ಭಾನುವಾರ, ಮಾರ್ಚ್ 7, 2021
29 °C

ರೇವತಿ ಮಳೆ: ಕಾಫಿ ಕಣಿವೆಯಲ್ಲಿ ಸಂಭ್ರಮ

ಪ್ರಜಾವಾಣಿ ವಾರ್ತೆ ಕೆ.ಎಂ.ಸಂತೋಷ್‌ಕುಮಾರ್ Updated:

ಅಕ್ಷರ ಗಾತ್ರ : | |

ರೇವತಿ ಮಳೆ: ಕಾಫಿ ಕಣಿವೆಯಲ್ಲಿ ಸಂಭ್ರಮ

ಚಿಕ್ಕಮಗಳೂರು: ಅಪರೂಪದ ರೇವತಿ ಮಳೆ ಈ ಬಾರಿ ಸುರಿದ ಕಾರಣ ಚಿಕ್ಕಮಗಳೂರು ಕಣಿವೆಯ ಕಾಫಿ ಗಿಡಗಳಲ್ಲಿ ಹೂಗಳು ಅರಳಿದ್ದು, ಕಾಫಿ ಬೆಳೆಗಾರರು ಬಂಪರ್ ಫಸಲು ನಿರೀಕ್ಷಿಸುತ್ತಿದ್ದಾರೆ.ಚಿಕ್ಕಮಗಳೂರು ತಾಲ್ಲೂಕು ಹಾಗೂ ಗಿರಿಶ್ರೇಣಿಗಳಲ್ಲಿ ಕಳೆದ ವರ್ಷ ರೇವತಿ ಮಳೆ ಸುರಿದಿರಲಿಲ್ಲ. ಆದರೆ, ಈ ಬಾರಿ ವರುಣ ಕಾಫಿ ತೋಟಗಳ ಮೇಲೆ ಕೃಪೆ ತೋರಿದ್ದಾನೆ. ಕಾಫಿ ಬೀಡು ಎನಿಸಿದ ಚಿಕ್ಕಮಗಳೂರು, ಮಡಿಕೇರಿ ಹಾಗೂ ಹಾಸನ ಜಿಲ್ಲೆಗಳ ಕಾಫಿ ಬೆಳೆಯುವ ಬಹುತೇಕ ಭಾಗದಲ್ಲಿ ರೇವತಿ ಮಳೆ 3-4 ಬಾರಿ ಹದವಾಗಿ ಬಿದ್ದಿದೆ. ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.`ನಾಲ್ಕು ವರ್ಷಗಳ ನಂತರ ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು, ಬ್ಯಾರುವಳ್ಳಿ ಸುತ್ತಮುತ್ತ ಹಾಗೂ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ರೇವತಿ ಮಳೆಯಾಗಿದೆ. ಕಳೆದ ನಾಲ್ಕೈದು ವರ್ಷ ನಮ್ಮ ಭಾಗದಲ್ಲಿ ಈ ಪ್ರಮಾಣದಲ್ಲಿ ಹೂಗೊಂಚಲು ಕಂಡಿರಲಿಲ್ಲ. ಈ ವರ್ಷ ಮಳೆಗಾಲ ಚೆನ್ನಾಗಿ ಆದರೆ ಹೆಚ್ಚು ಇಳುವರಿ ನಿರೀಕ್ಷಿಸಲು ಅಡ್ಡಿಯಿಲ್ಲ~ ಎನ್ನುತ್ತಾರೆ ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಆರ್.ಉತ್ತಮ್‌ಗೌಡ.`ಕಳೆದ ಅಕ್ಟೋಬರ್‌ನಿಂದ ರೇವತಿ ಮಳೆ ಬೀಳುವವರೆಗೂ ಒಂದೇ ಒಂದು ಹನಿ ಮಳೆ ಸುರಿಯದೆ, ಗಿಡಗಳು ಬಿಸಿಲಿಗೆ ಸೊರಗಿದ್ದವು. ಗಿಡ ಸೊರಗಿದಷ್ಟೂ ಹೆಚ್ಚು ಹೂವು ಹಿಡಿಯುತ್ತವೆ. ಸತತ 3-4  ಬಾರಿ ಮಳೆ ನೆಲ ತಂಪಾಗುವಂತೆ ಸುರಿದಿದ್ದರಿಂದ ಬಹಳಷ್ಟು ತೋಟಗಳಲ್ಲಿ ಕಾಫಿ ಗಿಡಗಳು ಸದೃಢ ಮತ್ತು ಆರೋಗ್ಯಪೂರ್ಣವಾಗಿ ಕಾಣುತ್ತಿವೆ. ಇನ್ನೂ ಅಶ್ವಿನಿ ಮಳೆ ಕನಿಷ್ಠ ಎರಡು ಹದ ಬಂದರೆ ಹೂವು ಚೆನ್ನಾಗಿ ಫಸಲುಗಟ್ಟುತ್ತದೆ. ಭರಣಿ ಮಳೆಯೂ ಬಂದರೆ ಬೋರರ್ ಸಮಸ್ಯೆಯೂ ಹತೋಟಿಗೆ ಬರುತ್ತದೆ. ತೋಟಗಳಿಗೂ ಕೀಟಬಾಧೆ ಅಷ್ಟಾಗಿ ಕಾಣಿಸಲಾರದು~ ಎನ್ನುವುದು ಬೆಳೆಗಾರರ ಅನಿಸಿಕೆ.ಕಾಫಿ ಬೆಳೆಯುವ ಪ್ರಮುಖ ಮೂರು ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಿದೆ. ಸಮ ಪ್ರಮಾಣದಲ್ಲಿ ಮಳೆ ಬೀಳದೆ, ಇನ್ನೂ ಶೇ 40ರಷ್ಟು ತೋಟಗಳಲ್ಲಿ ಹೂವು ಅರಳಿಲ್ಲ. ಬೆಳೆಗಾರರು ಆಕಾಶ ದಿಟ್ಟಿಸಿ ವರುಣನನ್ನು ಪ್ರಾರ್ಥಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ, ಮಲ್ಲಂದೂರು, ಮೂಡಿಗೆರೆ, ಆಲ್ದೂರು, ಬಾಳೆಹೊನ್ನೂರು ಹಾಗೂ ಗಿರಿ ಪ್ರದೇಶದಲ್ಲಿ ಒಳ್ಳೆಯ ಮಳೆಯಾಗಿದೆ. ಗೋಣಿಬೀಡು, ಜನ್ನಾಪುರ, ಬಸ್ಕಲ್, ದೊಡ್ಡನಗುಡ್ಡೆ ಎಸ್ಟೇಟ್, ಮಾಕೋನಹಳ್ಳಿ ಭಾಗದಲ್ಲಿ ಅಷ್ಟಾಗಿ ಮಳೆಯಾಗಿಲ್ಲ. ಬಾಳೆಹೊನ್ನೂರಿಗೆ ಒಳ್ಳೆಯ ಮಳೆ ಆಗಿದ್ದರೆ ಪಕ್ಕದ ಜಯಪುರದಲ್ಲಿ ಕಾಫಿ ಹೂವು ಫಸಲು ನಿಲ್ಲುವಷ್ಟು ಮಳೆ ಬಿದ್ದಿಲ್ಲ.ಹಾಸನ ಜಿಲ್ಲೆ ಸಕಲೇಶಪುರದಲ್ಲಿಯೂ ಬಹುತೇಕ ಕಡೆ ಮಳೆ ಇಲ್ಲ. ಬಾಳ್ಳುಪೇಟೆ, ಹಾನಬಾಳು, ಬೇಲೂರು, ನಾಗೇನಹಳ್ಳಿ, ಚೀಕನಹಳ್ಳಿ ಸುತ್ತಮುತ್ತ ಉತ್ತಮ ಮಳೆ ಆಗಿದೆ.ಮಡಿಕೇರಿ ಜಿಲ್ಲೆಯ ಶೇ 50ರಷ್ಟು ಭಾಗದಲ್ಲಷ್ಟೇ ಸಾಕಷ್ಟು ಮಳೆಯಾಗಿದೆ. ಶುಂಠಿಕೊಪ್ಪದಲ್ಲಂತೂ ಈ ಬಾರಿ ಬೆಳೆಗಾರರು ಸಂತುಷ್ಟವಾಗುವಂತೆ ಮಳೆ ಬಿದ್ದಿದೆ. ಅಶ್ವಿನಿ ಮಳೆ ಚೆನ್ನಾಗಿ ಆದರೆ ಬೆಳೆಗಾರರು ಆತಂಕಪಡುವ ಸನ್ನಿವೇಶ ಎದುರಾಗದು ಎನ್ನುತ್ತಾರೆ ಕರ್ನಾಟಕ ಫ್ಲಾಂಟರ್ಸ್‌ ಅಸೋಸಿಯೇಷನ್(ಕೆಪಿಎ) ಅಧ್ಯಕ್ಷ ಮಾರ್ವಿನ್ ರಾಡ್ರಿಗಸ್.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.