ಶುಕ್ರವಾರ, ಜೂನ್ 25, 2021
24 °C

ರೇಷ್ಮೆ ಬೇಡಿಕೆಗೆ ದೊರಕದ ಮನ್ನಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಲೆ ಕುಸಿತದಿಂದ ಕಂಗೆಟ್ಟಿರುವ ರೇಷ್ಮೆ ಬೆಳೆಗಾರರಿಗೆ ಕೇಂದ್ರ ಬಜೆಟ್ ಕಿಂಚಿತ್ತೂ ನ್ಯಾಯ ಒದಗಿಸಿಲ್ಲ. ರೇಷ್ಮೆ ಆಮದು ಮೇಲಿನ ಸುಂಕವನ್ನು ಶೇ 5ರಿಂದ 30ಕ್ಕೆ ಏರಿಸುವಂತೆ ಮಾಡಿದ್ದ ಮನವಿಗೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಕವಡೆ ಕಾಸಿನ ಕಿಮ್ಮತ್ತೂ ನೀಡಿಲ್ಲ. ಈ ಸಲದ ಬಜೆಟ್‌ನಲ್ಲಿ ರೇಷ್ಮೆ ಆಮದು ಸುಂಕ ಹೆಚ್ಚಿಸಬಹುದೆಂದು ಜಾತಕ ಪಕ್ಷಿಗಳಂತೆ ಕಾದುಕುಳಿತಿದ್ದ ರಾಜ್ಯದ ರೇಷ್ಮೆ ಬೆಳೆಗಾರರು ಹತಾಶರಾಗಿದ್ದಾರೆ.

ಬಜೆಟ್ ಮಂಡನೆ ನಂತರ ಪ್ರಣವ್ ಮುಖರ್ಜಿ ಅವರನ್ನು ಭೇಟಿಯಾದ ಚಾಮರಾಜನಗರ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ ತಮ್ಮ ಅಸಮಾಧಾನ ಹೊರಹಾಕಿದರು. ರೇಷ್ಮೆ ಬೆಳೆಗಾರರನ್ನು ಕಡೆಗಣಿಸಿರುವುದರಿಂದ ಕ್ಷೇೀತ್ರಕ್ಕೆ ಹೋಗುವುದು ಕಷ್ಟವಾಗಲಿದೆ ಎಂದು ಅಲವತ್ತುಕೊಂಡರು. ಆದರೆ, ಹಣಕಸು ಸಚಿವರು ಇವರ ಮಾತಿಗೆ ಸೊಪ್ಪು ಹಾಕದೆ ಮೌನವಾಗಿ ಹೊರಟು ಹೋದರು.

ಹೋದ ವರ್ಷ ಏಪ್ರಿಲ್ 1ರಂದು ರೇಷ್ಮೆ ಆಮದು ಸುಂಕವನ್ನು ಸರ್ಕಾರ ಶೇ 30ರಿಂದ 5ಕ್ಕೆ ಇಳಿಸಿತ್ತು. ಈ ತೀರ್ಮಾನದ ಬಳಿಕ ರೇಷ್ಮೆಗೂಡಿನ ಬೆಲೆ ಕೆ.ಜಿಗೆ 300- 400ರಿಂದ 100-120 ರೂಪಾಯಿಗೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ರಾಜ್ಯದಲ್ಲಿ ಸುಮಾರು 11 ಲಕ್ಷ ಮಂದಿ ರೇಷ್ಮೆಯನ್ನೇ ಅವಲಂಬಿಸಿದ್ದಾರೆ. ದೇಶದಲ್ಲಿ 20 ಸಾವಿರ ಟನ್ ರೇಷ್ಮೆಗೂಡು ಉತ್ಪಾದಿಸುತ್ತಿದ್ದು, ಇದರಲ್ಲಿ ಅರ್ಧದಷ್ಟು ಕರ್ನಾಟಕದ ಕೊಡುಗೆ. 30 ಸಾವಿರ ಟನ್ ನಮ್ಮ ಅಗತ್ಯವಾಗಿದ್ದು, ಉಳಿದಿದ್ದನ್ನು ಚೀನಾದಿಂದ ಅಗ್ಗದ ಬೆಲೆಗೆ ಆಮದು ಮಾಡಿಕೊಳ್ಳಲಾಗುತ್ತಿದೆ.

ರೇಷ್ಮೆ ಬೆಳೆಗಾರರು ಕಳೆದ ವಾರ ದೆಹಲಿಗೆ ಆಗಮಿಸಿ ಆಮದು ಸುಂಕ ಹೆಚ್ಚಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದರು. ರೈಲ್ವೆ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯದ ಸಚಿವ ಬಿ.ಎನ್. ಬಚ್ಚೇಗೌಡ, ರೈತ ನಾಯಕ ಮಾರುತಿ ಮಾನ್ಪಡೆ ಒಳಗೊಂಡಂತೆ ಹಲವರು ಈ ರೈತರ ಬೇಡಿಕೆಗೆ ದನಿಗೂಡಿಸಿದ್ದರು. ಕಳೆದ ನವೆಂಬರ್‌ನಲ್ಲಿ ಕಾರ್ಪೊರೇಟ್ ಉದ್ಯಮಗಳ ಸಚಿವ ಎಂ. ವೀರಪ್ಪ ಮೊಯಿಲಿ ನೇತೃತ್ವದಲ್ಲಿ ರಾಜ್ಯದ ಲೋಕಸಭಾ ಸದಸ್ಯರ ನಿಯೋಗ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.

ರೈತರ ಸಮಸ್ಯೆ ಕುರಿತು ಅಧ್ಯಯನ ಮಾಡಿ ವಾಣಿಜ್ಯ ಸಚಿವಾಲಯದ ಜತೆ ಸಮಾಲೋಚಿಸಿ ಪರಿಹಾರ ಒದಗಿಸುವ ಭರವಸೆಯನ್ನು ಪ್ರಣವ್ ಮುಖರ್ಜಿ ನಿಯೋಗಕ್ಕೆ ನೀಡಿದ್ದರು.

ರೇಷ್ಮೆ ಆಮದು ಸುಂಕ ತಿರುವು- ಮುರುವು ಮಾಡುವುದರ ಜತೆಗೆ 200 ಕೋಟಿ ಆವರ್ತ ನಿಧಿ ಕೊಡಬೇಕೆಂಬ ಬೇಡಿಕೆಯನ್ನು ಈ ನಿಯೋಗ ಸಚಿವರ ಮುಂದಿಟ್ಟಿತ್ತು. ಈ ಯಾವ ಬೇಡಿಕೆಗೂ ಮುಖರ್ಜಿ ಬೆಲೆ ಕೊಟ್ಟಿಲ್ಲ.

ಒಂದು ವರ್ಷದಿಂದ ಬೆಲೆ ಕುಸಿತದ ಬಿಸಿಗೆ ಸಿಕ್ಕಿ ತತ್ತರಿಸಿರುವ ರೈತರಿಗೆ ನೆರವು ನೀಡಬೇಕಾದ ಸರ್ಕಾರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ಅಧಿಕ ಸಂಖ್ಯೆಯಲ್ಲಿರುವ ನೇಕಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆಮದು ಸುಂಕ ಹೆಚ್ಚಿಸುವ ಗೋಜಿಗೆ ಹೋಗಿಲ್ಲ ಎಂದು ಸಂಸದರೊಬ್ಬರು ಆರೋಪಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.