ರೆಹಮಾನ್ ಸಂಗೀತ ಹೈ ಬ್ರೋ ಆಗಿಬಿಟ್ಟಾಗ...

7

ರೆಹಮಾನ್ ಸಂಗೀತ ಹೈ ಬ್ರೋ ಆಗಿಬಿಟ್ಟಾಗ...

Published:
Updated:

ಹೋದ ಭಾನುವಾರ ಜರ್ಮನಿಯಿಂದ ಸುಮಾರು ನೂರು ಜನ ಕಲಾವಿದರು ಬಂದು ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ನಡೆಸಿ ಕೊಟ್ಟರು. ಭಾರತದಲ್ಲಿ ನಡೆದ ನಾಲ್ಕು ಸರಣಿ ಕಾರ್ಯಕ್ರಮಗಳಲ್ಲಿ ಇದು ಕೊನೆಯದು. ಸರಣಿಯ ಹೆಸರು ಕ್ಲಾಸಿಕಲ್ ಇನ್ಕಾಂಟೇಷನ್ಸ್. ಅಂದರೆ, ಶಾಸ್ತ್ರೀಯ ಉದ್ಘೋಷಗಳು.ಎ.ಆರ್.ರೆಹಮಾನ್ ಹಾಡುಗಳನ್ನ ಮತ್ತು ಹಿನ್ನೆಲೆ ಸಂಗೀತವನ್ನ ಸ್ಕೋರ್ ನೋಡಿಕೊಂಡು, ಬಾಕ್, ಬೀತೋವೆನ್ ಸಂಗೀತದಷ್ಟೇ ಘನವಾಗಿ ಪರಿಗಣಿಸಿ ಆ ಕಲಾವಿದರು ನುಡಿಸಿದರು. ಅರಮನೆ ಮೈದಾನದಲ್ಲಿ ನಡೆದ ಈ ಕಛೇರಿಯನ್ನು ಲ್ಯಾಪ್ ಇಂಡಿಯಾ ಎಂಬ ಜರ್ಮನಿ ಮೂಲದ ಕಂಪನಿಯೊಂದು ಏರ್ಪಡಿಸಿತ್ತು. ಅದಕ್ಕೆ ಮ್ಯೋಕ್ಸ್ ಮುಲ್ಲರ್ ಭವನದ, ಅಂದರೆ ಜರ್ಮನಿ ಸರ್ಕಾರದ ಸಹಕಾರವಿತ್ತು.ಮೊದಲ ಒಂದು ಗಂಟೆಯಂತೂ ಈ ವಾದ್ಯ ವೃಂದ ನುಡಿಸಿದ್ದು ಯಾರಿಗೂ ಅರ್ಥವಾಗದ, ಯಾವುದೋ ಅಮೂರ್ತ ಸಂಗೀತದಂತೆ ಕೇಳಿಬಂತು. ಇದೇನಪ್ಪ ರೆಹಮಾನ್‌ನಂಥ ಸಂಗೀತಗಾರನೇ ಬಹಳ ಹೈ ಬ್ರೋ ಆಗಿ ಕಾಣುತ್ತಿದ್ದಾನಲ್ಲ ಅನ್ನುವ ಭಾವನೆ ನನಗಂತೂ ಬಂತು. ಈತ ಜನಪ್ರಿಯದಲ್ಲಿ ಜನಪ್ರಿಯ ಎನಿಸಿಕೊಂಡ ಸಂಗೀತ ಸಂಯೋಜಕ. ಪಡ್ಡೆ ಹುಡುಗರ ಹಾಡು ಮಾಡುವ ಇಂಥ ಸಂಗೀತಗಾರ ಇದ್ದಕ್ಕಿದ್ದಂತೆ ಘನತೆವೆತ್ತ ರಾಯಭಾರಿಗಳೂ, ಅಭಿರುಚಿಯ ಮೇಲ್ಮೆಯಲ್ಲಿ ಮೆರೆಯುವ ಹಿರಿಯರೂ ಕೂತು ಕೇಳುವ ಸಂಗೀತಗಾರನಾಗಿ ಹೋದ? ಜರ್ಮನ್ ಸಂಗೀತಗಾರರು ರೆಹಮಾನನ ಹಾಲಿವುಡ್ ಸ್ಕೋರ್‌ಗಳನ್ನ ನುಡಿಸಿದರು. ಆತನ ವಾರಿಯರ್ಸ್ ಆಫ್ ಹೆವನ್ ಥರದ ಚಿತ್ರಗಳ ಸಂಗೀತವನ್ನು ಇಲ್ಲಿ ಕೇಳಿದವರು ಹೆಚ್ಚಾಗಿರಲಿಲ್ಲ. ರೋಜ ಸಿನಿಮಾದ ಹಿನ್ನೆಲೆ ಸಂಗೀತವನ್ನು ನುಡಿಸಿದಾಗಲೇ ಪ್ರೇಕ್ಷಕರು ತೂಕಡಿಸುವುದನ್ನು ಸ್ವಲ್ಪ ನಿಲ್ಲಿಸಿದ್ದು. ಬಹಳ ಫಾರ್ಮಲ್ ಆಗಿ ನುಡಿಸುವ ಪಾಶ್ಚಾತ್ಯ ಸಂಗೀತಗಾರರು ಇಲ್ಲಿ ಬಂದು ನಮ್ಮ ಸಿನಿಮಾ ಸಂಗೀತಗಾರನೊಬ್ಬನ ಮಟ್ಟುಗಳನ್ನು ನುಡಿಸುತ್ತಿರುವುದೇ ವಿಶೇಷವಾಗಿಯೂ, ಅಷ್ಟೇ ವಿಚಿತ್ರವಾಗಿಯೂ ಕಂಡುಬಂತು. ಕೊಲವೆರಿ ಡಿ ಯಂಥ ಬೀದಿ ಹಾಡುಗಳು ಬಂದು ರೆಹಮಾನನ್ನನ್ನು ಆಗಲೇ ಹಳೆ ತಲೆಮಾರಿನ ಆರಾಧ್ಯ ಮೂರ್ತಿಯಾಗಿ ಮಾರ್ಪಾಡು ಮಾಡಿಬಿಟ್ಟಿವೆಯೇ?ಜರ್ಮನಿಯಿಂದ ಬಂದದ್ದು ಫಿಲಂ ಆರ್ಕೆಸ್ಟ್ರ, ನಿಜ. ಹಾಗೆ ನೋಡಿದರೆ, ಸಾಂಪ್ರದಾಯಿಕ ಫಿಲಂ ಆರ್ಕೆಸ್ಟ್ರವನ್ನು ಬಿಟ್ಟು, ಅಂದರೆ ವಯೊಲಿನ್, ವಯೋಲ, ಚೆಲೋದಂಥ ವಾದ್ಯಗಳನ್ನು ಬದಿಗಿಟ್ಟು, ಸಂಯೋಜನೆ ಮಾಡಿ ಹೆಸರು ಮಾಡಿದ ಕಂಪೋಸರ್ ಅಂದರೆ ರೆಹಮಾನನೇ. ಅಕೂಸ್ಟಿಕ್ ವಾದ್ಯಗಳನ್ನು (ಅಂದರೆ ನೈಸರ್ಗಿಕ ವಾದ್ಯಗಳನ್ನು) ಬಿಟ್ಟು ಕೀಬೋರ್ಡ್‌ನಲ್ಲಿ ಪ್ರೊಗ್ರಾಮ್ ಮಾಡಿದ ಸಂಗೀತದ ರುಚಿಯನ್ನು ಭಾರತೀಯ ಸಿನಿಮಾ ಪ್ರಿಯರಿಗೆ ಹಚ್ಚಿಸಿದ ಖ್ಯಾತಿ (ಅಥವಾ ಕುಖ್ಯಾತಿ) ರೆಹಮಾನನಿಗೆ ಸೇರಿದ್ದು. ಮೊನ್ನೆ ಮೊನ್ನೆ ನಡೆದ ರೆಹಮಾನನ ಮತ್ತೊಂದು ಕಛೇರಿ ತೀರ ಪಾಪ್ ಮಾದರಿಯದಾಗಿತ್ತು. ಇಲ್ಲಿ ನೋಡಿದರೆ ಅದೇ ಸಂಗೀತಗಾರ ಕ್ಲಾಸಿಕಲ್ ಅವತಾರದಲ್ಲಿ ಕಾಣಿಸಿಕೊಂಡಿದ್ದ. (ಮುಂಬೈಯಲ್ಲಿ ಕೂತು ಕಾರ್ಯಕ್ರಮವನ್ನು ನೋಡುತ್ತಿದ್ದ ರೆಹಮಾನ್ ವೀಡಿಯೊ ಮುಖಾಂತರ ಇಲ್ಲಿನ ಅಭಿಮಾನಿಗಳಿಗೆ ಮುಖ ತೋರಿಸಿದ).ಹತ್ತು ಹದಿನೈದು ವರ್ಷಗಳ ಹಿಂದೆ ಎರಡು ಸರ್ಕಾರಗಳು ಸೇರಿ ಮಾಡುವ ಇಂಥ ಕಾರ್ಯಕ್ರಮ ದೊಡ್ಡ ಶಾಸ್ತ್ರೀಯ ಸಂಗೀತಗಾರನ್ನು ಒಳಗೊಂಡಿರುತ್ತಿತ್ತು. ಉಸ್ತಾದ್ ವಿಲಾಯತ್ ಖಾನ್ ಅಥವಾ ಪಂಡಿತ್ ರವಿಶಂಕರರಂಥ ದಿಗ್ಗಜರನ್ನು ಕರೆಸಿ ಇಂಥ ಸಂಗಮವನ್ನು ನೆರವೇರಿಸಿರುತ್ತಿದ್ದರು. ಇಂದು ರೆಹಮಾನ್‌ಗೆ ಕರೆಸುವುದಕ್ಕೆ ಸಾಂಸ್ಕೃತಿಕ ಅಂಶಗಳಿಗಿಂತ ಮಾರ್ಕೆಟಿಂಗ್ ಅಂಶಗಳೇ ಕಾರಣವಾಗಿದ್ದವು ಅನ್ನುವುದರಲ್ಲಿ ಅನುಮಾನವಿಲ್ಲ. (ಅಂದ ಹಾಗೆ, ತೊಂಬತ್ತೆರಡು ವರ್ಷ ತುಂಬಿದ ಪಂಡಿತ್ ರವಿ ಶಂಕರ್ ಅವರ ಬೆಂಗಳೂರಿನ ಕೊನೆಯ ಕಾರ್ಯಕ್ರಮ ಇದೆ ಅರಮನೆ ಮೈದಾನದಲ್ಲಿ ಫೆಬ್ರವರಿ 7ರಂದು ನಡೆಯಲಿದೆ).ಜರ್ಮನ್ ಕಾರ್ಯಕ್ಷಮತೆ ಕಛೇರಿಯ ವ್ಯವಸ್ಥೆಯಲ್ಲಿ ಕಂಡುಬಂದರೂ, ಹಲವಾರು ಪ್ರಚಂಡ ಸಂಗೀತಗಾರರು ಒಟ್ಟುಗೂಡಿದ್ದರೂ, ರೆಹಮಾನನ ಕೆಲವು ಸಂಯೋಜನೆಗಳು ಚೆನ್ನಾಗಿದ್ದರೂ, ಕಾರ್ಯಕ್ರಮ ಮಾತ್ರ ಮಂಕಾಗಿ ಮೂಡಿಬಂತು. ಮತ್ತೊಂದು ಗಮನಕ್ಕೆ ಬಂದ ವಿಷಯ: ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದ ವೆಸ್ಟೆರ್ನ್ ಕ್ಲಾಸಿಕಲ್ ಕಛೇರಿ ನಡೆಸುವುದಕ್ಕೆ ಒಳ್ಳೆಯ ಸಭಾಂಗಣ ಇಲ್ಲ. ಅರಮನೆ ಮೈದಾನದಲ್ಲಿ ಹಾಕಿದ್ದ ಶಾಮಿಯಾನಾದಲ್ಲಿ ಸಿಂಫೋನಿ ವಾದ್ಯಗಳ ಸೂಕ್ಷ್ಮ ಮಾಧುರ್ಯ, ದೊಡ್ಡ ಅಲೆಯಂತೆ ಬರುವ ಭಾವೋನ್ಮಾದ, ಯಾವುದೂ ಇರಲಿಲ್ಲ. ಮೇಲೆಲ್ಲೋ ತೂಗಿಬಿಟ್ಟ ಚಿಕ್ಕ ಸ್ಪೀಕರ್‌ನಲ್ಲಿ ಬರುವ ಇಂಥ ಸಂಗೀತವನ್ನು ದೂರ ಕೂತು ಕೇಳುವುದರಲ್ಲಿ ಯಾವ ಮಜವೂ ಇರಲಿಲ್ಲ.ಮೊಬೈಲ್ ಫೋನ್‌ಗಳ ಅತಿರೇಕದ ವಿವೇಕ

ಸುಪ್ರೀಂಕೋರ್ಟ್ ಹೋದ ವಾರ ನೀಡಿದ ತೀರ್ಪಿನಿಂದ ಮೊಬೈಲ್ ಕಂಪನಿಗಳು ತತ್ತರಿಸಿ ಹೋಗಿವೆಯಂತೆ. ಎ.ರಾಜ ತಪ್ಪಾಗಿ ಮಂಜೂರು ಮಾಡಿರುವುದರಿಂದ ಮತ್ತು ಲಂಚದ ಅನುಮಾನವಿರುವದರಿಂದ, 122 ಲೈಸನ್ಸ್‌ಗಳನ್ನು ನ್ಯಾಯಾಲಯ ರದ್ದು ಪಡಿಸಿದೆ.ಇದರಿಂದ ಮೊಬೈಲ್ ಕರೆಗಳ ಬೆಲೆ ಏರುವ ಸಂಭವವಿದೆ ಎಂದು ಬಿಜಿನೆಸ್ ಪತ್ರಿಕೆಗಳು ಬರೆಯುತ್ತಿವೆ. ಅದಿರಲಿ. ಈ ಮೊಬೈಲ್ ಕಂಪೆನಿಗಳ ಉಪಟಳ ಬೇರೊಂದು ರೀತಿಯಲ್ಲಿ ಹಲವರನ್ನು ಕಾಡುತ್ತಿದೆ. ಪ್ರತಿ ದಿನ ಬರುವ ಕೈದಾಟಿಸಿದ ಎಸ್ ಎಂ ಎಸ್ ಸಂದೇಶಗಳಿಂದ ಕೆಲವರು ಬೇಸತ್ತಿದ್ದಾರೆ.ಇಂಥ ಸಂದೇಶಗಳಲ್ಲಿ ಬರುವ ಶಾಯರಿಗಳು, ಜೋಕುಗಳು ಮತ್ತು ಲೋಕಾನುಭವದ ಅಣಿಮುತ್ತುಗಳು ತೀರ ಸಿಲ್ಲಿಯಾಗಿರುತ್ತವೆ. ಒಬ್ಬರಿಂದ ಒಬ್ಬರು ಇಂಥ ಎಸ್ ಎಂ ಎಸ್‌ಗಳನ್ನು ಕಳಿಸಿ ಮೊಬೈಲ್ ಕಂಪನಿಗಳಿಗೆ ದುಡ್ಡು ತೆರುತ್ತಿರುತ್ತಾರೆ. ಸಂದೇಶಗಳನ್ನು ಕೆಟ್ಟ ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಅಥವಾ ಉರ್ದುವಿನಲ್ಲಿ ಯಾರೋ ಮೊದಲು ಟೈಪ್ ಮಾಡಿ ಕಳಿಸಿರುತ್ತಾರೆ. ಅಭಿರುಚಿ ಮತ್ತು ಭಾಷೆಯ ಬಳಕೆ ನೋಡಿದರೆ, ಸಂಬಳಕ್ಕಿರುವ ಕೆಲವರು ಕೂತು ಇಂಥ ಸಂದೇಶಗಳನ್ನು ಪ್ರತಿ ದಿನ ಚಾಲನೆಗೆ ಬಿಡುತ್ತಾರೆ ಎಂದು ತೋರುತ್ತದೆ. ಮೊಬೈಲ್ ಕಂಪೆನಿಗಳಲ್ಲಿ ಬಿಲ್ ಮೊತ್ತದ ಡುಬ್ಬ ಏರಿಸುವವರೇ ಇರುತ್ತಾರಂತೆ. ಅವರ ಹುದ್ದೆ ಏನಿರುತ್ತದೋ ಗೊತ್ತಿಲ್ಲ, ಆದರೆ ನಾನಂತೂ ಅಂಥವರನ್ನು ಡಿ ಪಿ ಓ (ಅಂದರೆ ಡುಬ್ಬ ಪುಟ್ಟಿಂಗ್ ಆಫೀಸರ್)ಗಳೆಂದು ಕರೆಯುತ್ತೇನೆ! ಟೆಲಿಫೋನ್ ವ್ಯವಹಾರವನ್ನು ನಿಯಂತ್ರಿಸುವ ಟ್ರಾಯ್‌ನಂಥ ಸಂಸ್ಥೆಗಳು ಈ ಡಬ್ಬ ಮೆಸೇಜ್ ಕಳಿಸುವವರನ್ನೂ ಹಿಡಿದು ಅವರ ಅಟ್ಟಹಾಸವನ್ನು ಅಡಗಿಸಬೇಕಾಗಿದೆ.ಲಂಚಕೋರರಲ್ಲಿ ಯಾರು ನೀಚಾತಿನೀಚರು?

ಕೊಯಲಿಶನ್ ಎಗೈನೆಸ್ಟ್ ಕರಪ್ಶನ್ ಎಂಬ ಸಂಸ್ಥೆ ಲಂಚದ ವಿರುದ್ಧ ಹೋರಾಡಲು ಐದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಹುಟ್ಟಿಕೊಂಡಿತು. ಭ್ರಷ್ಟಾಚಾರದ ಪಿಡುಗಿನಿಂದ ನೊಂದವರಿಗೆ ಸಲಹೆ ಸಹಾಯವನ್ನು ನೀಡುತ್ತಾ ಬಂದ ಈ ಸಂಸ್ಥೆಯ ಸಹಾಯವಾಗಿ ಬರುವ ಕರೆಗಳು ಈ ಕೆಲವು ತಿಂಗಳಿಂದ ಹೆಚ್ಚಾಗಿವೆಯಂತೆ. ಅಣ್ಣಾ ಹಜಾರೆ ಚಳವಳಿ ಮೂಡಿಸಿದ ಅರಿವಿನಿಂದ ಹೀಗಾಗಿರಬೇಕು ಎಂದು ಊಹೆ. ಸಂಸ್ಥೆಯ ಅನುಭವಕ್ಕೆ ಬಂದಂತೆ ತುಂಬಾ ತೊಂದರೆ ಕೊಡುವ ಅಧಿಕಾರಿಗಳು ಈ ಮೂರು ಕಡೆ ಹೆಚ್ಚಾಗಿದ್ದಾರಂತೆ; ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿ. (ಪೊಲೀಸರು ಮತ್ತು ಸರ್ಕಾರಿ ಆಸ್ಪತ್ರೆಯಲ್ಲಿರುವ ಹೆಗ್ಗಣಗಳು ಯಾಕೋ ಈ ಪಟ್ಟಿಯಲ್ಲಿ ಕಾಣುತ್ತಿಲ್ಲ!). ಲಂಚ ವಿರೋಧಿ ಸಹಾಯ ವಾಣಿಗೆ ದಿನದಲ್ಲಿ ಎಂಟರಿಂದ ಹತ್ತು ಕರೆ ಬರುತ್ತದೆಯಂತೆ. ಕರೆ ಮಾಡಿದವರಿಗೆ ಮಾಹಿತಿ ಹಕ್ಕಿನ ಬಗ್ಗೆ ತಿಳಿಸಿ, ಖದೀಮ ಅಧಿಕಾರಿಗಳನ್ನು ಹೇಗೆ ದಾರಿಗೆ ತರುವುದು ಎಂದು ಸಿ ಎ ಸಿ  ಹೇಳಿಕೊಡುತ್ತದೆ. ಸಹಾಯವಾಣಿ ಸಂಖ್ಯೆ: 080 6573 4444.  srramakrishna@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry