ಗುರುವಾರ , ಮೇ 26, 2022
30 °C

ರೇಷ್ಮೆ ಆಮದು: ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಸುಂಕ ರಹಿತ ರೇಷ್ಮೆ ಆಮದು ನೀತಿ ದೇಶದ ರೇಷ್ಮೆ ಬೆಳೆಗಾರರಿಗೆ ಮಾರಕವಾಗಿದೆ. ಕೂಡಲೇ ರೇಷ್ಮೆ ಆಮದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ನಗರದ ರೇಷ್ಮೆಗೂಡು ಮಾರುಕಟ್ಟೆ ಮುಂದೆ ಶುಕ್ರವಾರ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಸದಸ್ಯರು ಧರಣಿ ನಡೆಸಿದರು. ಬೆಳಿಗ್ಗೆ ಹರಾಜು ಪ್ರಕ್ರಿಯೆ ಆರಂಭವಾಗುವ ಮುಂಚೆಯೇ ನೆರೆದ ಬೆಳೆಗಾರರು ಮಾರುಕಟ್ಟೆಯ ಮುಖ್ಯ ಬಾಗಿಲನ್ನು ಮುಚ್ಚಿ ಬೀಗ ಹಾಕಿ ಅಲ್ಲಿಯೇ  ಧರಣಿ ಆರಂಭಿಸಿದರು.ಕೇಂದ್ರದ ಜವಳಿ ಮತ್ತು ಆರ್ಥಿಕ ಸಚಿವಾಲಯವು ಕಳೆದ ಆಗಸ್ಟ್‌ನಲ್ಲಿ ಪ್ರಕಟಿಸಿರುವ, ಸುಂಕ ರಹಿತವಾಗಿ 2500 ಮೆಟ್ರಿಕ್ ಟನ್ ರೇಷ್ಮೆಯನ್ನು ಆಮದು ಮಾಡಿಕೊಳ್ಳುವ ನೀತಿಯನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.ಕೇಂದ್ರದ ಬಜೆಟ್‌ನಲ್ಲಿ ಕಚ್ಚಾ ರೇಷ್ಮೆಗೂಡಿನ ಬೆಲೆ ಹೆಚ್ಚಿಸುವ ಮತ್ತು ಸುಂಕರಹಿತವಾಗಿ ವಿದೇಶಿ ರೇಷ್ಮೆ ಆಮದು ಮಾಡಿಕೊಳ್ಳುವ ಮುನ್ಸೂಚನೆಯನ್ನು ಅರಿತು ಬಂಡವಾಳಶಾಹಿ ವರ್ತಕರು ನಡೆಸಿರುವ ಕೈವಾಡದಿಂದ ಗೂಡಗಳ ಬೆಲೆ ಕೆಜಿಗೆ ರೂ.350 ರಿಂದ 425 ಇದ್ದದ್ದು 150ರಿಂದ 250ಕ್ಕೆ ಕುಸಿದಿರುವುದು ಬೆಳೆಗಾರ ಸಮುದಾಯದಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದರು.ಹತ್ತು ಲಕ್ಷ ಬೆಳೆಗಾರರು ಮತ್ತು ರೀಲರ್ ಕುಟುಂಬಗಳು  ಇದೇ ಉದ್ದಿಮೆಯನ್ನು ಜೀವನೋಪಾಯಕ್ಕಾಗಿ ಅವಲಂಬಿಸಿವೆ. ಕೇವಲ ಬೆರಳೆಣಿಕೆಯಷ್ಟಿರುವ ವರ್ತಕರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ರೂಪುಗೊಂಡಿರುವ ನೀತಿಯನ್ನು ಕೈಬಿಡಬೇಕು. ಲಕ್ಷಾಂತರ ಬೆಳೆಗಾರರುಮತ್ತು ರೀಲರ್‌ಗಳ ಹಿತ ಕಾಪಾಡುವಂತೆ ನೀತಿಯನು ಮರುರೂಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು, ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹೆಚ್ಚು ರೇಷ್ಮೆಗೂಡು ಬೆಳೆಯುವ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನವರೇ ಆಗಿರುವ ಮುನಿಯಪ್ಪ ಬೆಳೆಗಾರರ ಹಿತವನ್ನು ಕಾಪಾಡುವಲ್ಲಿ ಸೋತಿದ್ದಾರೆ. ಜಿಲ್ಲೆಯ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಅವರು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.ರೇಷ್ಮೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಚಿನ್ನಾಪುರ ನಾರಾಯಣಸ್ವಾಮಿ, ದ್ಯಾವೀರಪ್ಪ, ರೀಲರ್‌ಗಳ ಸಂಘದ ಅಧ್ಯಕ್ಷ ಚಾಂದ್‌ಪಾಷಾ, ವೆಂಕಟಸ್ವಾಮಿ ಮಾತನಾಡಿದರು.ಮುನಿಸೊಣ್ಣಪ್ಪ, ಎ.ಅರ್ಜುನ್, ಆರ್.ಪ್ರಕಾಶ್,  ನಂಜುಂಡಪ್ಪ, ಎಸ್.ಎಂ.ನಾರಾಯಣಸ್ವಾಮಿ, ಸಿ.ವಿ.ನಾರಾಯಣ್, ಗೋವಿಂದರಾಜ್, ಅಮೀರ್, ಬಾಬು ಮನೋಹರ್ ಬೇಗ್, ವಲದವಾಡಿ ವೆಂಕಟೇಶ್ ಭಾಗವಹಿಸಿದ್ದರು.ಕಿಸಾನ್ ಸಂಘ: ಬೆಳೆಗಾರರು ರೇಷ್ಮೆಗೂಡು ಮಾರುಕಟ್ಟೆಯನ್ನು ಬಂದ್ ಮಾಡಿ ಧರಣಿ ನಡೆಸುತ್ತಿದ್ದ ವೇಳೆಯಲ್ಲೇ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಶಾಖೆ ಸದಸ್ಯರು ಸುಂಕ ರಹಿತ ರೇಷ್ಮೆ ಆಮದು ನೀತಿಯನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಸಿದರು.  ನೀತಿಯನ್ನು ವಾಪಸ್ ಪಡೆಯಲೇಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಆಗ್ರಹಿಸಿದರು. ಅಪ್ಪಾಜಿಗೌಡ, ಪುಟ್ಟಸ್ವಾಮಿ, ನಾಗರಾಜ್, ನಾರಾಯಣಸ್ವಾಮಿ,ಸುರೇಶ್, ಮಂಜುನಾಥ, ಅರುಣ್, ದೇವೇಗೌಡ, ಗೋವಿಂದಪ್ಪ, ನಟರಾಜ್ ಪಾಲ್ಗೊಂಡಿದ್ದರು.ಸಚಿವರ ಸನ್ಮಾನಕ್ಕೆ ತಡೆ

ಕೋಲಾರ:  ಬೆಳೆಗಾರರ ಹಿತ ಕಾಪಾಡದ ಸಚಿವ ಕೆ.ಎಚ್.ಮುನಿಯಪ್ಪ ಅವರ ನಿಲುವನ್ನು ಖಂಡಿಸುವ ಸಲುವಾಗಿಯೇ, ಶನಿವಾರ ನಗರದಲ್ಲಿ ನಡೆಯಲಿರುವ ಅವರ ಸನ್ಮಾನ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತೇವೆ ಎಂದು ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಪ್ರಮುಖರು ತಿಳಿಸಿದ್ದಾರೆ.ರೇಷ್ಮೆಗೂಡು ಮಾರುಕಟ್ಟೆ ಮುಂದೆ ನಡೆಸಿದ ಧರಣಿ ಸಂದರ್ಭದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ರೈಲು ವ್ಯಾಗನ್ ಕಾರ್ಖಾನೆಯನ್ನು ಸ್ಥಾಪಿಸುವ ಘೋಷಣೆ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಸಚಿವರನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಕಾರ್ಖಾನೆಯಿಂದ ರೈತರಿಗೆ ಯಾವ ಪ್ರಯೋಜನವಾಗುತ್ತದೆ ಎಂಬುದು ಗೊತ್ತಿಲ್ಲ. ಆದರೆ ನಮಗಂತೂ ಸಚಿವರಿಂದ ಯಾವ ಪ್ರಯೋಜನವೂ ಆಗಿಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ನಿರ್ಧರಿಸಿದ್ದೇವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.