ಶನಿವಾರ, ಮೇ 8, 2021
26 °C
ಕೆನಡಿಯನ್ ಗ್ರ್ಯಾನ್ ಪ್ರಿ: ಸೆಬಾಸ್ಟಿಯನ್ ವೆಟೆಲ್‌ಗೆ ಅಗ್ರಸ್ಥಾನ

ರೆಸ್ಟಾಗೆ ಆರು ಪಾಯಿಂಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಂಟ್ರಿಯಲ್, (ಎಎಫ್‌ಪಿ/ ಪಿಟಿಐ): ಸಹಾರಾ ಫೋರ್ಸ್ ಇಂಡಿಯಾ ತಂಡ ಭಾನುವಾರ ನಡೆದ ಕೆನಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ-1 ರೇಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಏಳು ಪಾಯಿಂಟ್ ಗಿಟ್ಟಿಸಿಕೊಂಡಿತು.ಈ ತಂಡದ ಪೌಲ್ ಡಿ ರೆಸ್ಟಾ ಏಳನೇ ಸ್ಥಾನ ಪಡೆದು ಆರು ಪಾಯಿಂಟ್ ಕಲೆ ಹಾಕಿದರೆ, ಇನ್ನೊಬ್ಬ ಚಾಲಕ ಅಡ್ರಿಯಾನ್ ಸುಟಿಲ್ 10ನೇ ಸ್ಥಾನದಲ್ಲಿ ಸ್ಪರ್ಧೆ ಕೊನೆಗೊಳಿಸಿ ಒಂದು ಪಾಯಿಂಟ್ ತಮ್ಮದಾಗಿಸಿಕೊಂಡರು. ಫಾರ್ಮುಲಾ ಒನ್‌ನಲ್ಲಿ ಫೋರ್ಸ್ ಇಂಡಿಯಾ ತಂಡದ 100ನೇ ರೇಸ್ ಇದಾಗಿತ್ತು.ರೆಸ್ಟಾ 17ನೇಯವರಾಗಿ ಸ್ಪರ್ಧೆ ಆರಂಭಿಸಿದ್ದರು. ಉತ್ತಮ ಚಾಲನಾ ಕೌಶಲ ಮೆರೆದರಲ್ಲದೆ ಏಳನೇ ಸ್ಥಾನಕ್ಕೇರುವಲ್ಲಿ ಯಶಸ್ವಿಯಾದರು. `17ನೇಯವನಾಗಿ ರೇಸ್ ಆರಂಭಿಸಿ ಏಳನೇ ಸ್ಥಾನ ಪಡೆಯಲು ಸಾಧ್ಯವಾಗಿರುವುದು ಸಂತಸ ಉಂಟುಮಾಡಿದೆ. ನಿಜವಾಗಿಯೂ ಇದು ಉತ್ತಮ ಫಲಿತಾಂಶ' ಎಂದು ರೆಸ್ಟಾ ಪ್ರತಿಕ್ರಿಯಿಸಿದ್ದಾರೆ.ಆದರೆ ಸುಟಿಲ್‌ಗೆ ನಿರೀಕ್ಷಿತ ಪ್ರದರ್ಶನ ನೀಡಲು ಆಗಲಿಲ್ಲ. ಎಂಟನೆಯವರಾಗಿ ರೇಸ್ ಆರಂಭಿಸಿದ್ದ ಅವರು ಅದೇ ಸ್ಥಾನ ಕಾಪಾಡಿಕೊಳ್ಳಲು ವಿಫಲರಾದರು.ವೆಟೆಲ್ ಚಾಂಪಿಯನ್: ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್ ಈ ರೇಸ್ ಗೆದ್ದುಕೊಂಡರು. `ಪೋಲ್ ಪೊಸಿಷನ್'ನಿಂದ ಸ್ಪರ್ಧೆ ಆರಂಭಿಸಿದ್ದ ಜರ್ಮನಿಯ ಈ ಚಾಲಕ ಆರಂಭದಿಂದ ಕೊನೆಯವರೆಗೂ ಮುನ್ನಡೆ ಕಾಪಾಡಿಕೊಳ್ಳಲು ಯಶಸ್ವಿಯಾದರು.ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ ಹಾಗೂ ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಕೆನಡಿಯನ್ ಗ್ರ್ಯಾನ್ ಪ್ರಿನಲ್ಲಿ ರೆಡ್ ಬುಲ್ ತಂಡಕ್ಕೆ ಒಲಿದ ಮೊದಲ ಪ್ರಶಸ್ತಿ ಇದು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.