ರೇಖೆಯಲ್ಲಿ ಮೂಡಿದ ಚಿಣ್ಣರ ಕಲ್ಪನಾಲೋಕ

7

ರೇಖೆಯಲ್ಲಿ ಮೂಡಿದ ಚಿಣ್ಣರ ಕಲ್ಪನಾಲೋಕ

Published:
Updated:
ರೇಖೆಯಲ್ಲಿ ಮೂಡಿದ ಚಿಣ್ಣರ ಕಲ್ಪನಾಲೋಕ

ಬೆಂಗಳೂರು:  ಈಚಲು ಮರದ ಬುಡದಲ್ಲಿ ಕುಳಿತ ಕೃಷ್ಣ, ಜರಿಯಾಗಿ ಹರಿಯುತ್ತಿರುವ ನದಿ, ಹೆಂಚಿನ ಮನೆ ಮೇಲೆ ಮೂಡಿದ ಪೂರ್ಣಚಂದ್ರ ಹೀಗೆ ಹತ್ತಾರು ಕಲ್ಪನೆಯನ್ನು ರೇಖೆಯಲ್ಲಿ ಮೂಡಿಸಲು ಪುಟಾಣಿಗಳೆಲ್ಲ ತನ್ಮಯರಾಗಿದ್ದರೆ, ಪೋಷಕರು ಆಸ್ಥೆಯಿಂದ ಮಕ್ಕಳ ರೇಖೆಗಳತ್ತ ಚಿತ್ತಹರಿಸಿ, ಹುರಿದಂಬಿಸುತ್ತಿದ್ದರು.ಇದು `ಪ್ರಜಾವಾಣಿ' ಮತ್ತು `ಡೆಕ್ಕನ್‌ಹೆರಾಲ್ಡ್' ಪತ್ರಿಕಾ ಸಮೂಹ ನಗರದ ಚಿತ್ರಸಂತೆಯಲ್ಲಿ ಆಯೋಜಿಸಿದ್ದ ಚಿತ್ರಕಲಾಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯ.ವಾರವಿಡೀ ಪಠ್ಯಚಟುವಟಿಕೆಗಳಲ್ಲಿ ಮುಳುಗುವ ಮಕ್ಕಳು ಕೈಗೆ ಬಗೆ ಬಗೆಯ ಬಣ್ಣದ ಪೆನ್ಸಿಲ್‌ಗಳನ್ನು ಸಿಕ್ಕಿಸಿಕೊಂಡು ಚಿತ್ರ ಬಿಡಿಸಿ ಸಂಭ್ರಮಿಸಿದರು. ಸೂಕ್ಷ್ಮಗ್ರಾಹಿ ಪುಟಾಣಿಗಳ ಬಹುತೇಕ ಚಿತ್ರಗಳು ಮರ, ಗಿಡ, ಕಾಡು,ಪಕ್ಷಿ, ಸೂರ್ಯ ಹೀಗೆ ಪ್ರಕೃತಿಗೆ ಸಂಬಂಧಪಟ್ಟದ್ದಾಗಿತ್ತು. ಇನ್ನು ಕೆಲವರು ಕೃಷ್ಣ,ರಾಮ, ಶಬರಿಯ ಪೌರಾಣಿಕ ಪಾತ್ರಗಳಿಗೆ ಕುಂಚದಲ್ಲಿ ರೂಪ ನೀಡಿದ್ದು, ನೋಡುಗರಲ್ಲಿ ಕುತೂಹಲ ಹುಟ್ಟಿಸಿತು.`ಸ್ಪರ್ಧೆಯಲ್ಲಿ ಪ್ರಶಸ್ತಿ ದೊರೆಯುತ್ತೊ ಬಿಡುತ್ತದೋ ನನ್ನ ಮಗ ಪುಟ್ಟ ಬೆರಳುಗಳಿಗೆ ಬಣ್ಣ ಅಂಟಿಸಿಕೊಂಡು, ಏನೋ ಯೋಚಿಸುತ್ತಾ ರೇಖೆ ಬಿಡಿಸುವ ದೃಶ್ಯವಿದೆಯಲ್ಲಾ ಅದನ್ನು ಕಣ್ತುಂಬಿಕೊಳ್ಳುವುದರಲ್ಲಿ ಆನಂದವಿದೆ. ಆ ಕಾರಣಕ್ಕಾಗಿ ಪ್ರತಿ ವರ್ಷ ನಡೆಯುವ ಚಿತ್ರಕಲಾ ಸ್ಪರ್ಧೆಯಲ್ಲಿ ಮಗ ಭಾಗಹಿಸುತ್ತಾನೆ' ಎಂದು ರಾಜರಾಜೇಶ್ವರಿ ನಗರದ ನಿವಾಸಿ ನಿರ್ಮಲಾ ಹೇಳಿದರು.ಸ್ಪರ್ಧೆಯು ಕಿರಿಯರ ವಿಭಾಗ ( 5ರಿಂದ 10 ವಯೋಮಿತಿ),  ಹಿರಿಯರ ವಿಭಾಗ (10ರಿಂದ 15), ವಯಸ್ಕರ ವಿಭಾಗ (15ವರ್ಷಕ್ಕಿಂತ ಮೇಲ್ಪಟ್ಟವರು) ವಿಭಾಗದಲ್ಲಿ ಸುಮಾರು 300ರಕ್ಕೂ ಅಧಿಕ ಮಂದಿ ಭಾಗಹಿಸಿದ್ದರು. ಅದರಲ್ಲಿ ಸಮಧಾನಕರ ಬಹುಮಾನ ಸೇರಿದಂತೆ 48 ಮಂದಿ ಪ್ರಶಸ್ತಿ ಪಡೆದುಕೊಂಡರು.ಟ್ವೆಂಟಿ ಟ್ವೆಂಟಿ ಅಂಧರ ವಿಶ್ವಕಪ್ ವಿಜೇತರಾದ ಶೇಖರ್, ರವಿ, ಪ್ರಕಾಶ್ ಅವರು ಕಿರಿಯ ವಿಭಾಗ ಬಹಮಾನಿತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನು ಉಳಿದವರಿಗೆ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಮುಖ್ಯ ಆಡಳಿತಾಧಿಕರಿ ಆರ್.ಶ್ರೀಧರ್ ಅವರು ಬಹುಮಾನ ವಿತರಿಸಿ ಪ್ರೋತ್ಸಾಹ ಕೊಟ್ಟರು.ಕಿರಿಯರ ವಿಭಾಗದಲ್ಲಿ ಪಾರ್ಥನಾ ಶಾಲೆಯ ಎಸ್. ಕೀರ್ತನಾ (ಪ್ರಥಮ), ನ್ಯಾಷನಲ್ ಹಿಲ್ ವ್ಯೆವ್ ಪಬ್ಲಿಕ್ ಶಾಲೆಯ ಆರ್.ರೋನಿತ್, ಜಾಲಹಳ್ಳಿಯ ಕ್ಲಂಗ್ ಕಾನ್ವೆಂಟ್‌ನ ಆರ್.ಸಮೀಕ್ಷಾ (ದ್ವಿತೀಯ), ಎಂ.ಆರ್.ಸುಚಿತಾ, ಜಿ.ಆರ್.ಶ್ರೇಯಾಶೆಟ್ಟಿ, ಮೆಹತಾ (ತೃತೀಯ), ಹಿರಿಯ ವಿಭಾಗದಲ್ಲಿ  ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ರೇವತಿ ಎಂ.ಎಸ್ (ಪ್ರಥಮ), ಪಿ.ಜೆ.ಮೃದುಲ್, ಎಸ್.ಸುಕನ್ಯಾ ಶೇಟ್ (ದ್ವಿತೀಯ), ಆದರ್ಶ ವಿದ್ಯಾಲಯ ಎಂ.ಎನ್.ವಿಷ್ಣುತೀರ್ಥ, ಕೆ. ಸುಕೇತ್,  ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ಅಪೇಕ್ಷೆ ಪೈ (ತೃತೀಯ), ವಯಸ್ಕರ ವಿಭಾಗದಲ್ಲಿ ಮಿಲ್ಟನ್ ಪಬ್ಲಿಕ್ ಶಾಲೆಯ ರವಿ ನಾಯಕ್ (ಪ್ರಥಮ), ಡಿ.ರಶ್ಮಿ , ಕ್ರೈಸ್ಟ್ ಜ್ಯೂನಿಯರ್ ಕಾಲೇಜು ಎನ್.ಮನು (ದ್ವಿತೀಯ), ಆರ್.ಹರ್ಷಿತಾ, ಬಿ.ಕಲ್ಯಾಣಿ, ವಿಮಲಾ ಎಸ್.ಶೆಟ್ಟಿ(ತೃತೀಯ).ವಯಸ್ಕರ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ರವಿನಾಯಕ್, `ದೀರ್ಘ ಇತಿಹಾಸವಿರುವ ಪ್ರತಿಕೆಯೊಂದು ಆಯೋಜಿಸಿರುವ ಚಿತ್ರಕಲಾಸ್ಪರ್ಧೆಯಲ್ಲಿ ಭಾಗವಹಿಸಿ ಮೊದಲ ಬಹುಮಾನ ಪಡೆದಿರುವುದಕ್ಕೆ ಬಹಳ ಸಂತಸವಾಗಿದೆ. ಮುಂದಿನ ವರ್ಷವೂ ಭಾಗವಹಿಸುತ್ತೇನೆ' ಎಂದು ಸಂತಸ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry