ರೇಶನ್ ಕಾರ್ಡ್ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ

ಶುಕ್ರವಾರ, ಜೂಲೈ 19, 2019
26 °C

ರೇಶನ್ ಕಾರ್ಡ್ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ

Published:
Updated:

ಮುದ್ದೇಬಿಹಾಳ: ಪಡಿತರ ಕಾರ್ಡ್ ವಿತರಣೆ ಅವ್ಯವಸ್ಥೆಯನ್ನು ಪ್ರತಿಭಟಿಸಿ ಇಲ್ಲಿನ ತಹಶೀಲ್ದಾರರ ಕಚೇರಿಗೆ ಇನ್ನೂರು ಜನರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಗುರುವಾರ ನಡೆಯಿತು. ಪ್ರತಿಭಟನಕಾರರು ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಪಡಿತರ ಕಾರ್ಡ್ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಕೋರಿದರು.`ಹೊಸ ಕಾರ್ಡ್ ಮಾಡಿಸಿಕೊಂಡವರಿಗೆ ಒಂದು ರೂಪಾಯಕ್ ಕಿಲೋ ಅಕ್ಕಿ ಕೊಡ್ತಾರ. ಹೊಸ ಕಾರ್ಡ್ ಮಾಡಸಾಕ ಮುಂದಿನ ವರ್ಷದ್ದು ಘರಪಟ್ಟಿ ತುಂಬಬೇಕು ಅಂದ್ರು, ಮಳೀ ಇಲ್ಲ, ದುಡದೇವಂದ್ರ ಕೂಲಿಗೆ ಯಾರೂ ಬಾ ಅನ್ನಂಗಿಲ್ಲ, ಮನ್ಯಾನ ಜ್ವಾಳ ಮಾರಿ ಘರಪಟ್ಟಿ ತುಂಬಿವ್ರಿ ಸಾಹೇಬ್ರ, ಇಲ್ಲಿ ಬಂದು ನೋಡಿದ್ರ ರೇಶನ್ ಕಾರ್ಡ್ ಕೊಡೋರು ಇವತ್ತ ಬಾ, ನಾಳಿಗೆ ಬಾ ಅಂತಾರ‌್ರಿ, ಮನ್ಯಾಗ ಮಕ್ಕಳು, ದನಾ ಕರಾ ಬಿಟ್ಟ ಬಂದಿವ್ರಿ, ನಾಲ್ಕು ದಿನಾ ಆತ್ರಿ ಸಾಹೇಬ್ರ, ಏನಾರ ಮಾಡ್ರಿ, ನಮ್ಮೂರಾಗ ಕಾರ್ಡ ಕೊಡಂಗ ಮಾಡ್ರಿ ಎಂದು ತಾಲ್ಲೂಕಿನ ಆಲೂರ ಗ್ರಾಮದ ಬಸಮ್ಮ ಕಪನೂರ ಅಲವತ್ತುಕೊಂಡರು.ಆಲೂರ ಗ್ರಾಮ ಪಂಚಾಯ್ತಿ ಇರುವ ಕೇಂದ್ರ ಸ್ಥಾನ. ಈ ಕೇಂದ್ರದಲ್ಲಿ ಕಂಪ್ಯೂಟರ್ ಇದ್ದರೂ ಪಡಿತರ ಚೀಟಿ ನೀಡುವ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಪಿ.ಡಿ.ಒ. ಅವರು ನಮ್ಮಲ್ಲಿ ಕರೆಂಟ್ ಇಲ್ಲ, ಇಂಟರ್‌ನೆಟ್ ಇಲ್ಲ ಎಂಬ ನೆಪ ಒಡ್ಡಿ ಮುದ್ದೇಬಿಹಾಳ ಪಟ್ಟಣಕ್ಕೆ ಕಳಿಸಿ ಪಡಿತರ ಚೀಟಿಯ ಬಯೋಮೆಟ್ರಿಕ್ ಮಾಡುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಪಿಡಿಒ ಅವರು 2014ನೇ ಸಾಲಿನ ಕರವನ್ನು ತುಂಬಿದರೆ ಮಾತ್ರ ಪಡಿತರ ಚೀಟಿ ನೀಡಲಾಗುತ್ತದೆ ಎಂದು ಗ್ರಾಮಸ್ಥರಿಂದ ಮುಂದಿನ ಸಾಲಿನ ಕರವನ್ನು ತುಂಬಿಕೊಳ್ಳುತ್ತಿದ್ದಾರೆ.ಬಯೋಮೆಟ್ರಿಕ್ ಪದ್ಧತಿಯಂತೆ ರೇಶನ್ ಕಾರ್ಡ್ ಪಡೆಯಲು ಆಲೂರು ಗ್ರಾಮಸ್ಥರು ನಾಲ್ಕು ದಿನಗಳಿಂದ 25 ಕಿ.ಮೀ. ದೂರದಿಂದ ಬರುತ್ತಿದ್ದಾರೆ. ಆದರೆ ತಾಲ್ಲೂಕು ಪಂಚಾಯ್ತಿಯಲ್ಲಿ ಒಂದು ದಿನಕ್ಕೆ ಕೇವಲ 10ರಿಂದ 15 ಪಡಿತರ ಚೀಟಿ ಬಯೋಮೆಟ್ರಿಕ್ ಮಾತ್ರ ಮಾಡಲಾಗುತ್ತಿದೆ. ತಮ್ಮ ಸರದಿ ಯಾವಾಗ ಬರುತ್ತದೆ ಎಂಬುದು ಗೊತ್ತಿಲ್ಲದೇ ದಿನವಿಡೀ ಕಾಯುತ್ತಿದ್ದಾರೆ. ಆಲೂರ ಕೇಂದ್ರ ಸ್ಥಾನದಲ್ಲಿಯೇ ಪಡಿತರ ಚೀಟಿ ಬಯೋಮೆಟ್ರಿಕ್ ಸೌಲಭ್ಯವನ್ನು ಒದಗಿಸಿ ಕೊಡಬೇಕು ಹಾಗೂ ಹಳೆ ಪಡಿತರ ಚೀಟಿ ಮರು ತಿದ್ದುಪಡಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಗ್ರಾಮಸ್ಥರು ತಹಶೀಲ್ದಾರ್ ಸಿ.ಲಕ್ಷ್ಮಣರಾವ್ ಅವರಿಗೆ ಮನವಿ ಮಾಡಿದರು.ಪಡಿತರ ಚೀಟಿಯ ಪಡೆಯಲು ಗ್ರಾಮಸ್ಥರು ಯಾವ ದಾಖಲೆಗಳನ್ನು ನೀಡಬೇಕು ಎಂಬುದರ ಪೂರ್ಣ ಮಾಹಿತಿಯನ್ನು ಪಂಚಾಯ್ತಿಯ ಸೂಚನಾ ಫಲಕದಲ್ಲಿ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.ತಹಶೀಲ್ದಾರ್ ಅವರು ಆಹಾರ ಇಲಾಖೆ ಅಧಿಕಾರಿ ತಾಂಡೂರ ಅವರಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ವಿವರಿಸಿ ಪಡಿತರ ಚೀಟಿ ವಿತರಣೆಗಾಗಿಯೇ ಗ್ರಾಮಸ್ಥರಿಂದ ಘರಪಟ್ಟಿ ತುಂಬಿಕೊಳ್ಳಬಾರದು ಎಂದು ಸೂಚಿಸಿದರು.ಅಮರೇಶ ಗೂಳಿ, ಹನಮಂತರಾಯ ಬಿರಾದಾರ, ಸಂಗಣ್ಣ ತೋಟದ, ರಮೇಶ ಕುಲಕರ್ಣಿ, ಬಸವಂತ ಹಡಪದ, ಗದ್ದೆಪ್ಪ ವಾಲಿವಾರ, ಗದಿಗೆಯ್ಯ ಹಿರೇಮಠ, ಮಲ್ಲಪ್ಪ ವಾಲಿಕಾರ, ಯುವರಾಜ ದೇವೂರ, ಪರಸಪ್ಪ ಗಾಳಪೂಜಿ, ಸಂಗಣ್ಣ ಹಿರೇಗೌಡ್ರ, ಬಸಮ್ಮ ಹಿರೇಮಠ, ಬಸಮ್ಮ ಕಪನೂರ, ಮಾಂತವ್ವ ವಾಲಿಕಾರ, ಶಿವಮ್ಮ ಹಿರೇಮಠ, ಶಿವಲೀಲಾ ಹಿರೇಮಠ, ನಿಂಗಮ್ಮ ಹಿರೇಗೌಡ್ರ, ಲಕ್ಷ್ಮೀಬಾಯಿ ಕಪನೂರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಆದರ್ಶ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬಸವನಬಾಗೇವಾಡಿ: ಸ್ಥಳೀಯ ಆದರ್ಶ ವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆಗಳ ಮೂಲಕ 7, 8 ಮತ್ತು 9ನೇ ತರಗತಿಗೆ  ದಾಖಲು ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.7ನೇ ತರಗತಿಗೆ ಪ್ರವೇಶ ಬಯಸುವವರು 2012-13ನೇ ಸಾಲಿನಲ್ಲಿ, 8ನೇ ತರಗತಿಗೆ ಪ್ರವೇಶ ಬಯಸುವವರು 2011-12ನೇ ಸಾಲಿನಲ್ಲಿ ಹಾಗೂ  9ನೇ ತರಗತಿಗೆ ಪ್ರವೇಶ ಬಯಸುವವರು 2010-11ನೇ ಸಾಲಿನಲ್ಲಿ ಾದರ್ಶ ವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ಬರೆದಿರಬೇಕು. ಆಯಾ ಪ್ರವರ್ಗದಲ್ಲಿ ಖಾಲಿ ಇರುವ ಸಿಟುಗಳಿಗೆ ಅದೇ ಪ್ರವರ್ಗದ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲಿಚ್ಛಿಸುವವರು ಆದರ್ಶ ವಿದ್ಯಾಲಯದಲ್ಲಿ ಅರ್ಜಿ ನಮೂನೆಗಳನ್ನು ಪಡೆದು  ಜುಲೈ 10ರೊಳಗಾಗಿ  ಅರ್ಜಿ ಸಲ್ಲಿಸಬೇಕು. ಜುಲೈ 14 ರಂದು ಬೆಳಿಗ್ಗೆ 10ಕ್ಕೆ ಪ್ರವೇಶ ಪರೀಕ್ಷೆ ನಡೆಸಲಾಗುವುದು. ಮಾಹಿತಿಗೆ ಮುಖ್ಯಶಿಕ್ಷಕರನ್ನು ಸಂಪರ್ಕಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry