ಗುರುವಾರ , ಫೆಬ್ರವರಿ 25, 2021
23 °C
ಹೂದಾನಿ

ರೆಡ್ ಕ್ಲೊವರ್ (ಕೆಂಪು ತ್ರಿದಳಪರ್ಣಿ ಹೂ)

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೆಡ್ ಕ್ಲೊವರ್ (ಕೆಂಪು ತ್ರಿದಳಪರ್ಣಿ ಹೂ)

ಮೊಟ್ಟೆಯಾಕಾರದ ರೆಡ್ ಕ್ಲೊವರ್ ಅಥವಾ ಕೆಂಪು ತ್ರಿದಳಪರ್ಣಿ ಹೂಗಳು ಅದೃಷ್ಟದ ಸಂಕೇತ ಎಂದು ಅನೇಕರು ಅಭಿಪ್ರಾಯಪಡುತ್ತಾರೆ. ಸಸ್ಯವಿಜ್ಞಾನಿಗಳು ಅದರ ಚಿಕಿತ್ಸಾ ಗುಣವನ್ನು ಮೆಚ್ಚುತ್ತಾರೆ. ನಿಸರ್ಗ ಪ್ರಿಯರಿಗೆ ಕಾಡಹಾದಿಗೆ ಮೆರುಗು ನೀಡುವ ಈ ಹೂಗಳನ್ನು ನೋಡುವುದೇ ಹಿತಾನುಭವ. ಮೂಲತಃ ಈ ಹೂವು ಯುರೋಪ್ ಹಾಗೂ ಏಷ್ಯಾದಲ್ಲಿ ಬೆಳೆದಂಥವು. ಕ್ರಮೇಣ ವಿಶ್ವದ ಬೇರೆ ಭಾಗಗಳಿಗೂ ಹರಡಿತು.ಅದರಲ್ಲೂ ಉತ್ತರ ಅಮೆರಿಕದಲ್ಲಿ ಹೆಚ್ಚಾಗಿಯೇ ವ್ಯಾಪಿಸಿತೆನ್ನಬೇಕು. ಮೀಡೊ ಕ್ಲೊವರ್, ಕೊವ್ ಕ್ಲೊವರ್, ಟ್ರೆಫೋಯಿಲ್ ಎಂದೂ ಈ ಹೂಗಳನ್ನು ಕರೆಯುತ್ತಾರೆ.

20ರಿಂದ 80 ಸೆಂ.ಮೀ. ಎತ್ತರ ಬೆಳೆಯುವ ತ್ರಿದಳಪರ್ಣಿ ಹೂಗಿಡದ ಆಯುಸ್ಸು ಕಡಿಮೆ. ವಸಂತ ಕಾಲದಲ್ಲಿ ಹೆಚ್ಚು ಹೂಗಳನ್ನು ಬಿಡುವ ಗಿಡವಿದು. ಕೊಳವೆಯಾಕಾರದ ಮೊಗ್ಗುಗಳು ಮೊದಲು ಬಿಡುತ್ತವೆ. ನೇರಳೆ ನಸುಗೆಂಪು ಮಿಶ್ರಿತ ಬಣ್ಣದವು.ಹೂಗಳ ವಿಚಿತ್ರ ಆಕಾರ ದುಂಬಿಗಳು ಪರಾಗಸ್ಪರ್ಶ ಮಾಡಲು ಕಷ್ಟವಾಗುವಂತಿವೆ. ಪರಾಗದ ಭಾಗ ತುಂಬಾ ಸಣ್ಣದಾಗಿ ಇರುವುದರಿಂದ ಅತಿ ಕಡಿಮೆ ಜೇನು ಅದರಲ್ಲಿ ಇರುತ್ತದೆ.ಈ ಗಿಡದ ಎಲೆಗಳೂ ಆಕರ್ಷಕ. ಮೂರು ಮೊಟ್ಟೆಯಾಕಾರದ ಭಾಗಗಳಿಂದ ಆದ ಒಂದು ಎಲೆಯ ಮಧ್ಯಭಾಗದಲ್ಲಿ ಬಿಳಿ ಬಣ್ಣದ ರಚನೆ ಇರುತ್ತದೆ. ಇದು ‘ವಿ’ ಆಕಾರದಲ್ಲಿ ಇದ್ದು, ಬೇರೆ ಪ್ರಭೇದದ ಹೂಗಳಿಗೂ ಕೆಂಪು ತ್ರಿದಳಪರ್ಣಿಗೂ ನಡುವಿನ ವ್ಯತ್ಯಾಸಕ್ಕೆ ಕನ್ನಡಿ ಹಿಡಿಯುತ್ತದೆ. ಈ ಹೂಗಳ ಔಷಧೀಯ ಗುಣಗಳ ಕುರಿತು ಅಧ್ಯಯನ ನಡೆಯುತ್ತಿದೆ. ವಿಟಮಿನ್ ಸಿ, ಕ್ಯಾಲ್ಷಿಯಂ ಮೊದಲಾದ ಅಂಶಗಳು ಅವುಗಳಲ್ಲಿ ಇವೆಯಂತೆ.ಪರಿಸರದಲ್ಲಿನ ಸಾರಜನಕದ ಅಂಶವನ್ನು ಹೀರಿಕೊಂಡು, ಅಕ್ಕಪಕ್ಕದ ಗಿಡಗಳಿಗೆ ರೆಡ್ ಕ್ಲೊವರ್ ಪೂರೈಸುತ್ತದೆಯಾದ್ದರಿಂದ ಇದನ್ನು ಸಹಾಯಕ ಬೆಳೆ ಎಂದೇ ರೈತರು ಭಾವಿಸಿದ್ದಾರೆ. ಇದರಿಂದ ಭೂಮಿಯ ಫಲವತ್ತತೆ ಹೆಚ್ಚುತ್ತದೆ. ಬ್ರೆಡ್, ಪ್ಯಾನ್‌ಕೇಕ್‌ಗಳ ತಯಾರಿಕೆಯಲ್ಲಿ ಹಾಗೂ ಸಲಾಡ್‌ಗಳಲ್ಲಿ ಈ ಹೂಗಳನ್ನು ಬಳಸುತ್ತಾರೆ. ಒಣಗಿಸಿದ ಕೆಂಪು ತ್ರಿದಳಪರ್ಣಿ ಹೂದಳಗಳನ್ನು ಚಹಾ ಮಾಡಲು ಉಪಯೋಗಿಸುವವರೂ ಇದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.