ರೇಷ್ಮೆ ಆಮದು ನೀತಿ ವಿರೋಧಿಸಿ ಪ್ರತಿಭಟನೆ

7

ರೇಷ್ಮೆ ಆಮದು ನೀತಿ ವಿರೋಧಿಸಿ ಪ್ರತಿಭಟನೆ

Published:
Updated:
ರೇಷ್ಮೆ ಆಮದು ನೀತಿ ವಿರೋಧಿಸಿ ಪ್ರತಿಭಟನೆ

ಶ್ರೀನಿವಾಸಪುರ: ಪಟ್ಟಣದ ರೇಷ್ಮೆ ಗೂಡು ಮಾರುಕಟ್ಟೆ ಎದುರು ಕೇಂದ್ರ ಸರ್ಕಾರದ ಸುಂಕರಹಿತ ರೇಷ್ಮೆ ಆಮದು ನೀತಿಯನ್ನು ವಿರೋಧಿಸಿ ರೇಷ್ಮೆ ಆಮದು ವಿರೋಧಿ ಹೋರಾಟ ಸಮಿತಿ, ತಾಲ್ಲೂಕು ರೇಷ್ಮೆ ಬೆಳೆಗಾರರ ಸಹಕಾರ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಕರ್ತರು ಮಂಗಳವಾರ ಧರಣಿ ನಡೆಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿ, ಈ ಹಿಂದೆ ಒಂದು ಕೆಜಿ ರೇಷ್ಮೆ ಗೂಡಿಗೆ ಸರಾಸರಿ ರೂ. 310 ಸಿಗುತ್ತಿತ್ತು. ಈಗ ಸರಾಸರಿ ರೂ.160 ಮಾತ್ರ ಸಿಗುತ್ತಿದೆ. ಇದರಿಂದ ರೇಷ್ಮೆ ಬೆಳೆಗಾರರಿಗೆ ನಷ್ಟ ಉಂಟಾಗಿದೆ.

 

ಹೆಚ್ಚಿನ ಸಂಖ್ಯೆಯ ರೈತರ ಬದುಕಿಗೆ ಆಸರೆಯಾಗಿದ್ದ ರೇಷ್ಮೆ ಕೃಷಿ ಮೂಲೆ ಗುಂಪಾಗುತ್ತಿದೆ ಎಂದು ಹೇಳಿದರು.ಕೇಂದ್ರ ಸರ್ಕಾರ ರೇಷ್ಮೆ ಮೇಲಿನ ಆಮದು ಸುಂಕವನ್ನು ಶೇ. 31 ರಿಂದ ಶೇ. 5 ಕ್ಕೆ ಇಳಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಆದರೆ ಸರ್ಕಾರ ರೈತರ ಹಾಗೂ ನೂಲು ಬಿಚ್ಚುವವರ ಹಿತವನ್ನು ಬಲಿಗೊಟ್ಟು ರೇಷ್ಮೆ ವ್ಯಾಪಾರಿಗಳ ಪರ ನಿಂತಿದೆ.

 

ದೇಶದ ಒಟ್ಟು ರೇಷ್ಮೆ ಉತ್ಪಾದನೆಯ ಶೇ. 60 ರಷ್ಟನ್ನು ಉತ್ಪಾದಿಸುತ್ತಿರುವ ರಾಜ್ಯದ ಸರ್ಕಾರ ಕೇಂದ್ರದೊಂದಿಗೆ ಗಂಭೀರವಾಗಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ  ಎಂದು ಆಪಾದಿಸಿದರು.

 

ಒಂದು ಕೆಜಿ ರೇಷ್ಮ ಗೂಡನ್ನು ಉತ್ಪಾದಿಸಲು ರೂ. 325 ಖರ್ಚು ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಕೆಜಿ ಗೂಡಿನ ಬೆಲೆ ರೂ. 160 ಕ್ಕಿಂತ ಕಡಿಮೆ ಹೋದಾಗ ಮಾತ್ರ ರೂ. 30 ಬೆಂಬಲ ಬೆಲೆ ಕೊಡುವುದಾಗಿ ಸರ್ಕಾರ ಘೋಷಿಸಿದೆ. ಇದು ಅವೈಜ್ಞಾನಿಕ ತೀರ್ಮಾನವಾಗಿದ್ದು, ಈರೀತಿಯ ಬೆಂಬಲ ಬೆಲೆಯಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

 

ರಾಜ್ಯ ಸರ್ಕಾರಕ್ಕೆ ರೇಷ್ಮೆ ಬೆಳೆಗಾರರ ಬಗ್ಗೆ ನಿಜವಾಗಲೂ ಕಾಳಜಿ ಇದ್ದಲ್ಲಿ, ಮುಖ್ಯ ಮಂತ್ರಿಗಳು ಶೀಘ್ರವಾಗಿ ರೈತರು ಹಾಗೂ ರೀಲರ್‌ಗಳ ಸಭೆ ಕರೆದು ಚರ್ಚಿಸಬೇಕು. ರೈತರ ಮೇಲೆ ಹೂಡಲಾಗಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು. ರೇಷ್ಮೆ ಗೂಡಿನ ಬೆಂಬಲ ಬೆಲೆಯನ್ನು ವೈಜ್ಞಾನಿಕವಾಗಿ ನಿರ್ಧರಿಸಬೇಕು ಎಂದು ಆಗ್ರಹಪಡಿಸಿದರು.ತಾಲ್ಲೂಕು ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎನ್.ನಾರಾಯಣಗೌಡ, ಕಾರ್ಯದರ್ಶಿ ನಾಗಪ್ಪ, ಉಪಾಧೀಕ್ಷಕ ಹೂಹಳ್ಳಿ ಬಾಬು, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಪಿ.ಆರ್.ನವೀನ್ ಕುಮಾರ್, ಸಹ ಕಾರ್ಯದರ್ಶಿ ವಿ.ಆನಂದ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ತಮ್ಮ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಹಶೀಲ್ದಾರರಿಗೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry