ರೇಷ್ಮೆ ದರ ಕುಸಿತದ ಹಿಂದಿನ ಗುಟ್ಟೇನು ?

7

ರೇಷ್ಮೆ ದರ ಕುಸಿತದ ಹಿಂದಿನ ಗುಟ್ಟೇನು ?

Published:
Updated:
ರೇಷ್ಮೆ ದರ ಕುಸಿತದ ಹಿಂದಿನ ಗುಟ್ಟೇನು ?

ರಾಮನಗರ: ರೇಷ್ಮೆ ಈ ಭಾಗದ ಜನರ ಜೀವನಾಡಿ. ಹಾಗಾಗಿಯೇ ರಾಮನಗರ ರೇಷ್ಮೆ ನಾಡು ಎಂದೇ ಪ್ರಸಿದ್ಧಿಯಾಗಿದೆ. ಇಲ್ಲಿನ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ಏಷ್ಯಾದಲ್ಲಿಯೇ ದೊಡ್ಡದು ಎಂದೂ ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ರಾಮನಗರ, ಚನ್ನಪಟ್ಟಣ ಮತ್ತು ಕನಕಪುರದಲ್ಲಿ ಸರ್ಕಾರಿ ಮಾರುಕಟ್ಟೆ ಇದೆ. ಆದರೆ 20 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ರೇಷ್ಮೆ ಗೂಡಿನ ಧಾರಣೆ ಕೆ.ಜಿಗೆ 30 ರೂಪಾಯಿಯಷ್ಟು ಇಳಿದದ್ದಿಲ್ಲ. ಈಗ ಏಕಾಏಕಿ ಇಷ್ಟು ದರ ಪ್ರಪಾತಕ್ಕೆ ಇಳಿಯಲು ಕಾರಣವೇನು ?ಈ ಪ್ರಶ್ನೆಗೆ ಯಾರ ಬಳಿಯು ಸ್ಪಷ್ಟ ಮತ್ತು ನಿರ್ದಿಷ್ಟವಾದ ಉತ್ತರ ಇಲ್ಲ. ಬೆಲೆಯ ಹಠಾತ್ ಕುಸಿತಕ್ಕೆ ಕಾರಣ ಏನು ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಈ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಾರಣಗಳನ್ನು ಕಂಡುಕೊಂಡಿದ್ದಾರೆ. ಆದರೆ ಬೆಲೆ ಇಳಿಕೆಗೆ ಬಕ್ರೀದ್ ಹಬ್ಬವೇ ಪ್ರಮುಖ ಕಾರಣ ಎಂಬ ಮಾತನ್ನು ಜಿಲ್ಲಾಡಳಿತದ ಅಧಿಕಾರಿಗಳು, ಮಾರುಕಟ್ಟೆ ಅಧಿಕಾರಿಗಳು ಹೇಳುತ್ತಾರೆ.ಆದರೆ ಪ್ರತಿ ವರ್ಷವೂ ಬಕ್ರೀದ್ ಹಬ್ಬ ಬರುತ್ತದೆ, ಹೋಗುತ್ತದೆ. ಹಿಂದಿನ ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ  ರೇಷ್ಮೆ ಗೂಡಿನ ಧಾರಣೆ ಇಷ್ಟು ಕುಸಿತ ಕಂಡಿರಲಿಲ್ಲ. ಬಕ್ರೀದ್ ಹಬ್ಬ ಅಲ್ಲದೆ ಬೇರೇನೋ ಕಾರಣ ಇರಬೇಕು. ಕಾಣದ ಕೈವಾಡಗಳು ಬಕ್ರೀದ್ ಹಬ್ಬದ ಹೆಸರಿನಲ್ಲಿ ಕೆಲಸ ಮಾಡಿವೆ. ರೈತರಿಗೆ ನಷ್ಟ ಸಂಭವಿಸುವಂತೆ ಮಾಡಿ, ತಾವು ಲಾಭ ಮಾಡಿಕೊಳ್ಳುವ ಹುನ್ನಾರ ಇದಾಗಿದೆ ಎಂದು ರೇಷ್ಮೆ ಬೆಳೆಗಾರರು ದೂರುತ್ತಾರೆ.ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಗಳು, ರಾಜ್ಯ ಸರ್ಕಾರದ ಅಸಹಕಾರ, ನೇಕಾರರು ಮತ್ತು ರೇಷ್ಮೆ ಉದ್ಯಮಿಗಳ ಲಾಬಿ, ಮಧ್ಯವರ್ತಿಗಳು, ದಲ್ಲಾಳಿಗಳಿಂದಾಗಿ ಸ್ಥಳೀಯ ರೇಷ್ಮೆ ಗೂಡಿನ ಮಾರುಕಟ್ಟೆಗೆ ದೊಡ್ಡ ಹೊಡೆತ ಬಿದ್ದಿದೆ. ಅದರ ಪರಿಣಾಮ ಧಾರಣೆಯಲ್ಲಿ ಹಂತ ಹಂತವಾಗಿ ಕುಸಿತ ದಾಖಲಾಗಿದೆ. ಅದು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಹೆಚ್ಚುವರಿ ಕುಸಿತಕ್ಕೆ ಕಾರಣವಾಗಿದೆ ಎಂದು ರಾಜ್ಯ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಶ್ರೀನಿವಾಸ್ ವಿಶ್ಲೇಷಿಸುತ್ತಾರೆ.ಪೂರೈಕೆಯಲ್ಲಿ ಹೆಚ್ಚಳ, ಬೆಲೆಯಲ್ಲಿ ಇಳಿಕೆ: ಎರಡು ದಶಕಗಳಿಂದ ರೇಷ್ಮೆ ಧಾರಣೆಯಲ್ಲಿ ಸಮತೋಲನದ ಬೆಲೆ ಇತ್ತು. ಮೂರು ನಾಲ್ಕು ವರ್ಷದಿಂದ ಈಚೆಗೆ ರೇಷ್ಮೆ ಗೂಡಿನ ಬೆಲೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿತು. 2010-11ನೇ ಸಾಲಿನಲ್ಲಂತೂ ರೇಷ್ಮೆ ಗೂಡಿನ ಬೆಲೆ ಉತ್ಕೃಷ್ಟ ಹಂತ ತಲುಪಿತ್ತು. ಈ ಅವಧಿಯಲ್ಲಿ ಕೆ.ಜಿ. ಗೂಡಿಗೆ ಕನಿಷ್ಠ 110 ರೂಪಾಯಿಯಿಂದ ಗರಿಷ್ಠ 480 ರೂಪಾಯಿವರೆಗೆ ಬೆಲೆ ಇತ್ತು. ಈ ಸಾಲಿನಲ್ಲಿ ಸರಾಸರಿ 231 ರೂಪಾಯಿ ಬೆಲೆ ದೊರೆತಿತ್ತು.ವರ್ಷದಿಂದ ವರ್ಷಕ್ಕೆ ರೇಷ್ಮೆ ಬೆಲೆಯಲ್ಲಿ ಆದ ಹೆಚ್ಚಳದಿಂದ ಬಹುತೇಕರು ಆಕರ್ಷಣೆಗೆ ಒಳಗಾದರು. ಉದ್ಯೋಗ ಅರಸಿ ನಗರ ಮತ್ತು ಪಟ್ಟಣಗಳನ್ನು ಸೇರಿದ್ದ ಯುವ ಜನತೆ ರೇಷ್ಮೆ ಕೃಷಿಯತ್ತ ಸೆಳೆಯಲ್ಪಟ್ಟರು.ಹಲವಾರು ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರ ಹಿಪ್ಪುನೇರಳೆ ಕಡ್ಡಿಗಳನ್ನು ಹಾಕಿ, ರೇಷ್ಮೆ ಕೃಷಿಯಲ್ಲಿ ತೊಡಗಿದರು. ಇದರ ಪರಿಣಾಮ ರೇಷ್ಮೆ ಗೂಡಿನ ಪೂರೈಕೆಯಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿತು.ರಾಮನಗರ ಸರ್ಕಾರಿ ರೇಷ್ಮೆ ಗೂಡಿನ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ (ಏಪ್ರಿಲ್‌ನಿಂದ ಅಕ್ಟೋಬರ್) 6,968 ಟನ್ ರೇಷ್ಮೆ ಗೂಡು ಮಾರುಕಟ್ಟೆಗೆ ಬಂದಿತ್ತು. ಈ ವರ್ಷ 8,030 ಟನ್ ರೇಷ್ಮೆ ಗೂಡು ಬಂದಿದೆ.ಅಂದರೆ 1062 ಟನ್ ಹೆಚ್ಚುವರಿಯಾಗಿದೆ. ಪೂರೈಕೆಯಲ್ಲಿ ಹೆಚ್ಚಳವಾಗಿರುವುದರಿಂದ ಬೆಲೆಯಲ್ಲಿ ಕುಸಿತ ಸಂಭವಿಸಿರಬಹುದು ಎಂದು ಮಾರುಕಟ್ಟೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.ಕಳೆದ ವರ್ಷದ ಬಕ್ರೀದ್ ಹಬ್ಬದ ದಿನದಂದು ಮಾರುಕಟ್ಟೆಗೆ 10,928 ಕೆ.ಜಿ ಗೂಡು ಬಂದಿತ್ತು. ಆಗ ಕನಿಷ್ಠ 125ರಿಂದ ಗರಿಷ್ಠ 250 (ಸರಾಸರಿ 189) ರೂಪಾಯಿಗೆ ಹರಾಜು ಆಗಿತ್ತು. ಈ ವರ್ಷದ ಬಕ್ರೀದ್ ಹಬ್ಬದ ದಿನದಂದು ಮಾರುಕಟ್ಟೆಗೆ 13,391 ಕೆ.ಜಿ ಗೂಡು ಬಂದಿದ್ದು, ಕನಿಷ್ಠ 80ರಿಂದ 215 (ಸರಾಸರಿ 130) ರೂಪಾಯಿಗೆ ಹರಾಜಾಗಿದೆ. ಚನ್ನಪಟ್ಟಣ ಮಾರುಕಟ್ಟೆಯಲ್ಲಿ 30 ರೂಪಾಯಿಗೆ ಹರಾಜು ಕೂಗಿದ್ದರಿಂದ ದಾಂಧಲೆ ನಡೆದಿದೆ  ಎಂದು ಅವರು ವಿವರಿಸಿದರು.ಬೆಲೆ ಇಳಿಕೆಗೆ ಮಳೆಯೂ ಕಾರಣ: ವಾರದಿಂದ ಮೋಡ ಕವಿದ ವಾತಾವರಣ ಇದ್ದು, ಕೆಲ ದಿನ ಮಳೆ ಬಂದಿರುವುದರಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ. ಇದರಿಂದ ರೇಷ್ಮೆಯ ಗುಣಮಟ್ಟ ಕುಸಿದಿದೆ.ಬಿಸಿಲು ಹೆಚ್ಚಾದರೆ ಗೂಡಿನಿಂದ ರೇಷ್ಮೆ ನೂಲು ಸರಾಗವಾಗಿ ಬರುತ್ತದೆ. ಆದರೆ ಚಳಿಯ ವಾತಾವರಣ ಇದ್ದರೆ ಗೂಡಿನಿಂದ ನೂಲು ತೆಗೆಯುವುದು ಕಷ್ಟವಾಗುತ್ತದೆ. ಹಾಗಾಗಿ ರೀಲರ್‌ಗಳು ಕಡಿಮೆ ಬೆಲೆಗೆ ಹರಾಜು ಕೂಗುತ್ತಾರೆ ಎಂದು ಮಾರುಕಟ್ಟೆಯ ಉಪ ನಿರ್ದೇಶಕ ನರಸಿಂಹಮೂರ್ತಿ (ಪ್ರಭಾರ) ತಿಳಿಸಿದರು.ಬಕ್ರೀದ್ ಹಬ್ಬ ಮತ್ತು ವಾತಾವರಣದಲ್ಲಿ ಆದ ಬದಲಾವಣೆಯಿಂದ ರೇಷ್ಮೆ ಗೂಡಿನ ಬೆಲೆಯಲ್ಲಿ ದಿಢೀರ್ ಕುಸಿತ ಸಂಭವಿಸಿದೆ. ಬಹುತೇಕ ರೀಲರ್‌ಗಳು ಮುಸ್ಲಿಂ ಸಮುದಾಯದವರಾಗಿದ್ದು, ಬಕ್ರೀದ್ ಆಚರಣೆ ಕಾರಣದಿಂದ ಅವರು ಹರಾಜು ಕೂಗಲು ಗೈರಾಗುತ್ತಾರೆ. ಇದಕ್ಕೆ ಪೂರಕವಾಗಿ ಹಬ್ಬದ ದಿನದಲ್ಲಿ ನೂಲು ತೆಗೆಯುವ ಬಿಚ್ಚಾಣಿಕೆ ಕೇಂದ್ರಗಳು (ಫಿಲೇಚರ್) ಸಹ ಎರಡು ಮೂರು ದಿನ ರಜಾ ಘೋಷಿಸಿರುತ್ತವೆ. ಹೀಗಿರುವಾಗ ರೀಲರ್‌ಗಳು ಗೂಡು ಖರೀದಿಗೆ ಮುಂದಾಗುವ ಸಾಹಸ ಮಾಡುವುದಿಲ್ಲ. ರೇಷ್ಮೆ ಗೂಡನ್ನು ಖರೀದಿಸಿದ ನಂತರ ನೂಲು ತೆಗೆಯುವುದು ಒಂದು ದಿನ ವಿಳಂಬವಾದರೂ ಗೂಡಿನ ಗುಣಮಟ್ಟ ಕುಸಿತವಾಗಿ, ನೂಲಿನ ಮೇಲೆ ಪರಿಣಾಮ ಬೀಳುತ್ತದೆ ಎಂದು ಅವರು ಹೇಳಿದರು.ರೇಷ್ಮೆ ನೂಲಿನ ಬೆಲೆಯಲ್ಲಿ ಇಳಿಕೆ ಸಂಭವಿಸಿದ ಸಂದರ್ಭದಲ್ಲಿ ರೀಲರ್‌ಗಳು ಕಡಿಮೆ ಬೆಲೆಗೆ ಹರಾಜು ಕೂಗುತ್ತಾರೆ. 10 ತಿಂಗಳ ಹಿಂದೆ ರೇಷ್ಮೆ ನೂಲಿನ ಬೆಲೆ ಕೆ.ಜಿಗೆ 2,500ರಿಂದ 3000 ರೂಪಾಯಿ ಇತ್ತು. ಈಗ ಆ ಬೆಲೆ 1500 ರಿಂದ 1700 ರೂಪಾಯಿಗೆ ಕುಸಿದಿದೆ. ಹಾಗಾಗಿ ರೀಲರ್‌ಗಳು ಹೆಚ್ಚಿನ ಬೆಲೆಗೆ ಹರಾಜು ಕೂಗಲು ಮುಂದಾಗುತ್ತಿಲ್ಲ ಎಂದು ರೀಲರ್ ಒಬ್ಬರು ಪ್ರತಿಕ್ರಿಯಿಸಿದರು.ಆಮದು ಸುಂಕ ಕಡಿತ: ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕ ಕಡಿತ ಮಾಡಿರುವ ಕಾರಣ ರೇಷ್ಮೆ ಧಾರಣೆ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ ಎಂದು ರೇಷ್ಮೆ ಹೋರಾಟಗಾರ  ರಮೇಶ್‌ಗೌಡ ಹೇಳುತ್ತಾರೆ. ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ರೇಷ್ಮೆ ಆಮದು ಸುಂಕವನ್ನು ಶೇ 31ರಿಂದ ಶೇ 5ಕ್ಕೆಇಳಿಸಿತು. ಇದರ ಪರಿಣಾಮವನ್ನು ಇಂದು ರೇಷ್ಮೆ ಬೆಳೆಗಾರರು ಎದುರಿಸುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.ಆಮದು ಸುಂಕ ಕಡಿತವಾದದ್ದರಿಂದ ಚೀನಾ ರೇಷ್ಮೆ ಸರಾಗವಾಗಿ ಭಾರತಕ್ಕೆ ಬರುತ್ತಿದೆ. ಭಾರತೀಯ ರೇಷ್ಮೆಗಿಂತ ಉತ್ತಮ ಗುಣಮಟ್ಟ ಹೊಂದಿರುವ ಚೀನಾ ರೇಷ್ಮೆ ಬೆಲೆಯಲ್ಲಿಯೂ ಕಡಿಮೆಯಾಗಿರುವುದರಿಂದ ನೇಕಾರರು ಅತ್ತ ಹೆಚ್ಚು ಗಮನಹರಿಸಿದ್ದಾರೆ. ಕೇಂದ್ರ ಸರ್ಕಾರ ನೇಕಾರರ ಲಾಬಿಗೆ ಮಣಿದು ಆಮದು ಸುಂಕವನ್ನು ಕಡಿತಗೊಳಿಸಿ, ದೇಶೀಯ ರೇಷ್ಮೆ ಬೆಳೆಗಾರರನ್ನು ವಂಚಿಸಲಾಗುತ್ತಿದೆ ಎಂದು ಅವರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry