ಮಂಗಳವಾರ, ಅಕ್ಟೋಬರ್ 22, 2019
26 °C

ರೇಷ್ಮೆ ಹುರಿ ಕಾರ್ಖಾನೆಯ ವೈಭವ ಕಣ್ಮರೆ

Published:
Updated:

ಕೊಳ್ಳೇಗಾಲ: `ರೇಷ್ಮೆ~ ಎಂದಾಕ್ಷಣ ದೇಶದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನಗಳಿಸಿದ್ದ ಕೊಳ್ಳೇಗಾಲದ ರೇಷ್ಮೆ ಉದ್ಯಮ ಈಗ ನೆಲಕಚ್ಚಿದೆ.ಪಟ್ಟಣಕ್ಕೆ ಹತ್ತಿರದ ಮುಡಿಗುಂಡ ಹಾಗೂ ಹಂಪಾಪುರದ ಬಳಿಯಿದ್ದ ಸರ್ಕಾರಿ ರೇಷ್ಮೆ ಹುರಿ ಮತ್ತು ನೇಯ್ಗೆ ಕಾರ್ಖಾನೆಗಳ ಗತವೈಭವ ಕಣ್ಮರೆ ಯಾಗಿದೆ. ಮುಡಿಗುಂಡದ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚಿ ಹೋಗಿದೆ. ನೇಯ್ಗೆ ವಿಭಾಗ ಹಾಳು ಕೊಂಪೆಯಾಗಿದ್ದು, ವಿಷಜಂತುಗಳಿಗೆ ಆಶ್ರಯ ತಾಣವಾಗಿದೆ.ದಶಕದ ಹಿಂದೆ ಮುಡಿಗುಂಡ ಮತ್ತು ಹಂಪಾಪುರ ಬಳಿಯ ಕಾರ್ಖಾನೆಗಳಲ್ಲಿ ಸಾವಿರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾರ್ಖಾನೆ ನಂಬಿ ಹಲವು ಕುಟುಂಬ ಬದುಕು ಕಟ್ಟಿಕೊಂಡಿದ್ದವು. ಆದರೆ, ಮಾರುಕಟ್ಟೆಯ ವೈಪರೀತ್ಯದ ಪರಿಣಾಮ ಸರ್ಕಾರಿ ಕಾರ್ಖಾನೆಗೆ ಪುನಶ್ಚೇತನ ಸಿಗಲಿಲ್ಲ. ಇದರ ಪರಿಣಾಮ ನಷ್ಟದ ಹಾದಿಯಲ್ಲಿ ಸಾಗಿದವು. ಈಗ ಬೆರಳೆಣಿಕೆಯಷ್ಟು ಹುರಿ ಯಂತ್ರ ಮಾತ್ರ ಕಾರ್ಯ ನಿರ್ವಹಿಸುತ್ತಿವೆ.ಪ್ರಸ್ತುತ ಮುಡಿಗುಂಡ ರೇಷ್ಮೆ ಹುರಿ ಕಾರ್ಖಾನೆಯಲ್ಲಿ ಕೇವಲ 25 ಕಾರ್ಮಿಕರು ಕೆಲಸ ನಿರ್ವಹಿ ಸುತ್ತಿದ್ದಾರೆ. ಚಿತ್ರದುರ್ಗದಲ್ಲಿದ್ದ ಹುರಿ ಯಂತ್ರಗಳನ್ನು ಇಲ್ಲಿನ ಕಾರ್ಖಾನೆಯ ಹೊಸ ಕಟ್ಟಡದಲ್ಲಿ ಅಳವಡಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದು ಪ್ರಾರಂಭಗೊಂಡರೆ ನೂರಾರು ಕಾರ್ಮಿಕರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂಬ ಆಶಾಭಾವ ಹೊಂದಲಾಗಿದೆ.ಹಂಪಾಪುರದ ರೇಷ್ಮೆ ಹುರಿ ಕಾರ್ಖಾನೆಯ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಳೆಯ ಹುರಿ ಯಂತ್ರಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.ತಾಲ್ಲೂಕಿನಲ್ಲಿ ರೇಷ್ಮೆ ಬೆಳೆಯು ವವರ ಸಂಖ್ಯೆ ಕಡಿಮೆಯಾಗಿದ್ದೇ ಈ ಕಾರ್ಖಾನೆಗಳು ಅವನತಿಯತ್ತ ಸಾಗಲು ಮೂಲ ಕಾರಣವಾಯಿತು. ರೇಷ್ಮೆ ಗೂಡಿನ ಬೆಲೆ ಕುಸಿತದ ಪರಿಣಾಮ ರೇಷ್ಮೆ ನಾಟಿ ಮಾಡಲು ರೈತರು ಹಿಂದೇಟು ಹಾಕಿದರು. ಇದರ ಪರಿಣಾಮ ಅಗತ್ಯಕ್ಕೆ ಅನು ಗುಣವಾಗಿ ಗೂಡಿನ ಪೂರೈಕೆಯ ಕೊರತೆಯೂ ಕಂಡುಬಂದಿತು. ಇದು ಕಾರ್ಖಾನೆ ಮೇಲೆ ಗಂಭೀರ ಪರಿಣಾಮ ಬೀರಿದೆ.ರೈತರಿಗೆ ಆತ್ಮವಿಶ್ವಾಸ ತುಂಬಿ ರೇಷ್ಮೆ ಬೆಳೆ ವಿಸ್ತರಿಸಲು ಇಲಾಖೆಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಆದರೆ, ನಿರೀಕ್ಷಿತ ಪ್ರಗತಿ ಕಂಡು ಬಂದಿಲ್ಲ. ರೇಷ್ಮೆ ಮೊಟ್ಟೆ ಉತ್ಪಾದನೆ ಮತ್ತು ಕೃಷಿಯತ್ತ ರೈತರನ್ನು ಆಕರ್ಷಿಸುವಲ್ಲಿ ಕಾರ್ಯಯೋಜನೆ ಕೂಡ ರೂಪಿಸಲಾಗಿದೆ.ರೇಷ್ಮೆ ಬಿತ್ತನೆ ಕೋಠಿಯಲ್ಲಿ ಕೊಂಚಮಟ್ಟಿಗೆ ಪ್ರಗತಿ ಕಂಡು ಬಂದಿದೆ. ಮುಡಿಗುಂಡದ ರೇಷ್ಮೆ ಗೂಡು ಮಾರುಕಟ್ಟೆ ಸ್ಥಿರತೆ ಕಾಪಾಡಿಕೊಂಡಿರುವುದೇ ಸದ್ಯದ ಮಟ್ಟಿಗೆ ನೆಮ್ಮದಿ ನೀಡುವ ಸಂಗತಿ.ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆಯೊಂದಿಗೆ ರೈತರಿಗೆ ಸ್ಥಳದಲ್ಲೇ ಹಣ ಪಾವತಿಸುವ ಸೌಲಭ್ಯ ಕಲ್ಪಿಸ ಲಾಗಿದೆ. ಉತ್ತಮ ಧಾರಣೆ ದೊರೆ ಯುವ ಹಿನ್ನೆಲೆಯಲ್ಲಿ ರಾಮನಗರ, ಕನಕಪುರ, ಚನ್ನಪಟ್ಟಣ, ಮಂಡ್ಯ, ಮಳವಳ್ಳಿ ಭಾಗದಿಂದಲೂ ರೇಷ್ಮೆ ಗೂಡು ಮಾರಾಟಕ್ಕೆ ರೈತರು ಇಲ್ಲಿಗೆ ಬರುತ್ತಾರೆ. ಮಾರುಕಟ್ಟೆಯನ್ನು ಮತ್ತಷ್ಟು ಪುನಶ್ಚೇತನಗೊಳಿಸಿದರೆ ಉತ್ತಮ. ಬೆಲೆ ಸ್ಥಿರತೆಗೆ ಸರ್ಕಾರ ಹೊಸ ನೀತಿ ರೂಪಿಸಬೇಕು. ಗೂಡಿನ ಧಾರಣೆ ಕುಸಿದಾಗ ಬೆಂಬಲಕ್ಕೆ ನಿಲ್ಲಬೇಕು ಎಂಬುದು ಹಿಪ್ಪುನೇರಳೆ ಬೆಳೆಗಾರರ ಒತ್ತಾಯ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)