ರೇಷ್ಮೆ ಬೆಳೆಗಾರರ ಕೂಗು ಕೇಳೀತೇ?

7

ರೇಷ್ಮೆ ಬೆಳೆಗಾರರ ಕೂಗು ಕೇಳೀತೇ?

Published:
Updated:
ರೇಷ್ಮೆ ಬೆಳೆಗಾರರ ಕೂಗು ಕೇಳೀತೇ?

ರಾಮನಗರ: ರೇಷ್ಮೆ ಗೂಡಿನ ಧಾರಣೆ ಕುಸಿತದಿಂದ ಕಂಗೆಟ್ಟಿರುವ ರೈತರಿಗೆ ತಾತ್ಕಾಲಿಕ ಪರಿಹಾರವಾಗಿ ಕೆ.ಜಿ ರೇಷ್ಮೆ ಗೂಡಿಗೆ ಸರ್ಕಾರದ ಕಡೆಯಿಂದ 30 ರೂಪಾಯಿ ಹೆಚ್ಚುವರಿಯಾಗಿ ನೆರವು ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಅದನ್ನು ಮೊದಲ ದಿನವೇ ಹುಸಿಗೊಳಿಸಿದೆ !ಇದರಿಂದ ರೇಷ್ಮೆ ಬೆಳೆಗಾರರಲ್ಲಿ ಅಸಮಾಧಾನ ಮನೆ ಮಾಡಿದೆ. ಪೊಲೀಸರ ಸರ್ಪಗಾವಲಿನಲ್ಲಿ ನಡೆದ ವಹಿವಾಟಿನಲ್ಲಿ ಈ ಕುರಿತು ಧ್ವನಿಯೆತ್ತಲು ರೈತರು ಹಿಂಜರಿದರು.

ಚನ್ನಪಟ್ಟಣದ ಸರ್ಕಾರಿ ರೇಷ್ಮೆ ಗೂಡಿನ ಮಾರುಟಕಟ್ಟೆಯಲ್ಲಿ ಭಾನುವಾರ ರೇಷ್ಮೆ ಗೂಡಿನ ಬೆಲೆಯಲ್ಲಿ ಗಣನೀಯ ಕುಸಿತ ಕಂಡು ಬಂದಿದ್ದರಿಂದ ರೊಚ್ಚಿಗೆದ್ದಿದ್ದ ರೇಷ್ಮೆ ಬೆಳೆಗಾರರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸತತ 6 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.ಜಿಲ್ಲಾ ಉಪ ವಿಭಾಗಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಡಿವೈಎಸ್‌ಪಿಗಳು ನಡೆಸಿದ ಮಾತುಕತೆಗಳು ಫಲಪ್ರದವಾಗಿರಲಿಲ್ಲ. ಇದರಿಂದ ರಸ್ತೆಯಲ್ಲಿಯೇ ಗಂಟೆ ಗಟ್ಟಲೆ ಕಿ.ಮೀಗಳಷ್ಟು ಉದ್ದ ವಾಹನಗಳು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿತ್ತು. ಸಹಸ್ರಾರು ಪ್ರಯಾಣಿಕರು ಸರ್ಕಾರವನ್ನು ಮತ್ತು ರೈತರನ್ನು ಶಪಿಸತೊಡಗಿದ್ದರು.

ರೈತರು ಹೋರಾಟದಿಂದ ಹಿಂದೆ ಸರಿಯದಿರಲು ನಿರ್ಧರಿಸಿದ ಸಂದರ್ಭದಲ್ಲಿ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ.ಯೋಗೀಶ್ವರ್ ಅವರು ಅಧಿಕಾರಿಗಳು, ರೀಲರ್‌ಗಳು ಮತ್ತು ರೇಷ್ಮೆ ಬೆಳೆಗಾರರ ಜತೆ ಮಾತುಕತೆ ನಡೆಸಿ ಪರಿಹಾರ ಸೂತ್ರ ರೂಪಿಸಿದ್ದರು.

ಸಚಿವರು ಹೇಳಿದ್ದೇನು ?:

ಅದನ್ನು ರಸ್ತೆ ತಡೆ ನಡೆಸಿದ್ದ ರೈತರ ಬಳಿ ಹೋಗಿ ಘೋಷಿಸಿದ್ದರು. ಅವರು ಹೇಳಿದ್ದು ಏನೆಂದರೆ, `ರೇಷ್ಮೆ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೇಷ್ಮೆ ಬೆಲೆಗೆ ಚೇತರಿಕೆ ನೀಡುವ ಸಲುವಾಗಿ ಮಾರುಕಟ್ಟೆಯಲ್ಲಿ ಕೆ.ಜಿ ರೇಷ್ಮೆ ಗೂಡಿಗೆ ಕನಿಷ್ಠ 100 ರೂಪಾಯಿಗಿಂತ ಹೆಚ್ಚು ಬೆಲೆಯನ್ನು ರೀಲರ್‌ಗಳು ಕೂಗಬೇಕು. ಯಾವುದೇ ಕಾರಣಕ್ಕೂ 100 ರೂಪಾಯಿ ಒಳಗೆ ಕೂಗಬಾರದು. ಅಲ್ಲದೆ ಎರಡು ದಿನ ತಾತ್ಕಾಲಿಕ ಪರಿಹಾರ ಎಂಬಂತೆ ಮಾರಾಟವಾಗುವ ಪ್ರತಿ ಕೆ.ಜಿ ಗೂಡಿಗೆ 30 ರೂಪಾಯಿ ಹೆಚ್ಚುವರಿ ನೆರವನ್ನು ರೈತರಿಗೆ ಸರ್ಕಾರವೇ ನೀಡುತ್ತದೆ~ ಎಂದು ಸಚಿವರು ಘೋಷಿಸಿದ್ದರು.

`ಸ್ಥಳದಲ್ಲಿಯೇ ರೈತರಿಗೆ ಪ್ರತಿ ಕೆ.ಜಿಗೆ ಹೆಚ್ಚುವರಿ 30 ರೂಪಾಯಿ ನೆರವು ನೀಡಲಾಗುವುದು. ಇದರಿಂದ ರೈತರ ಸಮಸ್ಯೆ ತಾತ್ಕಾಲಿಕವಾಗಿ ಶಮನವಾಗಲಿ. ಶಾಶ್ವತ ಪರಿಹಾರಕ್ಕೆ ಮುಖ್ಯಮಂತ್ರಿ ಜತೆ ಸಮಾಲೋಚಿಸುವುದಾಗಿ~ ಸಚಿವರು ತಿಳಿಸಿದ್ದರು.

ಸೋಮವಾರ ನಡೆದ ಮಾರುಕಟ್ಟೆಯಲ್ಲಿ ರೀಲರ್‌ಗಳು ಪ್ರತಿ ಕೆ.ಜಿ ರೇಷ್ಮೆ ಗೂಡಿಗೆ 100 ರೂಪಾಯಿಗಿಂತ ಹೆಚ್ಚಿಗೆ ಹರಾಜು ಕೂಗಿದರು. ಆದರೆ ಸಚಿವರು ನೀಡಿದ್ದ ವಾಗ್ದಾನ ಮಾತ್ರ ಈಡೇರಲಿಲ್ಲ. ಯಾವ ರೈತರಿಗೂ ಹೆಚ್ಚುವರಿಯಾಗಿ 30 ರೂಪಾಯಿ ನೀಡುವ ಗೋಡಿಗೆ ಸರ್ಕಾರ ಮುಂದಾಗಲಿಲ್ಲ. ಇದರಿಂದ ರೈತರಲ್ಲಿ ಆತಂಕ ಮತ್ತು ಕಳವಳ ಹೆಚ್ಚಾಗಿತ್ತು.

ಮಾರುಕಟ್ಟೆಯ ಸುತ್ತ ಪೊಲೀಸರು ಸುತ್ತುವರೆದಿದ್ದ ಕಾರಣ ಈ ಕುರಿತು ಅಸಮಾಧಾನ ತೋರಿಸಲು ರೈತರಿಂದ ಆಗಲಿಲ್ಲ. ಧ್ವನಿಯೆತ್ತಿದರೆ ಬಂಧನಕ್ಕೆ ಒಳಗಾಗುತ್ತೇವೆ ಎಂಬ ಆತಂಕ ಅವರಲ್ಲಿ ಮನೆ ಮಾಡಿತ್ತು. ಕೊಟ್ಟಷ್ಟು ಹಣವನ್ನು ತೆಗೆದುಕೊಂಡ ರೈತರು ಸರ್ಕಾರವನ್ನು, ಸಚಿವರನ್ನು ಶಪಿಸುತ್ತ ಮಾರುಕಟ್ಟೆಯಿಂದ ಹೊರ ನಡೆದ ದೃಶ್ಯಗಳು ಸಾಮಾನ್ಯವಾಗಿತ್ತು.

`ಸಣ್ಣ ಆಸೆ ತೋರಿಸಿ ರೈತರನ್ನು ಹೋರಾಟದಿಂದ ಎಬ್ಬಿಸಿದ ಸರ್ಕಾರ ತನ್ನ ವಾಗ್ದಾನ ಈಡೇರಿಸುವಲ್ಲಿ ವಿಫಲವಾಗಿದೆ. ಇದರಿಂದ ಸರ್ಕಾರವನ್ನು ನಂಬುವುದು ಹೇಗೆ. ಸರ್ಕಾರ ರೈತರ ನಂಬಿಕೆ ಕಳೆದುಕೊಂಡಿದೆ~ ಎಂದು ಜೆಡಿಎಸ್ ಮುಖಂಡ ಸಿಂ.ಲಿಂ.ನಾಗರಾಜು ಪ್ರತಿಕ್ರಿಯಿಸಿದರು.

`ಪೊಲೀಸರನ್ನು ಮುಂದಿಟ್ಟುಕೊಂಡು ಸರ್ಕಾರ ರೀಲರ್‌ಗಳ ಪರವಾಗಿ ಕೆಲಸ ಮಾಡಿದೆ. ರೇಷ್ಮೆ ಬೆಳೆಗಾರರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದಿದ್ದರೆ ಘೋಷಿಸಿದ್ದ ತಾತ್ಕಾಲಿಕ ಪರಿಹಾರವನ್ನಾದರೂ ರೈತರಿಗೆ ತಲುಪಿಸುವ ಕೆಲಸ ಮಾಡಬೇಕಿತ್ತು. ಭಾನುವಾರ ಸಂಜೆ ಸಚಿವರು ರೈತರ ಮುಂದೆ ಹೇಳಿದ ಮಾತು ಸೋಮವಾರ ಕಾರ್ಯಗತವಾಗಲಿಲ್ಲ ಎಂದರೆ ಏನರ್ಥ~ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಷ್ಟಕ್ಕೆ ತೃಪ್ತರಾದರು:

`ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚುವರಿಯಾಗಿ 30 ರೂಪಾಯಿ ನೀಡುವುದಾಗಿ ಘೋಷಿಸಿದ್ದರು. ಆದರೆ ಸೋಮವಾರದ ಮಾರುಕಟ್ಟೆಯಲ್ಲಿ ಕೆ.ಜಿ ರೇಷ್ಮೆ ಗೂಡಿಗೆ 100 ರೂಪಾಯಿ ಮೇಲೆ ಬೆಲೆಯನ್ನು ರೀಲರ್‌ಗಳು ಕೂಗಿದರು. ಕೆಲವರ ಗೂಡಿಗೆ 170 ರೂಪಾಯಿ ಕೂಡ ಹೋಯಿತು. ಅಷ್ಟಕ್ಕೆ ರೇಷ್ಮೆ ಬೆಳೆಗಾರರು ತೃಪ್ತರಾಗಿದ್ದರು~ ಎಂದು ಜಿಲ್ಲಾಧಿಕಾರಿ ಎಸ್. ಪುಟ್ಟಸ್ವಾಮಿ `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

`ರಾಜ್ಯದ ರೇಷ್ಮೆ ಬೆಳೆಗಾರರ ಸಮಸ್ಯೆ ಮತ್ತು ರೇಷ್ಮೆ ಧಾರಣೆ ಕುಸಿತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ನೇತೃತ್ವದಲ್ಲಿ ಬುಧವಾರ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಬೆಂಬಲ ಬೆಲೆ, ಪರಿಹಾರ ಸೇರಿದಂತೆ ಇತರ ವಿಷಯಗಳು ಚರ್ಚೆಯಾಗಲಿವೆ~ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry