ರೇಷ್ಮೆ ಖರೀದಿಗೆ ಸರ್ಕಾರದ ವ್ಯವಸ್ಥೆ

7

ರೇಷ್ಮೆ ಖರೀದಿಗೆ ಸರ್ಕಾರದ ವ್ಯವಸ್ಥೆ

Published:
Updated:

ಬೆಂಗಳೂರು: ರೇಷ್ಮೆ ಗೂಡು ಮತ್ತು ನೂಲಿನ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಸರ್ಕಾರ ಮಾರುಕಟ್ಟೆ ಮಧ್ಯಪ್ರವೇಶ ಮಾಡಿ ಕೆ.ಜಿ. ರೇಷ್ಮೆ ಗೂಡಿಗೆ ಸರಾಸರಿ 225 ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದೆ ಎಂದು ರೇಷ್ಮೆ ಸಚಿವ ಬಿ.ಎನ್.ಬಚ್ಚೇಗೌಡ ಸೋಮವಾರ ವಿಧಾನಸಭೆಗೆ ತಿಳಿಸಿದರು.ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಅವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ‘ಬೆಲೆ ಕುಸಿತದಿಂದ ರೇಷ್ಮೆ ಬೆಳೆಗಾರರು ಕಂಗಾಲಾಗಿದ್ದು, ಅವರ ರಕ್ಷಣೆಗೆ ಬರಬೇಕು’ ಎಂದು ಆಗ್ರಹಪಡಿಸಿದರು.ನಂತರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್‌ನ ಶಿವಶಂಕರರೆಡ್ಡಿ ಮಾತನಾಡಿ, ರೂ 350ರಿಂದ 400 ರೂಪಾಯಿವರೆಗೆ ರೇಷ್ಮೆ ಬೆಲೆ ಇತ್ತು. ಈಗ ದಿಢೀರ್ ಕುಸಿದಿರುವುದು ಸರಿಯಲ್ಲ. ತಕ್ಷಣ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಪಡಿಸಿದರು.ಸಚಿವ ಬಚ್ಚೇಗೌಡ ಮಾತನಾಡಿ, ಬೆಲೆ ಕುಸಿತದ ಮಾಹಿತಿ ಸಿಕ್ಕ ತಕ್ಷಣ ಸರ್ಕಾರ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (ಕೆಎಸ್‌ಎಂಬಿ) ಮೂಲಕ ರೇಷ್ಮೆ ಖರೀದಿಗೆ ಚಾಲನೆ ನೀಡಿದೆ. ಈ ಸಲುವಾಗಿ ರೂ 3 ಕೋಟಿಯನ್ನು ಮಂಡಳಿಗೆ ನೀಡಲಾಗಿದೆ. ಇನ್ನೂ ಕನಿಷ್ಠ 35 ಕೋಟಿ ರೂಪಾಯಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿದರು.ಶನಿವಾರ ಸಭೆ: ಬೆಲೆ ಕುಸಿತದ ಹಿನ್ನೆಲೆಯಲ್ಲಿ ರೇಷ್ಮೆ ಬೆಳೆಗಾರರು, ರೀಲರ್‌ಗಳು ಸೇರಿದಂತೆ ಇತರ ಪ್ರಮುಖರ ಸಭೆಯನ್ನು ಶನಿವಾರ ಕರೆದಿದ್ದು, ಅಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು ಎಂದರು. ಚೀನಾ ರೇಷ್ಮೆ ಆಮದಿನ ಮೇಲೆ ಹೆಚ್ಚಿನ ತೆರಿಗೆ ಹಾಕುವಂತೆ ಕೇಂದ್ರ ಸರ್ಕಾರದ ಮೇಲೆ ರೀಲರ್‌ಗಳು ಒತ್ತಡ ಹೇರಿದ್ದು, ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಎಂದರು.

ಕೆಪಿಎಸ್‌ಸಿ ಅವ್ಯವಸ್ಥೆಗೆ ಪರಿಹಾರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರ ನೇಮಕಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದ್ದು, ಇದರಿಂದ ಆಗಿರುವ ಅನಾನುಕೂಲಗಳ ಬಗ್ಗೆ ಆಯೋಗದ ಜತೆ ಚರ್ಚೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ವಿಧಾನಸಭೆಗೆ ತಿಳಿಸಿದರು.ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಎಂ.ಟಿ.ಕೃಷ್ಣಪ್ಪ ವಿಷಯ ಪ್ರಸ್ತಾಪಿಸಿ, ಆನ್‌ಲೈನ್‌ನಲ್ಲಿ ಅರ್ಜಿ ಹಾಕುವುದನ್ನು ಆಯೋಗ ಕಡ್ಡಾಯ ಮಾಡಿದ್ದು, ಇದು ಗ್ರಾಮಾಂತರ ಪ್ರದೇಶಗಳ ಅಭ್ಯರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಸರ್ಕಾರದ ಗಮನ ಸೆಳೆದರು. ಈ ವ್ಯವಸ್ಥೆಯನ್ನು ಬದಲಿಸಬೇಕು, ಇಲ್ಲವೇ ಅರ್ಜಿ ಹಾಕಲು ಇನ್ನೂ 10 ದಿನ ಸಮಯ ನೀಡಬೇಕು. ಸರ್ಕಾರ  ಈ ವಿಷಯದಲ್ಲಿ ಆಯೋಗಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.ನಂತರ ಶೆಟ್ಟರ್ ಉತ್ತರ ನೀಡಿ, ಕೆಪಿಎಸ್‌ಸಿ ಕಾರ್ಯದರ್ಶಿ ಜತೆಗೆ ಈ ಸಮಸ್ಯೆ ಕುರಿತು ಚರ್ಚಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.


ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry