ರೇಷ್ಮೆ ಕೃಷಿ ಪ್ರೋತ್ಸಾಹ ಧನ ನಿಯಮ ಸರಳ

7

ರೇಷ್ಮೆ ಕೃಷಿ ಪ್ರೋತ್ಸಾಹ ಧನ ನಿಯಮ ಸರಳ

Published:
Updated:
ರೇಷ್ಮೆ ಕೃಷಿ ಪ್ರೋತ್ಸಾಹ ಧನ ನಿಯಮ ಸರಳ

ಚಿಕ್ಕಬಳ್ಳಾಪುರ: ರೇಷ್ಮೆ ಮಿಶ್ರ ತಳಿ ಮತ್ತು ದ್ವಿತಳಿ ಸಂಕರಣ ಗೂಡುಗಳಿಗೆ ರಾಜ್ಯ ಸರ್ಕಾರವು ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರವು ತೀರ್ಮಾನಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಾವಳಿಗಳನ್ನು ಸರಳೀಕರಣಗೊಳಿಸಲು ಒಪ್ಪಿಗೆ ಸೂಚಿಸಿದೆ.ಒಂದು ಕೆಜಿ ಮಿಶ್ರತಳಿ ಗೂಡಿಗೆ 10 ರೂಪಾಯಿ ಮತ್ತು ಒಂದು ಕೆಜಿ ದ್ವಿತಳಿ ಸಂಕರಣ ಗೂಡಿಗೆ  40 ರೂಪಾಯಿ ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನೀಡಲಿದ್ದು, ರೇಷ್ಮೆ ಕೃಷಿಕರು ಯಾವುದೇ ರೀತಿಯ ಗೊಂದಲ ಮಾಡಿಕೊಳ್ಳದೇ ಪಡೆದುಕೊಳ್ಳಬಹುದು ಎಂದು ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತೆ ಡಾ.ನಾಗಲಾಂಬಿಕಾದೇವಿ ತಿಳಿಸಿದ್ದಾರೆ.ನಿಯಮಾವಳಿಗಳನ್ನು ಸರಳೀಕರಣಗೊಳಿಸುವಂತೆ ರೇಷ್ಮೆ ಕೃಷಿಕರು ಶಿಡ್ಲಘಟ್ಟದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಿದ ಅವರು ರೇಷ್ಮೆ ಕೃಷಿಕರೊಂದಿಗೆ ಚರ್ಚಿಸಿದರು. ನಿಯಮಾವಳಿ ಕುರಿತಂತೆ ಸಮಸ್ಯೆಗಳನ್ನು ಆಲಿಸಿದರು. ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದರು.`ಗೂಡು ಮಾರುಕಟ್ಟೆಯಲ್ಲಿ ವಹಿವಾಟು ನಂತರ ಎಲ್ಲ ದಾಖಲೆಗಳನ್ನು ಒದಗಿಸಬೇಕೆಂಬ ನಿಯಮವಿತ್ತು. ಈಗ ಅದನ್ನು ಸರಳೀಕರಣಗೊಳಿಸಿ ರೈತರು ತಮ್ಮ ಕ್ಷೇತ್ರದ ರೇಷ್ಮೆ ಕೃಷಿ ತಾಂತ್ರಿಕ ಸೇವಾ ಕೇಂದ್ರಗಳಲ್ಲೇ ವಹಿವಾಟು ಸಂಬಂಧಿತ ದಾಖಲೆಗಳನ್ನು ಹತ್ತು ದಿನಗಳೊಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರೇಷ್ಮೆಗೂಡನ್ನು ಒಂದೇ ದಿನದಲ್ಲಿ ಹರಾಜು ಮಾಡಿದರೆ ಮಾತ್ರವಲ್ಲ, ಎರಡು ದಿನ ವಹಿವಾಟು ಮಾಡಿದವರಿಗೂ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗಿದೆ~ ಎಂದು ಮಾಹಿತಿ ನೀಡಿದರು.`ರೈತರ ಖಾತೆಗೆ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ಅವರ ಖಾತೆಗೆ ಹಣ ವರ್ಗಾಯಿಸಲು ಅನುಕೂಲವಾಗುವಂತೆ ಐಎಫ್‌ಎಸ್‌ಎ (ಆನ್‌ಲೈನ್ ವ್ಯವಸ್ಥೆ) ಇರುವ ಯಾವುದೇ ಬ್ಯಾಂಕ್‌ಗಳಲ್ಲಿ ರೈತರು ಖಾತೆ ಹೊಂದಿರಬೇಕು. ಹಳೆ ಪಾಸ್ ಪುಸ್ತಕಗಳನ್ನು ಹಿಂಪಡೆದು ಹೊಸ ಪಾಸ್ ಪುಸ್ತಕಗಳನ್ನು ಪಡೆಯಬೇಕು. ಪಾಸ್ ಪುಸ್ತಕದಲ್ಲಿ ನಮೂದಿಸಿರುವ ರೈತರ ಜೊತೆಗೆ ಒಬ್ಬ ಅಧಿಕೃತ ಪ್ರತಿನಿಧಿಗೂ ಸಹ ಗೂಡು ವಹಿವಾಟಿಗೆ ಅನುಕೂಲ ಕಲ್ಪಿಸಲಾಗಿದೆ. ಹಿಪ್ಪು ನೇರಳೆ ಸೊಪ್ಪನ್ನು ಕೊಂಡು ಮೇಯಿಸುವ ರೈತರಿಗೂ ಸಹ ಪಾಸ್‌ಪುಸ್ತಕ ಪಡೆಯಬಹುದು~ ಎಂದು ಅವರು ಹೇಳಿದರು.`100 ಮೊಟ್ಟೆಗೆ 60 ಕೆಜಿ ಇಳುವರಿ ಬಂದಿರಬೇಕೆಂಬ ನಿಯಮವನ್ನು ಸಡಿಲಿಸಿ ಗೂಡು ಬೆಳೆದ ಎಲ್ಲ ರೈತರಿಗೂ ಪ್ರೋತ್ಸಾಹ ಧನ ವಿತರಿಸಲು ರೇಷ್ಮೆ ಕೃಷಿಕರು ಒತ್ತಾಯಿಸಿದ್ದಾರೆ. ಆದರೆ ಇದು ನನ್ನ ಪರಿಧಿಯಲ್ಲಿ ಇಲ್ಲ. ರೇಷ್ಮೆ ಕೃಷಿ ಸಚಿವರ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇಲಾಖೆ ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ರೈತರಿಗೆ ತೊಂದರೆ ನೀಡಿದ್ದಲ್ಲಿ, ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ರೇಷ್ಮೆ ಕೃಷಿಕರು ಯಾವುದೇ ಗೊಂದಲವಿಲ್ಲದೇ ಪ್ರೋತ್ಸಾಹ ಧನ ಪಡೆಯಬಹುದು~ ಎಂದು ಡಾ.ನಾಗಲಾಂಬಿಕಾದೇವಿ ತಿಳಿಸಿದರು.ರೇಷ್ಮೆ ಇಲಾಖೆ ಹೆಚ್ಚುವರಿ ನಿರ್ದೇಶಕ ರಾಜೇಂದ್ರ, ಜಂಟಿ ನಿರ್ದೇಶಕ ಭೋರಯ್ಯ, ಶಿಡ್ಲಘಟ್ಟ ರೇಷ್ಮೆಗೂಡು ಮಾರುಕಟ್ಟೆ ಉಪ ನಿರ್ದೇಶಕ ಹನುಮಂತರಾಯಪ್ಪ, ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಶಿಡ್ಲಘಟ್ಟ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರೇಷ್ಮೆ ಕೃಷಿಕರಾದ ನಾರಾಯಣ ದಾಸರಹಳ್ಳಿ ಕೃಷ್ಣಪ್ಪ, ಮುನಿನಂಜಪ್ಪ, ಯಲುವಹಳ್ಳಿ ವೆಂಕಟರಾಜ್, ಆನಂದ್, ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry