ರೇವಾ ಎನ್‌ಎಕ್ಸ್ ಆರ್: ಹೊಸ ಫೀಲ್

7

ರೇವಾ ಎನ್‌ಎಕ್ಸ್ ಆರ್: ಹೊಸ ಫೀಲ್

Published:
Updated:

ಭಾರತದ ಏಕಮಾತ್ರ ವಿದ್ಯುಚ್ಚಾಲಿತ ಕಾರೆಂದು ಹೆಸರಾಗಿರುವ ರೇವಾ ಇದೀಗ ನಾಲ್ಕು ಅವತರಣಿಕೆಗಳಲ್ಲಿ ರಸ್ತೆಗೆ ಇಳಿಯಲು ಸಜ್ಜಾಗಿದೆ. ಸುರಕ್ಷೆ, ಉತ್ತಮ ಒಳಾಂಗಣ ವಿನ್ಯಾಸ, ಒಳ್ಳೆ ಮೈಲೇಜ್ ಎಲ್ಲವನ್ನೂ ಹೊತ್ತು ಬರುತ್ತಿರುವುದು ವಿಶೇಷ.ರೇವಾ ವಿದ್ಯುಚ್ಚಾಲಿತ ಕಾರುಗಳ ಬಗ್ಗೆ ಯಾರು ತಾನೇ ಕೇಳಿಲ್ಲ. ಅದು ಎಷ್ಟೇ ಆದರೂ ಭಾರತದ ಏಕಮಾತ್ರ ವಿದ್ಯುಚ್ಚಾಲಿತ ಕಾರು. ಜತೆಗೆ ಮೊದಲ ವಿದ್ಯುಚ್ಚಾಲಿತ ಕಾರು ಎಂಬ ಹೆಗ್ಗಳಿಕೆಯೂ ಇದಕ್ಕಿದೆ. ಇಂಗ್ಲಿಷ್ ಸೈ-ಫೈ ಚಿತ್ರಗಳಲ್ಲಿ ಆಗಾಗ ಕಾಣಬರುತ್ತಿದ್ದ ವಿದ್ಯುತ್ ಅನ್ನೇ ಬಳಸಿಕೊಂಡು ಚಲಿಸುವ ಈ ರೀತಿಯ ಕಾರುಗಳು ಭಾರತದ ರಸ್ತೆಗಳಲ್ಲಿ ಸಂಚರಿಸಲು ಆರಂಭಿಸಿದಾಗ ಜನರು ಇವನ್ನು ವಿಭಿನ್ನವಾಗೇ ನೋಡಿದ್ದರು. ಅದರಲ್ಲೂ ಈ ಕಾರಿನ ಹುಟ್ಟೂರು ನಮ್ಮ ಬೆಂಗಳೂರೇ ಆಗಿದ್ದರಿಂದ ಬೆಂಗಳೂರಿನ ರಸ್ತೆಗಳಲ್ಲಂತೂ ಆಗಾಗ ರೇವಾ ಕಾರು ಕಾಣಿಸಿಕೊಳ್ಳುವುದು ಇದ್ದೇ ಇತ್ತು.ಆಟದ ಕಾರಿನಂತಿರುವ ರೇವಾ ಕೇವಲ 2  ಬಾಗಿಲುಗಳಿರುವ ಪುಟ್ಟ ಕಾರು. ಇಬ್ಬರು ವಯಸ್ಕರು ಹಾಗೂ ಇಬ್ಬರು ಮಕ್ಕಳು ಕೂರಬಹುದಾದ ಕಾರಿದು. ಕಾರಿನಲ್ಲಿನ ಬ್ಯಾಟರಿಯಿಂದ ಚಾಲನೆ ಪಡೆಯುವ ವಿದ್ಯುತ್ ಮೋಟಾರ್ ಹೊಂದಿರುವ ರೇವಾದ ವಿಶೇಷ ಏನೆಂದರೆ, ಕಾರು ನಿಲ್ಲಿಸುವಾಗ ಬ್ರೇಕ್ ಹಾಕಿದರೆ, ಅಲ್ಲೂ ವಿದ್ಯುತ್ ಉತ್ಪಾದನೆಯಾಗಿ ಅದು ಬ್ಯಾಟರಿಯಲ್ಲಿ ಶೇಖರವಾಗುವುದು. ಈ ರೀತಿಯ ಅದ್ಭುತ ತಂತ್ರಜ್ಞಾನ ಹೊಂದಿರುವ ರೇವಾ, ಮುಖ್ಯವಾಹಿನಿಯ ಸಾಂಪ್ರದಾಯಿಕ ಕಾರುಗಳ ಜತೆಗೆ ಸ್ಪರ್ಧೆ ನೀಡಲು ಗಂಭೀರ ಚಿಂತನೆ ನಡೆಸಿದ್ದು, 2010ರಲ್ಲಿ ರೇವಾ ಅನ್ನು ಮಹಿಂದ್ರಾ ಅಂಡ್ ಮಹಿಂದ್ರಾ ಕಂಪೆನಿ ಕೊಂಡುಕೊಂಡಾಗ.ರೇವಾ ಸಂಸ್ಥೆಯನ್ನು ಹುಟ್ಟುಹಾಕಿದ ಮೆಕಾನಿಕಲ್ ಎಂಜಿನಿಯರ್ ಚೇತನ್ ಮೈನಿ, ಅಮೆರಿಕ ಜನರಲ್ ಮೋಟಾರ್ಸ್ ಹಾಗೂ ಅಮೆರಿಗಾನ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಿದ್ಯುಚ್ಚಾಲಿತ ಕಾರು ತಯಾರಿಕೆಯಲ್ಲಿ ಅನುಭವ ಪಡೆದು, ಬೆಂಗಳೂರಿನಲ್ಲಿ ರೇವಾ ಕಂಪೆನಿ ಪ್ರಾರಂಭಿಸಿದರು. ರೇವಾ ಅನ್ನು ಮಹಿಂದ್ರಾ ಸಂಸ್ಥೆ ಕೊಂಡುಕೊಂಡ ಮೇಲೆ, 2010 ರಿಂದ ಪೂರ್ಣ ಪ್ರಮಾಣದ ಫ್ಯಾಮಿಲಿ ಕಾರು ತಯಾರಿಸುವ ಕನಸು ಕಂಡರು. ಅಂತೆಯೇ 4 ವಯಸ್ಕರು ಆರಾಮಾಗಿ ಕೂರಬಲ್ಲ ರೇವಾ ಎನ್‌ಎಕ್ಸ್‌ಜಿ ಕಾರನ್ನು ತಯಾರಿಸಲು ಯೋಜನೆ ಹಾಕಿಕೊಂಡರು.ಎರಡು ವರ್ಷಗಳ ಅವಿರತ ಪ್ರಯೋಗಗಳ ನಂತರ ರೇವಾ ಎನ್‌ಎಕ್ಸ್‌ಆರ್ ಕಾರು ಬಿಡುಗಡೆಗೆ ಸಿದ್ಧವಾಗಿದೆ. 2012ರ ಡಿಸೆಂಬರ್‌ನಲ್ಲಿ ರೇವಾ ಭಾರತದ ರಸ್ತೆಗಳಿಗೆ ಇಳಿಯಲಿದೆ. ರೇವಾ ನಾಲ್ಕು ಅವತರಣಿಕೆಗಳಲ್ಲಿ ರಸ್ತೆಗೆ ಇಳಿಯಲಿರುವುದು ವಿಶೇಷ. ರೇವಾ ಎನ್‌ಎಕ್ಸ್‌ಆರ್ ಸಿಟಿ, ರೇವಾ ಎನ್‌ಎಕ್ಸ್‌ಆರ್ ಸಿಟಿ ಡಿಲಕ್ಸ್, ರೇವಾ ಎನ್‌ಎಕ್ಸ್‌ಆರ್ ಇಂಟರ್ ಸಿಟಿ, ರೇವಾ ಎನ್‌ಎಕ್ಸ್‌ಆರ್ ಇಂಟರ್ ಸಿಟಿ ಡಿಲಕ್ಸ್. ಈ ನಾಲ್ಕೂ ಅವತರಣಿಕೆಗಳಲ್ಲೂ ಕಾಣಿಸಿಕೊಳ್ಳಲಿರುವ ಕಾರಿನ ಮುಖ್ಯ ಜೀವಾಳ ಅದರ ಮೋಟಾರ್ ಒಂದೇ ಆದರೂ, ಇವುಗಳಲ್ಲಿ ಬಳಕೆಯಾಗುತ್ತಿರುವ ಬ್ಯಾಟರಿ ಮಾತ್ರ ಬೇರೆ ಬೇರೆ. ಹಾಗಾಗಿ ಕಾರು ಕ್ರಮಿಸುವ ದೂರವೂ ವಿಭಿನ್ನವಾಗಿ ಇರಲಿದೆ.

ಸಂಪೂರ್ಣ ವಿದ್ಯುತ್

ಹಿಂದಿನ ರೇವಾದಂತೆ ಇದು ಸಹ ಸಂಪೂರ್ಣ ವಿದ್ಯುತ್ ಕಾರು. ಪೆಟ್ರೋಲ್ ಸಹ ಹಾಕಬಲ್ಲ ಹೈಬ್ರಿಡ್ ಕಾರು ಇದಲ್ಲ. ಅಂದರೆ ಕಾರು ಚಲಿಸುವ ಸಮಯವಷ್ಟೂ ವಿದ್ಯುತ್‌ನಿಂದಲೇ ಓಡುತ್ತದೆ. ಹಾಗಾಗಿ ರೇವಾ ಎನ್‌ಎಕ್ಸ್‌ಆರ್‌ನಲ್ಲಿ 13 ಕಿಲೋವ್ಯಾಟ್ ಹಾಗೂ 24 ಕಿಲೋವ್ಯಾಟ್ ಸಾಮರ್ಥ್ಯದ ಮೋಟಾರ್‌ಗಳನ್ನು ಅಳವಡಿಸಲಾಗಿದೆ. ಈ ಮೋಟಾರ್‌ಗಳು ವಿದ್ಯುತ್ ಬಳಸಿಕೊಂಡು ಗರಿಷ್ಠ 100 ಕಿಲೋಮೀಟರ್ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿವೆ. ಒಮ್ಮೆ ಚಾರ್ಜ್ ಮಾಡಿಕೊಂಡರಾಯಿತು. ಅತಿ ಕಡಿಮೆ ಬೆಲೆಯಲ್ಲಿ ಶ್ರೇಷ್ಠ ಮೈಲೇಜ್ ನೀಡುವ ಅತ್ಯುತ್ತಮ ಕಾರಾಗಿ ರೇವಾ ರೂಪುಗೊಂಡಿದೆ.

ಉತ್ತಮ ಮೈಲೇಜ್

ರೇವಾ ಎನ್‌ಎಕ್ಸ್‌ಆರ್‌ನಲ್ಲಿ ಲಿಥಿಯಂ ಅಯನಾ ಫಾಸ್ಫೇಟ್ ಹಾಗೂ ಲೆಡ್ ಆಸಿಡ್ ಬ್ಯಾಟರಿ ಅಳವಡಿಸಲಾಗಿದೆ. ಲಿಥಿಯಂ ಅಯಾನ್ ಬ್ಯಾಟರಿ ಇರುವ ರೇವಾ ಎನ್‌ಎಕ್ಸ್‌ಆರ್ ಇಂಟರ್‌ಸಿಟಿ ಹಾಗೂ ರೇವಾ ಎನ್‌ಎಕ್ಸ್‌ಆರ್ ಇಂಟರ್‌ಸಿಟಿ ಡಿಲಕ್ಸ್‌ನಲ್ಲಿ ಲಿಥಿಯಂ ಅಯಾನ್ ಫಾಸ್ಫೇಟ್ ಬ್ಯಾಟರಿ ಇದೆ. ಈ ಅವತರಣಿಕೆಯ ಕಾರು ಗರಿಷ್ಠ 100 ಕಿಲೋಮೀಟರ್ ಮೈಲೇಜ್ ನೀಡುತ್ತದೆ.ಲೆಡ್ ಆಸಿಡ್ ಬ್ಯಾಟರಿ ಇರುವ ರೇವಾ ಎನ್‌ಎಕ್ಸ್‌ಆರ್ ಸಿಟಿ ಹಾಗೂ ರೇವಾ ಎನ್‌ಎಕ್ಸ್‌ಆರ್ ಸಿಟಿ ಡಿಲಕ್ಸ್ 60 ಕಿಲೋಮೀಟರ್ ಮೈಲೇಜ್ ನೀಡಲಿವೆ. ಇವೆರಡು ಅವತರಣಿಕೆಯ ಕಾರುಗಳೂ ನಗರ ಮಿತಿಗೆ ಮಾತ್ರ ಹೇಳಿ ಮಾಡಿಸಿದ ಕಾರುಗಳು. ಅಂದರೆ ದೂರದೂರಿನ ಪ್ರಯಾಣ ಈ ಕಾರುಗಳಿಂದ ಸಾಧ್ಯವಿಲ್ಲ. ಮನೆಯಿಂದ ಕಚೇರಿಗೆ ಅಥವಾ ಕುಟುಂಬ ಸಮೇತ ಸಿನಿಮಾಗೆ, ಹೋಟೆಲ್‌ಗೆ ಹೋಗಿ ಬರಲು ಅತ್ಯುತ್ತಮ ಆಯ್ಕೆ ಈ ಕಾರಿನದಾಗಿದೆ.

ಶ್ರೇಷ್ಠ ಇಂಟೀರಿಯರ್ಸ್

ನಾಲ್ಕು ವಯಸ್ಕರು ಆರಾಮಾಗಿ ಕೂರಬಲ್ಲ ದೊಡ್ಡ ಸೀಟ್‌ಗಳು ಈ ಕಾರಿನಲ್ಲಿ ಇವೆ. ರೇವಾ ಎನ್‌ಎಕ್ಸ್‌ಆರ್ ಇಂಟರ್ ಸಿಟಿ ಕಾರಿನಲ್ಲಿ ಎಸಿ ಸೌಲಭ್ಯ ಇದೆ. ಅಂತೆಯೇ ಎಲೆಕ್ಟ್ರಾನಿಕ್ ಸ್ಟೀರಿಂಗ್ ಎಲ್ಲ ಅವತರಣಿಕೆಯ ಕಾರಿನಲ್ಲಿ ಲಭ್ಯ. ಅತ್ಯುತ್ತಮ ಫೀಲ್ ನೀಡುವ ಡಿಜಿಟಲ್ ಡಿಸ್‌ಪ್ಲೇ ಇರುವ ಸ್ಪೀಡೊ ಮೀಟರ್ ಕನ್ಸೋಲ್ ಇದೆ. ಮನರಂಜನೆಗಾಗಿ ಎಲ್‌ಸಿಡಿ ಪರದೆಯ ಪುಟ್ಟ ಟ್ಯಾಬ್ಲೆಟ್ ಸಹ ಸೇರ್ಪಡೆಯಾಗಿದೆ. ಸುಮಾರು 100 ಲೀಟರ್ ಸಾಮರ್ಥ್ಯದ ಬೂಟ್ (ಶೇಖರಣೆ) ವ್ಯವಸ್ಥೆ ಇರುವುದು ವಿಶೇಷ.

ಸುರಕ್ಷೆಗೂ ಸೈ

ಎಲೆಕ್ಟ್ರಿಕ್ ಕಾರು ಎಂದು ಮೂಗುಮುರಿಯುವಂತೆಯೇ ಇಲ್ಲ. ಏಕೆಂದರೆ ಸುರಕ್ಷೆಗೂ ಇಲ್ಲಿ ಆದ್ಯತೆ ನೀಡಲಾಗಿದೆ. ಎರಡು ಏರ್‌ಬ್ಯಾಗ್ ಇದ್ದು, ಅಪಘಾತ ಸಂದರ್ಭದಲ್ಲಿ ಸಹಾಯಕ್ಕೆ ಬರುತ್ತದೆ. ಎಲೆಕ್ಟ್ರಾನಿಕ್ ನಿಯಂತ್ರಣ ಉಳ್ಳ ಸೈಡ್ ಮಿರರ್ ಇವೆ. ವಿದ್ಯುತ್ ಉತ್ಪಾದಿಸಬಲ್ಲ ಬ್ರೇಕ್‌ಗಳು ಇವೆ. ಡಿಸ್ಕ್ ಬ್ರೇಕ್ ಸಹಾಯವಿದೆ.ಮನರಂಜನೆಯೂ ಉತ್ತಮವಾಗೇ ಇದೆ. 4 ಸ್ಪೀಕರ್ ವ್ಯವಸ್ಥೆ ಇರುವ 2 ಡಿನ್ ಮ್ಯೂಸಿಕ್ ಸಿಸ್ಟಂ ಬರಲಿದೆ. ರೇಡಿಯೊ ಜತೆಗೇ ಇರಲಿದೆ. ಬೆಲೆಯೂ ಅಷ್ಟೇ ಖಡಕ್ ಆಗೇ ಇದೆ. ರೇವಾ ಎನ್‌ಎಕ್ಸ್‌ಆರ್ ಸಿಟಿ ಬೆಲೆ 4.5 ಲಕ್ಷ ರೂಪಾಯಿಂದ ಆರಂಭವಾಗಲಿದೆ. ರೇವಾ ಎನ್‌ಎಕ್ಸ್‌ಆರ್ ಇಂಟರ್‌ಸಿಟಿ ಬೆಲೆ 5.6 ಲಕ್ಷ ರೂಪಾಯಿಂದ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry