ಬುಧವಾರ, ಮೇ 19, 2021
27 °C

ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ಇಂದು ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್‌ಐವಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ `ರೆಡ್ ರಿಬ್ಬನ್ ಎಕ್ಸ್‌ಪ್ರೆಸ್~ ರೈಲು  ಎರಡನೇ ಬಾರಿಗೆ ಭಾನುವಾರ ನಗರಕ್ಕೆ ಆಗಮಿಸುತ್ತಿದ್ದು, 16 ಮತ್ತು 17 ರಂದು ಬೆಳಿಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಶಿವಾಜಿನಗರದ ದಂಡು ರೈಲ್ವೆ ನಿಲ್ದಾಣದಲ್ಲಿ ತಂಗಲಿದೆ.ಎಚ್‌ಐವಿ ತಡೆಗಟ್ಟುವ ಪ್ರಾಥಮಿಕ ಸೇವೆಗಳ ಬಗ್ಗೆ ಮಾಹಿತಿ ನೀಡುವುದು, ಸೋಂಕಿತ ವ್ಯಕ್ತಿಗಳ ಬಗ್ಗೆ ಇರುವ ಕಳಂಕ ಮತ್ತು ತಾರತಮ್ಯ ಹೋಗಲಾಡಿಸುವುದು. ಅಲ್ಲದೆ, ಆರೋಗ್ಯಕರ ಜೀವನ ವಿಧಾನ ರೂಪಿಸಿಕೊಳ್ಳುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿನ ಮುಖ್ಯ ಉದ್ದೇಶವಾಗಿದೆ ಎಂದು ನಗರ ಜಿಲ್ಲಾಧಿಕಾರಿ ಎಂ.ಕೆ. ಅಯ್ಯಪ್ಪ ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಈ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಒಟ್ಟು 8 ಬೋಗಿಗಳಿವೆ. ಒಂದರಿಂದ ನಾಲ್ಕನೇ ಬೋಗಿಗಳಲ್ಲಿ ವಸ್ತುಪ್ರದರ್ಶನವಿರುತ್ತದೆ. ಇದರಲ್ಲಿ ಎಚ್‌ಐವಿ/ ಏಡ್ಸ್ ಸಂಬಂಧಿಸಿದ ವಿಷಯಗಳು ಮತ್ತು ಆರೋಗ್ಯ ಮತ್ತು ಸ್ವಚ್ಛತೆ, ಜ್ವರ, ಟಿ.ಬಿ. ಹಾಗೂ ಇತರ ಸೇವೆಗಳ ಬಗ್ಗೆ ಅರಿವು ಮೂಡಿಸುವ ಸಾಮಗ್ರಿಗಳನ್ನು ಪ್ರದರ್ಶಿಸಲಾಗುತ್ತದೆ.ಐದನೇ ಬೋಗಿಯಲ್ಲಿ ವಿವಿಧ ಸಮುದಾಯಗಳೊಂದಿಗೆ ವಿಚಾರ ವಿನಿಮಯ ಹಾಗೂ ಪ್ರತಿ ಬಾರಿ 60 ಜನರಿಗೆ ತರಬೇತಿ ಇರುತ್ತದೆ.  6ನೇ ಬೋಗಿಯಲ್ಲಿ ಆಪ್ತ ಸಮಾಲೋಚನೆ ಮತ್ತು ವೈದ್ಯಕೀಯ ಸೇವೆ ಇರುತ್ತದೆ.

8ನೇ ಬೋಗಿಯಲ್ಲಿ ಕಚೇರಿ ಮತ್ತು ಊಟದ ವ್ಯವಸ್ಥೆ ಇರಲಿದೆ. ಈ ಬೋಗಿಗಳನ್ನು ವೀಕ್ಷಿಸಲು ಮುಕ್ತ ಅವಕಾಶವಿದೆ. ಸಾರ್ವಜನಿಕರು ಉಚಿತವಾಗಿ ರೈಲ್ವೆ ಪ್ಲಾಟ್ ಫಾರಂ ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ  ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.