತ್ತರ ನೀಡುತ್ತಿದೆ.

ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಓಬಳಾಪುರಂ ಮೈನಿಂಗ್ ಕಂಪೆನಿ (ಓಎಂಸಿ) ಜತೆ ಯಾವುದೇ ನಂಟು ಹೊಂದಿರದ ಬಿ.ಶ್ರೀರಾಮುಲು ಹಾಗೂ ಜಿ. ಕರುಣಾಕರ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕೋರಿದ್ದ ಜನಾರ್ದನರೆಡ್ಡಿ, ಇದೀಗ ಸೆ. 5ರಂದು ಶ್ರೀರಾಮುಲು ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ, ಅಂದೇ ಬಿಎಸ್‌ಆರ್ (ಬಿ. ಶ್ರೀರಾಮುಲು) ಪಕ್ಷವನ್ನು ಘೋಷಿಸಲಿದ್ದಾರೆ ಎಂದು ಪಕ್ಷದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಕೆಲವು ತಿಂಗಳುಗಳ ಹಿಂದೆ `ತಾಯಿ~ ಸುಷ್ಮಾ ಸ್ವರಾಜ್ ಅವರ ಅವಕೃಪೆಗೆ ಒಳಗಾಗಿರುವ ರೆಡ್ಡಿ ಸೋದರರು, ವರಮಹಾಲಕ್ಷ್ಮಿ ಹಬ್ಬದ ದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಕರೆಸಿ, ಮನವಿ ಮಾಡಿಕೊಂಡರೂ ಇಬ್ಬರಿಗೂ ಸಚಿವ ಸ್ಥಾನ ದೊರೆಯದ್ದರಿಂದ ಹತಾಶರಾಗಿದ್ದು, ಆಪ್ತ ಶಾಸಕರೊಂದಿಗೆ ಸಾಮೂಹಿಕ ರಾಜೀನಾಮೆ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.ಗುರುವಾರ ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಯ ಕೆಲವು ಸದಸ್ಯರನ್ನು ಆಹ್ವಾನಿಸಿ, ಹೊಸ ಪಕ್ಷ ಸ್ಥಾಪನೆಯ ಇಂಗಿತ ವ್ಯಕ್ತಪಡಿಸಿದ್ದಲ್ಲದೆ, ಸಹಕಾರವನ್ನೂ ಕೋರಿದ್ದಾರೆ ಎಂದು ತಿಳಿದುಬಂದಿದೆ.ಸೆ. 5ರಂದು ಸೋಮವಾರ ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ವೇದಿಕೆ ಸಿದ್ಧಗೊಂಡಿದ್ದು, ಜಿಲ್ಲೆಯ ಕೆಲವು ಶಾಸಕರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿ ಸೋದರರ ನೆರವಿನಿಂದ ಟಿಕೆಟ್ ಗಿಟ್ಟಿಸಿಕೊಂಡು ಶಾಸಕರಾಗಿರುವ ಈ ಭಾಗದ ಕೆಲವರು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.ಆಂಧ್ರದಲ್ಲಿ ಜಗನ್‌ಮೋಹನ್ ರೆಡ್ಡಿ ಅವರು ತಮ್ಮ ತಂದೆ ವೈ.ಎಸ್. ರಾಜಶೇಖರ ರೆಡ್ಡಿ ಅವರ ಹೆಸರಲ್ಲೇ ವೈಎಸ್‌ಆರ್ ಕಾಂಗ್ರೆಸ್ ಹುಟ್ಟು ಹಾಕಿದಂತೆಯೇ ಬಳ್ಳಾರಿಯ ರೆಡ್ಡಿ ಸೋದರರು ಬಿಎಸ್‌ಆರ್ ಪಕ್ಷ ಹುಟ್ಟುಹಾಕಲು ಯತ್ನಿಸುತ್ತಿದ್ದಾರೆ. ಇದು ಬಿಜೆಪಿ ಮುಖಂಡರ ಮೇಲೆ ಒತ್ತಡ ಹೇರುವ ತಂತ್ರವೂ ಆಗಿರಬಹುದು ಎಂದೂ ಅದೇ ಮೂಲಗಳು ಸ್ಪಷ್ಟಪಡಿಸಿವೆ.`ಅಧಿಕಾರ ಶಾಶ್ವತವಲ್ಲ, ಜನರ ಪ್ರೀತಿ ಶಾಶ್ವತ~ ಎಂದೇ ಹೇಳುತ್ತ ಬಂದಿರುವ ಬಿ.ಶ್ರೀರಾಮುಲು, ಸಚಿವ ಸ್ಥಾನ ನೀಡದಿರುವ ಬಿಜೆಪಿ ಮುಖಂಡರ ಧೋರಣೆಯ ಬಗ್ಗೆ ತೀವ್ರ ಬೇಸರವಾಗಿದೆ ಎಂದು ತಿಳಿಸಿದ್ದು, ರಾಜಕೀಯವಾಗಿ ಮುನ್ನಡೆಯಲು ಪಕ್ಷ ಸ್ಥಾಪಿಸದೆ ವಿಧಿಯಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ ಎಂದೂ ತಿಳಿದುಬಂದಿದೆ.ಬಿಜೆಪಿಯ ಇತರೆ ಶಾಸಕರಾದ ಸಿರುಗುಪ್ಪದ ಎಂ.ಎಸ್. ಸೋಮಲಿಂಗಪ್ಪ, ಹೊಸಪೇಟೆಯ ಆನಂದ್  ಸಿಂಗ್,ಹಗರಿಬೊಮ್ಮನಹಳ್ಳಿಯ ನೇಮಿರಾಜ ನಾಯ್ಕ ಅವರು ಹೊಸ ಪಕ್ಷ ರಚನೆಗೆ ತಮ್ಮ ಸಮ್ಮತಿ ಸೂಚಿಸದೆ, ದೂರ ಉಳಿಯಲು ನಿರ್ಧರಿಸಿದ್ದಾರೆ.ಒಂದೊಮ್ಮೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದೇ ಆದರೆ, ಶಾಸಕ ಜಿ.ಸೋಮಶೇಖರರೆಡ್ಡಿ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನೂ, ಜನಾರ್ದನರೆಡ್ಡಿ ಅವರ ಆಪ್ತ ವಲಯದಲ್ಲಿರುವ ಸಿರಾಜ್‌ಶೇಖ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ.ಸಚಿವ ಸ್ಥಾನ ಕಳೆದುಕೊಂಡ ನಂತರ ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ರೆಡ್ಡಿ ಸಹೋದರರು  ಶ್ರೀರಾಮುಲು ಅವರನ್ನೇ ದಾಳವಾಗಿಸಿ, ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.ಪಕ್ಷವೊಂದನ್ನು ಹುಟ್ಟುಹಾಕಿ, ಚುನಾವಣೆಯಲ್ಲಿ ಕೆಲವು ಸ್ಥಾನ ಗಳಿಸುವ ಮೂಲಕ ಹೊಸ ಸರ್ಕಾರಕ್ಕೆ ಹತ್ತಿರವಾಗುವ ಹುನ್ನಾರ ಇದಾಗಿದೆ ಎನ್ನಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.