ರೇಷ್ಮೆ ವಿಜ್ಞಾನಿಗಳಿಂದ ಹಿಪ್ಪುನೇರಳೆ ಪರಿಶೀಲನೆ

7

ರೇಷ್ಮೆ ವಿಜ್ಞಾನಿಗಳಿಂದ ಹಿಪ್ಪುನೇರಳೆ ಪರಿಶೀಲನೆ

Published:
Updated:

ಚಿಕ್ಕಬಳ್ಳಾಪುರ: ತಾಲ್ಲೂಕಿನ ಯಲುವಹಳ್ಳಿ ಗ್ರಾಮದಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ಎಲೆಸುರಳಿ ಮತ್ತು ಥ್ರಿಪ್ಸ್ ಕೀಟ ಹಾವಳಿ ಕಾಡುತ್ತಿದೆ ಎಂಬ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ತಲಘಟ್ಟಪುರದ ರೇಷ್ಮೆ ವಿಜ್ಞಾನಿಗಳು ಹಿಪ್ಪುನೇರಳೆ ಬೆಳೆಯುವ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು.ತಲಘಟ್ಟಪುರದ ರೇಷ್ಮೆ ಕೃಷಿ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಕೀಟಶಾಸ್ತ್ರ ವಿಭಾಗದ ಹಿರಿಯ ವಿಜ್ಞಾನಿ ಡಾ. ಬಿ.ಮರಿಮಾದಯ್ಯ ಮತ್ತು ರೋಗಶಾಸ್ತ್ರ ಹಾಗೂ ಸೂಕ್ಷ್ಮಜೀವಿ ಶಾಖಾ ವಿಜ್ಞಾನಿ ಡಾ. ಕೆ.ವಿ.ಪ್ರಸಾದ್ ಅವರು ರೋಗಪೀಡಿತ ಹಿಪ್ಪುನೇರಳೆ ಬೆಳೆಗಳನ್ನು ತಪಾಸಣೆ ಮಾಡಿದರು.ಬೆಳೆಗಳನ್ನು ಪರಿಶೀಲಿಸಿ ವಿವರಣೆ ನೀಡಿದ ವಿಜ್ಞಾನಿಗಳು, `ಚಳಿಗಾಲದ ಅವಧಿಯಲ್ಲಿ ಹಿಪ್ಪುನೇರಳೆ ಸೊಪ್ಪಿಗೆ ಥ್ರಿಪ್ಸ್ ಕೀಟ, ಎಲೆಸುರಳಿ ಕೀಟ ಮತ್ತು ಬೂದಿರೋಗದ ಹಾವಳಿ ಇರುತ್ತದೆ. ಥ್ರಿಪ್ಸ್ ಮತ್ತು ಎಲೆಸುರಳಿ ಕೀಟಗಳನ್ನು ನಿಯಂತ್ರಿಸಲು ನುವಾನ್ (ಡಿಡಿವಿಪಿ) ಕೀಟನಾಶಕವನ್ನು ಬಳಸಬೇಕು. ಕಟಾವಿನ ನಂತರ ಅರ್ಧ ಅಡಿ ಸೊಪ್ಪು ಬೆಳೆದಾಗ ಅದಕ್ಕೆ ಶೇ 2ರ ಪ್ರಮಾಣದಲ್ಲಿ ಕೀಟನಾಶಕ ಸಿಂಪಡಿಸಬೇಕು. ಕೀಟಗಳ ಹಾವಳಿ ತೀವ್ರವಾಗಿದ್ದಲ್ಲಿ, ಹತ್ತು ದಿನಗಳ ಅವಧಿಯಲ್ಲಿ ಮತ್ತೊಮ್ಮೆ ಕೀಟನಾಶಕ ಸಿಂಪಡಿಸಬೇಕು' ಎಂದರು.`ಬೂದಿರೋಗದ ನಿಯಂತ್ರಣಕ್ಕಾಗಿ ಒಂದು ಲೀಟರ್ ನೀರಿಗೆ 2 ಗ್ರಾಂನಂತೆ ಬಾವಿಸ್ಟನ್ ಶಿಲೀಂದ್ರ ಕೀಟನಾಶಕ ಬೆರೆಸಿ ಬೆಳೆಗೆ ಸಿಂಪಡಿಸಬೇಕು. ಕೀಟನಾಶಕ ಮತ್ತು ಶಿಲೀಂದ್ರ ನಾಶಕ ಸಿಂಪಡಣೆ ಮಾಡಿದ 15 ದಿನಗಳ ನಂತರವಷ್ಟೇ ಬೆಳೆಗಳನ್ನು ರೇಷ್ಮೆ ಹುಳುಗಳಿಗೆ ನೀಡಬೇಕು. ಕೀಟನಾಶಕ ಬಳಸುವ ಮುನ್ನ ರೈತರು ಜಾಗ್ರತೆ ವಹಿಸಬೇಕು' ಎಂದು ಅವರು ಸಲಹೆ ನೀಡಿದರು. ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಪದಾಧಿಕಾರಿಗಳಾದ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಹರೀಶ್, ಭಾಸ್ಕರ್‌ರೆಡ್ಡಿ, ರೇಷ್ಮೆಕೃಷಿಕರಾದ ವೆಂಕಟರಾಜು, ಪಿಳ್ಳೇಗೌಡ, ಗಿರೀಶ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರಾದ ಅನಿಲ್‌ಫೀರ್ ನಾಯಕ್, ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಸುಂದರರಾಜು, ರೇಷ್ಮೆ ಕೃಷಿ ಪ್ರದರ್ಶಕ ರವೀಂದ್ರ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿಪ್ಪುನೇರಳೆ ಸೊಪ್ಪು ರೋಗಪೀಡಿತವಾಗಿರುವ ಕುರಿತು ನವೆಂಬರ್ 23ರ `ಪ್ರಜಾವಾಣಿ' ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry