ರೆಡ್ ರಿಬ್ಬನ್ ಪಡೆ; ಸೋಂಕಿಗೆ ತಡೆ

7

ರೆಡ್ ರಿಬ್ಬನ್ ಪಡೆ; ಸೋಂಕಿಗೆ ತಡೆ

Published:
Updated:

`ಅಲ್ಲಿಟ್ಟಿರುವ ಕಾಂಡೊಮ್ ಬಾಕ್ಸ್‌ನ ಮೇಲೆ ನನ್ನ ಫೋನ್   ನಂಬರ್ ಬರೆದಿದೆ. ಕಾಂಡೊಮ್‌ಗಾಗಿ ಬಂದವರು ಬಾಕ್ಸ್ ಖಾಲಿಯಾಗಿದ್ದರೆ ನನ್ನ ಮೊಬೈಲ್‌ಗೆ ಕರೆ ಮಾಡುತ್ತಾರೆ. ಆಮೇಲೆ ಅವರು ಎಲ್ಲಿರುತ್ತಾರೋ ಅಲ್ಲಿಗೆ ಹೋಗಿ ಕಾಂಡೊಮ್ ಕೊಟ್ಟು ಬರ್ತಿನಿ, ರಾತ್ರಿ ಎಷ್ಟು ಹೊತ್ತಾದರೂ ಸರಿ...~-ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕಾವಲಗಿರಿಯನಹಳ್ಳಿ ಅರ್ಥಾತ್ ಕೆ.ಜಿ. ಹಳ್ಳಿಯಲ್ಲಿರುವ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಗ್ರಾಮ ಆರೋಗ್ಯ ಮಾಹಿತಿ ಕೇಂದ್ರದಲ್ಲಿ ಕುಳಿತು ರೆಡ್ ರಿಬ್ಬನ್ ಕ್ಲಬ್ ಸದಸ್ಯ, ದ್ವಿತೀಯ ಪಿಯುಸಿ ವಿದ್ಯಾರ್ಥಿ ಮದನ್ ಹೇಳುತ್ತಾ ಹೋದ.ಆತ ಇದುವರೆಗೆ ನೂರಾರು ಮಂದಿಯ ಕರೆಗೆ ಓಗೊಟ್ಟಿದ್ದಾನೆ. ವಿಳಂಬ ಮಾಡದೆ ಕಾಂಡೊಮ್ ತಲುಪಿಸಿ ಬಂದಿದ್ದಾನೆ. ಆತ ಎಷ್ಟು ಕಾಂಡೊಮ್ ಕೊಟ್ಟಿರುವನೋ ಅಷ್ಟರ ಮಟ್ಟಿಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿರುವ ಕೂಲಿಕಾರರಿಗೆ, ವಲಸೆ ಬಂದವರಿಗೆ ಸೋಂಕಿನಿಂದ ರಕ್ಷಣೆ ದೊರೆತಿದೆ ಎಂದೇ ಭಾವಿಸಬೇಕು. ಏಕೆಂದರೆ ಆತನ ಬದ್ಧತೆಯೂ ಹಾಗೇ ಇದೆ: ಒಟ್ಟಿನಲ್ಲಿ ನಮ್ಮ ಹಳ್ಳಿಯ ಸುತ್ತಮುತ್ತ ಸೋಂಕು ಬರಬಾರದು, ಆದಷ್ಟೂ ಕಡಿಮೆಯಾಗಬೇಕು.ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ರಚಿಸಿರುವ ರೆಡ್ ರಿಬ್ಬನ್ ಕ್ಲಬ್‌ನ ಸ್ವಯಂಸೇವಕನಾಗಿ ಆತ ಮಾಡಿರುವ, ಮಾಡುತ್ತಿರುವ ಕೆಲಸವು ಆತನದೇ ವಯಸ್ಸಿನ ಯುವಕರು ಸಾಮಾನ್ಯವಾಗಿ ಮಾಡಲು ಹಿಂಜರಿಯುವಂತಹದು. ಹಾಗೆ ನೋಡಿದರೆ ಆರಂಭದಲ್ಲಿ ಆತನಿಗೆ ಏಡ್ಸ್ ಪದವೇ ಭಯಾನಕವಾಗಿತ್ತು. ಅದು ವಾಸಿಯಾಗದ ಕಾಯಿಲೆ ಎಂದೂ ಗೊತ್ತಿತ್ತು. 

ರಾತ್ರಿ ಎಂಟರಿಂದ ಹತ್ತು, ಹತ್ತೂವರೆವರೆಗೂ ಕಾಂಡೊಮ್ ಬೇಡಿಕೆ ಕರೆಗಳು ಬರುತ್ತವೆ. `ಕಾಂಡೊಮ್ ಬೇಕು ಸಾರ್ ತಂದ್ಕೊಡ್ತೀರಾ~ ಅಂತಾರೆ. ಅವರಿಗೆ ಎಲ್ಲಿ ಬೇಕೋ ಅಲ್ಲಿ ತಲುಪಿಸ್ತೀನಿ. ಮೊದಲು ಇದೇನು ಇಂಥ ಕೆಲಸ ಅನ್ನಿಸ್ತಿತ್ತು.

 

ಆದರೆ ನನ್ನ ಕೆಲಸದಿಂದ ಆಗುವ ಪ್ರಯೋಜನದ ಬಗ್ಗೆ ಕಲ್ಪಿಸಿಕೊಂಡಾಗ ಸಮಾಧಾನವಾಯಿತು. ಈಗ ತೃಪ್ತಿ ಇದೆ. ಇನ್ನೊಂದಿಷ್ಟು ಮಂದಿಗೂ ಈ ಕೆಲಸದ ಮಹತ್ವವನ್ನು ಹೇಳಬೇಕು ಅನ್ನಿಸ್ತಿದೆ ಎಂದು ಮೆಲುನಗೆ ನಕ್ಕ ಆತ.ಈ ವಿಷಯಕ್ಕೇ, ಕೋಲಾರದ ಮಹಿಳಾ ಸಮಾಜ ಕಾಲೇಜಿನ ಆತನ ಸಹಪಾಠಿಗಳು ಮೊದಲು ಆತನನ್ನು ಗೇಲಿ ಮಾಡಿದ್ದರು. ಮುಜುಗರ ವ್ಯಕ್ತಪಡಿಸಿದ್ದರು. ಆಮೇಲೆ ಅವರು ಕೇಳಿದ ಪ್ರಶ್ನೆಗಳಿಗೆ ಮದನ್ ಕೊಟ್ಟ ಉತ್ತರಗಳು ಅವರನ್ನು ಉತ್ತಮ ಗೆಳೆಯರನ್ನಾಗಿಸಿದವು.

 

ಈಗ ಸನ್ನಿವೇಶ ಪೂರ್ಣ ಬದಲಾಗಿದೆ. ಅವರೂ ಕೆಲವರಿಗೆ ಕಾಂಡೊಮ್ ಕೊಡುತ್ತಾರೆ. ಹೇಗೆ? ಬೇಕೆಂದವರು ಅವರಿಗೆ ಅಥವಾ ಮದನ್‌ಗೆ ಕರೆ ಮಾಡುತ್ತಾರೆ. ಮದನ್ ಕಾಂಡೊಮ್‌ಗಳನ್ನು ತಂದು ಗೆಳೆಯರಿಗೆ ಕೊಡುತ್ತಾನೆ. ಗೆಳೆಯರು ಅದು ಬೇಕಾದ ಮಂದಿಗೆ ತಲುಪಿಸುತ್ತಾರೆ! ಹೀಗೆ ನಡೆದಿದೆ ಸದ್ದಿಲ್ಲದ ಸಮಾಜ ಸೇವೆ.ಅಂದಹಾಗೆ, ಕೆಜಿಹಳ್ಳಿಯಲ್ಲಿರುವ ಮದನ್‌ಗೆ ಈ ಕೆಲಸದಲ್ಲಿ ನೆರವಾಗುತ್ತಿರುವ ಹಲವು ಯುವಕರೂ ಇದ್ದಾರೆ. ಅದೇ ಹಳ್ಳಿಯ ಆಭರಣದ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಜಗದೀಶ, ಕೋಲಾರದ ನೂತನ ಸರ್ಕಾರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಅರುಣ್, ಮಹೇಶ್ ಜೊತೆಗಾರರು. ಚಿಕ್ಕಪ್ಪ, ಅಜ್ಜಿ-ತಾತನೊಡನೆ ಇರುವ ಜಗದೀಶ್‌ಗೆ ಬಿಡುವಿನ ವೇಳೆಯಲ್ಲಿ ಕ್ಲಬ್‌ಗೆ ಬರುವುದೆಂದರೆ ಖುಷಿ.ಅಲ್ಲಿ ಕೇರಂ ಆಡಬಹುದು, ಕ್ರಿಕೆಟ್ ಆಡಬಹುದು, ಪುಸ್ತಕಗಳನ್ನು ಓದಬಹುದು ಎಂಬ ಖುಷಿಯಷ್ಟೇ ಅಲ್ಲ. ಸೋಂಕು ತಡೆಗಟ್ಟುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಬಹುದು ಎಂಬ ಉತ್ಸಾಹವೂ ಇದೆ. ಅದರಿಂದ ಜನರಿಗೆ ಪ್ರಯೋಜನವಾಗುತ್ತದಲ್ಲ, ಅದೇ ಮುಖ್ಯ ಎಂಬುದು ಜಗದೀಶ್ ನುಡಿ.ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಅಪ್ಪ, ಸರ್ಕಾರಿ ಶಾಲೆಯಲ್ಲಿ ಅಡುಗೆ ಸಿಬ್ಬಂದಿಯಾಗಿರುವ ಅಮ್ಮನ ಮಗನಾದ ಅರುಣ್ ಹೇಳುತ್ತಾರೆ: ವಯಸ್ಸಿಗೆ ಬಂದ ಹುಡುಗರು ಸಿನಿಮಾ ನೋಡಲು, ಇಸ್ಪೀಟು ಆಡಲು, ಮದ್ಯ ಸೇವಿಸಲು ಹೋಗೋದೇ ಹೆಚ್ಚು.ನೀವಾದ್ರು ಒಳ್ಳೆ ಕೆಲಸ ಮಾಡ್ತಿದೀರಿ, ಇನ್ನಷ್ಟು ಮುಂದೆ ಹೋಗಿ ಎನ್ನುತ್ತಾರೆ ಅಪ್ಪ-ಅಮ್ಮ. ಮೊದಲು ವಿರೋಧಿಸಿದ ಅವರಿಗೂ ನಾವು ಮಾಡುತ್ತಿರುವುದು ಒಳ್ಳೆಯ ಕೆಲಸ ಎಂದು ಅರ್ಥವಾಗಿದೆ.ಈ ಗುಂಪಿನ ಸದಸ್ಯರು ಪ್ರತಿ ಭಾನುವಾರ ಸುತ್ತಮುತ್ತಲಿನ ಹುಣಸಿಕೋಟೆ, ಕೆಂಪನಹಳ್ಳಿ, ಮಿಟಿಗ್ಯಾನಹಳ್ಳಿ, ಸೋಮಸಂದ್ರ, ದಾಸರಹಳ್ಳಿ, ಯಳಗುಳಿ, ಕೊಮ್ಮನಹಳ್ಳಿ, ಶೆಟ್ಟಿಹಳ್ಳಿ, ಕಣಗಲ ಮೊದಲಾದ ಹಳ್ಳಿಗಳಿಗೆ ಹೋಗುತ್ತಾರೆ.ವಲಸೆ ಬಂದವರನ್ನು ಹುಡುಕಿ ಮಾತನಾಡಿಸುತ್ತಾರೆ. ಎಚ್‌ಐವಿ ಸೋಂಕು, ಮುಂಜಾಗ್ರತೆ ಕ್ರಮಗಳ ಬಗ್ಗೆ ವಿವರಿಸುತ್ತಾರೆ. ಫೋನ್ ನಂಬರ್, ಗ್ರಾಮ ಆರೋಗ್ಯ ಮಾಹಿತಿ ಕೇಂದ್ರದ ವಿಳಾಸವನ್ನು ಕೊಟ್ಟು ಬರುತ್ತಾರೆ.ಇದು ಕೇವಲ ಯುವಕರ ಕೆಲಸವೆಂದು ಹೇಳುವಂತಿಲ್ಲ. ಅದೇ ಕೇಂದ್ರದ ಜೊತೆ ಸಂಪರ್ಕವಿಟ್ಟುಕೊಂಡಿರುವ ಕಾಲೇಜು ತರುಣಿಯರು ಕೂಡ ಜಾಗೃತಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ.

 

ಅದೇ ಹಳ್ಳಿಯ ಬೃಂದಾ ಮತ್ತು ಚಾಂದಿನಿ ಮಾಲೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿನಿಯರು. ಬಿಡುವಿನ ವೇಳೆಯಲ್ಲಿ ಅವರು ಕೇಂದ್ರದ ಪೂರ್ಣಾವಧಿ ಕಾರ್ಯಕರ್ತರು.ಬೃಂದಾ ಮನೆಯ ಪಕ್ಕದ್ಲ್ಲಲೇ ಕೇಂದ್ರವಿದ್ದರೂ ಬಹಳ ದಿನ ಕೇಂದ್ರದ ಕಾರ್ಯಚಟುವಟಿಕೆಗಳ ಬಗ್ಗೆ ಅರಿವಿರಲಿಲ್ಲ. ಒಮ್ಮೆ ಕಾರ್ಯಕ್ರಮಕ್ಕೆ ಕರೆದರೆಂದು ಬಂದ ಆಕೆ ಈಗ ಲೈಂಗಿಕ ಸೋಂಕುಗಳ ಬಗ್ಗೆ ಗರ್ಭಿಣಿಯರ ಜೊತೆ ಆಪ್ತಸಮಾಲೋಚನೆ ಮಾಡುವಷ್ಟು ಸಾಮರ್ಥ್ಯ ಪಡೆದಿರುವ ಯುವತಿ. ರೆಡ್ ರಿಬ್ಬನ್ ಕ್ಲಬ್‌ನ ಸದಸ್ಯರಾಗುವಂತೆ ಸಹಪಾಠಿಗಳನ್ನು ಹುರುದುಂಬಿಸುವಲ್ಲೂ ಆಕೆ ಬ್ಯುಸಿ.

 

ಕಾಲೇಜಿನಲ್ಲಿ ಪಾಠ ಬಿಟ್ಟರೆ ಸುರಕ್ಷಿತ ಲೈಂಗಿಕತೆ, ಎಚ್‌ಐವಿ, ಎಆರ್‌ಟಿ, ಇಂಥ ಉಪಯುಕ್ತ ವಿಷಯಗಳ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುವುದೇ ಇಲ್ಲ ಎಂಬುದು ಆಕೆಯ ಏಕೈಕ ಅಸಮಾಧಾನ. ಇನ್ನೊಬ್ಬರಿಗೆ ಬುದ್ಧಿ ಹೇಳುವ ಮಟ್ಟಿಗೆ, ಸಲಹೆ ನೀಡುವ ಮಟ್ಟಿಗೆ ಬಂದಿದ್ದೀನಿ ಎಂದುಕೊಳ್ಳಲು ಖುಷಿಯಾಗುತ್ತದೆ ಎನ್ನುತ್ತಾರೆ ಆಕೆ. ಚಾಂದಿನಿ ಬೃಂದಾ ಮೂಲಕ ಕ್ಲಬ್ ಸದಸ್ಯೆಯಾದ ಮತ್ತೊಬ್ಬ ಯುವತಿ. ತಾಯಿ ಮತ್ತು ಮಾವಂದಿರ ಪ್ರೋತ್ಸಾಹವೂ ಆಕೆಗೆ ದೊರೆತಿರುವುದು ವಿಶೇಷ. ಈ ಇಬ್ಬರೂ ಯುವತಿಯರು ಒಟ್ಟಿಗೇ ಕೇಂದ್ರಕ್ಕೆ ಬರುತ್ತಾರೆ. ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ.

 

ಈ ಇಬ್ಬರ ಮನೆಯಲ್ಲೂ ಅವರ ಚಟುವಟಿಕೆಗಳ ಬಗ್ಗೆ ಆಕ್ಷೇಪವೆತ್ತಿದ್ದ ಮನೆಮಂದಿಯಲ್ಲಿ ಈಗ ಹೆಮ್ಮೆ ಮೂಡಿದೆ.  ಈ ಇಬ್ಬರು ಯುವತಿಯರ ಜೊತೆಗೆ ಗೃಹಿಣಿ ಸುಶೀಲಾ ಕೂಡ ಸೇರಿದ್ದಾರೆ. ಎಸ್‌ಎಸ್‌ಎಲ್‌ಸಿ ಓದಿರುವ ಆಕೆ ಮನೆ, ಗಂಡ, ಮಕ್ಕಳ ಪೋಷಣೆಯ ಜೊತೆಗೇ ಬಿಡುವು ಮಾಡಿಕೊಂಡು ಬರುವುದು ವಿಶೇಷ.ಇಂಥ ಹತ್ತಾರು ಯುವಕ-ಯುವತಿಯರ ಬದ್ಧತೆ ಮತ್ತು ಸಾಮಾಜಿಕ ಕಾಳಜಿಯ ಜೊತೆಗೆ ಅವರ ಅಪ್ಪ, ಅಮ್ಮ ಸೇರಿದಂತೆ ಮನೆಯ ಸದಸ್ಯರ ಔದಾರ್ಯ, ಆಧುನಿಕ ಸಮಾಜದ ಅಪಾಯಕಾರಿ ಒಲವು-ನಿಲುವುಗಳ ಕುರಿತ ಎಚ್ಚರದ ಧಾರೆ ಇಲ್ಲದೇ ಹೋಗಿದ್ದರೆ ಈ ಕೇಂದ್ರವನ್ನು ನಡೆಸುತ್ತಿರುವ ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯಚಟುವಟಿಕೆಗಳಿಗೆ ವ್ಯಾಪಕ ಪ್ರಚಾರ ಮತ್ತು ಘನತೆ ದೊರಕುವುದು ಕಷ್ಟವಾಗುತ್ತಿತ್ತು ಎಂಬುದು ಸಂಸ್ಥೆಯ ಜಿಲ್ಲಾ ಸಂಚಾಲಕ ನಂದೀಶ್ ಅವರ ಪ್ರಾಮಾಣಿಕ ನುಡಿ.ಇಡೀ ಕೋಲಾರ ಜಿಲ್ಲೆಯಲ್ಲಿ 144 ರೆಡ್‌ರಿಬ್ಬನ್ ಕ್ಲಬ್‌ಗಳಿವೆ. ಪ್ರತಿ ಕ್ಲಬ್‌ನಲ್ಲಿ 10 ಯುವಕ ಮತ್ತು 10 ಯುವತಿಯರಿರುತ್ತಾರೆ. ಅದು ಕನಿಷ್ಠ ಸಂಖ್ಯೆ. ಏರುಪೇರಾಗಬಹುದು. ಆದರೆ ಅರಿವನ್ನು ವಿಸ್ತರಿಸುವ ಸೇವೆ ಮಾತ್ರ ನಿಂತಿಲ್ಲ. ಅದೇ ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry