ರೇವ್ ಪಾರ್ಟಿ ಮೇಲೆ ಬಜರಂಗ ದಳ ದಾಳಿ

7

ರೇವ್ ಪಾರ್ಟಿ ಮೇಲೆ ಬಜರಂಗ ದಳ ದಾಳಿ

Published:
Updated:
ರೇವ್ ಪಾರ್ಟಿ ಮೇಲೆ ಬಜರಂಗ ದಳ ದಾಳಿ

ಉಳ್ಳಾಲ (ದಕ್ಷಿಣ ಕನ್ನಡ ಜಿಲ್ಲೆ):  ಇಲ್ಲಿಗೆ ಸಮೀಪದ ಉಚ್ಚಿಲದ ರೆಸಾರ್ಟ್‌ನಲ್ಲಿ ಶನಿವಾರ ತಡರಾತ್ರಿ ನಡೆಯುತ್ತಿದ್ದ `ಪಾರ್ಟಿ~ಗೆ ದಾಳಿ ನಡೆಸಿದ ಬಜರಂಗದಳದ ಕಾರ್ಯಕರ್ತರು 15 ಮಂದಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ರೆಸಾರ್ಟಿನ ಸ್ವತ್ತುಗಳನ್ನು ಹಾನಿಗೊಳಿಸಿರುವ ಮತ್ತು ಲೂಟಿ ನಡೆಸಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಚ್ಚಿಲ ಬೀಚ್ ರಸ್ತೆ ಸುರೇಶ್ ಜೈನ್ ಮಾಲೀಕತ್ವದ `ಮಹಾರಾಣಿ ಫಾರ್ಮ್ಸ~ ರೆಸಾರ್ಟ್‌ನಲ್ಲಿ ಶನಿವಾರ ತಡರಾತ್ರಿಯವರೆಗೆ ಕಾಲ್ ಸೆಂಟರ್ ಉದ್ಯೋಗಿಗಳು ಹಾಗೂ ಮಂಗಳೂರಿನ ವಿವಿಧ ಕಾಲೇಜಿನ ಒಟ್ಟು 16 ವಿದ್ಯಾರ್ಥಿಗಳು ಪಾರ್ಟಿ ನಡೆಸುತ್ತಿದ್ದರು. ಈ ಬಗ್ಗೆ ಸ್ಥಳೀಯರಿಂದ ಮೊದಲೇ ಮಾಹಿತಿ ಪಡೆದಿದ್ದ ಬಜರಂಗದಳದ 50ರಷ್ಟು ಕಾರ್ಯಕರ್ತರು ರಾತ್ರಿ 2.30ಕ್ಕೆ ದಾಳಿ ನಡೆಸಿ ಅಮಲೇರಿಸಿ ಕುಣಿಯುತ್ತಿದ್ದರೆನ್ನಲಾದ ಯುವಕರ ಮೇಲೆ ಹಲ್ಲೆ ನಡೆಸಿ ಸ್ವತ್ತುಗಳಿಗೆ ಹಾನಿ ಮಾಡಿದರು.

ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಬಜರಂಗದಳದ ಕಾರ್ಯಕರ್ತರು ಪರಾರಿಯಾಗಿದ್ದರು. ಪಾರ್ಟಿಯಲ್ಲಿದ್ದ 16 ಯುವಕರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು. ತೀವ್ರ ಗಾಯಗೊಂಡಿರುವ ಸ್ವರೂಪ್, ಸಂದೇಶ್, ಮಿಥುನ್, ರಾಹುಲ್, ರಘುನಾಥ್ ಎಂಬವರು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಜರಂಗದಳ ಆರೋಪ: `ಹಲವು ಸಮಯದಿಂದ ಮಹಾರಾಣಿ ಫಾರ್ಮ್ಸ ರೆಸಾರ್ಟ್‌ನಲ್ಲಿ ಯುವಕರು ಮಾದಕ ವಸ್ತುಗಳ ಸೇವನೆ, ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಶನಿವಾರ ರಾತ್ರಿ ಹುಡುಗಿಯೊಬ್ಬಳನ್ನು ಸೇರಿಸಿಕೊಂಡು ಯುವಕರು ಅಮಲು  ಸೇವಿಸಿ ಪಾರ್ಟಿ ನಡೆಸುತ್ತಿರುವ ಬಗ್ಗೆ ಮಾಹಿತಿ ದೊರಕಿತ್ತು~ ಎಂದು ಬಜರಂಗ ಜಿಲ್ಲಾ ಸಂಚಾಲಕ ಶರಣ್ ಪಂಪ್‌ವೆಲ್‌ತಿಳಿಸಿದರು.

`ಈ ಪಾರ್ಟಿಗೆ ಹೋಗಲು ರೂ.900 ಟಿಕೇಟ್ ಪಡೆದುಕೊಳ್ಳಲಾಗುತಿತ್ತು. ಹಣ ಪಡೆದ ಬಳಿಕ `ಎಲ್‌ಎಸ್‌ಡಿ ಪೇಪರ್~ ಎಂಬ ಡ್ರಗ್ಸ್ ನೀಡಲಾಗಿತ್ತು. ಇಲ್ಲಿಗೆ ಪ್ರವೇಶ ಪಡೆಯುವವರು ಇದನ್ನು ಖರೀದಿಸಿಯೇ ಮುಂದುವರಿಯಬೇಕಿತ್ತು. ಈ ಬಗ್ಗೆ ದೊರಕಿದ ಮಾಹಿತಿ ಆಧಾರದಲ್ಲಿ ಮದ್ದು ಸೇವಿಸಿ ಕುಣಿಯುತ್ತಿದ್ದ ರೇವ್ ಪಾರ್ಟಿಗೆ ದಾಳಿ ನಡೆಸಲಾಗಿದೆ. ಸ್ಥಳದಲ್ಲಿ ಎಲ್‌ಎಸ್‌ಡಿ ಪೇಪರ್, ಗಾಂಜಾ ಪ್ಯಾಕೆಟ್‌ಗಳು, ಮದ್ಯದ ಬಾಟಲಿ ಹಾಗೂ ಇನ್ನಿತರ ಅಮಲು ಪದಾರ್ಥಗಳು ಕಂಡುಬಂದಿವೆ~ ಎಂದು ಅವರು ದೂರಿದರು.

ಪೊಲೀಸ್ ಹೇಳಿಕೆ: `ರೆಸಾರ್ಟ್‌ನಲ್ಲಿ ತಡರಾತ್ರಿಯವರೆಗೆ ನಡೆಯುತ್ತಿದ್ದ ಪಾರ್ಟಿ ಬಗ್ಗೆ ಉಳ್ಳಾಲ ಪೊಲೀಸರಿಗೆ ಯಾವುದೇ ಮಾಹಿತಿ ಇರಲಿಲ್ಲ. ಅಲ್ಲದೆ ಅವರು ಅನುಮತಿಯನ್ನೂ ಪಡೆದಿರಲಿಲ್ಲ~ ಎಂದು ಉಳ್ಳಾಲ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ರೆಸಾರ್ಟ್ ಮ್ಯಾನೇಜರ್ ದಯಾನಂದ ಪೂಜಾರಿ ಎಂಬವರು ನೀಡಿದ ದೂರಿನ ಆಧಾರದಲ್ಲಿ ಬಜರಂಗದಳದ ಕಾರ್ಯಕರ್ತರಾದ ಕುಂಟ ಗಣೇಶ್ ಕುಂಪಲ, ಶರಣ್ ಪಂಪ್‌ವೆಲ್, ಉದಯ, ದಿನೇಶ, ಪುಷ್ಪಾಕರ, ಮುನ್ನ ಸೇರಿದಂತೆ 30 ಮಂದಿ ವಿರುದ್ಧ ಹಲ್ಲೆ ಮತ್ತು ದರೋಡೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಘಟನಾ ಸ್ಥಳದಲ್ಲಿದ್ದ 14 ಬೈಕ್, ನಾಲ್ಕು ಕಾರು ವಶಡಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry