ಗುರುವಾರ , ಮೇ 6, 2021
33 °C

ರೆಡ್ಡಿ ಸ್ವಿಸ್ ಖಾತೆ ಪತ್ತೆ

ಪ್ರಜಾವಾಣಿ ವಾರ್ತೆ/ವಿ.ಎಸ್.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಳ್ಳಾರಿಯ ವಿವಿಧೆಡೆ ವ್ಯಾಪಕ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಅವರ `ಸ್ವಿಸ್' ಬ್ಯಾಂಕ್ ಖಾತೆ ಪತ್ತೆಹಚ್ಚುವಲ್ಲಿ ಸಿಬಿಐ ಯಶಸ್ವಿಯಾಗಿದೆ. ಈ ಖಾತೆಯಲ್ಲಿರುವ ಕಪ್ಪು ಹಣವನ್ನು ವಾಪಸು ದೇಶಕ್ಕೆ ತರಿಸುವ ಪ್ರಯತ್ನವನ್ನೂ ಆರಂಭಿಸಿದೆ.ಸ್ವಿಟ್ಜರ್‌ಲೆಂಡ್‌ನ ಝೂರಿಕ್‌ನಲ್ಲಿರುವ ಡ್ರೆಸ್ಡೆನರ್ ಬ್ಯಾಂಕ್‌ನಲ್ಲಿ ರೆಡ್ಡಿ ಮತ್ತು ಅವರ ಪತ್ನಿ ಖಾತೆಗಳನ್ನು ಹೊಂದಿದ್ದಾರೆ. ಸಂಯುಕ್ತ ಅರಬ್ ಸಂಸ್ಥಾನದ ಫುಜೈರಾದಲ್ಲಿ ರೆಡ್ಡಿ ದಂಪತಿ ಜಿಜೆಆರ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ಜಿಜೆಆರ್ ಅರ್ಥ್‌ಸ್ಟೋನ್ಸ್ ಲಿಮಿಟೆಡ್ ಎಂಬ ಕಂಪೆನಿಗಳನ್ನು ಸ್ಥಾಪಿಸಿದ್ದರು. ಈ ಕಂಪೆನಿಗಳ ಹೆಸರಿನಲ್ಲೇ `ಸ್ವಿಸ್' ಬ್ಯಾಂಕ್‌ನಲ್ಲಿ ಖಾತೆಗಳನ್ನು ತೆರೆದಿದ್ದರು ಎಂಬ ಸಂಗತಿ ಸಿಬಿಐ ತನಿಖೆಯಲ್ಲಿ ಬಯಲಿಗೆ ಬಂದಿದೆ.ಅಕ್ರಮ ಗಣಿಗಾರಿಕೆ ಮೂಲಕ ಗಳಿಸಿದ ನೂರಾರು ಕೋಟಿ ರೂಪಾಯಿಯನ್ನು `ಸ್ವಿಸ್' ಬ್ಯಾಂಕ್‌ಗೆ ವರ್ಗಾಯಿಸಿರುವ ಬಗ್ಗೆ ತನಿಖಾ ಸಂಸ್ಥೆಗೆ ಸುಳಿವು ಸಿಕ್ಕಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಪ್ಪುಹಣ ಬಚ್ಚಿಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಸ್ವಿಟ್ಜರ್ಲೆಂಡ್‌ನ ಮತ್ತಷ್ಟು ಖಾಸಗಿ ಬ್ಯಾಂಕ್‌ಗಳಲ್ಲೂ ರೆಡ್ಡಿ ದಂಪತಿ ಹಾಗೂ ಅವರ ನಿಕಟವರ್ತಿಗಳು ಖಾತೆಗಳನ್ನು ಹೊಂದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಈ ಬಗ್ಗೆಯೂ ಪರಿಶೀಲನೆ ನಡೆಸಲು ಸಿಬಿಐ ಯೋಚಿಸಿದೆ.ಹವಾಲಾ ಏಜೆಂಟ್ ಪತ್ತೆ: ರೆಡ್ಡಿ ಕುಟುಂಬ ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿರುವುದು ಹಾಗೂ `ಸ್ವಿಸ್' ಬ್ಯಾಂಕ್‌ನಲ್ಲಿ ಕಪ್ಪು ಹಣ ಬಚ್ಚಿಡುವಲ್ಲಿ ಹವಾಲಾ ಏಜೆಂಟರ ನೆರವು ಪಡೆದಿರುವ ಬಗ್ಗೆಯೂ ಸಿಬಿಐಗೆ ಮಹತ್ವದ ದಾಖಲೆಗಳು ದೊರೆತಿವೆ. ಭಾರತೀಯ ಮೂಲದ ಪಂಕಜ್‌ಕುಮಾರ್ ಷಾ ಎಂಬ ಹವಾಲಾ ಏಜೆಂಟ್,ರೆಡ್ಡಿ ದಂಪತಿಯ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಮಧ್ಯವರ್ತಿಯಾಗಿ ನೆರವಾಗಿರುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.2007ರಲ್ಲಿ ಜನಾರ್ದನ ರೆಡ್ಡಿ ಮತ್ತು ಲಕ್ಷ್ಮಿ ಅರುಣಾ, ಸಿಂಗಪುರದಲ್ಲಿನ ಜಿಎಲ್‌ಎ ಟ್ರೇಡಿಂಗ್ ಲಿಮಿಟೆಡ್ ಕಂಪೆನಿಯಲ್ಲಿ ಪಾಲುದಾರರಾಗಿ ಸೇರಿಕೊಂಡಿದ್ದರು. ಕೆಲವೇ ದಿನಗಳಲ್ಲಿ ಮೂಲ ಪ್ರವರ್ತಕರು ಕಂಪೆನಿಯಿಂದ ಹೊರಹೋಗಿದ್ದರು. ನಂತರ ಕಂಪೆನಿ ಸಂಪೂರ್ಣವಾಗಿ ರೆಡ್ಡಿ ಕುಟುಂಬದ ಸ್ವಾಧೀನಕ್ಕೆ ಬಂದಿತ್ತು. ಈ ಕಂಪೆನಿ ಮೂಲಕವೂ ರೆಡ್ಡಿ, `ಬ್ರಿಟಿಷ್ ವರ್ಜಿನ್ ಐಲ್ಯಾಂಡ್'ಗೆ ಕಪ್ಪುಹಣ ಸಾಗಿಸಿರುವುದು ತೆರಿಗೆ ಇಲಾಖೆಯ ತನಿಖೆಯಲ್ಲಿ ಪತ್ತೆಯಾಗಿತ್ತು. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಆಗಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ  ಈ ಸಂಗತಿಯನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.ನ್ಯೂಯಾರ್ಕ್ ಮೂಲಕ ಸ್ವಿಸ್‌ಗೆ: ಬಳ್ಳಾರಿಯ ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ರೆಡ್ಡಿ ಹೊಂದಿದ್ದ ಖಾತೆಯಿಂದಲೇ ಹಲವು ಬಾರಿ `ಸ್ವಿಸ್' ಬ್ಯಾಂಕ್‌ಗೆ ಹಣ ವರ್ಗಾವಣೆ ಮಾಡಲಾಗಿದೆ. ಆದರೆ, ತನಿಖಾ ಸಂಸ್ಥೆಗಳು ಹಾಗೂ ಆರ್ಥಿಕ ಬೇಹುಗಾರಿಕಾ ಕಣ್ಣು ತಪ್ಪಿಸಲು ನ್ಯೂಯಾರ್ಕ್‌ನ ಪ್ರಮುಖ ಬಹುರಾಷ್ಟ್ರೀಯ ಬ್ಯಾಂಕ್ ಒಂದನ್ನು ಮಧ್ಯವರ್ತಿಯಾಗಿ ಬಳಸಿಕೊಳ್ಳಲಾಗಿತ್ತು ಎಂಬುದೂ ಸಿಬಿಐ ತನಿಖೆಯ ವೇಳೆ ಬಯಲಿಗೆ ಬಂದಿದೆ.ಆ್ಯಕ್ಸಿಸ್ ಬ್ಯಾಂಕ್‌ನ ಖಾತೆಯಿಂದ ನ್ಯೂಯಾರ್ಕ್‌ನ ಬಹುರಾಷ್ಟ್ರೀಯ ಬ್ಯಾಂಕ್‌ನಲ್ಲಿ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಅಲ್ಲಿಂದ ಝೂರಿಕ್‌ನಲ್ಲಿರುವ ಡ್ರೆಸ್ಡೆನರ್ ಬ್ಯಾಂಕ್‌ನಲ್ಲಿರುವ ಖಾತೆಗೆ ವರ್ಗಾಯಿಸಲಾಗುತ್ತಿತ್ತು. ಈ ರೀತಿ ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾಯಿಸಲಾಗಿದೆ ಎಂಬುದನ್ನು ಖಚಿತಪಡಿಸುವ ದಾಖಲೆಗಳು ಸಿಬಿಐಗೆ ದೊರೆತಿವೆ.ಒಮ್ಮೆ ರೂ 65 ಕೋಟಿಗಳನ್ನು ರೆಡ್ಡಿ ಸ್ವಿಸ್ ಬ್ಯಾಂಕ್‌ಗೆ ವರ್ಗಾವಣೆ ಮಾಡಿದ್ದಾರೆ. ಈ ಮೊತ್ತದ ವರ್ಗಾವಣೆ  ಖಚಿತಪಡಿಸಿ ಡ್ರೆಸ್ಡೆನರ್ ಬ್ಯಾಂಕ್‌ನ ಅಧಿಕಾರಿಗಳು ರೆಡ್ಡಿ ಅವರಿಗೆ ಬರೆದ ಪತ್ರ ಹಾಗೂ ಅದನ್ನು ಸ್ವೀಕರಿಸಿ, ಮಾಜಿ ಸಚಿವರು ಬರೆದ ಪ್ರತಿಕ್ರಿಯೆಯ ಪ್ರತಿಗಳು ತನಿಖಾ ತಂಡಕ್ಕೆ ಲಭ್ಯವಾಗಿವೆ. ಈ ಬಗೆಯ ಮತ್ತಷ್ಟು ವಹಿವಾಟುಗಳು ನಡೆದಿರುವ ಸಾಧ್ಯತೆ ಕುರಿತು ಶೋಧ ಮುಂದುವರಿದಿದೆ.ಇತರೆ ಸಂಸ್ಥೆಗಳಿಂದಲೂ ತನಿಖೆ?: ರೆಡ್ಡಿ ಕುಟುಂಬದ ಅಂತರರಾಷ್ಟ್ರೀಯ ಆರ್ಥಿಕ ವಹಿವಾಟುಗಳ ಕುರಿತು ಜಾರಿ ನಿರ್ದೇಶನಾಲಯ, ಕಂದಾಯ ಗುಪ್ತಚರ ನಿರ್ದೇಶನಾಲಯ ಸೇರಿದಂತೆ ಕೇಂದ್ರದ ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸುವ ಸಾಧ್ಯತೆ ಇದೆ. ಅಕ್ರಮ ಹಣದ ವಹಿವಾಟು ನಡೆದಿರುವುದು ಖಚಿತವಾಗುತ್ತಿದ್ದಂತೆ ತನಿಖಾ ಸಂಸ್ಥೆಗಳು ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವುದು ಸಾಮಾನ್ಯ. ತಕ್ಷಣವೇ ಇ.ಡಿ ತನಿಖೆ ಕೈಗೆತ್ತಿಕೊಳ್ಳುತ್ತದೆ. ಈ ಪ್ರಕರಣದಲ್ಲೂ ಅಂತಹ ಸಾಧ್ಯತೆ ಇದೆ.ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಸಂತೋಷ್ ಹೆಗ್ಡೆ ಮತ್ತು ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಐಎಫ್‌ಎಸ್ ಅಧಿಕಾರಿ ಡಾ.ಯು.ವಿ.ಸಿಂಗ್ ಅವರು ರೆಡ್ಡಿ ಕುಟುಂಬ ಮತ್ತು ಅವರ ನಿಕಟವರ್ತಿಗಳು ಕಪ್ಪು ಹಣವನ್ನು ವಿದೇಶಗಳಲ್ಲಿ ಬಚ್ಚಿಟ್ಟಿರಬಹುದು ಎಂದು ತಮ್ಮ ವರದಿಗಳಲ್ಲೇ ಸಂಶಯ ವ್ಯಕ್ತಪಡಿಸಿದ್ದರು. ಕಬ್ಬಿಣದ ಅದಿರಿನ ನೈಜ ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಪ್ರಮಾಣದ ದರದಲ್ಲಿ ಅದಿರು ರಫ್ತು ಮಾಡಿದ್ದ ಬಗ್ಗೆಯೂ ಅನುಮಾನ ಹೊರಹಾಕಿದ್ದರು. ಸಿಬಿಐ ಈಗ ರೆಡ್ಡಿ ಕುಟುಂಬದ `ಸ್ವಿಸ್' ಬ್ಯಾಂಕ್ ಖಾತೆ ಪತ್ತೆಮಾಡಿರುವುದು ಲೋಕಾಯುಕ್ತರ ವರದಿ ಎತ್ತಿ ಹಿಡಿದಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.