ರೇಷ್ಮೆಬೆಲೆ ಕುಸಿತ ರಾಮನಗರ ಮುಂದು

7

ರೇಷ್ಮೆಬೆಲೆ ಕುಸಿತ ರಾಮನಗರ ಮುಂದು

Published:
Updated:
ರೇಷ್ಮೆಬೆಲೆ ಕುಸಿತ ರಾಮನಗರ ಮುಂದು

ರಾಮನಗರ: ಚನ್ನಪಟ್ಟಣದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೋಮವಾರ ರೇಷ್ಮೆ ಗೂಡಿನ ಧಾರಣೆಯಲ್ಲಿ ಚೇತರಿಕೆ ಕಂಡು ಬಂದ ನಂತರ ರಾಮನಗರದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಧಾರಣೆ ಕುಸಿತ ಕಂಡಿತ್ತು. ಇದು ರೇಷ್ಮೆ ಬೆಳೆಗಾರರ ಆತಂಕಕ್ಕೆ ಕಾರಣವಾದರೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸರ ತಲೆ ನೋವಿಗೆ ಕಾರಣವಾಯಿತು.



ರಾಮನಗರದಲ್ಲಿ ರೀಲರ್‌ಗಳು ರೇಷ್ಮೆ ಗೂಡನ್ನು ಕೆ.ಜಿಗೆ ರೂ 60ರಿಂದ 90 ರೂಪಾಯಿಗೆ ಕೂಗಲು ಮುಂದಾದಾಗ ವಿರೋಧಿಸಿದ ಕೆಲ ರೈತರು ಕೂಗಾಡಿದರು. ನಂತರ ಬೆಂಗಳೂರು- ಮೈಸೂರು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲು ಮುಂದಾದರು.



ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆ ಬಳಿ ಎರಡು ಪೊಲೀಸ್ ಮೀಸಲು ಪಡೆಯ ತುಕಡಿಗಳನ್ನು ನಿಯೋಜಿಸಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಬಿಸನಳ್ಳಿ, ಡಿವೈಎಸ್‌ಪಿ ರಾಮಕೃಷ್ಣಪ್ಪ ಮಾರುಕಟ್ಟೆ ಪ್ರವೇಶಿಸಿ, ಪೊಲೀಸರಿಗೆ ಸಿದ್ಧರಾಗಿರಲು ಸೂಚಿಸಿದರು.



ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಜಮಾಯಿಸಿದ್ದನ್ನು ನೋಡಿದ ರೇಷ್ಮೆ ಬೆಳೆಗಾರರು ರಸ್ತೆ ತಡೆ ನಡೆಸಲು ಮುಂದಾಗಲಿಲ್ಲ. ಬದಲಿಗೆ ಮನದಲ್ಲಿಯೇ ಸರ್ಕಾರ ಮತ್ತು ರೀಲರ್‌ಗಳನ್ನು ಶಪಿಸುತ್ತ ಬೇಸರ ವ್ಯಕ್ತಪಡಿಸಿದರು. ಕೆಲವು ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆ ಗೂಡನ್ನು ಮಾರಲು ಮುಂದಾಗದೆ ಪ್ರತಿಭಟಿಸಿದರು.



ಜಿಲ್ಲಾಧಿಕಾರಿ ಎಸ್.ಪುಟ್ಟಸ್ವಾಮಿ, ತಹಶೀಲ್ದಾರ್ ಡಾ. ರವಿ ತಿರ್ಲಾಪುರ, ಉಪ ವಿಭಾಗಾಧಿಕಾರಿ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ರೇಷ್ಮೆ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಪುನರಾರಂಭವಾಯಿತು. ಕೆಲಸ ರೈತರ ರೇಷ್ಮೆ ಗೂಡಿಗೆ 100 ರೂಪಾಯಿಗಿಂತ ಕೆಳಗೆ ಹರಾಜು ಕೂಗಿದರೆ, ಹಲವರ ಗೂಡಿಗೆ 100ರಿಂದ 150 ರೂಪಾಯಿವರೆಗೆ ರೀಲರ್‌ಗಳು ಹರಾಜು ಕೂಗಿದರು.



ಬಳ್ಳಾರಿ ರೇಷ್ಮೆ ಬೆಳೆಗಾರ ಕೊಟ್ರೇಶ್ ಅವರ ರೇಷ್ಮೆ ಗೂಡಿಗೆ ಕೆ.ಜಿಗೆ 92 ರೂಪಾಯಿ ನಿಗದಿಯಾಗಿತ್ತು. `350 ಕಿ.ಮೀ ದೂರದಿಂದ ರಾಮನಗರಕ್ಕೆ ಗೂಡು ಮಾರಲು ಬಂದರೆ ಇಷ್ಟು ಕಡಿಮೆ ಬೆಲೆಗೆ ಗೂಡು ಹರಾಜಾಗಿದೆ. ಈ ಬೆಲೆಯನ್ನು ನಾನು ಒಪ್ಪಿಕೊಂಡಿಲ್ಲ. ಹಾಗಾಗಿ ಗೂಡನ್ನು ಮಾರಲಿಲ್ಲ~ ಎಂದು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.



`ಈಗ ಕೂಗಿರುವ ಬೆಲೆಗೆ ಮಾರಿದರೆ ಹೆಚ್ಚು ನಷ್ಟವಾಗುತ್ತದೆ. ರೇಷ್ಮೆ ಗೂಡು ಉತ್ಪಾದನೆಗೆ ಮಾಡಿರುವ ಖರ್ಚಿನಲ್ಲಿ ಅರ್ಧದಷ್ಟು ಖರ್ಚು ಕೂಡ ದೊರೆಯುವುದಿಲ್ಲ. ನಮಗೆಲ್ಲ ಆತ್ಮಹತ್ಯೆ ಒಂದೇ ಉಳಿಯುವ ದಾರಿ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.



`ರೇಷ್ಮೆ ಕಡ್ಡಿಯನ್ನು ಕಿತ್ತು ಹಾಕಿ ಬೇರೆ ಕೃಷಿಯತ್ತ ವಲಸೆ ಹೋಗುವುದು ಒಳಿತು. ರೇಷ್ಮೆ ನಂಬಿಕೊಂಡಿದ್ದರೆ ಸಂಸಾರ ದೂಗಿಸುವುದು ಕಷ್ಟಕರವಾಗುತ್ತದೆ~ ಎಂದು ಮತ್ತೊಬ್ಬ ರೈತ ನಾಗಪ್ಪ ಬೇಸರದಿಂದ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry