ರೇಷ್ಮೆ: ಲಕ್ಷಾಂತರ ಹಣ ಅಪವ್ಯಯ

ಶನಿವಾರ, ಜೂಲೈ 20, 2019
27 °C

ರೇಷ್ಮೆ: ಲಕ್ಷಾಂತರ ಹಣ ಅಪವ್ಯಯ

Published:
Updated:

ಕುಷ್ಟಗಿ:  ಅದು 21.11 ಎಕರೆ ಸರ್ಕಾರಿ ರೇಷ್ಮೆ ಇಲಾಖೆಯ ಜಮೀನು, ಹನಿ ನೀರು ಹೊಲಕ್ಕೆ ಹರಿಯುತ್ತಿಲ್ಲ, ಒಂದು ಎಕರೆ ಪ್ಲಾಟ್‌ನಲ್ಲಿ ಮಾತ್ರ ಹಿಪ್ಪುನೇರಳೆ ಗಿಡಗಳಿದ್ದು ಅವಕ್ಕೆ ರೂ 1 ಲಕ್ಷ ವೆಚ್ಚದಲ್ಲಿ ಕೊಟ್ಟಿಗೆ ಗೊಬ್ಬರ ಖರೀದಿಸುತ್ತಾರೆ. ರಿವಾಲ್ವಿಂಗ್ ಚೇರ್, ಒಳಾವರಣ ಅಲಂಕಾರದ ಹೆಸರಿನಲ್ಲಿ ಸ್ವತಃ ಸಹಾಯಕ ನಿರ್ದೇಶಕರೇ ನಕಲಿ ಬಿಲ್‌ಗಳನ್ನು ನೀಡಿ ಹಣ ಗುಳುಂ ಮಾಡುತ್ತಾರೆ. ನೀರೆತ್ತದ ಕೊಳವೆಬಾವಿ ಹೆಸರಲ್ಲಿ ಒಂದೂವರೆ ಲಕ್ಷ ರೂ ಎತ್ತುವಳಿ. `ಹೌದ್ರಿ ಇಷ್ಟೆಲ್ಲ ಖರ್ಚಾಗೇತಿ ಆದ್ರ ಅಲ್ಲಿ ರೇಷ್ಮಿಗಿಡಾನ ಒಣಿಗ್ಯಾವ, ಫಾರ್ಮು ಬೀಳು ಬಿದ್ದೈತಲ್ರಿ.....?ತಾಲ್ಲೂಕಿನ ನೆರೆಬೆಂಚಿ ಗ್ರಾಮದ ಬಳಿ ಇರುವ ಸರ್ಕಾರಿ ರೇಷ್ಮೆ ಕೃಷಿ ಫಾರ್ಮ್ ಮತ್ತು ಅಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಕೇಳುವ ಪ್ರಶ್ನೆ ಇದು. ಬೀಳು ಬಿದ್ದಿರುವ ರೇಷ್ಮೆ ಫಾರ್ಮ್ ಮತ್ತು ಕಚೇರಿ ಅಲಂಕಾರದ ಹೆಸರಿನಲ್ಲಿ 2011-12ರಲ್ಲಿ ರೂ 5-6 ಲಕ್ಷ ರೂ ಹಣ `ಗುಳುಂ~ ಆಗಿರುವುದು ಬೆಳಕಿಗೆ ಬಂದಿದ್ದು ಸ್ವತಃ ಸಹಾಯಕ ನಿರ್ದೇಶಕರೇ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ಪಂಗನಾಮ ಹಾಕಿರುವುದು ಸ್ಪಷ್ಟವಾಗಿದೆ.ತಿಪ್ಪೆಹೆಸರಲ್ಲೂ ಹಣ: ಕೊಟ್ಟಿಗೆ ಗೊಬ್ಬರ ಖರೀದಿಗಾಗಿ ಮಾರ್ಚ್‌ನಲ್ಲಿ ರೂ 96,000 ಖರ್ಚಾಗಿದ್ದರೂ  ಒಂದು ಬುಟ್ಟಿ ಗೊಬ್ಬರ ಬಂದಿಲ್ಲ. ಕಚೇರಿಯಲ್ಲಿ `ಸಿ~ ದರ್ಜೆ ಸಿಬ್ಬಂದಿ ಮಲ್ಲನಗೌಡ ಎಂಬುವವರ ಮಗ ರವಿಕುಮಾರ ಎಂಬಾತನ ಹೆಸರಿನಲ್ಲಿ ಗೊಬ್ಬರ ಖರೀದಿಸಿರುವ ಬಿಲ್ ಸೃಷ್ಟಿಸಿ ಹಣ ಪಾವತಿಸಲಾಗಿದೆ.ನಕಲಿ ಬಿಲ್:  ರೇಷ್ಮೆಫಾರ್ಮ್‌ನಲ್ಲಿರುವ ಸಹಾಯಕ ನಿರ್ದೇಶಕರ ಕಚೇರಿ ಡೆಕೋರೇಷನ್ ಹೆಸರಿನಲ್ಲಿ ಸಾಮಗ್ರಿ ಖರೀದಿಸಿರುವ ಬಗ್ಗೆ ಕೊಪ್ಪಳದ ಲಾವಣ್ಯ ಸೌಹಾರ್ದ ವಿವಿಧೋದ್ದೇಶ ಸಹಕಾರಿ ಸಂಸ್ಥೆಯ ಹೆಸರಿನಲ್ಲಿ ರೂ 24,960 ರೂ ಮೊತ್ತದ ಬಿಲ್‌ಗಳನ್ನು ಅಂಟಿಸಲಾಗಿದೆ. ಸಂಸ್ಥೆಗೆ ಸ್ವತಃ ಹಣ ಸಂದಾಯ ಮಾಡಿರುವುದಾಗಿ ತಿಳಿಸಿ ಸಹಾಯಕ ನಿರ್ದೇಶಕ ಪಿ.ವಿ.ಕರೂರಮಠ ತಾವೇ ಚೆಕ್ (ನಂ-ಸಿಸಿ789599. 9-3-2012) ಪಡೆದುಕೊಂಡಿದ್ದಾರೆ. ಆದರೆ ಪಟ್ಟಿಯಲಿರುವ ಒಂದೂ ಸಾಮಾನು ಕಚೇರಿಗೆ ಬಂದಿಲ್ಲ.ಕಳಪೆ ಸಲಕರಣೆ: ರೂ 48,310 ವೆಚ್ಚದಲ್ಲಿ ಕೊಳವೆ ಬಾವಿ ಕೊರೆಯಿಸಿದ್ದು ಸೇರಿದಂತೆ ನೀರು ಎತ್ತುವವರೆಗೂ ಎಲ್ಲ ಸಲಕರಣೆ ಖರೀದಿ ಹೆಸರಿನಲ್ಲಿ ರೂ 1.50 ಲಕ್ಷ ರೂ ಖರ್ಚಾಗಿದೆ. ಹುಬ್ಬಳ್ಳಿಯ ಮಂದಾರ ಪ್ರೊಮೋಟರ್ಸ್‌ ಕಂಪೆನಿ ಮೋಟರ್ ಇತರೆ ಸಲಕರಣೆ ಖರೀದಿಸಿರುವಂತೆ ಹಣ ಪಾವತಿಸಲಾಗಿದೆ.ಆದರೆ ಒಂದೂವರೆ ಅಂಗುಲ ವ್ಯಾಸದ 20 ಫೈಬರ್ ಪೈಪ್‌ಗಳೊಂದಿಗೆ ಮೂರೂವರೆ ಎಚ್.ಪಿ ಮೋಟರ್, ಪಂಪ್ ಇಳಿಸಿದ್ದನ್ನು ಬಿಟ್ಟರೆ ಬೇರೆ ಏನೂ ಇಲ್ಲ. ಹೋಗಲಿ ಕೊಳವೆಬಾವಿಯಿಂದ ನೀರು ಹೊರಬಂದಿದೆ ಅದೂ ಇಲ್ಲ.

ಕಳಪೆ ಯಂತ್ರಗಳು: ಹಿಪ್ಪುನೇರಳೆ ಗಿಡಗಳನ್ನು ಕತ್ತರಿಸಲು (ಪ್ರೂನಿಂಗ್) ರೂ 28,875 ಹಣದಲ್ಲಿ ಪೆಟ್ರೋಲ್ ಚಾಲಿತ ಎಂಜಿನ್ ಖರೀದಿಸಲಾಗಿದೆ. ಇದೇ ರೀತಿ ಎರಡು ಯಂತ್ರಗಳನ್ನು ರೈತರಿಗೂ ವಿತರಿಸಲಾಗಿದೆ.ಆದರೆ ಅವೆಲ್ಲ ಕಳಪೆಯಾಗಿದ್ದು ದುರಸ್ತಿಗಾಗಿ ಹೋದವು ಮರಳಿಲ್ಲ. ರೈತರಿಗೆ ನೀಡಿದ ಯಂತ್ರಗಳ ಸ್ಥಿತಿಯೂ ಅದೇ ಆಗಿದೆ. ಬಹುತೇಕ ಸಾಮಗ್ರಿಗಳನ್ನು ಅದೇ ಕಂಪೆನಿಯಲ್ಲಿ ಖರೀದಿಸುವಲ್ಲಿನ ಅಧಿಕಾರಿಯ `ಆಸಕ್ತಿ~ ಪ್ರಶ್ನಾರ್ಹವಾಗಿದೆ ಎನ್ನಲಾಗಿದೆ.ಕಚೇರಿ ಎತ್ತಂಗಡಿ ಏಕೆ?: ಈವರೆಗೂ ಮಿನಿ ವಿಧಾನಸೌಧದಲ್ಲಿದ್ದ ರೇಷ್ಮೆ ಎಡಿಎಸ್ ಕಚೇರಿ ನೆರೆಬೆಂಚಿ ಫಾರ್ಮ್‌ಗೆ ದಿಢಿ ೀರ್ ಎತ್ತಂಗಡಿಯಾಗಿದೆ. ಮೂಲಗಳ ಪ್ರಕಾರ ಇಲ್ಲಿದ್ದರೆ ಹಿರಿಯ ಅಧಿಕಾರಿಗಳ `ಕಾಟ~ ಇರುತ್ತದೆ ಎಂಬ ಕಾರಣಕ್ಕೆ ಫಾವೆರ್‌ಗೆ ಸ್ಥಳಾಂತರಿಸಲಾಗಿದೆ ಎಂಬುದು ಗೊತ್ತಾಗಿದೆ.ಆದರೆ ಸಹಾಯಕ ನಿರ್ದೇಶಕರು ಕಚೇರಿಯಲ್ಲಿರುವುದೇ ಅಪರೂಪ ಎಂಬ ಆರೋಪವಿದೆ.ಸದರಿ ಅಧಿಕಾರಿ ಸಿ ದರ್ಜೆ ನೌಕರನೊಬ್ಬನನ್ನು  ಪಟ್ಟಣದಲ್ಲಿರುವ ಮನೆ ಅಡುಗೆ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.ಅಲ್ಲದೇ ವಿವಿಧ ಯೋಜನೆಯಲ್ಲಿ ಹನಿ ನೀರಾವರಿ ಸಹಾಯಧನ ವಿತರಣೆಯಲ್ಲೂ ಸಾಕಷ್ಟು ಅಪರಾತಪರಾ ನಡೆದಿದೆ ಎಂಬ ದೂರು ಕೇಳಿಬಂದಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry