ರೇಬಿಸ್ಗೆ ಲಸಿಕೆಯೊಂದೇ ಮದ್ದು
`ಸಾರ್, ನಾವು ಮನೆಮಂದಿಯೆಲ್ಲಾ ಈ ದನದ ಹಾಲುಂಡಿದ್ದೇವೆ. ಈಗ ಎಲ್ರೂ ಇಂಜಕ್ಷನ್ ತಗೋಬೇಕಾ?~ ಆ ತಾಯಿಯ ಮುಖದಲ್ಲಿ ವಿಪರೀತ ಆತಂಕ. ಮೇವು ಬಿಟ್ಟು ಸ್ವಲ್ಪ ವಿಚಿತ್ರ ಲಕ್ಷಣಗಳನ್ನು ತೋರಿಸುತ್ತಿದ್ದ ಅವರ ಹಸುವನ್ನು ಪರೀಕ್ಷಿಸುತ್ತಾ `ಇದಕ್ಕೆ ಹುಚ್ಚು ಹಿಡಿದಿದೆ~ ಎಂಬ ನನ್ನ ನಿರ್ಣಯ ತಿಳಿಸುತ್ತಿದ್ದಂತೆ ಮನೆಯವರೆಲ್ಲಾ ಗಾಬರಿ ಬಿದ್ದಿದ್ದರು. ಮೇಯಲು ಬಿಟ್ಟ ದನಕ್ಕೆ ಹುಚ್ಚು ನಾಯಿ ಕಚ್ಚಿದ್ದು ಅವರಿಗೆ ಗೊತ್ತಿರಲ್ಲಿಲ.
`ಹಾಲನ್ನು ಕಾಯಿಸಿ ಕುಡಿಯುವುದರಿಂದ ಏನೂ ಅಪಾಯವಿಲ್ಲ. ಆದರೆ ದನದ ಬಾಯಿಗೆ ಕೈ ಹಾಕಿ ಔಷಧ ತಿನ್ಸಿದೋರು ಮಾತ್ರ ಇಂಜಕ್ಷನ್ ತೆಗೆದುಕೊಳ್ಳಲೇಬೇಕು...~ ನಾನು ವಿವರವಾಗಿ ಈ ರೋಗದ ಬಗ್ಗೆ ತಿಳಿಸಿ ಹೇಳುತ್ತಿದ್ದಂತೆ ಅವರ ಭಯ ಮತ್ತಷ್ಟು ಹೆಚ್ಚಿತ್ತು!
ಲಿಸ್ಸಾ ವೈರಸ್ ಎಂಬ ವೈರಾಣುಗಳಿಂದ ಬರುವ ಈ ಕಾಯಿಲೆ ವನ್ಯ ಮೃಗಗಳಾದ ನರಿ, ತೋಳಗಳಲ್ಲಿ ಸಾಮಾನ್ಯ. ಜೊತೆಗೆ ನಾಯಿ , ಇಲಿ, ಹೆಗ್ಗಣಗಳಲ್ಲೂ ಜಾಸ್ತಿ. ದನ, ಎಮ್ಮೆ, ಕುರಿ, ಮೇಕೆ, ಬೆಕ್ಕು, ಕುದುರೆ ಸೇರಿದಂತೆ ಬಿಸಿ ರಕ್ತದ ಯಾವುದೇ ಪ್ರಾಣಿಯನ್ನು ಈ ಕಾಯಿಲೆ ಬಾಧಿಸಬಹುದು. ಕೆಲವು ಜಾತಿಯ ಬಾವಲಿಗಳು ರೋಗಾಣುಗಳ ವಾಹಕಗಳಾಗಿದ್ದು ರೋಗ ಪ್ರಸಾರದಲ್ಲಿ ಪಾತ್ರ ವಹಿಸುತ್ತವೆ.
ಸಾಮಾನ್ಯವಾಗಿ ಹುಚ್ಚು ಹಿಡಿದ ನರಿ, ತೋಳಗಳಿಂದ ಕಚ್ಚಿಸಿಕೊಂಡ ನಾಯಿಗಳಿಗೆ ರೋಗ ತಗಲುತ್ತದೆ. ಹುಚ್ಚುನಾಯಿಯ ಜೊಲ್ಲಿನಲ್ಲಿ ವೈರಾಣುಗಳಿದ್ದು, ಆ ನಾಯಿ ಮನುಷ್ಯರಿಗಾಗಲಿ, ಇತರೆ ಪ್ರಾಣಿಗಳಿಗಾಗಲಿ ಕಚ್ಚಿದಾಗ ಜೊಲ್ಲಿನ ಮೂಲಕ ಗಾಯವನ್ನು ಸೇರುತ್ತವೆ. ರೋಗಾಣುಗಳು ದೇಹ ಸೇರಿದ ಒಂದು ವಾರದಿಂದ ಎರಡು ವರ್ಷದೊಳಗೆ ಕಾಯಿಲೆ ಬರಬಹುದು. ಮೆದುಳಿಗೆ ಹತ್ತಿರದಲ್ಲಿರುವ ಮುಖ, ತಲೆ ಮುಂತಾದ ಭಾಗಗಳಲ್ಲಿ ಕಡಿತಗಳಾದಾಗ ರೋಗ ಬೇಗ ಬರುವುದು.
ರೋಗಲಕ್ಷಣಗಳೇನು?: ಪ್ರಾಣಿಗಳಲ್ಲಿ ಈ ರೋಗವನ್ನು ರೌದ್ರ ಮತ್ತು ಸೌಮ್ಯ ಸ್ವರೂಪದ ಕಾಯಿಲೆಗಳಾಗಿ ವಿಂಗಡಿಸಬಹುದು. ರೌದ್ರ ರೂಪದಲ್ಲಿ, ನಾಯಿಗಳು ಒಂದೇ ಸಮನೆ ಬೊಗಳುತ್ತವೆ. ಆಹಾರ, ನೀರು ಮುಟ್ಟದಿರುವುದು, ಬಾಯಿಯಿಂದ ಇಳಿಯುತ್ತಿರುವ ದಪ್ಪನೆ ಜೊಲ್ಲು, ಬೆಳಕನ್ನು ಕಂಡರೆ ಬೆಚ್ಚುವುದು, ಶೂನ್ಯವನ್ನು ದಿಟ್ಟಿಸುವುದು, ಪದೇ ಪದೇ ಮೂತ್ರ ವಿಸರ್ಜನೆ, ಹೆಚ್ಚು ಮಲಗದೆ ನಿಂತೇ ಇರುವುದು, ಕಟ್ಟಿದ ಹಗ್ಗ ಅಥವಾ ಸರಪಳಿಯನ್ನು ಕಚ್ಚಿ ತುಂಡರಿಸಲು ನೋಡುವುದು, ಗುದ್ದಲು ಬರುವುದು, ಗೋಡೆಗೆ ತಲೆ ಹೊಡೆದುಕೊಂಡ ಜಾನುವಾರುಗಳ ಹಣೆಯೇ ಒಡೆಯಬಹುದು. ತನ್ನ ಮಾಲೀಕನನ್ನೇ ಗುರುತಿಸದಿರುವುದು, ಪದೇ ಪದೇ ಆಕಳಿಸಿದಂತೆ ಮಾಡುವುದು ಇತ್ಯಾದಿ ಲಕ್ಷಣಗಳು ಕಾಣಿಸಬಹುದು.
ಹುಚ್ಚು ಹಿಡಿದ ನಾಯಿಗಳು ಎದುರಿಗೆ ಸಿಕ್ಕಿದ ಮನುಷ್ಯ, ಪ್ರಾಣಿಗಳನ್ನು ಕಚ್ಚುತ್ತಾ ಬಲು ದೂರದವರೆಗೂ ಹೋಗುವುದರಿಂದ ಸೋಂಕು ಬೇಗನೆ ಎಲ್ಲೆಡೆ ಹರಡುತ್ತದೆ. ಸಾಮಾನ್ಯವಾಗಿ ಈ ರೀತಿಯ ರೋಗ ಲಕ್ಷಣಗಳು ಕಾಣಿಸಿಕೊಂಡ ಒಂದು ವಾರದೊಳಗೆ ಸಾವು ಬರುತ್ತದೆ. ರೋಗ ಪೀಡಿತ ಜಾನುವಾರುಗಳು ನೀರನ್ನು ಕಂಡರೆ ಬೆಚ್ಚುವುದಿಲ್ಲ. ಈ ವಿಚಾರ ಹೈನುಗಾರರ ಗಮನದಲ್ಲಿದ್ದರೆ ಒಳ್ಳೆಯದು. ಕೆಲವರು ನೀರಿನ ಬಕೆಟನ್ನು ಎದುರಿಗಿಟ್ಟು ದನ/ಎಮ್ಮೆ ಬೆಚ್ಚದಿದ್ದರೆ ಇದು ಖಂಡಿತಾ ಹುಚ್ಚಲ್ಲ ಎಂದು ತಾವೇ ನಿರ್ಧರಿಸುವುದುಂಟು.
ಸೌಮ್ಯ ವಿಧದ ರೇಬಿಸ್ ರೋಗದಲ್ಲಿ ಪ್ರಾಣಿ ಆಹಾರ ಸೇವಿಸದೆ ಮಂಕಾಗಿರುತ್ತದೆ, ಗಂಟಲಿನಲ್ಲಿ ಏನೋ ಸಿಕ್ಕಿ ಬಿದಂತೆ ಚಡಪಡಿಸುವುದು, ಹಲ್ಲು ಕಡಿಯುವುದು, ಬಾಯಲ್ಲಿ ದಪ್ಪನೆ ಜೊಲ್ಲು, ಗುದದ್ವಾರದಿಂದ ವಾಯು ಎಳೆದುಕೊಳ್ಳುವುದು ಬಿಡುವುದು ಮುಂತಾದ ಲಕ್ಷಣಗಳು ಕಾಣಿಸಬಹುದು. ದೇಹ ನಿತ್ರಾಣಗೊಂಡು, ಪಾರ್ಶ್ವವಾಯು ಹೊಡೆದಂತಾಗಿ ಎದ್ದೇಳಲಾಗದೆ ಮರಣ ಹೊಂದುತ್ತದೆ.
ರೌದ್ರ ರೂಪದ ಕಾಯಿಲೆಯನ್ನು ಪ್ರಾಣಿಗಳ ಆರ್ಭಟದಿಂದಾಗಿ ಸುಲಭವಾಗಿ ಪತ್ತೆ ಸಾಧ್ಯವಾದರೂ ಮಂದ ರೀತಿಯ ರೇಬಿಸ್ನಲ್ಲಿ ರೋಗ ಪತ್ತೆ ಸ್ವಲ್ಪ ಕಷ್ಟ. ಪ್ರಾಣಿ ಮರಣ ಹೊಂದಿದ ನಂತರವಷ್ಟೆ ಮೆದುಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮೂಲಕ ಕಾಯಿಲೆಯನ್ನು ಖಚಿತಪಡಿಸಿಕೊಳ್ಳಬಹುದು. ರೋಗ ಲಕ್ಷಣಗಳು, ಆ ಭಾಗದಲ್ಲಿರುವ ರೋಗದ ಪ್ರಕರಣಗಳು, ಹುಚ್ಚು ನಾಯಿ ಕಡಿದಿರುವ ಮಾಹಿತಿ ಕಲೆ ಹಾಕಿ ರೋಗ ನಿರ್ಣಯ ಮಾಡಬೇಕಾಗುತ್ತದೆ.
* ಜಾನುವಾರುಗಳಿಗೆ ನಾಯಿ ಕಡಿದ ಜಾಗವನ್ನು ಸೋಪು ಹಾಕಿ ಚೆನ್ನಾಗಿ ತೊಳೆದು, ನಂಜು ನಾಶಕಗಳನ್ನು ಹಚ್ಚಬೇಕು. ಹಲವು ರೈತರು ಇಂತಹ ಗಾಯಗಳನ್ನು ಕೈಯಿಂದ ತೊಳೆಯಲು ಹೆದರಿ ಹಾಗೆ ಬಿಡುವುದು ಉಂಟು. ಹೀಗಾದಾಗ ಅಪಾಯದ ಸಾಧ್ಯತೆ ಜಾಸ್ತಿ. ಗಾಯಗಳಿಗೆ ಹೊಲಿಗೆ ಹಾಕುವುದಾಗಲಿ, ಬಿಗಿಯಾಗಿ ಬ್ಯಾಂಡೇಜ್ ಕಟ್ಟುವುದಾಗಲಿ ಮಾಡಬಾರದು.
* ಹುಚ್ಚು ನಾಯಿ ಕಡಿತದ ನಂತರ ವೈದ್ಯರ ಸಲಹೆಯಂತೆ ಲಸಿಕೆ ಹಾಕಬೇಕು. ಒಂದು ತಿಂಗಳೊಳಗೆ ಐದು ಬಾರಿ ಲಸಿಕೆ ಹಾಕಲಾಗುತ್ತದೆ.
* ಸಾಧಾರಣವಾಗಿ ಬಹುತೇಕ ಹುಚ್ಚುನಾಯಿ ರೋಗದ ಪ್ರಕರಣಗಳು ನಾಯಿ ಕಡಿತದಿಂದ ಬರುವುದರಿಂದ ನಾಯಿಗಳಲ್ಲಿ ಕಾಯಿಲೆ ಬರದಂತೆ ತಡೆಗಟ್ಟಲು ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು. ನಾಯಿ ಮರಿಗೆ ಸುಮಾರು ಎರಡು ತಿಂಗಳ ವಯಸ್ಸಿನಲ್ಲಿ ಲಸಿಕೆ ಹಾಕಿಸಿ ಒಂದು ತಿಂಗಳ ನಂತರ ಬೂಸ್ಟರ್ ಲಸಿಕೆ ಕೊಡಿಸಬೇಕು. ನಂತರದಲ್ಲಿ ವರ್ಷಕ್ಕೊಮ್ಮೆ ಇದನ್ನು ಪುನರಾವರ್ತಿಸಿದರೆ ಅಂತಹ ನಾಯಿ ಗಳಿಗೆ ರೇಬಿಸ್ ವಿರುದ್ಧ ರಕ್ಷಣೆ ಇರುತ್ತದೆ. ಮನೆಯಲ್ಲಿ ಸಾಕಿದ ಬೆಕ್ಕುಗಳಿಗೂ ಲಸಿಕೆ ಕೊಡಿಸಬೇಕು.
* ಜಾನುವಾರುಗಳಲ್ಲಿ ರೋಗದ ಆರಂಭಿಕ ಹಂತದಲ್ಲಿ ಲಕ್ಷಣಗಳು ಸರಿಯಾಗಿ ತಿಳಿಯದೆ ಬೇರೆ ತೊಂದರೆಯೆಂದು ಭಾವಿಸಿ ಚಿಕಿತ್ಸೆ ನೀಡುವ ಸಾಧ್ಯತೆಯುಂಟು. ಒಮ್ಮಮ್ಮೆ ಬೆದೆಯ ಲಕ್ಷಣಗಳೆಂದು ತಪ್ಪಾಗಿ ಭಾವಿಸಿ ಅಂತಹ ದನ/ಎಮ್ಮೆಗೆ ಕೃತಕ ಗರ್ಭಧಾರಣೆ ಮಾಡುವ ಸಂಭವವಿದೆ. ಗಂಟಲಲ್ಲಿ ಏನಾದರೂ ಸಿಕ್ಕಿರಬಹುದೆಂದು ಬಾಯಿಯ ಒಳಗೆ ಪರೀಕ್ಷಿಸುವ ವೇಳೆಯಲ್ಲಿ ಜೊಲ್ಲಿನ ಸಂಪರ್ಕವಾಗಬಹುದು.
ಹಾಗೆಯೆ ಔಷಧ ತಿನಿಸುವಾಗಲೂ ಕೈಗೆ ಜೊಲ್ಲು ಮೆತ್ತಬಹುದು. ರೋಗಾಣುಗಳು ಜೊಲ್ಲಿನಲ್ಲಿ ವಿಸರ್ಜನೆಯಾಗುವುದರಿಂದ ಕೈಯಲ್ಲಿ ಗಾಯವಿದ್ದಾಗ ಅಪಾಯದ ಸಂಭವ ಜಾಸ್ತಿ. ಅಲ್ಲದೆಯೇ ಜೊಲ್ಲು ಮುಖಕ್ಕೂ ಹಾರಬಹುದು. ಹಾಗಾಗಿ ಇದು ಹುಚ್ಚು ಎಂದು ಗೊತ್ತಾಗುತ್ತಿದಂತೆ ಜೊಲ್ಲಿನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬೇಕು. ನಾಯಿ ಕಚ್ಚಿದ್ದು ಗೊತ್ತಿದ್ದರೆ ಇಲ್ಲವೇ ಅಕ್ಕಪಕ್ಕದಲ್ಲಿ ಅಂತಹ ಪ್ರಕರಣಗಳು ನಡೆದಿದ್ದರೆ ವೈದ್ಯರ ಗಮನಕ್ಕೆ ತರಬೇಕು.
* ಹಸುಗಳಿಗೆ ಹುಚ್ಚು ಹಿಡಿದಾಗ ಹಾಲಿನಲ್ಲೂ ಸ್ವಲ್ಪ ಪ್ರಮಾಣದಲ್ಲಿ ವೈರಾಣುಗಳು ವಿಸರ್ಜನೆಯಾಗುವ ಸಂಭವವಿರುತ್ತದೆ. ಆದರೆ ಹಾಲನ್ನು ಕಾಯಿಸಿದಾಗ ಇವು ನಾಶವಾಗುತ್ತವೆ. ಆದರಿಂದ ಯಾವಾಗಲೂ ಹಾಲನ್ನು ಕಾಯಿಸಿ ಉಪಯೋಗಿಸುವುದು ಸುರಕ್ಷಿತ. ಇಂತಹ ಸಂದರ್ಭದಲ್ಲಿ ಹಾಲು ಕುಡಿದ ಮನೆಮಂದಿಯೆಲ್ಲಾ ಇಂಜೆಕ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಹಸಿ ಹಾಲನ್ನು ಕುಡಿದಾಗ ಜಠರದ ಆಮ್ಲದಲ್ಲಿ ವೈರಾಣುಗಳು ನಾಶ ಹೊಂದುವುದಾದರೂ, ಬಾಯಿಹುಣ್ಣು, ಹೊಟ್ಟೆಯ ಹುಣ್ಣಿದ್ದಾಗ ಅಪಾಯದ ಸಾಧ್ಯತೆ ಉಂಟು.
* ಹಸುಗಳನ್ನು ಮೇಯಲು ಹೊರ ಬಿಡುವ ಅಭ್ಯಾಸವಿದ್ದಲ್ಲಿ ಕೊಟ್ಟಿಗೆಗೆ ವಾಪಾಸಾದ ನಂತರ ಅವುಗಳನ್ನೊಮ್ಮೆ ಪೂರ್ಣವಾಗಿ ಪರಿಶೀಲಿಸುವ ಕ್ರಮ ಒಳ್ಳೆಯದು.
* ದನದ ಕೊಟ್ಟಿಗೆ ನಾಯಿ ಅಥವಾ ಕಾಡು ಪ್ರಾಣಿಗಳು ಒಳ ಬರದಂತೆ ಬಂದೋಬಸ್ತಾಗಿರಬೇಕು.
* ಮೊದಲು ನಾಯಿ ಕಚ್ಚಿದರೆ ಆ ನಾಯಿಯನ್ನು ಹತ್ತು ದಿನ ಗಮನಿಸುವಂತೆ ತಿಳಿಸಲಾಗುತ್ತಿತ್ತು. ಅಕಸ್ಮಾತ್ ಆ ನಾಯಿ ಸತ್ತರೆ ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಸಲಹೆ ನೀಡಲಾಗುತ್ತಿತ್ತು. ಆದರೆ ಲಸಿಕೆ ಹಾಕಿದ ನಾಯಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ನಾಯಿ ಕಚ್ಚಿದರೂ ಲಸಿಕೆ ತೆಗೆದುಕೊಳ್ಳುವುದೇ ಸೂಕ್ತ. ಏಕೆಂದರೆ ಕೆಲವು ಆರೋಗ್ಯವಂತ ನಾಯಿಗಳ ಜೊಲ್ಲಿನಲ್ಲೂ ರೇಬಿಸ್ ವೈರಾಣುಗಳು ಪತ್ತೆಯಾಗಿವೆ!
* ಗುಡುಗು-ಸಿಡಿಲು ಇರುವಾಗ ಮಾತ್ರ ಈ ರೋಗ ಬರುವುದೆಂಬ ಅನಿಸಿಕೆ ಹಳ್ಳಿಗರದ್ದು, ಇದೊಂದು ಮೂಢನಂಬಿಕೆಯಷ್ಟೆ. ವರ್ಷದ ಎಲ್ಲಾ ಕಾಲದಲ್ಲೂ ಕಾಯಿಲೆ ಬರಬಹುದಾದರೂ ಸಂತಾನೋತ್ಪತ್ತಿ ಸಮಯದಲ್ಲಿ ಪ್ರಾಣಿಗಳ ಗುಂಪುಗೂಡುವಿಕೆ, ಓಡಾಟ ಹೆಚ್ಚಿರುವುದರಿಂದ ಈ ಸಮಯದಲ್ಲಿ ರೋಗ ಹರಡುವುದು ಜಾಸ್ತಿ. ಅಲ್ಲದೆ ನಾಯಿ ಕಚ್ಚಿದಾಗ ನಾಟಿ ಔಷಧ ಹಾಕುವುದರಿಂದ ಅಥವಾ ನೀಲಿ ಪುಡಿ ತಿನಿಸುವುದರಿಂದ ರೋಗ ತಡೆಗಟ್ಟಲು ಸಾಧ್ಯವಿಲ್ಲ. ರೇಬಿಸ್ ತಡೆಯಲು ಲಸಿಕೆಯೊಂದೇ ಮದ್ದು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.