ರೇಡ್ ದಿ ಹಿಮಾಲಯ: ಮತ್ತೆ ಮಿಂಚಿದ ರಾಣಾ- ಅಶ್ವಿನ್

7

ರೇಡ್ ದಿ ಹಿಮಾಲಯ: ಮತ್ತೆ ಮಿಂಚಿದ ರಾಣಾ- ಅಶ್ವಿನ್

Published:
Updated:
ರೇಡ್ ದಿ ಹಿಮಾಲಯ: ಮತ್ತೆ ಮಿಂಚಿದ ರಾಣಾ- ಅಶ್ವಿನ್

ಮಂಗಳೂರು: ನಿರೀಕ್ಷೆಯಂತೆ ಮನಾಲಿಯ ಸುರೇಶ್ ರಾಣಾ ಮತ್ತು ಸಹ ಚಾಲಕರಾಗಿದ್ದ ಮಂಗಳೂರಿನ ಅಶ್ವಿನ್ ನಾಯಕ್ ಜೋಡಿ, ಸೋಮವಾರ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯಗೊಂಡ 13ನೇ ಮಾರುತಿ ಸುಜುಕಿ `ರೇಡ್ ದಿ ಹಿಮಾಲಯ~ ರ‌್ಯಾಲಿಯ `ಎಕ್ಸ್‌ಟ್ರೀಮ್ ಫೋರ್‌ವೀಲರ್~ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಕಳೆದ ಬಾರಿಯೂ ಈ ರ‌್ಯಾಲಿಯಲ್ಲಿ ಇದೇ ಜೋಡಿ ಅಗ್ರಸ್ಥಾನ ಪಡೆದಿತ್ತು.ಶಿಮ್ಲಾದಿಂದ 1950 ಕಿ.ಮೀ. ದೂರದ ಆರು ದಿನಗಳ (ಆರು ಲೆಗ್) ಕಠಿಣ ರ‌್ಯಾಲಿ ಮಂಗಳವಾರ ಆರಂಭವಾಗಿತ್ತು. ಶ್ರೀನಗರದಲ್ಲಿ ಸೋಮವಾರ ಸಂಜೆ ಬಹುಮಾನ ವಿತರಣೆ ನಡೆಯಿತು.`ಈ ಬಾರಿ ರ‌್ಯಾಲಿ ತುಂಬಾ ಪ್ರಯಾಸಕರವಾಗಿತ್ತು. ಕಾರ್ಗಿಲ್‌ಗೆ ಮೊದಲು ರಂಗ್ದುಮ್‌ನಲ್ಲಿ (ಜಮ್ಮು ಮತ್ತು ಕಾಶ್ಮೀರ) ರಾತ್ರಿ ಉಷ್ಣಾಂಶ -16 ಡಿಗ್ರಿಗೆ ಕುಸಿದಿತ್ತು. ಜತೆಗೆ ವಾಹನ (ಮಾರುತಿ ಸುಜುಕಿ ಜಿಪ್ಸಿ) ಕೆಲವು ಸಲ ಸಮಸ್ಯೆ ಕೊಟ್ಟಿತು. ಒಟ್ಟಾರೆ 30 ನಿಮಿಷ ವ್ಯರ್ಥವಾಯಿತು. ಆದರೂ ಈ ಹಿನ್ನಡೆಗಳು ಗೆಲುವಿಗೆ ಸಮಸ್ಯೆಯಾಗಲಿಲ್ಲ~ ಎಂದು ಅಶ್ವಿನ್, ಮಂಗಳವಾರ ಶ್ರೀನಗರದಿಂದ `ಪ್ರಜಾವಾಣಿ~ಗೆ ತಿಳಿಸಿದರು. ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಕ್ರಮಿಸಬೇಕಾದ ದೂರವೂ ಅಧಿಕವಾಗಿತ್ತು ಎಂದರು.ಪಶ್ಚಿಮ ಹಿಮಾಲಯದ ರಸ್ತೆಗಳನ್ನೆಲ್ಲ ಚೆನ್ನಾಗಿ ತಿಳಿದುಕೊಂಡಿರುವ ಒಟ್ಟಾರೆ ರಾಣಾ ಆರನೇ ಬಾರಿ ವಿಜೇತರಾಗಿದ್ದಾರೆ.ರಾಣಾ- ಅಶ್ವಿನ್, ಹೆದ್ದಾರಿ ಹೊರತಾದ `ರ‌್ಯಾಲಿ ಮಾರ್ಗ~ವನ್ನು 12ಗಂಟೆ 41ನಿ. 22 ಸೆಕೆಂಡುಗಳಲ್ಲಿ ಪೂರೈಸಿದರು. ಅನುಭವಿ ಜೋಡಿಯಾದ ಹರಪ್ರೀತ್ ಸಿಂಗ್ `ಬಾವಾ~ ಮತ್ತು ವಿರೇಂದ್ರ ಕಶ್ಯಪ್ (12ಗಂ. 47ನಿ. 44ಸೆ.) ಎರಡನೇ ಸ್ಥಾನ ಪಡೆದರು. ಸೇನಾ ತಂಡ ಲೆಫ್ಟಿನೆಂಟ್ ಕರ್ನಲ್ ಶಕ್ತಿ ಬಜಾಜ್ ಮತ್ತು ಮೇಜರ್ ಬಿ.ಎನ್.ಪ್ರಕಾಶ್ ಮೂರನೇ ಸ್ಥಾನ (12ಗಂ. 48ನಿ. 20ಸೆ.) ಗಳಿಸಿದರು. ಎರಡು ಮತ್ತು ಮೂರನೇ ಸ್ಥಾನ ಗಳಿಸಿದ ತಂಡಗಳೂ ಜಿಪ್ಸಿ ವಾಹನ ಬಳಸಿದ್ದವು. ಈ ವಿಭಾಗದಲ್ಲಿ 46 ವಾಹನಗಳು ಕಣದಲ್ಲಿದ್ದವು.ದ್ವಿಚಕ್ರ ವಾಹನಗಳ (ಎಕ್ಸ್‌ಟ್ರೀಮ್ ಬೈಕ್ಸ್) ವಿಭಾಗದಲ್ಲಿ ಆಸ್ಟ್ರಿಯಾದ ಹೆಲ್ಮಟ್ ಫ್ರಾವಾಲ್ನರ್ (ಹಸ್ಕ್‌ವರ್ನ್ ಟಿ.ಇ. 449) ಅಗ್ರಸ್ಥಾನ ಪಡೆದರು (ಅವಧಿ: 10ಗಂ. 28ನಿ. 33ಸೆ). ಕಳೆದ ಬಾರಿ ವಿಜೇತರಾಗಿದ್ದ ಬೆಂಗಳೂರಿನ ಆಶಿಷ್ ಮೌದ್ಗಿಲ್ 11ನಿಮಿಷ ಹೆಚ್ಚಿಗೆ ತೆಗೆದುಕೊಂಡು, ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆಸ್ಟ್ರಿಯಾದ ಲೆಹ್ನರ್ ಗಾಟ್‌ಫ್ರಿಡ್ ಮೂರನೇ ಸ್ಥಾನ ಪಡೆದರು. ಆಸ್ಟ್ರಿಯಾದ ಆರು ಮಂದಿ ಈ ವಿಭಾಗದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry