ಭಾನುವಾರ, ಮೇ 22, 2022
26 °C

ರೇಷ್ಮೆಆಮದು ನೀತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಸ್ವಾವಲಂಬನೆ ಮತ್ತು ಬದುಕುವ ಹಕ್ಕಿಗಾಗಿ ಹೋರಾಟ ನಡೆಸದಿದ್ದರೆ, ಗೆಲುವು ಸಾಧಿಸಲು ಆಗುವುದಿಲ್ಲ. ಸರ್ಕಾರಕ್ಕೆ ಬೆಂಬಿಡದೇ ಒತ್ತಾಯ ಮತ್ತು ಒತ್ತಡ ಹೇರದಿದ್ದರೆ, ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಆಗುವುದಿಲ್ಲ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.ಸುಂಕ ರಹಿತ ರೇಷ್ಮೆ ಆಮದು ನೀತಿಯಿಂದ ಆಗುವ ದುಷ್ಪರಿಣಾಮಗಳ ಕುರಿತು ಶನಿವಾರ ನಗರದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮಾತನಾಡಿ, ‘ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ರೈತರ ಪಾಡು ಸಂಕಷ್ಟಮಯವಾಗಿದೆ’ ಎಂದರು.ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮತ್ತು ಖಾಸಗೀಕರಣಕ್ಕೆ ಅವಕಾಶ ಮಾಡಿಕೊಟ್ಟಿರುವ ಸರ್ಕಾರವು ಕೃಷಿ ಕ್ಷೇತ್ರದ ಮೇಲೆಯೂ ಕಣ್ಣಿಟ್ಟಿದೆ. ಇದರ ಹಿನ್ನೆಲೆಯಲ್ಲಿ ಬಗೆಬಗೆಯ ನೀತಿಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ.ಕೃಷಿ ವಿರೋಧಿ ನೀತಿಗಳಿಗೆ ಮತ್ತು ಯೋಜನೆಗಳಿಗೆ ತಕ್ಷಣಕ್ಕೆ ಪ್ರತಿರೋಧ ಒಡ್ಡದಿದ್ದಲ್ಲಿ, ರೈತರಿಗೆ ಉಳಿಗಾಲವಿಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ರೇಷ್ಮೆಕೃಷಿ ಕ್ಷೇತ್ರದ ಭಾರಿ ಉದ್ಯಮಿಗಳಿಗೆ ಮತ್ತು ವಿದೇಶಿಯರ ಓಲೈಕೆಗಾಗಿ ಕೇಂದ್ರ ಸರ್ಕಾರವು ಸುಂಕ ರಹಿತ ರೇಷ್ಮೆ ಆಮದು ನೀತಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಈ ನೀತಿ ಅನುಷ್ಠಾನಗೊಂಡಲ್ಲಿ ಚೀನಾದಿಂದ 2,500 ಮೆಟ್ರಿಕ್ ಟನ್ ಆಮದು ಆಗಲಿದ್ದು, ದೇಶದ ರೇಷ್ಮೆ ಕೃಷಿಕರು ಭಾರಿ ನಷ್ಟಕ್ಕೆ ತುತ್ತಾಗಲ್ಲಿದ್ದಾರೆ. ಇದರಿಂದ ಬೃಹತ್ ಉದ್ಯಮಗಳಿಗೆ ಲಾಭವಾಗುತ್ತದೆ ಹೊರತು ಮಧ್ಯಮ ಮತ್ತು ಬಡ ರೈತರಿಗೆ ಯಾವುದೇ ರೀತಿಯಲ್ಲೂ ಪ್ರಯೋಜನವಾಗುವುದಿಲ್ಲ ಎಂದು ಅವರು ತಿಳಿಸಿದರು.ಚೀನಾ ಹೊರತುಪಡಿಸಿದರೆ ಅತಿ ಹೆಚ್ಚಿನ ರೇಷ್ಮೆಕೃಷಿ ಚಟುವಟಿಕೆ ಭಾರತದಲ್ಲಿದೆ. ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ರೈತರು ರೇಷ್ಮೆ ಕೃಷಿಯನ್ನು ಅವಲಂಬಿಸಿದ್ದಾರೆ. ರೇಷ್ಮೆಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಸರ್ಕಾರಕ್ಕೆ ಆದಾಯ ಕೂಡ ಬರುತ್ತದೆ. ಹೀಗಿದ್ದರೂ ಚೀನಾದಿಂದ ಸುಂಕ ರಹಿತ ರೇಷ್ಮೆಯನ್ನು ಆಮದು ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವುದು ಖಂಡನೀಯ. ಇದರ ವಿರುದ್ಧ ಬಲವಾದ ಹೋರಾಟ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.ಚಿಕ್ಕಬಳ್ಳಾಪುರ ಜಿಲ್ಲಾ ರೇಷ್ಮೆಕೃಷಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಳ್ಳೂರು ಶಿವಣ್ಣ, ಬೋದಗುರು ಆಂಜನಪ್ಪ, ರೇಷ್ಮೆ ಕೃಷಿ ಮುಖಂಡರಾದ ಡಿ.ಕೆ.ಶ್ರೀರಾಮ, ಎಸ್.ಎಂ.ನಾರಾಯಣಸ್ವಾಮಿ, ಕೆಂಪರೆಡ್ಡಿ, ಗಂಗಿರೆಡ್ಡಿ, ಮಳ್ಳೂರು ಹರೀಶ್, ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಎಚ್.ಜಿ.ಗೋಪಾಲಗೌಡ, ಬಿ.ಎನ್.ಮುನಿಕೃಷ್ಣಪ್ಪ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.