ರೇಷ್ಮೆಗೂಡಿಗೆ ವರವಾದ ರೂ ಅಪಮೌಲ್ಯ

7

ರೇಷ್ಮೆಗೂಡಿಗೆ ವರವಾದ ರೂ ಅಪಮೌಲ್ಯ

Published:
Updated:
ರೇಷ್ಮೆಗೂಡಿಗೆ ವರವಾದ ರೂ ಅಪಮೌಲ್ಯ

ರಾಮನಗರ: ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ  ಮೌಲ್ಯ ದಿನೇ ದಿನೇ ಕುಸಿಯುತ್ತಿರುವುದು   ಚಿಂತೆಗೀಡು ಮಾಡಿದ್ದರೂ,  ರಾಜ್ಯದ ರೇಷ್ಮೆ ಬೆಳೆಗಾರರ ಪಾಲಿಗೆ ಮಾತ್ರ ವರವಾಗಿ ಪರಿಣಮಿಸಿದೆ!ಕೇಂದ್ರ ಸರ್ಕಾರ 2011ನೇ ಸಾಲಿನ ಬಜೆಟ್‌ನಲ್ಲಿ ರೇಷ್ಮೆ ಆಮದು ಸುಂಕವನ್ನು ಶೇ 30ರಿಂದ 5ಕ್ಕೆ ಇಳಿಸಿದಾಗ ತೀವ್ರ ಕುಸಿತವಾಗಿದ್ದ ದೇಶದ ರೇಷ್ಮೆ ಗೂಡಿನ ಧಾರಣೆಯಲ್ಲಿ ಇತ್ತೀಚೆಗೆ ಸಾಕಷ್ಟು ಚೇತರಿಕೆ ಕಂಡು ಬಂದಿದೆ. ರೂಪಾಯಿ ಅಪಮೌಲ್ಯದಿಂದ ರೇಷ್ಮೆ ಗೂಡಿನ ಧಾರಣೆಯಲ್ಲಿ ಸುಧಾರಣೆಯಾಗಿದ್ದು, ರೇಷ್ಮೆ ಕೃಷಿಕರಲ್ಲಿ ಸಂತಸ ಹೆಚ್ಚಿಸಿದೆ.ರೂಪಾಯಿ ಅಪಮೌಲ್ಯದಿಂದ ಚೀನಾ ಮತ್ತು ಇತರೆ ವಿದೇಶಿ ರೇಷ್ಮೆ ನೂಲಿನ ಬೆಲೆ ದುಬಾರಿಯಾಗಿದೆ. ಹಾಗಾಗಿ ನೇಕಾರರು ಕಡಿಮೆ ಬೆಲೆಗೆ ದೊರೆಯುವ ದೇಶೀಯ ರೇಷ್ಮೆ ನೂಲಿನ ಖರೀದಿಗೆ ಆಸಕ್ತಿ ತೋರಿದ್ದಾರೆ. ಇದರಿಂದ ಸ್ಥಳೀಯ ರೇಷ್ಮೆಗೂಡು ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ರೇಷ್ಮೆ ಇಲಾಖೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.ರಾಮನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶನಿವಾರ ಮಿಶ್ರ ರೇಷ್ಮೆ ತಳಿ (ಸಿ.ಬಿ) ಗೂಡಿಗೆ ಗರಿಷ್ಠ ರೂ278 ಹಾಗೂ ದ್ವಿತಳಿ ರೇಷ್ಮೆ (ಸಿಎಸ್‌ಆರ್) ಗೂಡು ಗರಿಷ್ಠ ರೂ 345 ಹರಾಜಾಗಿದ್ದು, ಒಂದು ವಾರದಿಂದ ಧಾರಣೆಯಲ್ಲಿ ಸಾಕಷ್ಟು ಏರಿಕೆ ಕಂಡು ಬಂದಿದೆ.ತೀವ್ರ ಕುಸಿತ ಕಂಡಿತ್ತು: ಕೇಂದ್ರ ಸರ್ಕಾರ ಆಮದು ಸುಂಕ ಕಡಿತಗೊಳಿಸಿದ ಪರಿಣಾಮ ಕಳೆದ ವರ್ಷದ ಫೆಬ್ರುವರಿ ಅಂತ್ಯದಲ್ಲಿ ರೇಷ್ಮೆ ಗೂಡಿನ ಧಾರಣೆ ಏಕಾಏಕಿ ಕುಸಿದಿತ್ತು. ಕೆ.ಜಿ.ಗೆ ರೂ400  ದಾಟಿದ್ದ ಬೆಲೆ ರೂ 150ರವರೆಗೂ ಇಳಿದಿತ್ತು. ಇದನ್ನು ವಿರೋಧಿಸಿ ರಾಮನಗರ ಸೇರಿದಂತೆ ರೇಷ್ಮೆ ಬೆಳೆ ಅವಲಂಬಿತ ತಾಲ್ಲೂಕುಗಳಲ್ಲಿ ತೀವ್ರ ಪ್ರತಿಭಟನೆ ನಡೆದಿತ್ತು.2011ರ ನವೆಂಬರ್‌ನಲ್ಲಿ ಪುನಃ ರೇಷ್ಮೆ ಗೂಡಿನ ಧಾರಣೆ ಪಾತಾಳಕ್ಕೆ ಕುಸಿಯಿತು. ಚನ್ನಪಟ್ಟಣ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಕೇವಲ ರೂ30ರಿಂದ 50 ರೂಪಾಯಿಗೆ ಹರಾಜು ಕೂಗಲಾಗುತ್ತಿತ್ತು. ಇದರಿಂದ ರೊಚ್ಚಿಗೆದ್ದ ರೈತರು ಹರಾಜು ಪ್ರಕ್ರಿಯೆ ನಿಲ್ಲಿಸಿ ತೀವ್ರ ಪ್ರತಿಭಟನೆ ನಡೆಸಿದ್ದರು. ಕೆ.ಜಿ ರೇಷ್ಮೆ ಗೂಡು ಉತ್ಪಾದನೆಗೆ ರೂ300ರಿಂದ ರೂ350ವರೆಗೂ ವೆಚ್ಚವಾಗುತ್ತಿದ್ದರೂ, ಮಾರುಕಟ್ಟೆಯಲ್ಲಿ ರೂ150ರಿಂದ ರೂ200ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಈಗ ರೇಷ್ಮೆ ಧಾರಣೆ ಹೆಚ್ಚಳವಾಗಿರುವುದು ರೈತರಲ್ಲಿ ಸಂತಸ ಮೂಡಿಸಿದೆ.ಡಾಲರ್ ಎದುರು ರೂಪಾಯಿ ಅಪಮೌಲ್ಯಗೊಳ್ಳುತ್ತಿರುವುದು ದೇಶೀಯ ರೇಷ್ಮೆಗೂಡು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ರೇಷ್ಮೆ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಲಕ್ಷ್ಮಿಪತಿ ರೆಡ್ಡಿ ಶನಿವಾರ ತಿಳಿಸಿದರು.

ಚೀನಾ ಸೇರಿದಂತೆ ವಿದೇಶಿ ರೇಷ್ಮೆ ನೂಲನ್ನು ಭಾರತೀಯರು ಡಾಲರ್‌ನಲ್ಲಿ ಖರೀದಿಸಬೇಕಿದೆ.

 

ಡಾಲರ್ ಎದುರು ರೂಪಾಯಿ ಬೆಲೆ ಕುಸಿಯುತ್ತಿರುವುದರಿಂದ ವಿದೇಶಿ ರೇಷ್ಮೆ ನೂಲು ಖರೀದಿಗೆ ಹೆಚ್ಚು ಹಣ ಪಾವತಿಸಬೇಕಾಗುತ್ತದೆ. ಅದರ ಬದಲು ಸ್ಥಳೀಯವಾಗಿಯೇ ದೊರೆಯುವ ರೇಷ್ಮೆನೂಲು ಖರೀದಿಸುವುದೇ ಉತ್ತಮ ಎಂದು ನೇಕಾರರು ನಿರ್ಧರಿಸಿದ್ದಾರೆ. ಹೀಗಾಗಿ ದೇಶೀಯ ರೇಷ್ಮೆ ಗೂಡಿನ ಧಾರಣೆಯಲ್ಲಿ ಸುಧಾರಣೆ ಕಂಡು ಬಂದಿದ್ದು, ರೈತರಲ್ಲಿ ತುಸು ನೆಮ್ಮದಿ ತರಿಸಿದೆ ಎಂದು ಅವರು ವಿವರಿಸಿದರು.ಉತ್ಪಾದನೆ ಕುಸಿತ: ಆಮದು ಸುಂಕ ಕಡಿತ ಮಾಡಿರುವ ಕೇಂದ್ರ ಸರ್ಕಾರದ ನೀತಿ, ಅಸಮರ್ಪಕ ಮಳೆ, ಅಂತರ್ಜಲ ಕುಸಿತ, ವಾತಾವರಣದಲ್ಲಿ ಉಷ್ಣತೆ ಹೆಚ್ಚುತ್ತಿರುವುದು, ಪರ್ಯಾಯ ಬೆಳೆಗಳತ್ತ ರೈತರು ಮುಖ ಮಾಡುತ್ತಿರುವ ಹಿನ್ನೆಲೆಯಲ್ಲಿ ರೇಷ್ಮೆಗೂಡು ಉತ್ಪಾದನೆ ಕುಸಿಯುತ್ತಿದೆ. ಮಾರುಕಟ್ಟೆಗೆ ಬರುತ್ತಿರುವ ಗೂಡಿನ ಪ್ರಮಾಣವೂ ತಗ್ಗಿದೆ. ಹಾಗಾಗಿ ರೀಲರ್‌ಗಳಲ್ಲಿ  ಖರೀದಿ ಪೈಪೋಟಿ ಹೆಚ್ಚಿದೆ. ಇದರಿಂದಾಗಿ ರೇಷ್ಮೆ ಗೂಡಿನ ಬೆಲೆಯಲ್ಲಿ ಚೇತರಿಕೆ ಕಂಡು ಬಂದಿದೆ.ಸದ್ಯಕ್ಕೆ ರೂಪಾಯಿ ಮೌಲ್ಯ ಕಡಿಮೆ ಆಗಿರುವುದರಿಂದ ಧಾರಣೆ ಹೆಚ್ಚಾಗಿದ್ದರೂ ಅದು ಕ್ಷಣಿಕವಷ್ಟೆ. ಇದರಿಂದ ರೈತರಿಗೇನೂ ಶಾಶ್ವತ ಪರಿಹಾರ ದೊರೆಯುವುದಿಲ್ಲ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಸಿ.ಪುಟ್ಟಸ್ವಾಮಿ ಪ್ರತಿಕ್ರಿಯಿಸಿದರು.ರಾಮನಗರದ ರೇಷ್ಮೆಗೂಡು ಮಾರುಕಟ್ಟೆಗೆ 2011ರ ಮೇ ಅಂತ್ಯಕ್ಕೆ 2,297 ಮೆ.ಟನ್ ರೇಷ್ಮೆ ಗೂಡು ಬಂದಿತ್ತು. 2012ರ ಮೇ ಅಂತ್ಯದ ವೇಳೆಗೆ 1,764 ಮೆ.ಟನ್ ರೇಷ್ಮೆ ಗೂಡು ಮಾರುಕಟ್ಟೆಗೆ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 533 ಮೆಟ್ರಿಕ್ ಟನ್ ರೇಷ್ಮೆ ಗೂಡು ಕಡಿಮೆಯಾಗಿದೆ ಎಂದು ಮಾರುಕಟ್ಟೆ ಉಪ ನಿರ್ದೇಶಕ ಎಚ್.ರಾಜಪ್ಪ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry